ವಿಶ್ವದ ಒಟ್ಟು ಬಳಕೆದಾರರಲ್ಲಿ ಶೇ 27ರಷ್ಟು ಮಂದಿ ಭಾರತೀಯರೇ: ವಾಟ್ಸಾಪ್ ಲೋಕಕ್ಕೆ ಭಾರತವೇ ದೊರೆ... - Tech Vaidya

ವಿಶ್ವದ ಒಟ್ಟು ಬಳಕೆದಾರರಲ್ಲಿ ಶೇ 27ರಷ್ಟು ಮಂದಿ ಭಾರತೀಯರೇ: ವಾಟ್ಸಾಪ್ ಲೋಕಕ್ಕೆ ಭಾರತವೇ ದೊರೆ!

ಟೆಕ್‌-ಕಿಲ!, ಬಡೆಕ್ಕಿಲ ಪ್ರದೀಪಬೆಳಗ್ಗೆದ್ದ ತಕ್ಷಣ ನೀವೇನ್‌ ಮಾಡ್ತೀರಿ?
ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತಿ ಅಂತ ಕೈಗಳನ್ನುಜ್ಜಿ ಅದನ್ನೇ ನೋಡಿ ಭಕ್ತಿಯಿಂದ ಪ್ರಾರ್ಥನೆ ಮಾಡ್ತೀರಾ, ಅಥವಾ, ಇನ್ನೂ ಬೆಡ್ಡಿಂದ ಏಳೋದಕ್ಕೂ ಮೊದಲೇ ನಿಮ್ಮ ಮೊಬೈಲನ್ನು ಕೈಗೆತ್ತಿಕೊಂಡು ರಾತ್ರಿ ಮಲಗಿದ ಮೇಲೆ ನಿಮಗೆ ಬಂದಿರುವ, ಅದನ್ನು ನೋಡದೇ ನಿಮ್ಮ ಬೆಳಗಾಗೋದೇ ಇಲ್ಲ ಅನ್ನುವ ತೆರದಲ್ಲಿ ವಾಟ್ಸ್ಯಾಪನ್ನು ಓಪನ್‌ ಮಾಡಿ ಮೆಸೇಜಸ್‌ ಓದ್ತೀರಾ?
ನೀವು ಒಂದು ವೇಳೆ ಎರಡನೇ ವಿಭಾಗದವರಾದರೆ, ಭಾರತದ ಅತಿ ದೊಡ್ಡ ಸಂಖ್ಯೆಯ ವಾಟ್ಸ್ಯಾಪ್‌ ಲೋಕದಲ್ಲಿ ಮುಳುಗಿರುವವರಲ್ಲಿ ಒಬ್ಬರು ಅಂತ ಅಷ್ಟೇ. ಭಾರತದಲ್ಲಿ ನಿಮ್ಮಂಥ ೮೭೧ ದಶಲಕ್ಷ ವಾಟ್ಸ್ಯಾಪ್‌ ಬಳಕೆದಾರರಿದ್ದಾರೆ, ಮತ್ತು ಅದು ವಿಶ್ವದಲ್ಲೇ ಅತಿ ಹೆಚ್ಚು. ಅಂದರೆ ವಿಶ್ವದ ಒಟ್ಟೂ ವಾಟ್ಸ್ಯಾಪ್‌ ಬಳಕೆದಾರರ ಪೈಕಿ ೨೭ ಶೇಕಡಾ ಮಂದಿ ಭಾರತದವರೇ ಅಂದರೆ ನಂಬಲೇಬೇಕು! ಅದರಲ್ಲೂ ನಾವು ದಿನಕ್ಕೆ ಸರಾಸರಿ ೨೩ ಬಾರಿ ವಾಟ್ಸ್ಯಾಪ್‌ ಓಪನ್‌ ಮಾಡ್ತೀವಂತೆ, ಅಂದರೆ ಹೆಚ್ಚು ಕಮ್ಮಿ, ಗಂಟೆಗೆ ಒಂದು ಸಲವಾದರೂ ಅದನ್ನು ಓಪನ್‌ ಮಾಡದೇ ಬಿಡೋದಿಲ್ಲ.
ನನ್ನ ಕಂಪೆನಿಯ ವಾಟ್ಸ್ಯಾಪ್‌ ಸಂಖ್ಯೆಯ ಜೊತೆ ನನ್ನದು ನೂರಕ್ಕೂ ಹೆಚ್ಚಿನ ವಾಟ್ಸ್ಯಾಪ್‌ ಗ್ರೂಪ್‌ಗಳಿವೆ, ಪ್ರತಿ ಹೊಸ ಕ್ಲಯೆಂಟ್‌, ಅಥವಾ ಪ್ರಾಜೆಕ್ಟ್‌ ಅಂದರೆ ಅದಕ್ಕೆ ಬೇರೆಯದೇ ಗ್ರೂಪ್‌ ಮಾಡಿ ಅಲ್ಲಿ ಸಂದೇಶಗಳನ್ನು ಕಳುಹಿಸೋದು, ಈಮೇಲ್‌ ಮಾಡುವುದಕ್ಕಿಂತ ಸುಲಭ ಅನ್ನೋದೇ ಮುಖ್ಯ ಕಾರಣ, ಮತ್ತೆ ಈಗಾಗಲೇ ಹೇಳಿದ ಹಾಗೆ, ಎಲ್ಲರೂ ಆಗಾಗ ವಾಟ್ಸ್ಯಾಪ್‌ ಚೆಕ್‌ ಮಾಡ್ತಾನೇ ಇರೋದ್ರಿಂದ ಕೆಲಸ ಅಷ್ಟು ಬೇಗ ಮಾಡುವುದು ಸಾಧ್ಯ ಅನ್ನುವುದು ಇನ್ನೊಂದು ಕಾರಣ.

ಹೇಗೆ ಶುರುವಾಯ್ತು?
ನಾವೆಲ್ಲಾ ಚಿಕ್ಕೋರಿದ್ದಾಗ ಯಾರಿಗಾದರೂ ಮೆಸೇಜ್‌ ಕಳುಹಿಸಬೇಕು ಅಂದರೆ ಎಸ್‌ಎಂಎಸ್‌ ಕಳುಹಿಸಬೇಕಿತ್ತು, ಮತ್ತು ಅದಕ್ಕೂ ಚಾರ್ಜ್‌ ಆಗುತ್ತಿತ್ತು, ಇಲ್ಲಾ ದಿನಕ್ಕಿಷ್ಟೇ ಎಸ್‌ಎಂಎಸ್‌ ಕಳುಹಿಸುವುದು ಅನ್ನುವ ಲಿಮಿಟ್‌ ಇರ್ತಿತ್ತು. ವಾಟ್ಸ್ಯಾಪ್‌ ಬಂದ ಮೇಲೆ ಅದೆಲ್ಲಾ ಚೇಂಜ್‌ ಆಯ್ತು. ಬರೀ ಸಂದೇಶ ಕಳುಹಿಸೋದಲ್ಲ, ಫೋಟೋ, ವಿಡಿಯೋ ಕಳುಹಿಸುವುದರಿಂದ ಶುರುವಾಗಿ, ಕಾಲ್‌ ಅದೂ ಆಡಿಯೋ, ವಿಡಿಯೋ ಕಾಲ್‌ಗಳನ್ನು ಮಾಡುವುದಕ್ಕೂ ವಾಟ್ಸ್ಯಾಪ್‌ ಅವಕಾಶ ಮಾಡಿಕೊಟ್ಟಿತು, ಅದೂ ಕೂಡ ಫ್ರೀಯಾಗಿ. ಇಂಟರ್ನೆಟ್‌ ಕನೆಕ್ಷನ್‌ ಇದ್ದರೆ ಅಷ್ಟೇ ಸಾಕಿತ್ತು. 
ಇದನ್ನೇ ಬಂಡವಾಳ ಮಾಡಿಕೊಂಡು, ಯಾವತ್ತಿಗೂ ನಾವು ಫ್ರೀಯಾಗಿ ಬಳಸುವುದಕ್ಕೆ ಕೊಡ್ತೀವಿ ಅನ್ನುವ ಭರವಸೆಯನ್ನು ವಾಟ್ಸ್ಯಾಪ್‌ ನೀಡಿತ್ತು. ಫೇಸ್‌ಬುಕ್‌ ಈ ಬೃಹತ್‌ ಸಂಖ್ಯೆಯ ಬಳಕೆದಾರರನ್ನೇ ಬಂಡವಾಳ ಮಾಡಿಕೊಂಡು ದೊಡ್ಡದೊಂದು ಮೊತ್ತಕ್ಕೆ ಈ ಸಂಸ್ಥೆಯನ್ನು ಖರೀದಿ ಮಾಡಿತು. ಫೇಸ್‌ಬುಕ್‌ ಖರೀದಿಸಿದ ನಂತರವೂ ಅದು ಫ್ರೀಯಾಗೇ ಉಳಿದರೂ, ಅದರ ಮೂಲ ರೂಪವನ್ನು ಸ್ವಲ್ಪ ಸ್ವಲ್ಪವೇ ಬದಲಿಸಿ, ಕೆಲವೊಂದು ಫೀಚರ್‌ಗಳನ್ನು ನೀಡುವ ಮೂಲಕ, ಬ್ಯುಸಿನೆಸ್‌ ಅಕೌಂಟ್‌ ಅನ್ನೋ ಹೆಸರಲ್ಲಿ ಸಂದೇಶಗಳಿಗೆ ಚಾರ್ಜ್‌ ಮಾಡುವ ಮೂಲಕ, ಹಾಗೂ ಇದೀಗ ಪ್ರೀಮಿಯಂ ಅಕೌಂಟ್‌ ಅನ್ನೋ ಹೆಸರಲ್ಲಿ, ಸ್ವಲ್ಪ ಹೆಚ್ಚು ಫೀಚರ್‌ಗಳನ್ನು ನೀಡುವ ಮೂಲಕ, ಒಂದಿಷ್ಟು ಹಣ ಗಳಿಸುವುದಕ್ಕೂ ಹೊರಟಿದೆ ವಾಟ್ಸ್ಯಾಪ್‌.
ಹಾಗೆ ನೋಡಿದರೆ, ಭಾರತದಲ್ಲಿ ಅದೆಷ್ಟೋ ಹೊಸ ಕಾರ್‌ ಕಂಪೆನಿಗಳು ಬಂದ ಮೇಲೂ, ಹೇಗೆ ಮಾರುತಿ ಇನ್ನೂ ತನ್ನ ಛಾಪನ್ನು ಹಾಗೇ ಕಾಯ್ದಿಟ್ಟುಕೊಂಡಿದೆಯೋ, ಅದೇ ರೀತಿ ಬೇರೆ ಕಂಪೆನಿಗಳ ಮೆಸೆಜಿಂಗ್‌ ಸರ್ವಿಸ್‌ಗಳಿದ್ದರೂ, ವಾಟ್ಸ್ಯಾಪನ್ನು ಹಿಂದಿಕ್ಕುವುದು ಬಿಡಿ, ಅದರ ಹತ್ತಿರಕ್ಕೂ ಬರುವುದಕ್ಕೆ ಅವುಗಳಿಗೆ ಸಾಧ್ಯವಾಗಿಲ್ಲ ಅನ್ನೋದು ಮಾತ್ರ ಸತ್ಯ. 
ಟೆಲೆಗ್ರಾಮ್‌ ಇರಲಿ, ಲೈನ್‌ ಇರಲಿ, ಸಿಗ್ನಲ್‌ ಇರಲಿ, ಅಥವಾ ಭಾರತದ್ದೇ ಚಾಟ್‌ ಆಪ್‌ಗಳೂ ಬಂದರೂ, ಒಂದೋ ತಮ್ಮದೇ ಸಣ್ಣ ಬಳಕೆದಾರರನ್ನು ಹೊಂದಿವೆ, ಅಥವಾ, ಹಾಗೇ ಮಕಾಡೆ ಮಲಗಿವೆ. ಯಾವುದಕ್ಕೂ ವಾಟ್ಸ್ಯಾಪನ್ನು ಸೋಲಿಸುವುದು ಸಾಧ್ಯವೇ ಆಗಿಲ್ಲ.
ಇದಕ್ಕೆ ಮುಖ್ಯ ಕಾರಣ, ಮಾರುತಿ ಕಾರ್‌ಗಳ ಹಾಗೆ, first mover advantage. ಎಲ್ಲದಕ್ಕೂ ಮೊದಲು ಬಂದಿರೋದರಿಂದ, ಎಲ್ಲರೂ ಅದನ್ನೇ ಮೊದಲು ಬಳಸಲು ಶುರು ಮಾಡಿ, ಅದರದ್ದೇ ದೊಡ್ಡ ಬಳಕೆದಾರರ ಗುಂಪು ಇರುವುದು, ಎಲ್ಲರಿಗೂ ಅಲ್ಲೇ ಎಲ್ಲರ ಜೊತೆ ಚಾಟ್‌ ಮಾಡುವುದು ಸಾಧ್ಯವಾಗುವುದರಿಂದ, ಮತ್ತು ಅವರು ಅದಕ್ಕೋಸ್ಕರ ಹೊಸದೊಂದು ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಅದನ್ನು ಬಳಸಲು ಶುರು ಮಾಡಬೇಕಾದ ಅನಿವಾರ್ಯತೆ ಇಲ್ಲದಿರುವುದರಿಂದ, ಇದು ಅದರ advantage ಆಗಿ ಪರಿವರ್ತಿತವಾಗಿದೆ.

Neatreachable home add

ಎಲ್ಲಾ ಒಳ್ಳೇದೇ ಅಲ್ಲ
ಯಾವುದೇ ವಿಷಯದ ಹಾಗೆ, ವಾಟ್ಸ್ಯಾಪ್‌ ಕೂಡ ನಮಗೆ ಅಷ್ಟೊಂದು ಒಳ್ಳೆಯದನ್ನು ಕೊಟ್ಟಿದೆ, ಅದರ ಜೊತೆ, ಅದರಲ್ಲಿ ಬರುವ ಸುಳ್ಳು ಮಾಹಿತಿ, ಫೇಕ್‌ ನ್ಯೂಸ್‌ ಕೆಲವರ ಜೀವನವನ್ನೇ ತಿರುಗು ಮುರುಗು ಮಾಡಿದೆ ಅನ್ನುವುದು ಸುಳ್ಳಲ್ಲ. ದೇಶದ ೬೦% ವಾಟ್ಸ್ಯಾಪ್‌ ಬಳಕೆದಾರರು ಈ ರೀತಿಯ ಫೇಕ್‌ ನ್ಯೂಸ್‌ ಅನ್ನು ಕಂಡು ನಂಬುವ ಪರಿಸ್ಥಿತಿ ಬಂದಿದೆ ಅಂದರೆ, ಅದನ್ನು ನಂಬಲೇಬೇಕು.
ಇದಕ್ಕೆ ಕಾರಣ, ಇಲ್ಲಿರುವ ಹೆಚ್ಚಿನವರೂ ನಿಮಗೆ ಗೊತ್ತಿರುವವರೇ, ಅವರು ಅದನ್ನು ಪರಿಶೀಲಿಸಿ, ಪರಾಂಬರಿಸಿ ನಿಮಗೆ ಕಳುಹಿಸಿದ್ದಾರಾ ಅನ್ನೋದು ನಿಮಗೆ ಗೊತ್ತಿಲ್ಲದಿರಬಹುದು, ಆದರೆ ಅವರಿಂದ ಬಂದಿದೆ ಅನ್ನುವ ಕಾರಣಕ್ಕೆ ನೀವು ಅದನ್ನು ನಂಬುವ ಸಾಧ್ಯತೆ ಜಾಸ್ತಿ ಇದೆ. ವಾಟ್ಸ್ಯಾಪ್‌ನಲ್ಲಿ ಬಂದ ಮಾಹಿತಿಯನ್ನೇ ತಲೆಗೆ ತುಂಬಿಕೊಂಡು ಅದನ್ನೇ ಸತ್ಯ ಅಂತ ಊರಿಗೆಲ್ಲಾ ಕಥೆ ಹೇಳುವವರನ್ನು ವಾಟ್ಸ್ಯಾಪ್‌ ಯೂನಿವರ್ಸಿಟಿಯ ವಿಧ್ವಾಂಸರು ಅಂತ ವ್ಯಂಗ್ಯವಾಗಿ ಕರೆಯುವುದು ಇದ್ದೇ ಇದೆ. ಜೊತೆಗೆ ಇದನ್ನೇ ಆರೋಗ್ಯ ಸಂಬಂಧಿ ಮಾಹಿತಿಯ ಕಣಜ ಅಂದುಕೊಳ್ಳೋದು, ಇನ್ವೆಸ್ಟ್‌ಮೆಂಟ್‌ ವಿಚಾರದಲ್ಲಿ ಇದೇ ಸರಿಯಾದ ಮೂಲ ಅಂತ ತಿಳಿದುಕೊಳ್ಳೋದು ಕೂಡ ನಡೆಯುವ ಡೇಂಜರಸ್‌ ವಿಷಯ.
ಹೀಗೆ ತಪ್ಪು ಮಾಹಿತಿ ಸೋಶಿಯಲ್‌ ಮೀಡಿಯಾದಲ್ಲಿ ೬ ಪಟ್ಟು ವೇಗದಲ್ಲಿ ಹಬ್ಬುತ್ತದೆ ಅನ್ನೋದನ್ನು ನಾವು ತಿಳಿದುಕೊಳ್ಳಬೇಕಾಗಿರುವುದು ನಿಜ. ಹಾಗೇ ಕಳೆದ ವರ್ಷ ಸುಮಾರು ೨೨ ಸಾವಿರ ಕೋಟಿ ಸೈಬರ್‌ ಕ್ರೈಂ ಫ್ರಾಡ್‌ಗಳಲ್ಲಿ ಜನ ಕಳೆದುಕೊಂಡಿದ್ದು, ಅದರಲ್ಲಿ ವಾಟ್ಸ್ಯಾಪ್‌ ಬಳಸಿ ನಡೆದಿರುವ ಫ್ರಾಡ್‌ಗಳು ಮುಖ್ಯ ಭೂಮಿಕೆಯಲ್ಲಿದೆ. 
ಇಷ್ಟು ದೊಡ್ಡ ಮಾಹಿತಿ ರವಾನಿಸುವ, ನಮ್ಮಲ್ಲಿ ಹೆಚ್ಚಿನ (ಸುಮಾರು ೭೩ ಶೇಕಡಾ) ವ್ಯಾಪಾರ ಸಂಸ್ಥೆಗಳು ಬಳಸುತ್ತಿರುವ ವಾಟ್ಸ್ಯಾಪ್‌ ಮಾತ್ರ ಒಂದು ಅಮೆರಿಕನ್‌ ಕಂಪೆನಿ (ಮೆಟಾ)ಯದು ಅನ್ನುವ ಅರಿವಂತೂ ನಮಗಿರಲೇಬೇಕು. 
ಆದರೂ, ಇಂತಹ ದೊಡ್ಡ ವ್ಯವಸ್ಥೆ ಇದೀಗ ಇಷ್ಟು ಬೆಳೆದಿರುವುದರಿಂದ ಇದನ್ನು ಬದಲಾಯಿಸುವುದು ಸುಲಭಸಾಧ್ಯ ಅಲ್ಲವೇ ಅಲ್ಲ ಅನ್ನೋದು ನಮಗೆ  ಗೊತ್ತಿರುವ ವಿಚಾರ.

ಟೆಕ್‌-ವಚನ
ನಂಬಿ ಕಳಿಸಿದ ಸಂದೇಶ ಸುಳ್ಳಾದೀತು 
ಕಳಿಸುವ ಮೊದಲು ಒಮ್ಮೆ ಯೋಚಿಸು | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ
Nagaraj Vaidya
Nagaraj Vaidya is the Editor-in-Chief of Tech Vaidya Global and a technology analyst with 18 years of journalism experience. He covers AI, Agritech, Cybersecurity, and Digital Trends, helping readers understand the technologies shaping the future. He is the author of AI Bhagavad Gita.
268 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp