ದೆಹಲಿಯಲ್ಲಿ ಎಐ ಸಮ್ಮಿಟ್, ಹೋಟೆಲ್ಗಳಲ್ಲಿ ಬಿರಿಯಾನಿಯ ಬಿಲ್ಲೇ ಡಿಲೀಟ್!
| ನಾಗರಾಜ ವೈದ್ಯ
ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಜಗತ್ತಿನ ದಿಗ್ಗಜರು ಕೃತಕ ಬುದ್ಧಿಮತ್ತೆ ಬಳಸಿ ಮಂಗಳ ಗ್ರಹದಲ್ಲಿ ಮಸಾಲೆ ದೋಸೆ ಮಾಡುವುದು ಹೇಗೆ ಎಂದು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಗೂಗಲ್ ನ ಸುಂದರ್ ಪಿಚೈ ಅವರಂತಹ ಘಟಾನುಘಟಿಗಳು ಎಐನಿಂದ ಮನುಕುಲದ ಉದ್ದಾರ ಗ್ಯಾರಂಟಿ ಎಂದು ಭಾಷಣ ಬಿಗಿಯುತ್ತಿದ್ದಾರೆ. ಆದರೆ ಇತ್ತ ನಮ್ಮ ಪುಣ್ಯಾತ್ಮ ಹೋಟೆಲ್ ಮಾಲೀಕರು ಅದೇ ಕೃತಕ ಬುದ್ಧಿಮತ್ತೆಗೆ ಕಣ್ಣೀರು ಬರಿಸುವಂತಹ ಸಾಧನೆ ಮಾಡಿ ಜಗತ್ತೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಮೆರಿಕದಲ್ಲಿ ಕುಳಿತ ಚಾಟ್ ಜಿಪಿಟಿಯೇ ಒಮ್ಮೆ ನಮ್ಮವರ ಕರಾಮತ್ತು ಕಂಡು ಹೌಹಾರಿ ಎದೆಗುಂದಿರಬೇಕು. ಕೇವಲ ಒಂದು ಡಿಲೀಟ್ ಗುಂಡಿಯನ್ನು ಒತ್ತುವ ಮೂಲಕ ಬರೋಬ್ಬರಿ ಎಪ್ಪತ್ತು ಸಾವಿರ ಕೋಟಿ ರೂಪಾಯಿ ತೆರಿಗೆಯನ್ನು ಗುಳುಂ ಮಾಡಿದ ನಮ್ಮವರ ಕಳ್ಳಬುದ್ಧಿಯ ಮುಂದೆ ಯಾವ ಕೃತಕ ಬುದ್ಧಿಮತ್ತೆಯೂ ಸಾಟಿಯಿಲ್ಲ.
ನಾವೆಲ್ಲರೂ ಡಿಜಿಟಲ್ ಇಂಡಿಯಾ ಕ್ಯಾಶ್ ಲೆಸ್ ಇಂಡಿಯಾ ಎಂದು ಬಾಯ್ಬಡಿದುಕೊಳ್ಳುತ್ತಿದ್ದರೂ ಹೋಟೆಲ್ ಕ್ಯಾಶ್ ಕೌಂಟರ್ ನಲ್ಲಿ ಕುಳಿತಿರುವ ಮಾಲೀಕನ ಕೈಚಳಕ ಮಾತ್ರ ನೂರಕ್ಕೆ ನೂರು ಪರ್ಸೆಂಟ್ ಅಪ್ಪಟ ದೇಸೀ ಕಲೆಯಾಗಿದೆ. ಗ್ರಾಹಕರು ಬಿರಿಯಾನಿ ತಿಂದು ಕೈತೊಳೆದುಕೊಂಡು ನಗದು ರೂಪದಲ್ಲಿ ಬಿಲ್ ಪಾವತಿಸಿ ಹೊರನಡೆಯುತ್ತಿದ್ದಂತೆಯೇ ಇತ್ತ ಮಾಲೀಕ ತನ್ನ ಬಿಲ್ಲಿಂಗ್ ಸಾಫ್ಟ್ ವೇರ್ ನಲ್ಲಿ ಆ ಬಿಲ್ ಅನ್ನು ಮಾಯಾಜಾಲದಂತೆ ಡಿಲೀಟ್ ಮಾಡಿಬಿಡುತ್ತಾನೆ. ಗ್ರಾಹಕನ ಹೊಟ್ಟೆಗೆ ಬಿರಿಯಾನಿ ಸೇರಿದರೆ ಮಾಲೀಕನ ಜೇಬಿಗೆ ನೇರವಾಗಿ ತೆರಿಗೆಯ ಹಣ ಸೇರುತ್ತದೆ. ಈ ಡಿಜಿಟಲ್ ಪಿಕ್ ಪಾಕೆಟ್ ತಂತ್ರಜ್ಞಾನವನ್ನು ಕಂಡು ಸ್ವತಃ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೇ ತಲೆ ತಿರುಗಿ ಬಿದ್ದಿದ್ದಾರೆ.

ಕೃಪೆ: ಕನ್ನಡಪ್ರಭ
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
ಇದರಲ್ಲಿ ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಚಾರವೆಂದರೆ ಈ ಮಹತ್ಕಾರ್ಯದಲ್ಲಿ ನಮ್ಮ ಕರ್ನಾಟಕವೇ ಇಡೀ ದೇಶಕ್ಕೆ ನಂಬರ್ ಒನ್ ಸ್ಥಾನದಲ್ಲಿದೆ. ಐಟಿ ರಫ್ತಿನಲ್ಲಿ ಹಾಗೂ ನವೋದ್ಯಮಗಳಲ್ಲಿ ನಾವೇ ಮುಂದು ಎಂದು ಬೀಗುತ್ತಿದ್ದ ನಮಗೆ ಈಗ ಬಿಲ್ ಡಿಲೀಟ್ ಮಾಡುವುದರಲ್ಲೂ ನಾವೇ ಫಸ್ಟ್ ಎಂಬ ಕಿರೀಟ ಸಿಕ್ಕಿರುವುದು ನಮ್ಮ ತಾಂತ್ರಿಕ ಪ್ರಾವೀಣ್ಯತೆಗೆ ಹಿಡಿದ ಕನ್ನಡಿಯಾಗಿದೆ. ಬರೋಬ್ಬರಿ ಎರಡು ಸಾವಿರ ಕೋಟಿ ರೂಪಾಯಿಗಳ ಬಿಲ್ ಅನ್ನು ಗುಪ್ತಗಾಮಿನಿಯಂತೆ ಮಾಯ ಮಾಡಿದ ಕೀರ್ತಿ ನಮ್ಮ ಕರುನಾಡಿನ ಹೋಟೆಲ್ ಗಳಿಗೆ ಸಲ್ಲುತ್ತದೆ. ನೆರೆಯ ತೆಲಂಗಾಣ ಒಂದುವರೆ ಸಾವಿರ ಕೋಟಿ ಹಾಗೂ ತಮಿಳುನಾಡು ಸಾವಿರದ ಇನ್ನೂರು ಕೋಟಿ ಹೊಡೆದು ಎಷ್ಟೇ ಕಷ್ಟಪಟ್ಟರೂ ನಮ್ಮವರ ವೇಗವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.
ಆದಾಯ ತೆರಿಗೆ ಅಧಿಕಾರಿಗಳಿಗೆ ಹೈದರಾಬಾದ್ ಬಿರಿಯಾನಿಯ ಘಮಲು ಬಡಿಯುತ್ತಿದ್ದರೂ ಲೆಕ್ಕದ ಪುಸ್ತಕದಲ್ಲಿ ಮಾತ್ರ ಖಾಲಿ ತಟ್ಟೆಯ ದರ್ಶನವಾಗುತ್ತಿತ್ತು. ಎಷ್ಟೇ ಹುಡುಕಿದರೂ ಲೆಕ್ಕ ಸಿಗುತ್ತಿಲ್ಲ ಎಂದಾಗ ಈ ನಿಗೂಢ ರಹಸ್ಯವನ್ನು ಭೇದಿಸಲು ಮನುಷ್ಯನ ಮೆದುಳು ಸಾಲದು ಎಂದು ನಿರ್ಧರಿಸಿದ ಐಟಿ ಅಧಿಕಾರಿಗಳು ಅಂತಿಮವಾಗಿ ಕೃತಕ ಬುದ್ಧಿಮತ್ತೆಯ ಮೊರೆಹೋದರು. ದೇಶಾದ್ಯಂತ ಇರುವ ಒಂದು ಲಕ್ಷದ ಎಪ್ಪತ್ತೇಳು ಸಾವಿರ ರೆಸ್ಟೋರೆಂಟ್ ಗಳ ಅರವತ್ತು ಟೆರಾಬೈಟ್ ನಷ್ಟು ಬೃಹತ್ ಡೇಟಾವನ್ನು ವಿಶ್ಲೇಷಿಸುವ ಹಿಮಾಲಯದಂತಹ ಜವಾಬ್ದಾರಿಯನ್ನು ಈ ಪಾಪದ ಎಐ ಹೆಗಲಿಗೆ ಕಟ್ಟಲಾಯಿತು.
ಒಮ್ಮೆ ಆ ಕೃತಕ ಬುದ್ಧಿಮತ್ತೆಯ ಶೋಚನೀಯ ಸ್ಥಿತಿಯನ್ನು ಊಹಿಸಿಕೊಳ್ಳಿ. ಗೂಗಲ್ ಮತ್ತು ಓಪನ್ ಎಐ ಸಂಸ್ಥೆಗಳು ಕೋಟ್ಯಂತರ ಡಾಲರ್ ಸುರಿದು ಈ ಎಐಗೆ ಅದ್ಭುತ ಕವನ ಬರೆಯುವುದನ್ನು ಕ್ಯಾನ್ಸರ್ ರೋಗ ಪತ್ತೆ ಹಚ್ಚುವುದನ್ನು ಹಾಗೂ ಬಾಹ್ಯಾಕಾಶದ ರಹಸ್ಯ ಭೇದಿಸುವುದನ್ನು ಕಲಿಸಿಕೊಟ್ಟಿದ್ದವು. ಆದರೆ ಭಾರತಕ್ಕೆ ಬಂದ ತಕ್ಷಣ ಆ ಎಐ ಅನ್ನು ಒಂದು ಕತ್ತಲೆ ಕೋಣೆಯಲ್ಲಿ ಕೂರಿಸಿ ಇಡ್ಲಿ ವಡೆ ಕಾಫಿ ಮಸಾಲೆ ದೋಸೆ ಹಾಗೂ ಚಿಕನ್ ಕಬಾಬ್ ಗಳ ಡಿಲೀಟ್ ಆದ ಬಿಲ್ ಗಳನ್ನು ಹುಡುಕುವ ಗುಮಾಸ್ತನ ಕೆಲಸಕ್ಕೆ ಹಚ್ಚಲಾಯಿತು. ಈ ಅವಮಾನಕ್ಕೆ ಆ ಸಾಫ್ಟ್ ವೇರ್ ಕಣ್ಣೀರು ಹಾಕಿರಬಹುದು.
ದೆಹಲಿಯ ಎಐ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಎಐನಿಂದ ಮನುಕುಲಕ್ಕೆ ಅಪಾಯವಿದೆಯೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅರವತ್ತು ಟೆರಾಬೈಟ್ ನಷ್ಟು ಹೋಟೆಲ್ ಬಿಲ್ ಗಳನ್ನು ಹಗಲಿರುಳು ಪರಿಶೀಲಿಸಿದ ಆ ಕೃತಕ ಬುದ್ಧಿಮತ್ತೆಗೆ ಮನುಷ್ಯರ ಅದರಲ್ಲೂ ನಮ್ಮ ಹೋಟೆಲ್ ಮಾಲೀಕರ ದುರಾಸೆಯನ್ನು ಕಂಡು ತಾನೇ ಡಿಜಿಟಲ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹತಾಶೆಯಾಗಿರಬಹುದು. ಮನುಷ್ಯನ ಕಳ್ಳ ಬುದ್ಧಿಮತ್ತೆಯ ಮುಂದೆ ತನ್ನ ಕೃತಕ ಬುದ್ಧಿಮತ್ತೆ ಕೇವಲ ಬಚ್ಚಾ ಎಂಬುದನ್ನು ಆ ವ್ಯವಸ್ಥೆ ಖಂಡಿತವಾಗಿಯೂ ಒಪ್ಪಿಕೊಂಡಿರಲೇಬೇಕು.
ಈ ವಂಚನೆಗೆ ಬಳಕೆಯಾದ ಬಿಲ್ಲಿಂಗ್ ಸಾಫ್ಟ್ ವೇರ್ ನ ನಿಷ್ಠೆಯನ್ನು ನಾವು ಎದ್ದು ನಿಂತು ಮೆಚ್ಚಲೇಬೇಕು. ಪಾಪದ ಸರ್ವರ್ ಗಳು ನೂರು ರೂಪಾಯಿ ಕದಿಯಬಾರದು ಎಂದು ಯುಪಿಐ ಮತ್ತು ಕಾರ್ಡ್ ಪಾವತಿಗಳನ್ನು ಅಚ್ಚುಕಟ್ಟಾಗಿ ದಾಖಲಿಸಿಕೊಳ್ಳುವ ಈ ಸಾಫ್ಟ್ ವೇರ್ ಮಾಲೀಕನಿಗೆ ಮಾತ್ರ ಬಿಲ್ ಅಳಿಸಿಹಾಕುವ ವಿಐಪಿ ಸೌಲಭ್ಯವನ್ನು ಗುಟ್ಟಾಗಿ ಒದಗಿಸಿತ್ತು. ಇದೇ ಸಾಫ್ಟ್ ವೇರ್ ಅನ್ನು ದೆಹಲಿಯ ಎಐ ಸಮ್ಮಿಟ್ ನಲ್ಲಿ ಪ್ರದರ್ಶಿಸಿದ್ದರೆ ವಿದೇಶಿ ಗಣ್ಯರು ನಮ್ಮವರ ತಂತ್ರಜ್ಞಾನ ಬಳಕೆಯ ವೈಖರಿಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
ಎಪ್ಪತ್ತು ಸಾವಿರ ಕೋಟಿ ರೂಪಾಯಿ ಎಂದರೆ ತಮಾಷೆಯ ಮಾತಲ್ಲ. ಈ ಭಾರಿ ಮೊತ್ತದ ಹಣದಲ್ಲಿ ಹತ್ತಾರು ಚಂದ್ರಯಾನಗಳನ್ನು ಸುಲಭವಾಗಿ ಮಾಡಬಹುದಿತ್ತು ಅಥವಾ ಕನಿಷ್ಠ ಪಕ್ಷ ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನಾದರೂ ಶಾಶ್ವತವಾಗಿ ಮುಚ್ಚಬಹುದಿತ್ತು. ಆದರೆ ಒಂದು ಪ್ಲೇಟ್ ಮಟನ್ ಬಿರಿಯಾನಿಗೆ ಕೊಟ್ಟ ಹಣ ಯಾವ ಕಾರಣಕ್ಕೂ ದೇಶದ ಬೊಕ್ಕಸಕ್ಕೆ ಸೇರಬಾರದು ಎಂಬ ದೃಢ ಸಂಕಲ್ಪದಿಂದ ನಮ್ಮ ಮಾಲೀಕರು ಈ ಆರ್ಥಿಕ ಕ್ರಾಂತಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಕ್ರಾಂತಿಗೆ ಬೆಂಬಲವಾಗಿ ನಿಂತದ್ದು ಅದೇ ತಂತ್ರಜ್ಞಾನ ಎಂಬುದು ವಿಪರ್ಯಾಸ.
ಎಐ ಈ ವಂಚನೆಯನ್ನು ಪತ್ತೆ ಹಚ್ಚಿದ ರೀತಿಯೂ ಅತ್ಯಂತ ರೋಚಕವಾಗಿದೆ. ಹೋಟೆಲ್ ನ ಒಳಗೆ ಬರುವ ಟನ್ ಗಟ್ಟಲೆ ಅಕ್ಕಿ ನೂರಾರು ಲೀಟರ್ ಎಣ್ಣೆ ಮತ್ತು ಸಾವಿರಾರು ಕೋಳಿಗಳ ಲೆಕ್ಕಾಚಾರವನ್ನು ದಿನಾಂತ್ಯಕ್ಕೆ ಹೊರಗೆ ಹೋಗುವ ಬಿಲ್ ಗಳ ಜೊತೆ ಎಐ ತಾಳೆ ಹಾಕಿದೆ. ಕಾಗದದ ಮೇಲಿನ ಲೆಕ್ಕವನ್ನು ನೋಡಿದ ಎಐಗೆ ಭಾರತೀಯರೆಲ್ಲರೂ ಊಟಕ್ಕೆ ಕೇವಲ ಒಂದೇ ಒಂದು ಅಗುಳು ಅಕ್ಕಿಯನ್ನು ತಿನ್ನುತ್ತಿದ್ದಾರೆಯೇ ಎಂಬ ಭಾರಿ ಅನುಮಾನ ಕಾಡಿರಬೇಕು. ಆ ಅನುಮಾನವೇ ಈ ಬೃಹತ್ ಹಗರಣದ ಬೇರುಗಳನ್ನು ನಿರ್ದಾಕ್ಷಿಣ್ಯವಾಗಿ ಅಗೆದು ತೆಗೆಯಿತು.
ಎಐನ ಅಗಾಧ ಸಾಧ್ಯತೆಗಳ ಬಗ್ಗೆ ನಾವು ಪ್ರತಿದಿನ ಭಾಷಣ ಮಾಡುತ್ತೇವೆ. ಅದು ಕವಿತೆ ಬರೆಯುತ್ತದೆ ಸುಂದರ ಚಿತ್ರ ಬಿಡಿಸುತ್ತದೆ ಸಂಕೀರ್ಣ ಕೋಡಿಂಗ್ ಮಾಡುತ್ತದೆ ಎಂದು ಹೊಗಳುತ್ತೇವೆ. ಆದರೆ ಮನುಷ್ಯನ ಕಳ್ಳಬುದ್ಧಿಯನ್ನು ಡಿಕೋಡ್ ಮಾಡುವಷ್ಟರ ಮಟ್ಟಿಗೆ ಎಐ ಬೆಳೆದಿದೆ ಎಂದರೆ ತಂತ್ರಜ್ಞಾನ ನಿಜಕ್ಕೂ ಬಹುದೊಡ್ಡ ಮೈಲಿಗಲ್ಲು ತಲುಪಿದೆ. ಆದರೆ ಅದೇ ತಂತ್ರಜ್ಞಾನವನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬಳಸಿ ತೆರಿಗೆ ವಂಚಿಸುವ ಮನುಷ್ಯನ ತಲೆ ಎಐಗಿಂತಲೂ ಹತ್ತು ಪಟ್ಟು ವೇಗವಾಗಿ ಓಡುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು.
ಭಾರತ ಸರ್ಕಾರ ಸೆಮಿಕಂಡಕ್ಟರ್ ಮತ್ತು ಚಿಪ್ ಉತ್ಪಾದನೆಗೆ ಸಾವಿರಾರು ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸುದ್ದಿಯಾಗಿದೆ. ಆದರೆ ಈಗಿನ ವಾಸ್ತವ ಪರಿಸ್ಥಿತಿ ನೋಡಿದರೆ ನಮ್ಮ ಹೋಟೆಲ್ ಮಾಲೀಕರ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಲು ಎಐಗೆ ನೀಡಬೇಕಾದ ಮಾನಸಿಕ ಚಿಕಿತ್ಸೆಗೂ ಸ್ವಲ್ಪ ಹಣವನ್ನು ಕಾಯ್ದಿರಿಸಬೇಕಾಗಿದೆ. ಏಕೆಂದರೆ ಈ ಬಿಲ್ ಡಿಲೀಟ್ ಮಾಡುವ ಅದ್ಭುತ ಕರಾಮತ್ತನ್ನು ಹತ್ತಿರದಿಂದ ನೋಡಿದ ಮೇಲೆ ಯಾವ ಕೃತಕ ಬುದ್ಧಿಮತ್ತೆಯೂ ತನ್ನ ಸಹಜ ಸ್ಥಿತಿಯಲ್ಲಿ ಉಳಿಯಲು ಸಾಧ್ಯವೇ ಇಲ್ಲ.
ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಎಐ ನಮ್ಮ ಉದ್ಯೋಗ ಕಸಿದುಕೊಳ್ಳುತ್ತದೆ ಎಂಬ ಭಯ ಎಲ್ಲರಲ್ಲಿದೆ. ಆದರೆ ನಮ್ಮ ಹೋಟೆಲ್ ಮಾಲೀಕರು ಮಾತ್ರ ಆ ಎಐಗೂ ಕೆಲಸ ಕೊಟ್ಟು ಐಟಿ ಅಧಿಕಾರಿಗಳಿಗೂ ಕೆಲಸ ಕೊಟ್ಟು ದೇಶದ ಆರ್ಥಿಕತೆಯ ಜೊತೆ ಅದ್ಭುತವಾದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಎಐ ಕೇವಲ ಕಳ್ಳತನವಾದ ಮೇಲೆ ಅದನ್ನು ಪತ್ತೆ ಹಚ್ಚಬಹುದೇ ಹೊರತು ಕಳ್ಳತನದ ಹೊಸ ಹೊಸ ಐಡಿಯಾಗಳನ್ನು ಹುಟ್ಟುಹಾಕುವಲ್ಲಿ ನಮ್ಮವರೇ ಸದಾ ಜಗತ್ತಿಗೆ ವಿಶ್ವಗುರುಗಳು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
ಈ ಲೇಖನಗಳನ್ನೂ ಓದಿ
❤️ ರೈತನ ತಲೆಬಿಸಿ ಕಮ್ಮಿ ಮಾಡಿದ ಹೈಟೆಕ್ ಕೃಷಿ ಡ್ರೋನ್‌ಗಳು!
❤️ ಆಪಲ್ ಮತ್ತು ಗೂಗಲ್ ಮಹಾ ಮೈತ್ರಿ: ಐಫೋನ್ ಒಳಗೆ ಇನ್ಮುಂದೆ ಗೂಗಲ್ ಜೆಮಿನಿ ದರ್ಬಾರ್!
❤️ ಎಲೆಕ್ಟ್ರಿಕ್ ವಾಹನಗಳ ಅಗ್ನಿ ಅನಾಹುತ: ಬ್ಯಾಟರಿಯೊಳಗಿನ ನಿಗೂಢ ಜ್ವಾಲಾಮುಖಿಯನ್ನು ಶಮನ ಮಾಡೋದು ಹೇಗೆ?
❤️ ನಿಮ್ಮ ಫೋನ್‌ನಲ್ಲೇ ಎಐ ಲೋಕ! ಚಾಟ್‌ಜಿಪಿಟಿ ಮತ್ತು ಜೆಮಿನಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿ ಬಳಸುವುದು ಹೇಗೆ?
❤️ ಯಂತ್ರ ಮಾಡಿದ ತಪ್ಪಿಗೆ ಮನುಷ್ಯನಿಗೇಕೆ ಶಿಕ್ಷೆ?
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
🛒 ಆನ್‌ಲೈನ್ ಶಾಪಿಂಗ್
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.