ಟ್ರೆಂಡಿಂಗ್

ಖರ್ಚು ಮಾಡಿದಷ್ಟೂ ಇಂಧನ ಹೆಚ್ಚಾಗುವ 'ಬ್ರೀಡರ್' ಮ್ಯಾಜಿಕ್ ರಿಯಾಕ್ಟರ್! - Tech Vaidya

ಖರ್ಚು ಮಾಡಿದಷ್ಟೂ ಇಂಧನ ಹೆಚ್ಚಾಗುವ 'ಬ್ರೀಡರ್' ಮ್ಯಾಜಿಕ್ ರಿಯಾಕ್ಟರ್!

ಅಮೆರಿಕ, ಬ್ರಿಟನ್ ಕೈಬಿಟ್ಟ ಅಸಾಧ್ಯ ತಂತ್ರಜ್ಞಾನವನ್ನೇ ಸಾಧಿಸಿದ ಭಾರತ | ಭಾಭಾ ಅವರ ಥೋರಿಯಂ ಕನಸು: ನಮ್ಮ ಕರೆಂಟ್ ಬಿಲ್, ಪೆಟ್ರೋಲ್ ಖರ್ಚು ಕಮ್ಮಿ ಆಗುತ್ತಾ?

| ಕೃಷ್ಣ ಭಟ್‌

ಕಲ್ಪಾಕಂನ ಸಮುದ್ರತೀರ... 2026ರ ಏಪ್ರಿಲ್ 6.... ನಾವೆಲ್ಲ ಆರಾಮಾಗಿ ಚಾ ಕುಡಿತಾ ಸುದ್ದಿ ಹೇಳುತ್ತಿದ್ದ ಹೊತ್ತಿಗೆ ಅಲ್ಲಿ ಕಲ್ಪಾಕಂನಲ್ಲಿ ಕ್ರಾಂತಿ ಆಗ್ತಾ ಇತ್ತು. ಮುಂದಿನ 400 ವರ್ಷಗಳವರೆಗೆ ಭಾರತದ ಇತಿಹಾಸ ಬರೆಯೋ ಕ್ರಾಂತಿ. ಕಳೆದ 20-25 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಒಂದು ಪ್ರಾಜೆಕ್ಟ್‌ 'ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್' (PFBR) ಅಂದು 'ಕ್ರಿಟಿಕಾಲಿಟಿ' (Criticality) ಹಂತಕ್ಕೆ ಕಾಲಿಟ್ಟಿದೆ. 

ನಮ್ಮಂಥ ಸಾಮಾನ್ಯ ಜನರಿಗೆ 'ಕ್ರಿಟಿಕಾಲಿಟಿ' ಎಂಬ ಪದ ಏನೋ ಒಂದು ರೀತಿ ಆತಂಕದ ಹಾಗೆ ಕೇಳಿಸಬಹುದು. ಆದರೆ, ಪರಮಾಣು ವಿಜ್ಞಾನ ವಿಭಾಗದಲ್ಲಿ ಇದೊಂದು ಮಹಾನ್ ವಿಜಯ. ಒಂದು ಪರಮಾಣು ರಿಯಾಕ್ಟರ್, ಹೊರಗಿನ ಯಾವ ಪ್ರಚೋದನೆಯೂ ಇಲ್ಲದೆ ತನ್ನಷ್ಟಕ್ಕೆ ತಾನೇ, ಯಾವುದೋ ಅದೃಶ್ಯ ಶಕ್ತಿಯೊಂದು ಬಂದು ಕೀಲಿ ಕೊಟ್ಟು ನಡೆಸುತ್ತಿರುವ ಹಾಗೆ, ನಿರಂತರವಾಗಿ ಶಕ್ತಿಯನ್ನು ಉತ್ಪಾದಿಸುವುದಕ್ಕೆ ಆರಂಭಿಸಿದೆ. ಅಂದರೆ, ಎಂಜಿನ್ ತನ್ನಷ್ಟಕ್ಕೆ ತಾನೇ ಸರಾಗವಾಗಿ ರನ್ ಆಗೋದಕ್ಕೆ ಶುರುವಾಗಿದೆ ಅಂತ ಅರ್ಥ.

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ

ಹೀಗಂದರೆ, ಇದು ಕೂಡ ಎಲ್ಲ ವಿದ್ಯುತ್ ಪ್ರಾಜೆಕ್ಟ್‌ನ ಹಾಗೆ ಇನ್ನೊಂದು ಪ್ರಾಜೆಕ್ಟ್ ಅಂತ ನೀವು ಓದಿ ಮುಂದಕ್ಕೆ ಸ್ಕ್ರಾಲ್ ಮಾಡಿಕೊಂಡು ಹೋಗಬಹುದು. ಆದರೆ, ಈ ಕನಸನ್ನು ಕಂಡಿದ್ದು 1954 ರಲ್ಲಿ ಡಾ. ಹೋಮಿ ಜೆ. ಭಾಭಾ ಅವರು.... ಅವರು ಕಂಡ ಕನಸಿಗೆ 72 ವರ್ಷಗಳಾದವು. ಆ ಕನಸು ಇಂದು ಸಾಕಾರವಾಗಿದೆ ಅಂತ ಗೊತ್ತಾದರೆ ಆಶ್ಚರ್ಯ ಆಗದೇ ಇರಲ್ಲ.

ಅಷ್ಟೇ ಅಲ್ಲ, ಈ ತಂತ್ರಜ್ಞಾನವನ್ನು ವಾಣಿಜ್ಯಿಕವಾಗಿ ಜಾರಿಗೆ ತರುತ್ತಿರುವ ವಿಶ್ವದ ಕೇವಲ ಎರಡನೇ ದೇಶ ಭಾರತ. ರಷ್ಯಾದಲ್ಲಿ ಈಗಾಗಲೇ ಈ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯಂತಹ ರಾಷ್ಟ್ರಗಳು ಇದನ್ನು ಕೈಬಿಟ್ಟು ಕೂತಿವೆ. ಇವು ಕೈಬಿಟ್ಟಿದ್ದಕ್ಕೆ ಯಾವುದೋ ಪರಿಸರ ಹೋರಾಟಗಾರರ ಒತ್ತಡವಲ್ಲ, ಪರಿಸರದ ಕಾಳಜಿಯೋ ಅಥವಾ ಮತ್ತೆಂತದೋ ಅಲ್ಲ, ಇಷ್ಟು ಸಂಕೀರ್ಣ ತಂತ್ರಜ್ಞಾನವನ್ನು ನಾವು ಜಾರಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಅಂತ ಕೈ ಬಿಟ್ಟಿವೆ. ಆದರೆ, ಭಾರತ ಛಲಬಿಡಲಿಲ್ಲ, ಗುರಿ ತಲುಪುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಸಾಧನೆ ಎಂಥದ್ದು, ಸಾಮಾನ್ಯ ಭಾರತೀಯ ಪ್ರಜೆಯಾಗಿ ನಮ್ಮ ವಿದ್ಯುತ್ ಬಿಲ್‌ ಮೇಲೆ ಇದರ ಪರಿಣಾಮ ಏನಾಗುತ್ತದೆ, ಭಾರತ ಒಂದು ಸಾರ್ವಭೌಮ ದೇಶವಾಗಿ ಸ್ವಾವಲಂಬಿಯಾಗುವುದಕ್ಕೆ ಇದು ಎಷ್ಟು ಮುಖ್ಯ ಅನ್ನೋದನ್ನ ನೋಡೋದಿಕ್ಕೆ ಭಾಭಾ ಅವರು ಯೋಜನೆ ಮಾಡಿದ ಥ್ರೀ ಸ್ಟೇಜ್ ಪ್ಲ್ಯಾನ್ ಏನು ಅಂತ ನೋಡಬೇಕು.

ಪರಮಾಣು ವಿದ್ಯುತ್ ವಿಷಯದಲ್ಲಿ ಭಾರತಕ್ಕೊಂದು ವಿಶಿಷ್ಟ ಸಮಸ್ಯೆಯಿದೆ. ನಮ್ಮಲ್ಲಿ ಪರಮಾಣು ಇಂಧನಕ್ಕೆ ಬೇಕಾದ 'ಯುರೇನಿಯಂ' ನಿಕ್ಷೇಪ ತೀರಾ ಕಡಿಮೆ ಇದೆ. ಆದರೆ, ಪ್ರಪಂಚದ ಒಟ್ಟು 'ಥೋರಿಯಂ' ನಿಕ್ಷೇಪದ ಶೇ. 25ರಷ್ಟು ಭಾಗ ಭಾರತದಲ್ಲೇ ಇದೆ. ಅಂದರೆ, ಈ ಥೋರಿಯಮ್ ಬಳಸಿದರೆ ಭಾರತ ಮುಂದಿನ 400 ವರ್ಷಗಳ ಕಾಲ ಬೆಳಗಬಹುದು. ಆದರೆ ಸಮಸ್ಯೆ ಏನೆಂದರೆ, ಥೋರಿಯಂ ಅನ್ನು ನೇರವಾಗಿ ಇಂಧನವಾಗಿ ಬಳಸಲು ಸಾಧ್ಯವಿಲ್ಲ. ಅದು ಹಸಿ ಸೌದೆಯಿದ್ದಂತೆ; ತನ್ನಷ್ಟಕ್ಕೆ ತಾನೇ ಉರಿಯೋದಿಲ್ಲ. ಈ ಹಸಿ ಸೌದೆಯನ್ನು ಅತ್ಯಂತ ಶಕ್ತಿಶಾಲಿ ಇಂಧನವನ್ನಾಗಿ ಮಾಡುವ ತಂತ್ರವೇ ಭಾಭಾರ ಮೂರು ಹಂತದ ಯೋಜನೆ.

ಸಂಬಂಧಿತ ಲೇಖನಗಳು

Related News ನೆಲ ಅಗೆಯುವ ಕಾಲ ಮುಗಿಯಿತು: ಆಕಾಶದಿಂದಲೇ ಭೂಮಿಯ ಆಳ ಸ್ಕ್ಯಾನ್ ಮಾಡುತ್ತಿವೆ ವಿಮಾನಗಳು!
Related News ಕ್ಯಾಸಿನೊಗಳ ಇತಿಹಾಸವೇ ಬದಲಾಯ್ತು: ಅಮೆರಿಕದಲ್ಲಿ ಸಿಕ್ಕ ಪ್ರಾಚೀನ ದಾಳಗಳು ಹೇಳುವ ಕಥೆಯೇನು?
Related News ಡ್ಯಾಡ್ ಬ್ರೈನ್: ಅಪ್ಪನಾದಾಗ ಪುರುಷರ ಮೆದುಳಿನ ಗಾತ್ರ ಕುಗ್ಗುವುದು ಹಾನಿಯೋ ಅಥವಾ ಅಪ್‌ಗ್ರೇಡೋ?
Related News ಗುರುವಿನಾಚೆಗೆ 4.6 ಶತಕೋಟಿ ವರ್ಷ ಹಳೆಯ ಗ್ರಹಗಳ ಕಾರ್ಖಾನೆ ಪತ್ತೆ! ಭೂಮಿಗೆ ಬೀಳುವ ಉಲ್ಕೆಗಳ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
Related News ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಹುಡುಕುವ ಕಣ್ಣಿಗೆ ಬೇಕಾಗಿದೆ ಪೊರೆ ಚಿಕಿತ್ಸೆ!

ಮೊದಲ ಹಂತದಲ್ಲಿ, ವಿದೇಶದಿಂದ ತಂದ ಯುರೇನಿಯಂ ಬಳಸಿ ವಿದ್ಯುತ್ ತಯಾರಿಸುವಾಗ 'ಪ್ಲುಟೋನಿಯಂ' ಉಪಉತ್ಪನ್ನವಾಗಿ ದೊರೆಯುತ್ತದೆ. ಎರಡನೇ ಹಂತವೇ ಈಗ ಕಲ್ಪಾಕಂನಲ್ಲಿ ಆರಂಭವಾಗಿರುವ PFBR. ಇದು ತಾನು ಬಳಸುವ ಇಂಧನಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತದೆ! ಬ್ರೀಡಿಂಗ್ ಮಾಡುತ್ತದೆ!

ಅಂದರೆ, ನೀವು ಬೆಂಗಳೂರಿನಿಂದ ಮೈಸೂರಿಗೆ ಕಾರ್ ಓಡಿಸಿಕೊಂಡು ಹೋದರೆ, ಬೆಂಗಳೂರಿನಿಂದ ಹೊರಡುವಾಗ ನಿಮ್ಮ ಕಾರ್ ಟ್ಯಾಂಕ್‌ನಲ್ಲಿ ಇದ್ದುದಕ್ಕಿಂತ ಹೆಚ್ಚು ಪೆಟ್ರೋಲ್ ಮೈಸೂರು ತಲುಪುವಷ್ಟರಲ್ಲಿ ಸೇರಿಕೊಂಡಿರುತ್ತದೆ! ಇದು ಎಂಥ ಫ್ಯಾಸಿನೇಟಿಂಗ್ ಐಡಿಯಾ ಅಲ್ವಾ?

ಈ ಮೂರನೇ ಸ್ಟೇಜ್‌ನಲ್ಲಿ, ರಿಯಾಕ್ಟರ್ ಸುತ್ತ ಥೋರಿಯಂ ಪದರಗಳನ್ನು ಇಟ್ಟು, ಅದನ್ನು ಯುರೇನಿಯಂ-233 ಇಂಧನವನ್ನಾಗಿ ಪರಿವರ್ತಿಸುತ್ತದೆ. ಇದು ನಮ್ಮನ್ನು ಮೂರನೇ ಹಂತಕ್ಕೆ ಕರೆದೊಯ್ಯುತ್ತದೆ. ಆಗ ಭಾರತವು ಸಂಪೂರ್ಣವಾಗಿ ತನ್ನದೇ ಆದ ಥೋರಿಯಂ ಬಳಸಿ ವಿದ್ಯುತ್ ತಯಾರಿಸಬಹುದು. ಅಷ್ಟು ಹೊತ್ತಿಗೆ ನಾವು ನಮ್ಮ ಇಂಧನದ ಅಗತ್ಯಕ್ಕೆ ಅರಬ್ ರಾಷ್ಟ್ರಗಳನ್ನಾಗಲಿ ಅಥವಾ ಯುರೇನಿಯಂಗೆ ಪಾಶ್ಚಿಮಾತ್ಯ ದೇಶಗಳನ್ನು ಅವಲಂಬಿಸಬೇಕಿಲ್ಲ.

ಹಾಗಾದರೆ, ಈ ಪ್ರಾಜೆಕ್ಟ್ ಯಾಕೆ ಇಷ್ಟೊಂದು ಕಾಂಪ್ಲೆಕ್ಸ್ ಅಂತ ನೋಡಿದರೆ, PFBRನಲ್ಲಿ ಬಳಸಿರುವ ಕೂಲಂಟ್! ಸಾಮಾನ್ಯ ರಿಯಾಕ್ಟರ್‌ಗಳಲ್ಲಿ ನೀರನ್ನು ಕೂಲಂಟ್ ಆಗಿ ಬಳಸಲಾಗುತ್ತದೆ. ಆದರೆ ಇಲ್ಲಿ 'ದ್ರವ ರೂಪದ ಸೋಡಿಯಂ' ಬಳಸಲಾಗಿದೆ. ಸೋಡಿಯಂ ಶಾಖವನ್ನು ಅದ್ಭುತವಾಗಿ ವರ್ಗಾಯಿಸುತ್ತದೆಯೇನೋ ನಿಜ, ಆದರೆ ಅದು ಅತ್ಯಂತ ಅಪಾಯಕಾರಿ. ಅದಕ್ಕೆ ನೀರು ಸೋಕಿದರೆ ಸ್ಫೋಟವಾಗುತ್ತೆ, ಗಾಳಿ ಸೋಕಿದರೆ ಹೊತ್ತಿ ಉರಿಯುತ್ತೆ.

ಹೀಗಾಗಿ, ಒಂದು ಹನಿಯೂ ಸೋಡಿಯಂ ಸೋರಿಕೆಯಾಗದ ಹಾಗೆ ಪೈಪ್‌ಗಳನ್ನು ಜೋಡಿಸುವುದು ಭಾರತೀಯ ಎಂಜಿನಿಯರ್‌ಗಳಿಗೆ ದೊಡ್ಡ ಸವಾಲಾಗಿತ್ತು. ಲಿಕ್ವಿಡ್ ಸೋಡಿಯಂ ಪೈಪ್ ಒಳಗೆ ಏನಾಗ್ತಿದೆ ಅಂತ ನೋಡೋಕಾಗಲ್ಲ. ಅದಕ್ಕಾಗಿ ಅಲ್ಟ್ರಾಸಾನಿಕ್ ಸ್ಕ್ಯಾನರ್‌ಗಳನ್ನು ಇಂಜಿನಿಯರ್‌ಗಳು ಬಳಸಿದ್ದಾರೆ.

ಇಲ್ಲಿನ ವಿಶೇಷ ಏನೆಂದರೆ, ಪ್ರತಿಯೊಂದು ನಟ್, ಬೋಲ್ಟ್ ಮತ್ತು ವಾಲ್ವ್‌ಗಳನ್ನು ಭಾರತೀಯ ಕೈಗಾರಿಕೆಗಳೇ ತಯಾರಿಸಿವೆ. ಅಕಸ್ಮಾತ್ ಏನಾದರೂ ಅನಾಹುತ ಸಂಭವಿಸಿದರೂ, ಈ ರಿಯಾಕ್ಟರ್ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ತನ್ನಷ್ಟಕ್ಕೆ ತಾನೇ ಸುರಕ್ಷಿತವಾಗಿ ನಿಲ್ಲುವ 'ಪ್ಯಾಸಿವ್ ಸೇಫ್ಟಿ' ವ್ಯವಸ್ಥೆಯನ್ನೂ ಹೊಂದಿದೆ. ಇದು ಸ್ವದೇಶಿ ತಂತ್ರಜ್ಞಾನದ ಅದ್ಭುತ!

22 ವರ್ಷಗಳ ಸುದೀರ್ಘ ಹೋರಾಟ

ನಾವು ಈಗ ಈ ಯಶಸ್ಸಿನಿಂದ ಖುಷಿ ಪಡುತ್ತಿದ್ದೇವೆ. ನಮ್ಮ ದೇಶದ ಇಂಜಿನಿಯರ್‌ಗಳ ಬಗ್ಗೆ ಹೆಮ್ಮೆ ಪಡೆಯುತ್ತಿದ್ದೇವೆ. ಆದರೆ, ಇದರ ಹಿಂದಿನ ಕಹಿ ಸತ್ಯವನ್ನೂ ಒಪ್ಪಿಕೊಳ್ಳಬೇಕು. 2004 ರಲ್ಲಿ ಇದರ ಕೆಲಸ ಆರಂಭವಾದಾಗ, 2010 ರೊಳಗೆ ₹3,492 ಕೋಟಿ ವೆಚ್ಚದಲ್ಲಿ ಮುಗಿಸುವ ಐಡಿಯಾ ಇತ್ತು. ಆದರೆ, ನಮ್ಮ ಮಾಮೂಲಿ ಭಾರತೀಯ ಆಡಳಿತ ವ್ಯವಸ್ಥೆ ಗೊತ್ತಲ್ಲ. 6 ವರ್ಷದಲ್ಲಿ ಮುಗಿಯೋದನ್ನ 22 ವರ್ಷಗಳಲ್ಲಿ ಮುಗಿಸಿದ್ದಾರೆ. 6 ವರ್ಷ ಎಲ್ಲಿ, 22 ವರ್ಷ ಎಲ್ಲಿ! ವೆಚ್ಚ ₹8,181 ಕೋಟಿಗೆ ಏರಿದೆ. ಈ 22 ವರ್ಷ ವಿಳಂಬಕ್ಕೆ ಹೋಲಿಸಿದರೆ ಈ ವೆಚ್ಚ ಏನೇನೂ ಹೆಚ್ಚು ಅನ್ನಿಸೋದಿಲ್ಲ ಬಿಡಿ!

2026ರ ಮಾರ್ಚ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವರದಿ ಓದಿದರೆ ನಮ್ಮ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ಯಾಕರಿಸಿ ಉಗಿಯುವ ಅನಿಸುತ್ತದೆ. ಇದರ ಉಸ್ತುವಾರಿ ವಹಿಸಿದ್ದ 'ಭಾವಿನಿ' ಸಂಸ್ಥೆ ಎಂಥೆಂಥಾ ಎಡವಟ್ಟುಗಳನ್ನು ಮಾಡಿದೆ ಅಂತ ಈ ವರದಿಯಲ್ಲಿ ಹೇಳಲಾಗಿದೆ. ದೊಡ್ಡ ಮೊತ್ತದ ಆರ್ಡರ್‌ಗಳನ್ನು ಮಾಡುವುದಕ್ಕೇ ವಿಳಂಬ ಮಾಡಲಾಗಿದೆ. ಕೆಲವೊಮ್ಮೆ ಬರಿ ಡಾಕ್ಯುಮೆಂಟ್‌ಗಳನ್ನ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ದಾಟಿಸುವುದಕ್ಕೇ ಮೂರು ವರ್ಷ ಮಾಡಿದ್ದಾರೆ. ಕೆಲಸ ನಡೆಯದಿದ್ದರೂ ನೌಕರರಿಗೆ ಸಂಬಳ ಹೆಚ್ಚಳ ಮಾಡಿದ್ದು, ಬಡ್ತಿ ನೀಡಿದ್ದು.... ಒಂದೇ ಎರಡೇ... ಇಪ್ಪತ್ತು ವರ್ಷಗಳ ವರೆಗೆ ಒಂದು ಯುನಿಟ್ ವಿದ್ಯುತ್ ಉತ್ಪಾದನೆ ಆಗದಿದ್ದರೂ, ತೆರಿಗೆದಾರರ ಹಣ ತೊಳೆಯುತ್ತ ಕೂತಿದ್ದವರು ಇವರು. ಒಂದು ಕಡೆ ಈ ಇಡೀ ಯೋಜನೆ ಇಂಜಿನಿಯರಿಂಗ್ ಮಾರ್ವೆಲ್‌... ಇನ್ನೊಂದು ಕಡೆ ಇದರ ಜಾರಿಯ ಪ್ರಗತಿ ನೋಡಿದರೆ ಅಡ್ಮಿನಿಸ್ಟ್ರೇಟಿವ್ ಬ್ಲಂಡರ್!

ರಿಯಾಕ್ಟರ್ ಏನೋ ಶುರುವಾಗಿದೆ. ಆದರೆ, ಪ್ರಾಜೆಕ್ಟ್ ಇನ್ನೂ ಮುಗಿದಿಲ್ಲ. PFBR ಅನ್ನು ಎಂಜಿನ್ ಎಂದು ಪರಿಗಣಿಸಿದರೆ, ಅದಕ್ಕೆ ಬೇಕಾದ ಇಂಧನ ಶುದ್ಧೀಕರಣ ಕೇಂದ್ರವೇ FRFCF. ರಿಯಾಕ್ಟರ್‌ನಿಂದ ಬರುವ ಬಳಸಿದ ಇಂಧನವನ್ನು ಪುನರ್ಬಳಕೆ ಮಾಡಿ ಪ್ಲುಟೋನಿಯಂ ಬೇರ್ಪಡಿಸಲು ಈ ಕೇಂದ್ರ ಅತ್ಯಗತ್ಯ. ಆದರೆ ಇದು ಈಗಲೂ ಕೆಲಸ ಮುಗಿಸಿಲ್ಲ, ಬಹುಶಃ 2027 ಅಥವಾ 2029 ರವರೆಗೆ ಕಾಯಬೇಕಾಗಬಹುದು. ಇದು ಪೂರ್ಣಗೊಳ್ಳುವವರೆಗೂ ನಾವು ಭಾಭಾ ಅವರು ಕಂಡ "ಬ್ರೀಡಿಂಗ್" ಕನಸನ್ನು ಸಂಪೂರ್ಣವಾಗಿ ನನಸು ಮಾಡಲು ಸಾಧ್ಯವಿಲ್ಲ. ವಿಕಿರಣಶೀಲ ಇಂಧನವನ್ನು ರೋಬೋಟ್‌ಗಳ ಮೂಲಕ ನಿರ್ವಹಿಸುವ ಈ ತಂತ್ರಜ್ಞಾನವನ್ನು ಭಾರತ ಯಾರಿಗೂ ಶರಣಾಗದೆ ಸ್ವತಃ ಅಭಿವೃದ್ಧಿಪಡಿಸುತ್ತಿದೆ.

ಆತ್ಮನಿರ್ಭರ ಭಾರತ

ಈ ಕಥೆಯಲ್ಲಿ ಒಂದು ಖುಷಿಯ ಸಂಗತಿ ಎಂದರೆ ಇದರ ಒಂದೊಂದು ಕಲ್ಲನ್ನೂ ಇಟ್ಟವರು ಭಾರತೀಯರು. ನಮ್ಮ ಸ್ಮಾರ್ಟ್‌ಫೋನ್‌ಗಳ ಹಾಗೆ, ಪ್ರತಿಯೊಂದು ಬಿಡಿಭಾಗವನ್ನೂ ಚೀನಾದಿಂದಲೋ ಅಥವಾ ಬೇರೆ ದೇಶದಿಂದಲೋ ತಂದು ಅದನ್ನು ಭಾರತದಲ್ಲಿರುವ ಫ್ಯಾಕ್ಟರಿಯಲ್ಲಿ ಜೋಡಿಸಿ, ಅದಕ್ಕೆ ಯಾವುದೋ ಒಂದು ಕಂಪನಿಯ ಬ್ರ್ಯಾಂಡಿಂಗ್‌ ಚಪ್ಪೆ ಒತ್ತಿ ಮಾರಾಟ ಮಾಡಿಲ್ಲ. ಭಾರತದ್ದೇ ಆದ 200 ಕ್ಕೂ ಹೆಚ್ಚು ಕಂಪನಿಗಳು ಮತ್ತು ಸಾವಿರಾರು ಸಣ್ಣ ಕೈಗಾರಿಕೆಗಳು (MSMEs) ಇದರ ಒಂದೊಂದು ನಟ್ ಬೋಲ್ಟ್ ಅನ್ನೂ ತಯಾರಿ ಮಾಡಿವೆ. BHEL, L&T, MTAR ಟೆಕ್ನಾಲಜೀಸ್ ಅಂತಹ ದೊಡ್ಡ ಕಂಪನಿಗಳಿಂದ ಹಿಡಿದು ಪುಣೆ ಮತ್ತು ಗುಜರಾತ್‌ನ ಸಣ್ಣ ವರ್ಕ್‌ಶಾಪ್‌ಗಳವರೆಗೆ ಎಲ್ಲರೂ ಕೈಜೋಡಿಸಿದ್ದಾರೆ. ಇನ್ನೊಂದು ಕಡೆ, ನಾವೆಲ್ಲ ತಂತ್ರಜ್ಞಾನದ ದೈತ್ಯ ಅಂತ ಚೀನಾವನ್ನು ಹೊಗಳುತ್ತೇವಲ್ಲ... ಇದೇ ಚೀನಾ, ಈಗ ರಷ್ಯಾದಲ್ಲಿರುವ ಈ ತಂತ್ರಜ್ಞಾನವನ್ನು ಖರೀದಿ ಮಾಡುತ್ತಿದೆ. ಆದರೆ, 22 ವರ್ಷಗಳ ಹಿಂದೆಯೇ ಐಡಿಯಾ ರೂಪಿಸಿದ್ದ ಭಾರತ, ಈಗ ಶೂನ್ಯದಿಂದಲೂ ತನ್ನದೇ ಆದ ವಿನ್ಯಾಸವನ್ನೂ ಮಾಡಿ, ಮ್ಯಾನ್ಯುಫ್ಯಾಕ್ಚರ್ ಕೂಡಾ ಮಾಡಿ ಅಂತಿಮ ಹಂತದ ಕಡೆಗೆ ಹೆಜ್ಜೆ ಇಟ್ಟಿದೆ.

2047ರ ವೇಳೆಗೆ ಭಾರತವು 100 ಗಿಗಾವ್ಯಾಟ್ (GW) ಪರಮಾಣು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಇದು ಈಗಿನ ಸಾಮರ್ಥ್ಯಕ್ಕಿಂತ 12 ಪಟ್ಟು ಹೆಚ್ಚು. ಕೇವಲ ಸರ್ಕಾರಿ ಸಂಸ್ಥೆಗಳಿಂದ ಇದು ಸಾಧ್ಯವಿಲ್ಲ ಅಂತ ಸರ್ಕಾರಕ್ಕೂ ಗೊತ್ತಿದೆ. ಅದಕ್ಕೇ ಕಳೆದ ವರ್ಷ 'ಶಾಂತಿ ಕಾಯ್ದೆ' ಜಾರಿಗೆ ತಂದಿದೆ. ಈ ಕಾಯ್ದೆ 1962ರ ಹಳೆಯ ಕಾನೂನನ್ನು ಬದಲಿಸಿ, ಪರಮಾಣು ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ದೊಡ್ಡ ಖಾಸಗಿ ಕಂಪನಿಗಳು ಕೂಡ ಪರಮಾಣು ರಿಯಾಕ್ಟರ್‌ಗಳನ್ನು ನಿರ್ಮಿಸಲು ಸಾಧ್ಯವಾಗಲಿದೆ.

ಸಾಮಾನ್ಯ ಜನರಿಗೆ ಇದರಿಂದ ಏನು ಲಾಭ?

ಕಲ್ಪಾಕಂನ ರಿಯಾಕ್ಟರ್ ಕರ್ನಾಟಕದ ರೈತನಿಗಾಗಲಿ ಅಥವಾ ಬೆಂಗಳೂರಿನ ಐಟಿ ಉದ್ಯೋಗಿಗಾಗಲಿ ಯಾಕೆ ಮುಖ್ಯ? ಥೋರಿಯಂ ಬಳಸಿ ನಾವು ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿದರೆ, ಈ ಪೆಟ್ರೋಲಿಯಂ ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗುತ್ತದೆ. ವಿದ್ಯುತ್ ಉತ್ಪಾದನೆ ವೆಚ್ಚ ತುಂಬಾ ಕಡಿಮೆಯಾದಾಗ ನಾವೆಲ್ಲ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನ ಬಳಸಬಹುದು. ನಾವೆಲ್ಲ ಈಗ ಹಾರ್ಮುಝ್‌ ಜಲಸಂಧಿಯಲ್ಲಿ ಸಿಕ್ಕಿಕೊಂಡಿದ್ದೇವೆ. ಒಂದು ವೇಳೆ, ಈ ತೈಲಕ್ಕಿಂತ ಕಡಿಮೆ ದರದಲ್ಲಿ ನಮಗೆ ವಿದ್ಯುತ್ ಸಿಗುತ್ತದೆ ಎಂದಾದರೆ, ನಾವು ನಮ್ಮದೇ ದೇಶದಲ್ಲಿ ಹೇರಳವಾಗಿ ಸಿಗುವ ವಿದ್ಯುತ್ ಬಳಸಿ ಬದುಕಬಹುದು.

ಆಗ, ಥೋರಿಯಂ ಬಳಸಿ ಬದುಕುವ ಭಾರತವನ್ನು ಯಾರೂ ಬ್ಲ್ಯಾಕ್‌ಮೇಲ್ ಮಾಡಲಾಗದು. ಈ ಯೋಜನೆ ಯಶಸ್ವಿಯಾದರೆ, 2050 ರ ವೇಳೆಗೆ ಭಾರತದಲ್ಲಿ ವಿದ್ಯುತ್ ಅತ್ಯಂತ ಅಗ್ಗವಾಗಲಿದೆ. ಇದು ಕೃಷಿ, ಕೈಗಾರಿಕೆ ಮತ್ತು ವಾಹನ ಕ್ಷೇತ್ರಗಳನ್ನೇ ಬದಲಿಸಲಿದೆ. ಮತ್ತೊಂದು ವಿಶೇಷವೆಂದರೆ, ಈ ರಿಯಾಕ್ಟರ್ ಹಳೆಯ ಪರಮಾಣು ತ್ಯಾಜ್ಯವನ್ನೇ ಇಂಧನವಾಗಿ ಬಳಸಿಕೊಳ್ಳುವುದರಿಂದ ಪರಿಸರ ಮಾಲಿನ್ಯದ ಸಮಸ್ಯೆಯೂ ಇರೋದಿಲ್ಲ.

❤️ ಈ ಲೇಖನಗಳನ್ನೂ ಓದಿ

❤️ಎಕ್ಸಾಮ್ ಹಿಂದಿನ ದಿನ ಓದಿ ಪಾಸ್ ಆಗೋದು ಹೇಗೆ? (ಇದು ಓದೋರಿಗಲ್ಲ, ಸ್ಮಾರ್ಟ್ ಜನರಿಗೆ)

❤️ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮರೆತುಬಿಡಿ! - ಫಾಲೋವರ್ಸ್ ಇಲ್ಲದಿದ್ದರೂ ದುಡ್ಡು ಕೊಡುವ Picsart!

❤️ಕ್ವಾಂಟಮ್ ಕಂಪ್ಯೂಟರ್ಗಳಿಗೆ ಮರೆವಿನ ಖಾಯಿಲೆಯಂತೆ! ಮದ್ದೇನು?

❤️ಅಮೆರಿಕದಲ್ಲಿ ಲ್ಯಾಬ್ ಹಾಲಿನ ನಿಷೇಧ: ಆಹಾರ ತಂತ್ರಜ್ಞಾನದ ಹೊಸ ಸಮರ

❤️ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿ: ನಿಮ್ಮ ಜೇಬಿಗೆ ಮತ್ತು ಅಗತ್ಯಕ್ಕೆ ತಕ್ಕ ಫೋನ್ ಯಾವುದು? ಇಲ್ಲಿದೆ ಕಂಪ್ಲೀಟ್ ಗೈಡ್!

❤️ಜಾಗತಿಕ ಟೆಕ್‌ ಟ್ರೆಂಡ್ 2026: ಎಐ ಮತ್ತು ಬಾಹ್ಯಾಕಾಶದ ನಡುವೆ ಶುರುವಾಗಿದೆ ಹೈ ಟೆನ್ಷನ್‌ ರೇಸ್!

❤️ಗೂಗಲ್ ಜೆಮ್ಮಾ 4 ಮತ್ತು ಟರ್ಬೊಕ್ವಾಂಟ್: ಡಿಜಿಟಲ್ ಜಗತ್ತಿನ ಹೊಸ ಮೈಲುಗಲ್ಲು

❤️ಗೂಗಲ್‌ಗೆ ನೇರ ಪೈಪೋಟಿ: ವಿದ್ಯಾರ್ಥಿಗಳಿಗಾಗಿ ಅಡೋಬ್ ತಂದಿದೆ ಸಂಪೂರ್ಣ ಉಚಿತ 'ಎಐ' ಸ್ಟಡಿ ಟೂಲ್!

🟢 ನಿರಂತರ ಅಪ್ಡೇಟ್‌ ಪಡೆಯಲು ನಮ್ಮ ವಾಟ್ಸಾಪ್‌ ಚಾನೆಲ್‌ ಫಾಲೋ ಮಾಡಿ JOIN ➤

🛒 ಆನ್‌ಲೈನ್‌ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್‌ ಬಳಸಿ

🟠 ಅಮೆಜಾನ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

🔵 ಫ್ಲಿಪ್‌ಕಾರ್ಟ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Krishna bhat
Krishna bhat Senior Journalist
451 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp