ಟ್ರೆಂಡಿಂಗ್

ಒನ್‌ಪ್ಲಸ್ ಎನ್6 ಫೋನ್ ಯಾರಿಗೆ ಸೂಕ್ತ? 8000mAh ಬ್ಯಾಟರಿಯ ಬಜೆಟ್ ಫೋನ್‌ನಲ್ಲಿ ಏನಿದೆ? - Tech Vaidya

ಒನ್‌ಪ್ಲಸ್ ಎನ್6 ಫೋನ್ ಯಾರಿಗೆ ಸೂಕ್ತ? 8000mAh ಬ್ಯಾಟರಿಯ ಬಜೆಟ್ ಫೋನ್‌ನಲ್ಲಿ ಏನಿದೆ?

ದಿನಕ್ಕೆರಡು ಬಾರಿ ಫೋನ್ ಚಾರ್ಜ್ ಮಾಡುವ ಕಿರಿಕಿರಿ ತಪ್ಪಿಸಲು ಒನ್‌ಪ್ಲಸ್ ಇದೇ ಮೊದಲ ಬಾರಿಗೆ ಬೃಹತ್ ಬ್ಯಾಟರಿಯ ಬಜೆಟ್ ಫೋನ್ ಒಂದನ್ನು ಪರಿಚಯಿಸುತ್ತಿದೆ. ಅದೇ ಬಹುನಿರೀಕ್ಷಿತ 'ಒನ್‌ಪ್ಲಸ್ ಎನ್6' ಸ್ಮಾರ್ಟ್‌ಫೋನ್. ಬರೋಬ್ಬರಿ ಎಂಟು ಸಾವಿರ ಎಂಎಎಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಈ ಫೋನ್, ಮಧ್ಯಮ ವರ್ಗದ ಗ್ರಾಹಕರ ಗಮನ ಸೆಳೆದಿದೆ.  

ಇಲ್ಲಿಯವರೆಗೆ ಒನ್‌ಪ್ಲಸ್ ಎಂದರೆ ನಾರ್ಡ್ ಸಿರೀಸ್ ಮಾತ್ರ ಬಜೆಟ್ ಫೋನ್ ಎಂದುಕೊಂಡಿದ್ದೆವು. ಆದರೆ ಆ ಲೆಕ್ಕಾಚಾರವನ್ನು ಬದಲಾಯಿಸಲು ಕಂಪನಿಯು ಎನ್ ಸಿರೀಸ್ ಎಂಬ ಹೊಸ ಶ್ರೇಣಿಯನ್ನು ತರುತ್ತಿದೆ. ಯುವಕರು ಮತ್ತು ಬಜೆಟ್ ಗ್ರಾಹಕರಿಗೆ ಒನ್‌ಪ್ಲಸ್‌ನ ನೈಜ ಅನುಭವವನ್ನು ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಈ ಹೊಸ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ.  ಈ ಹೊಸ ಒನ್‌ಪ್ಲಸ್ ಎನ್6 ಫೋನ್ ಇದೇ ಜೂನ್ ಮೂವತ್ತರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಅಮೆಜಾನ್ ಇಂಡಿಯಾ, ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಇದು ಸೇಲ್‌ಗೆ ಲಭ್ಯವಾಗಲಿದೆ. ಗ್ರಾಹಕರು ಕಪ್ಪು ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ಇದನ್ನು ಖರೀದಿಸಬಹುದು.

ಬೆಲೆಯ ವಿಚಾರಕ್ಕೆ ಬಂದರೆ ಇದು ಅತ್ಯಂತ ಸ್ಪರ್ಧಾತ್ಮಕವಾಗಿರಲಿದೆ. ಮೂಲಗಳ ಪ್ರಕಾರ ಹದಿನೆಂಟರಿಂದ ಇಪ್ಪತ್ತೈದು ಸಾವಿರ ರೂಪಾಯಿಗಳ ವ್ಯಾಪ್ತಿಯಲ್ಲಿ ಇದರ ಬೆಲೆ ನಿಗದಿಯಾಗಲಿದೆ. ಟೆಕ್ ವಲಯದಲ್ಲಿ ಚರ್‍ಚೆಯಾಗುತ್ತಿರುವ ಪ್ರಕಾರ, ಇದರ ಬೇಸ್ ಮಾಡೆಲ್ ಇಪ್ಪತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೂ ಸಿಗುವ ಸಾಧ್ಯತೆಗಳಿವೆ. ಇದು ನಾರ್ಡ್ ಸಿರೀಸ್‌ಗಿಂತ ಒಂದು ಹಂತ ಕೆಳಗಿನ ಫೋನ್ ಆಗಿರಲಿದೆ.

8000mAh ಬ್ಯಾಟರಿ ಮತ್ತು ಸಾಫ್ಟ್‌ವೇರ್ ಶಕ್ತಿ

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ

ಈ ಹೊಸ ಫೋನ್‌ನ ಅತಿ ದೊಡ್ಡ ಆಕರ್ಷಣೆ ಎಂದರೆ ಇದರ ಬ್ಯಾಟರಿ. ಕಂಪನಿಯೇ ಅಧಿಕೃತವಾಗಿ ಖಚಿತಪಡಿಸಿರುವಂತೆ, ಇದರಲ್ಲಿ ಎಂಟು ಸಾವಿರ ಎಂಎಎಚ್ ಬ್ಯಾಟರಿ ಇರಲಿದೆ. ಸಾಮಾನ್ಯ ಬಳಕೆದಾರರು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸತತ ಎರಡೂವರೆಯಿಂದ ಮೂರು ದಿನಗಳ ಕಾಲ ಆರಾಮಾಗಿ ಬಳಸಬಹುದು. ಇದು ಈ ಬಜೆಟ್ ವಿಭಾಗದಲ್ಲಿಯೇ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಎನಿಸಿಕೊಳ್ಳಲಿದೆ.

ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ನಲವತ್ತೈದು ವ್ಯಾಟ್ ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ. ಕೇವಲ ಐದು ನಿಮಿಷ ಚಾರ್ಜ್ ಮಾಡಿದರೆ ಸುಮಾರು ಒಂದೂವರೆ ಗಂಟೆಗಳ ಕಾಲ ಯೂಟ್ಯೂಬ್ ವಿಡಿಯೋ ನೋಡುವಷ್ಟು ಬ್ಯಾಕಪ್ ಸಿಗಲಿದೆ. ಜೊತೆಗೆ ಏಳು ವರ್ಷಗಳ ಕಾಲ ಬ್ಯಾಟರಿ ಹಾಳಾಗುವುದಿಲ್ಲ ಎಂಬ ಭರವಸೆಯನ್ನು ಕಂಪನಿ ನೀಡಿದೆ.

ದೀರ್ಘಕಾಲದ ಬಳಕೆಗೆ ಅನುಕೂಲವಾಗುವಂತೆ ಆಂಡ್ರಾಯ್ಡ್ ಹದಿನಾರು ಆಧಾರಿತ ಆಕ್ಸಿಜನ್ ಓಎಸ್ ಹದಿನಾರು ಸಾಫ್ಟ್‌ವೇರ್ ಅನ್ನು ಇದರಲ್ಲಿ ನೀಡಲಾಗುತ್ತಿದೆ. ಇದು ಬರೋಬ್ಬರಿ ಐದು ವರ್ಷಗಳ ಕಾಲ ಫೋನ್ ಹ್ಯಾಂಗ್ ಆಗದಂತೆ ಅತ್ಯಂತ ಸರಾಗವಾಗಿ ಕೆಲಸ ಮಾಡುತ್ತದೆ. ಇದನ್ನೇ ಕಂಪನಿಯು ಆಲ್ವೇಸ್ ಆನ್ ಆಲ್ವೇಸ್ ಸ್ಮೂತ್ ಎಂದು ಕರೆದಿದೆ.

ಫೋನ್ ಬಳಕೆಯ ಸಮಯದಲ್ಲಿ ಹೀಟಿಂಗ್ ಸಮಸ್ಯೆ ಬಾರದಂತೆ ತಡೆಯಲು ಐದು ಸಾವಿರದ ಮುನ್ನೂರು ಚದರ ಮಿಲಿಮೀಟರ್‌ನ ದೊಡ್ಡ ವಿಸಿ ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಫೋನ್ ಇಷ್ಟೊಂದು ದೊಡ್ಡ ಬ್ಯಾಟರಿ ಹೊಂದಿದ್ದರೂ, ನೋಡಲು ಆಕರ್ಷಕವಾಗಿದ್ದು ಕೇವಲ ಎರಡು ನೂರ ಎಂಟು ಗ್ರಾಂ ತೂಕವನ್ನು ಹೊಂದಿದೆ.

ಸಂಬಂಧಿತ ಲೇಖನಗಳು

Related News ಆಪಲ್ ಮ್ಯಾಕ್‌ಬುಕ್ ಪ್ರೊ ಎಂ5 ವಿಮರ್ಶೆ: ಒಂದು ತಿಂಗಳ ನೈಜ ಅನುಭವ; ಎಂ5, ಎಂ5 ಪ್ರೊ, ಎಂ5 ಮ್ಯಾಕ್ಸ್‌ನಲ್ಲಿ ಯಾವುದು ಬೆಸ್ಟ್?
Related News ಬಂದೇಬಿಡ್ತು 165 ಭಾಷೆಗಳ ಎಐ ಭಾಷಾಂತರವನ್ನೂ ಮಾಡುವ ಟ್ರೂಕ್ ಟ್ರೂಕ್ಲಿಪ್ಸ್ 2: ಸಸ್ತಾ ಮೇ ಮಸ್ತ್ ಇಯರ್ ಬಡ್‌!
Related News ಐಒಎಸ್ 27 ಬಂದಿದೆ: ಸಿರಿ ಎಐಗೆ ಹೊಸ ಬುದ್ಧಿ, ಮ್ಯಾಕ್ ಮತ್ತು ಐಫೋನ್‌ಗೆ ಹೊಸ ಶಕ್ತಿ!
Related News ಗೇಮ್ ಮಧ್ಯದಲ್ಲೇ ಪಿಸಿ ರೀಸ್ಟಾರ್ಟ್ ಆಗ್ತಿದೆಯಾ? ಗೇಮರ್‌ಗಳು ಈಗ ಏನು ಮಾಡಬೇಕು?
Related News ಅಮೆಜಾನ್ ಪ್ರೈಮ್ ಡೇ 2026: ಒನ್‌ಪ್ಲಸ್ 13 ಮೇಲೆ ₹18,000 ರಿಯಾಯಿತಿ; ಈ ಬೆಲೆಯಲ್ಲಿ ಖರೀದಿಸುವುದು ಲಾಭವೇ?

ಡಿಸ್‌ಪ್ಲೇ ಹಾಗೂ ಪ್ರೊಸೆಸರ್ ಸಾಮರ್ಥ್ಯ

ಬ್ಯಾಟರಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ಕಂಪನಿ, ಬಜೆಟ್ ಸರಿದೂಗಿಸಲು ಡಿಸ್‌ಪ್ಲೇಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದರಲ್ಲಿ ಆರು ಬಿಂದು ಏಳು ಎರಡು ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ನೀಡಲಾಗುತ್ತಿದೆ. ಅಂದರೆ ನಾರ್ಡ್ ಸಿರೀಸ್‌ನಲ್ಲಿ ಸಿಗುವ ಗುಣಮಟ್ಟದ ಅಮೋಲೆಡ್ ಸ್ಕ್ರೀನ್ ಇದರಲ್ಲಿರುವುದಿಲ್ಲ. ಬಣ್ಣಗಳು ಮತ್ತು ಕಾಂಟ್ರಾಸ್ಟ್ ಸ್ವಲ್ಪ ಮಂಕಾಗಿ ಕಾಣಬಹುದು.

ಆದರೂ ಸ್ಕ್ರೀನ್ ಸ್ಮೂತ್ ಆಗಿ ಕೆಲಸ ಮಾಡಲು ನೂರ ನಲವತ್ತನಾಲ್ಕು ಹರ್ಟ್ಸ್ ರಿಫ್ರೆಶ್ ರೇಟ್ ನೀಡಲಾಗಿದೆ. ಹೊರಾಂಗಣದಲ್ಲಿ ಸುಲಭವಾಗಿ ಸ್ಕ್ರೀನ್ ಓದಲು ಸಾವಿರ ನಿಟ್ಸ್ ಬ್ರೈಟ್‌ನೆಸ್ ಇರಲಿದೆ. ಇದರ ಜೊತೆಗೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಬರುವ ಸಾಧ್ಯತೆಗಳಿವೆ. ಪಂಚ್ ಹೋಲ್ ವಿನ್ಯಾಸವು ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಈ ಫೋನ್ ಒಳಗೆ ನಾಲ್ಕು ನ್ಯಾನೋಮೀಟರ್ ತಂತ್ರಜ್ಞಾನದ ಮೀಡಿಯಾಟೆಕ್ ಡೈಮೆನ್ಸಿಟಿ ಏಳು ಸಾವಿರದ ಮುನ್ನೂರ ಅರವತ್ತು ಪ್ರೊಸೆಸರ್ ಅಳವಡಿಸುವ ನಿರೀಕ್ಷೆಯಿದೆ. ದೈನಂದಿನ ಕೆಲಸಗಳಿಗೆ, ಮಲ್ಟಿ-ಟಾಸ್ಕಿಂಗ್ ಹಾಗೂ ಸಾಮಾನ್ಯ ಗೇಮಿಂಗ್‌ಗೆ ಇದು ಅತ್ಯುತ್ತಮವಾಗಿ ಸ್ಪಂದಿಸುತ್ತದೆ.

ಆದರೆ ನೀವು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾದಂತಹ ಹೈ-ಗ್ರಾಫಿಕ್ಸ್ ಗೇಮ್‌ಗಳನ್ನು ಆಡುವವರಾಗಿದ್ದರೆ, ಈ ಪ್ರೊಸೆಸರ್ ನಿಮ್ಮ ನಿರೀಕ್ಷೆ ತಲುಪುವುದಿಲ್ಲ. ನಾರ್ಡ್ ಆರು ಫೋನ್‌ಗೆ ಹೋಲಿಸಿದರೆ ಇದರ ಪರ್ಫಾರ್ಮೆನ್ಸ್ ಗಣನೀಯವಾಗಿ ಕಡಿಮೆಯಿರಲಿದೆ. ಇದು ಹೆವಿ ಗೇಮರ್‌ಗಳಿಗಾಗಿ ಮಾಡಿದ ಫೋನ್ ಅಲ್ಲ ಎಂಬುದನ್ನು ನೆನಪಿಡಬೇಕು.

ಕ್ಯಾಮೆರಾ ಗುಣಮಟ್ಟ ಮತ್ತು ವಿನ್ಯಾಸ

ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಿಂಭಾಗದಲ್ಲಿ ಐವತ್ತು ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ ಎರಡು ಮೆಗಾಪಿಕ್ಸೆಲ್‌ನ ಸಣ್ಣ ಸೆಕೆಂಡರಿ ಸೆನ್ಸರ್ ಇರಲಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ ಎಂಟು ಅಥವಾ ಹದಿನಾರು ಮೆಗಾಪಿಕ್ಸೆಲ್ ಕ್ಯಾಮೆರಾ ಬರುವ ನಿರೀಕ್ಷೆಯಿದೆ.

ಹಗಲಿನ ಬೆಳಕಿನಲ್ಲಿ ಉತ್ತಮ ಫೋಟೋಗಳು ಬಂದರೂ, ಅಲ್ಟ್ರಾವೈಡ್ ಲೆನ್ಸ್ ಇಲ್ಲದಿರುವುದು ಇದರ ದೊಡ್ಡ ಮೈನಸ್ ಪಾಯಿಂಟ್. ರಾತ್ರಿಯ ಹೊತ್ತು ಹಾಗೂ ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಸಾಧಾರಣವಾಗಿರಲಿದೆ. ಕ್ಯಾಮೆರಾಗೆ ಹೆಚ್ಚು ಒತ್ತು ಕೊಡುವವರಿಗೆ ಇದು ಅಷ್ಟಾಗಿ ಇಷ್ಟವಾಗುವುದಿಲ್ಲ.

ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ನಾರ್ಡ್ ಸಿಇ ಸಿರೀಸ್‌ಗೆ ಹೋಲುವ ಫ್ಲ್ಯಾಟ್ ಡಿಸೈನ್ ಹೊಂದಿದೆ. ಒನ್ ಪ್ಲಸ್‌ ಇತ್ತೀಚಿಗೆ ಇದೇ ಡಿಸೈನ್‌ ಹಿಂದೆ ಓಡುತ್ತಿರುವುದು ಮಾತ್ರ ಯಾಕೆ ಅರ್ಥಾಗುತ್ತಿಲ್ಲ.  ಬಾಡಿ ವಿನ್ಯಾಸ ಸಂಪೂರ್ಣ ಪ್ಲಾಸ್ಟಿಕ್‌ನಿಂದ ಕೂಡಿರಲಿದ್ದು, ನೀರಿನಿಂದ ರಕ್ಷಣೆ ಪಡೆಯಲು ಕೇವಲ ಐಪಿ ಅರವತ್ತನಾಲ್ಕು ರೇಟಿಂಗ್ ಮಾತ್ರ ನೀಡಲಾಗಿದೆ. ಅತ್ಯುತ್ತಮ ಆಡಿಯೋಗಾಗಿ ಸ್ಟೀರಿಯೋ ಸ್ಪೀಕರ್ ಸೌಲಭ್ಯವಿದೆ.

ಸ್ಟೋರೇಜ್ ವಿಚಾರದಲ್ಲಿ ನಾಲ್ಕು, ಆರು ಮತ್ತು ಎಂಟು ಜಿಬಿ ರ್ಯಾಮ್ ಆಯ್ಕೆಗಳೊಂದಿಗೆ ನೂರ ಇಪ್ಪತ್ತೆಂಟು ಜಿಬಿ ಇಂಟರ್ನಲ್ ಮೆಮೊರಿ ಸಿಗಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕುವ ಅವಕಾಶವೂ ಇರಬಹುದು. ವೈರ್‌ಲೆಸ್ ಚಾರ್ಜಿಂಗ್ ಇರುವುದಿಲ್ಲ ಮತ್ತು ಹಳೆಯ ಮಾದರಿಯ ಯುಎಸ್‌ಬಿ ಪೋರ್ಟ್ ಬಳಸಲಾಗಿದೆ.

ಯಾರೆಲ್ಲ ಈ ಮೊಬೈಲ್ ಖರೀದಿಸಬಹುದು? 

ಕಡಿಮೆ ಬೆಲೆಗೆ ದೊಡ್ಡ ಬ್ಯಾಟರಿ ಮತ್ತು ಕ್ಲೀನ್ ಸಾಫ್ಟ್‌ವೇರ್ ಹುಡುಕುತ್ತಿರುವವರಿಗೆ ಒನ್‌ಪ್ಲಸ್ ಎನ್6 ಅತ್ಯುತ್ತಮ ಬಜೆಟ್ ಫೋನ್ ಆಗಬಲ್ಲದು. ದಿನವಿಡೀ ಫೋನ್ ಬಳಸುವ ಯುವಕರಿಗೆ, ವಿಡಿಯೋ ನೋಡುವವರಿಗೆ ಮತ್ತು ಬ್ಯಾಟರಿ ಬ್ಯಾಕಪ್‌ಗೆ ಮೊದಲ ಆದ್ಯತೆ ನೀಡುವವರಿಗೆ ಇದು ಹೇಳಿಮಾಡಿಸಿದಂತಿದೆ. ಹದಿನೆಂಟು ಸಾವಿರದ ಆಸುಪಾಸಿನಲ್ಲಿ ಇದು ಖಂಡಿತವಾಗಿಯೂ ಮೌಲ್ಯಯುತ ಫೋನ್.

ಆದರೆ, ನಿಮಗೆ ಕ್ಯಾಮೆರಾ ಗುಣಮಟ್ಟವೇ ಮುಖ್ಯ, ಅಮೋಲೆಡ್ ಸ್ಕ್ರೀನ್ ಬೇಕೇ ಬೇಕು ಹಾಗೂ ಹೆವಿ ಗೇಮಿಂಗ್ ಮಾಡುತ್ತೀರಿ ಎಂದರೆ ಈ ಫೋನ್ ನಿಮಗೆ ಸೂಕ್ತವಲ್ಲ. ಇದರ ಬದಲು ಸ್ವಲ್ಪ ಹಣ ಸೇರಿಸಿ ಮುಂಬರುವ ನಾರ್ಡ್ ಆರು ಅಥವಾ ಇತರ ಬ್ರ್ಯಾಂಡ್‌ಗಳ ಮಿಡ್-ರೇಂಜ್ ಫೋನ್‌ಗಳನ್ನು ಖರೀದಿಸುವುದು ಉತ್ತಮ ನಿರ್ಧಾರ. ಅಷ್ಟಕ್ಕೂ  ಜೂನ್ ಮೂವತ್ತರಂದು ಫೋನ್ ಅಧಿಕೃತವಾಗಿ ಬಿಡುಗಡೆಯಾದ ಬಳಿಕವಷ್ಟೇ ಇದರ ಅಸಲಿ ಬೆಲೆ ಮತ್ತು ನಿಖರವಾದ ಫೀಚರ್‌ಗಳು ಹೊರಬೀಳಲಿವೆ. ಅಲ್ಲಿಯವರೆಗೆ ಸ್ವಲ್ಪ ಕಾಯುವುದು ಮತ್ತು ಬಿಡುಗಡೆಯ ನಂತರದ ವಿಮರ್ಶೆಗಳನ್ನು ನೋಡಿ ಫೋನ್ ಖರೀದಿಸುವುದು ಜಾಣತನ.

Praveen Kumar Sampa
Praveen Kumar Sampa Writer, Software Engineer
516 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp