ಟ್ರೆಂಡಿಂಗ್

ಅಮೆಜಾನ್ ಲಾಂಚ್‌ಪ್ಯಾಡ್: ಸ್ಟಾರ್ಟಪ್‌ಗಳಿಗೆ ವಿಐಪಿ ಪಾಸ್!

ಅಮೆಜಾನ್ ಲಾಂಚ್‌ಪ್ಯಾಡ್: ಸ್ಟಾರ್ಟಪ್‌ಗಳಿಗೆ ವಿಐಪಿ ಪಾಸ್!

ಅಮೆಜಾನ್ ಲಾಂಚ್‌ಪ್ಯಾಡ್ ಎಂಬುದು ನವೀನ ಸ್ಟಾರ್ಟಪ್‌ಗಳು ಮತ್ತು ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಲು ಅಮೆಜಾನ್ ನಿರ್ಮಿಸಿರುವ ವಿಶೇಷ ವೇದಿಕೆಯಾಗಿದೆ. ಸಾಮಾನ್ಯ ಮಾರಾಟಗಾರರಿಗಿಂತ ಭಿನ್ನವಾಗಿ, ಇಲ್ಲಿ ಬ್ರ್ಯಾಂಡ್ ಕಥೆಯನ್ನು ಆಕರ್ಷಕವಾಗಿ ಹೇಳಲು, ಮಾರ್ಕೆಟಿಂಗ್ ಬೆಂಬಲ ಪಡೆಯಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಮಾರಾಟ ಮಾಡಲು ಅವಕಾಶವಿದೆ. ಗ್ರಾಹಕರಿಗೆ ವಿಶಿಷ್ಟ ಉತ್ಪನ್ನಗಳನ್ನು ಹುಡುಕಿಕೊಡುವ ಮತ್ತು ಉದ್ಯಮಿಗಳಿಗೆ ಆರಂಭಿಕ ಹಂತದ ಕಷ್ಟಗಳನ್ನು (ಲಾಜಿಸ್ಟಿಕ್ಸ್, ಪ್ರಚಾರ) ಕಡಿಮೆ ಮಾಡುವ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಸ್ವಲ್ಪ ದುಬಾರಿಯೆನಿಸಿದರೂ, ಬ್ರ್ಯಾಂಡ್ ಬಿಲ್ಡಿಂಗ್‌ಗೆ ಇದೊಂದು ಪ್ರಬಲ ಅಸ್ತ್ರ.

ಗ್ಯಾರೇಜ್‌ ಮೂಲೆಯಲ್ಲಿ ಕುಳಿತು ಗೆಳೆಯರ ಜೊತೆಗೂಡಿ ಹೊಸದೊಂದು 'ಗ್ಯಾಜೆಟ್' ಕಂಡುಹಿಡಿದಿರುತ್ತೀರಿ, ಅಥವಾ ಅಜ್ಜಿ ಹೇಳಿಕೊಟ್ಟ ರೆಸಿಪಿ ಬಳಸಿ ಅದ್ಭುತವಾದ ಆರ್ಗ್ಯಾನಿಕ್ ಸೋಪ್ ತಯಾರಿಸಿರುತ್ತೀರಿ. ಪ್ರಾಡಕ್ಟ್ ಏನೋ ಸೂಪರ್, ಆದ್ರೆ ಇದನ್ನು ಜನರಿಗೆ ತಲುಪಿಸುವುದು ಹೇಗೆ? ಅಮೆಜಾನ್ ಎಂಬ ಮಹಾಸಾಗರದಲ್ಲಿ ನಿಮ್ಮ ಪುಟ್ಟ ದೋಣಿ ಎಲ್ಲಿ ಮುಳುಗಿ ಹೋಗುತ್ತೋ ಎಂಬ ಭಯ ಸಹಜ. ಇಂತಹ ಲಕ್ಷಾಂತರ ನವ ಉದ್ಯಮಿಗಳ ಕನಸಿಗೆ ನೀರೆರೆದು, ಅವರಿಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಟ್ಟು ಮುಂಚೂಣಿಗೆ ತರುವ ಅಮೆಜಾನ್‌ನ ಒಂದು ಇಂಟರೆಸ್ಟಿಂಗ್ ಕಾನ್ಸೆಪ್ಟ್ ಈ 'ಅಮೆಜಾನ್ ಲಾಂಚ್‌ಪ್ಯಾಡ್' (Amazon Launchpad). ಸರಳವಾಗಿ ಹೇಳಬೇಕಂದ್ರೆ, ಇದು ಸ್ಟಾರ್ಟಪ್‌ಗಳ ಪಾಲಿನ 'ವಿಐಪಿ ಎಂಟ್ರಿ' ಪಾಸ್ ಇದ್ದಂತೆ!

ಸಾಮಾನ್ಯವಾಗಿ ಅಮೆಜಾನ್‌ನಲ್ಲಿ ಕೋಟ್ಯಂತರ ಪ್ರಾಡಕ್ಟ್‌ಗಳಿರುತ್ತವೆ. ಅಲ್ಲಿ ನೀವು ಹೋಗಿ ಲಿಸ್ಟ್ ಮಾಡಿದರೆ, ಯಾರೋ ಸರ್ಚ್ ಮಾಡಿದಾಗ ನಿಮ್ಮ ಪ್ರಾಡಕ್ಟ್ ನೂರನೇ ಪುಟದಲ್ಲಿ ಕಾಣಿಸಿಕೊಳ್ಳಬಹುದು. ಅಷ್ಟೊತ್ತಿಗೆ ಗ್ರಾಹಕ ಸುಸ್ತಾಗಿರುತ್ತಾನೆ. ಆದರೆ ಲಾಂಚ್‌ಪ್ಯಾಡ್ ಕಥೆಯೇ ಬೇರೆ. ಇದು ಅಮೆಜಾನ್ ವೆಬ್‌ಸೈಟ್ ಒಳಗಿರುವ ಒಂದು ಎಕ್ಸ್‌ಕ್ಲೂಸಿವ್ ಮಾಲ್. ಇಲ್ಲಿ ಕೇವಲ ಹೊಸ, ಇನ್ನೋವೇಟಿವ್ ಮತ್ತು ಕ್ರಿಯೇಟಿವ್ ಐಡಿಯಾ ಇರೋ ಪ್ರಾಡಕ್ಟ್‌ಗಳಿಗೆ ಮಾತ್ರ ಜಾಗ. ಶಾರ್ಕ್ ಟ್ಯಾಂಕ್ ನೋಡಿದ್ದೀರಾ? ಅಲ್ಲಿ ಹೇಗೆ ಹೊಸ ಐಡಿಯಾಗಳಿಗೆ ಬೆಲೆ ಸಿಗುತ್ತೋ, ಅದೇ ರೀತಿ ಆನ್‌ಲೈನ್ ಜಗತ್ತಿನಲ್ಲಿ ಸ್ಟಾರ್ಟಪ್‌ಗಳಿಗೆ ಕೆಂಪು ರತ್ನಗಂಬಳಿ ಹಾಸುವ ಕೆಲಸವನ್ನು ಅಮೆಜಾನ್ ಈ ಮೂಲಕ ಮಾಡುತ್ತಿದೆ.

ಇದರ ಅತಿ ದೊಡ್ಡ ಮ್ಯಾಜಿಕ್ ಇರುವುದು 'ಬ್ರ್ಯಾಂಡ್ ಸ್ಟೋರಿ' ಹೇಳುವಲ್ಲಿ. ನೀವು ಸಾಮಾನ್ಯ ಸೆಲ್ಲರ್ ಆಗಿದ್ರೆ, ನಾಲ್ಕು ಫೋಟೋ ಹಾಕಿ, ರೇಟ್ ಹಾಕಿ ಸುಮ್ಮನಿರಬೇಕು. ಆದ್ರೆ ಲಾಂಚ್‌ಪ್ಯಾಡ್ ಮೆಂಬರ್ ಆಗಿದ್ರೆ, ನಿಮಗೆ 'ಪ್ರೀಮಿಯಂ ಎ+ ಕಂಟೆಂಟ್' (Premium A+ Content) ಹಾಕುವ ಅವಕಾಶ ಸಿಗುತ್ತೆ. ಅಂದ್ರೆ ಏನು? ನಿಮ್ಮ ಪ್ರಾಡಕ್ಟ್ ಹಿಂದಿನ ಕಥೆ ಏನು, ನೀವು ಎಷ್ಟು ಕಷ್ಟಪಟ್ಟು ಇದನ್ನು ತಯಾರಿಸಿದ್ದೀರಿ, ಇದರ ಹಿಂದಿರುವ ತಂತ್ರಜ್ಞಾನವೇನು ಎಂಬುದನ್ನು ದೊಡ್ಡ ದೊಡ್ಡ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಕಣ್ಣಿಗೆ ರಾಚುವಂತೆ ಪ್ರೆಸೆಂಟ್ ಮಾಡಬಹುದು. ಜನ ಇವತ್ತು ಬರೀ ಸಾಮಾನು ಕೊಳ್ಳಲ್ಲ, ಅದರ ಹಿಂದಿರೋ ಎಮೋಷನ್ ಕೊಂಡುಕೊಳ್ತಾರೆ. ಆ ಎಮೋಷನ್ ಕನೆಕ್ಟ್ ಮಾಡಲು ಲಾಂಚ್‌ಪ್ಯಾಡ್ ಒಂದು ವೇದಿಕೆ.


    ನೀವು ಇಲ್ಲಿಂದ ಅಮೆಜಾನ್‌ ಲಾಂಚ್‌ಪ್ಯಾಡ್ ವಿಸಿಟ್ ಮಾಡಬಹುದು   

ಹೊಸಬರಿಗೆ ಇರುವ ದೊಡ್ಡ ತಲೆನೋವು ಅಂದ್ರೆ 'ನಂಬಿಕೆ'. "ಇ್ಯಾರೋ ಹೊಸಬರು, ಇವರಿಂದ ತಗೊಂಡು ನಾಳೆ ಕೆಟ್ಟು ಹೋದ್ರೆ ಕಥೆ ಏನು?" ಅಂತ ಗ್ರಾಹಕರು ಹಿಂದೆ ಮುಂದೆ ನೋಡ್ತಾರೆ. ಆದರೆ ಯಾವಾಗ ನಿಮ್ಮ ಪ್ರಾಡಕ್ಟ್ ಮೇಲೆ 'Amazon Launchpad' ಅನ್ನೋ ಸೀಲ್ ಬೀಳುತ್ತೋ, ಆಗ ಗ್ರಾಹಕನ ಮನಸ್ಸಲ್ಲಿ ಒಂದು ಭರವಸೆ ಮೂಡುತ್ತೆ. "ಓಹೋ, ಅಮೆಜಾನ್ ಇವರನ್ನು ಗುರುತಿಸಿದೆ ಅಂದ್ರೆ ಏನೋ ವಿಷ್ಯ ಇರಲೇಬೇಕು" ಅನ್ನೋ ಸೈಕಾಲಜಿ ಅಲ್ಲಿ ವರ್ಕ್ ಆಗುತ್ತೆ. ಮಾರ್ಕೆಟಿಂಗ್ ಭಾಷೆಯಲ್ಲಿ ಇದಕ್ಕೆ 'ಟ್ರಸ್ಟ್ ಫ್ಯಾಕ್ಟರ್' ಅಂತಾರೆ. ಹೊಸ ಕಂಪನಿಗಳಿಗೆ ಈ ಆರಂಭಿಕ ತಳ್ಳುವಿಕೆ (Push) ಸಿಕ್ಕಾಪಟ್ಟೆ ಮುಖ್ಯ.

ಇನ್ನು ಲಾಜಿಸ್ಟಿಕ್ಸ್ ವಿಚಾರಕ್ಕೆ ಬರೋಣ. ಸ್ಟಾರ್ಟಪ್‌ ಅಂದ್ರೆ ಅಲ್ಲಿರೋದೇ ಇಬ್ಬರು ಅಥವಾ ಮೂರು ಜನ. ಅವರು ಆರ್ಡರ್ ಪ್ಯಾಕ್ ಮಾಡ್ಕೊಂಡು, ಕೊರಿಯರ್ ಆಫೀಸ್‌ಗೆ ಅಲೆಯುತ್ತಾ ಕುಳಿತರೆ, ಪ್ರಾಡಕ್ಟ್ ಡೆವಲಪ್ ಮಾಡೋರು ಯಾರು? ಇಲ್ಲಿ ಲಾಂಚ್‌ಪ್ಯಾಡ್ ನಿಮ್ಮ ಲೈಫ್ ಈಸಿ ಮಾಡುತ್ತೆ. ನೀವು ಸ್ಟಾಕ್ ತಗೊಂಡು ಹೋಗಿ ಅಮೆಜಾನ್ ಗೋದಾಮಿಗೆ (Fulfillment Center) ಸುರಿದು ಬಂದ್ರೆ ಸಾಕು. ಆರ್ಡರ್ ಬಂದ ತಕ್ಷಣ ಪ್ಯಾಕ್ ಮಾಡೋದು, ಶಿಪ್ ಮಾಡೋದು, ಕಸ್ಟಮರ್ ಫೋನ್ ಮಾಡಿದ್ರೆ ಮಾತಾಡೋದು, ರಿಟರ್ನ್ ಬಂದ್ರೆ ತಗೋಳೋದು - ಎಲ್ಲವನ್ನೂ ಅಮೆಜಾನ್ ನೋಡಿಕೊಳ್ಳುತ್ತೆ. ನೀವು ಆರಾಮಾಗಿ ಕಾಲು ಮೇಲೆ ಕಾಲು ಹಾಕಿ ಮುಂದಿನ ಪ್ರಾಡಕ್ಟ್ ಬಗ್ಗೆ ಯೋಚಿಸಬಹುದು.

ಮಾರ್ಕೆಟಿಂಗ್‌ಗೆ ಕೋಟಿ ಕೋಟಿ ಸುರಿಯೋಕೆ ಸ್ಟಾರ್ಟಪ್‌ಗಳ ಹತ್ರ ಎಲ್ಲಿ ದುಡ್ಡಿರುತ್ತೆ? ಇದಕ್ಕಾಗಿಯೇ ಲಾಂಚ್‌ಪ್ಯಾಡ್ ಇರುವುದು. ಅಮೆಜಾನ್ ತನ್ನ ಮುಖಪುಟದಲ್ಲಿ (Homepage), ಇಮೇಲ್ ನ್ಯೂಸ್‌ಲೆಟರ್‌ಗಳಲ್ಲಿ ಮತ್ತು ದೊಡ್ಡ ದೊಡ್ಡ ಸೇಲ್‌ಗಳು ಬಂದಾಗ ಲಾಂಚ್‌ಪ್ಯಾಡ್ ಪ್ರಾಡಕ್ಟ್‌ಗಳಿಗೆ ಸ್ಪೆಷಲ್ ಸ್ಲಾಟ್ ಕೊಡುತ್ತೆ. ಟಿವಿಯಲ್ಲಿ ಪ್ರೈಮ್ ಟೈಮ್‌ನಲ್ಲಿ ಆಡ್ ಬಂದ ಹಾಗೆ ಇದು. ನಯಾಪೈಸೆ ಖರ್ಚಿಲ್ಲದೆ ಕೋಟ್ಯಂತರ ಕಣ್ಣುಗಳು ನಿಮ್ಮ ಪ್ರಾಡಕ್ಟ್ ಮೇಲೆ ಬೀಳುವಂತೆ ಮಾಡುವ ತಂತ್ರವಿದು. ಇದನ್ನು 'ವಿಸಿಬಿಲಿಟಿ ಬೂಸ್ಟ್' ಅನ್ನಬಹುದು. ಸ್ವಂತ ವೆಬ್‌ಸೈಟ್ ಮಾಡಿ ಈ ಮಟ್ಟದ ಟ್ರಾಫಿಕ್ ತರೋಕೆ ವರ್ಷಗಳೇ ಬೇಕಾಗಬಹುದು.

ನಮ್ಮ ಮಲೆನಾಡಿನ ಅಥವಾ ಹಳ್ಳಿಗಳ ಕುಶಲಕರ್ಮಿಗಳಿಗೆ ಜಾಗತಿಕ ಮಾರುಕಟ್ಟೆ ಮರೀಚಿಕೆಯೇ ಸರಿ. ಆದರೆ ಲಾಂಚ್‌ಪ್ಯಾಡ್ ಮೂಲಕ 'ಲೋಕಲ್ ಟು ಗ್ಲೋಬಲ್' ಆಗೋದು ಈಗ ಬರೀ ಮಾತಲ್ಲ. ನಿಮ್ಮ ಪ್ರಾಡಕ್ಟ್ ಚೆನ್ನಾಗಿದ್ರೆ, ಅಮೆಜಾನ್‌ನ ಗ್ಲೋಬಲ್ ಪ್ರೋಗ್ರಾಂ ಮೂಲಕ ಅಮೆರಿಕ, ಇಂಗ್ಲೆಂಡ್, ಜರ್ಮನಿಯಂತಹ ದೇಶಗಳಲ್ಲೂ ಮಾರಾಟ ಮಾಡಬಹುದು. ಎಕ್ಸ್‌ಪೋರ್ಟ್ ರೂಲ್ಸ್, ಕಸ್ಟಮ್ಸ್ ಕೋಜಗಳನ್ನೆಲ್ಲ ಅಮೆಜಾನ್ ಸರಳಗೊಳಿಸುತ್ತೆ. ಬೆಂಗಳೂರಿನ ಜಯನಗರದಲ್ಲಿ ಕೂತು, ನ್ಯೂಯಾರ್ಕ್‌ನ ಗ್ರಾಹಕನಿಗೆ ಬೆಡ್‌ಶೀಟ್ ಮಾರುವ ತಾಕತ್ತು ಈ ಪ್ಲಾಟ್‌ಫಾರ್ಮ್‌ಗಿದೆ.

ಹಾಗಂತ ಎಲ್ಲರಿಗೂ ರೆಡ್ ಕಾರ್ಪೆಟ್ ಸಿಗಲ್ಲ. ಲಾಂಚ್‌ಪ್ಯಾಡ್ ಒಳಗೆ ಹೋಗೋಕೆ ಅದರದ್ದೇ ಆದ ಕಠಿಣ ಪರೀಕ್ಷೆಗಳಿವೆ. ನಿಮ್ಮ ಪ್ರಾಡಕ್ಟ್ ನಿಜವಾಗ್ಲೂ ಯುನಿಕ್ ಆಗಿರಬೇಕು. ಈಗಾಗಲೇ ಇರೋ ಸಾಬೂನು, ಶಾಂಪೂನ ಬೇರೆ ಹೆಸ್ರಲ್ಲಿ ಮಾರ್ತೀನಿ ಅಂದ್ರೆ ನಡೆಯಲ್ಲ. ಏನಾದ್ರೂ ಇನ್ನೋವೇಶನ್ ಇರಲೇಬೇಕು. ಕ್ರೌಡ್ ಫಂಡಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಬಂದವರಿಗೆ, ವೆಂಚರ್ ಕ್ಯಾಪಿಟಲ್ ಫಂಡಿಂಗ್ ಇರೋರಿಗೆ ಇಲ್ಲಿ ಫಸ್ಟ್ ಪ್ರಿಫರೆನ್ಸ್. ಹೀಗಾಗಿ, ಇಲ್ಲಿ ಸಿಗೋ ಪ್ರಾಡಕ್ಟ್‌ಗಳು ಹೈ-ಕ್ವಾಲಿಟಿ ಆಗಿರ್ತವೆ ಅಂತ ಗ್ರಾಹಕರು ನಂಬ್ತಾರೆ. ಕಸ ಕಡ್ಡಿ ಪ್ರಾಡಕ್ಟ್‌ಗಳೆಲ್ಲ ಇಲ್ಲಿ ಫಿಲ್ಟರ್ ಆಗಿಬಿಡುತ್ತವೆ.

ಟೆಕ್ ಪ್ರಿಯರಿಗೆ ಮತ್ತು 'ಅರ್ಲಿ ಅಡಾಪ್ಟರ್ಸ್'ಗೆ (ಹೊಸದನ್ನು ಮೊದಲು ಬಳಸುವವರು) ಲಾಂಚ್‌ಪ್ಯಾಡ್ ಸ್ವರ್ಗವಿದ್ದಂತೆ. ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಇರಲಿ, ಸ್ಮಾರ್ಟ್ ವಾಟರ್ ಬಾಟಲ್ ಇರಲಿ, ಅಥವಾ ವಿಚಿತ್ರ ಎನಿಸುವ ಪೆಟ್ ಗ್ಯಾಜೆಟ್ಸ್ ಇರಲಿ - ಇವೆಲ್ಲ ಮೊದಲು ಲ್ಯಾಂಡ್ ಆಗೋದೇ ಲಾಂಚ್‌ಪ್ಯಾಡ್ ಮೇಲೆ. ನಿಮಗೊಂದು ಸೀಕ್ರೆಟ್ ಹೇಳ್ತೀನಿ ಕೇಳಿ, ನಾವು ಗಿಫ್ಟ್ ಕೊಡೋಕೆ "ಏನಾದ್ರೂ ಡಿಫರೆಂಟ್ ಆಗಿರೋದು ಬೇಕು" ಅಂತ ಹುಡುಕ್ತಾ ಇರ್ತೀವಲ್ಲ? ಆಗ ನೇರವಾಗಿ ಲಾಂಚ್‌ಪ್ಯಾಡ್ ಪೇಜ್‌ಗೆ ಹೋದ್ರೆ, ವಿಶಿಷ್ಟವಾದ ಐಟಂಗಳು ಸಿಗುತ್ತವೆ. ಮಾರ್ಕೆಟ್‌ನಲ್ಲಿ ಇನ್ನೂ ಕಾಮನ್ ಆಗದೇ ಇರೋ ವಸ್ತುಗಳನ್ನು ಹಿಡಿದು ಫ್ರೆಂಡ್ಸ್ ಮುಂದೆ ಸೀನ್ ಹಾಕೋಕೆ ಇದು ಬೆಸ್ಟ್ ಜಾಗ!

ಆದರೆ ನಾಣ್ಯಕ್ಕೆ ಇನ್ನೊಂದು ಮುಖವೂ ಇದೆ. ಲಾಂಚ್‌ಪ್ಯಾಡ್ ಸೇವೆ ಫ್ರೀ ಅಲ್ಲ. ಸಾಮಾನ್ಯ ಸೆಲ್ಲರ್‌ಗಿಂತ ಇಲ್ಲಿ ಕಮಿಷನ್ ಸ್ವಲ್ಪ ಜಾಸ್ತಿ ಇರುತ್ತೆ. ಕೆಲವೊಮ್ಮೆ ಕಾಂಟ್ರಾಕ್ಟ್ ಪ್ರಕಾರ ಆರಂಭಿಕ ವರ್ಷದಲ್ಲಿ ನೀವು ಅಮೆಜಾನ್ ಬಿಟ್ಟು ಬೇರೆ ಕಡೆ (ಫ್ಲಿಪ್‌ಕಾರ್ಟ್ ಇತ್ಯಾದಿ) ಮಾರುವ ಹಾಗಿಲ್ಲ ಅನ್ನೋ ಕಂಡೀಷನ್ ಕೂಡ ಇರಬಹುದು. ಲಾಭದ ಮಾರ್ಜಿನ್ ಕಡಿಮೆ ಇರೋ ಬಿಸಿನೆಸ್‌ನವರಿಗೆ ಈ 'ಎಕ್ಸ್ಟ್ರಾ ಫೀಸ್' ಹೊರೆಯಾಗಬಹುದು. ಹೀಗಾಗಿ "ಜೈ ಅಮೆಜಾನ್" ಅಂತ ಹಾರುವ ಮುನ್ನ, ಕ್ಯಾಲ್ಕುಲೇಟರ್ ಹಿಡಿದು ಲೆಕ್ಕಾಚಾರ ಹಾಕುವುದು ಜಾಣತನದ ಲಕ್ಷಣ.

ಅಮೆಜಾನ್ ಲಾಂಚ್‌ಪ್ಯಾಡ್ ಅನ್ನೋದು ಕೇವಲ ಒಂದು ಆನ್‌ಲೈನ್ ಅಂಗಡಿಯಲ್ಲ, ಅದೊಂದು ಕನಸುಗಳ ಉಡ್ಡಯನ ಕೇಂದ್ರ. ಒಂದು ಕಾಲದಲ್ಲಿ ಬಿಸಿನೆಸ್ ಮಾಡೋಕೆ ಗಾಂಧಿನಗರದಲ್ಲೋ, ಚಿಕ್ಕಪೇಟೆಯಲ್ಲೋ ಅಂಗಡಿ ಬಾಡಿಗೆಗೆ ಹಿಡಿಯಲೇಬೇಕಿತ್ತು. ಆದ್ರೆ ಇವತ್ತು ಲ್ಯಾಪ್‌ಟಾಪ್ ಒಂದಿದ್ರೆ ಸಾಕು, ಜಗತ್ತೇ ನಿಮ್ಮ ಅಂಗಡಿ. ನಿಮ್ಮಲ್ಲಿ ಜಗತ್ತು ಮೆಚ್ಚುವಂತಹ ಐಡಿಯಾ ಇದ್ದರೆ, ಅದಕ್ಕೆ ರೆಕ್ಕೆ ಕಟ್ಟಿ ಹಾರಿಸಲು ಲಾಂಚ್‌ಪ್ಯಾಡ್ ಸಿದ್ಧವಾಗಿದೆ. ಆದ್ರೆ ರಾಕೆಟ್ ಮಾತ್ರ ನಿಮ್ಮದೇ ಆಗಿರಬೇಕು, ಪೆಟ್ರೋಲ್ ಮಾತ್ರ ಅವರದ್ದು!

Nagaraj Vaidya
Nagaraj Vaidya
Editor | Tech Vaidya
114

1 ಕಾಮೆಂಟ್‌ಗಳು

Sanjeev Devappa Badiger

I am interest

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.