ಟ್ರೆಂಡಿಂಗ್

ಟೆಕ್ ಜಗತ್ತಿನ ಕರಾಳ ರಹಸ್ಯ: ಡಾರ್ಕ್ ಪ್ಯಾಟರ್ನ್‌ಗಳು ಮತ್ತು ಡಿಜಿಟಲ್ ಚಕ್ರವ್ಯೂಹ

ಟೆಕ್ ಜಗತ್ತಿನ ಕರಾಳ ರಹಸ್ಯ: ಡಾರ್ಕ್ ಪ್ಯಾಟರ್ನ್‌ಗಳು ಮತ್ತು ಡಿಜಿಟಲ್ ಚಕ್ರವ್ಯೂಹ

ಟೆಕ್ ಲೋಕದ ಕರಾಳ ಕಥೆಗಳು - 1 

| ಎನ್ವೀ

ನೀವು ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಲು ಕುಳಿತಿದ್ದೀರಿ ಅಂದುಕೊಳ್ಳಿ. ಅಗ್ಗದ ದರ ಕಣ್ಣಿಗೆ ರಾಚುತ್ತದೆ. ಆಹಾ, ಒಳ್ಳೆ ಡೀಲ್ ಸಿಕ್ಕಿತು ಎಂದು ಖುಷಿಯಿಂದ ಮುಂದಿನ ಹಂತಕ್ಕೆ ಹೋಗುತ್ತೀರಿ. ಹೆಸರು, ವಿಳಾಸ ಎಲ್ಲಾ ತುಂಬಿ ಪೇಮೆಂಟ್ ಮಾಡಲು ಹೊರಟಾಗ, ಏಕಾಏಕಿ ಆ ಟಿಕೆಟ್ ಬೆಲೆ ಐನೂರು ರೂಪಾಯಿ ಜಾಸ್ತಿಯಾಗಿರುತ್ತದೆ. ಇದೇನಪ್ಪಾ ಇದು ಎಂದುಕೊಳ್ಳುವಷ್ಟರಲ್ಲೇ, ಸೀಟ್ ಖಾಲಿಯಾಗುತ್ತಿದೆ ಎಂಬ ಕೆಂಪು ಅಕ್ಷರದ ಎಚ್ಚರಿಕೆ ಬರುತ್ತದೆ. ಗಡಿಬಿಡಿಯಲ್ಲಿ ನೀವು ಹಣ ಪಾವತಿಸಿ ನಿಟ್ಟುಸಿರು ಬಿಡುತ್ತೀರಿ. ಆದರೆ ನಿಲ್ಲಿ, ಇದು ನಿಮ್ಮ ಅಜಾಗರೂಕತೆಯಲ್ಲ ಅಥವಾ ವೆಬ್‌ಸೈಟಿನ ತಾಂತ್ರಿಕ ಸಮಸ್ಯೆಯೂ ಅಲ್ಲ. ಇದು ನಿಮ್ಮ ಜೇಬಿಗೆ ಕತ್ತರಿ ಹಾಕಲೆಂದೇ ಹೆಣೆಯಲಾದ ಒಂದು ವ್ಯವಸ್ಥಿತ ಪ್ಲಾನ್. ಸ್ವಾಗತ, ಡಾರ್ಕ್ ಪ್ಯಾಟರ್ನ್‌ಗಳ ಜಗತ್ತಿಗೆ.

ಏನಿದು ಡಾರ್ಕ್ ಪ್ಯಾಟರ್ನ್?: ಸರಳವಾಗಿ ಹೇಳಬೇಕೆಂದರೆ, ಇದು ಇಂಟರ್ನೆಟ್ ಜಗತ್ತಿನ ಹಗಲು ದರೋಡೆ. ಬಳಕೆದಾರರನ್ನು ದಾರಿತಪ್ಪಿಸಲು, ಗೊಂದಲಕ್ಕೀಡುಮಾಡಲು ಮತ್ತು ಅವರು ಬಯಸದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಲು ರೂಪಿಸಲಾದ ಕುತಂತ್ರವೇ ಡಾರ್ಕ್ ಪ್ಯಾಟರ್ನ್. 2010ರಲ್ಲಿ ಹ್ಯಾರಿ ಬ್ರಿಗ್ನುಲ್ ಎಂಬ ಡಿಸೈನರ್ ಈ ಪದವನ್ನು ಜಗತ್ತಿಗೆ ಪರಿಚಯಿಸಿದರು. ಅವರ ಪ್ರಕಾರ, ಇದು ಕೇವಲ ಕೆಟ್ಟ ವಿನ್ಯಾಸವಲ್ಲ, ಮನುಷ್ಯನ ಮನಃಶಾಸ್ತ್ರವನ್ನು ಅರಿತುಕೊಂಡು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಒಂದು ವಿಜ್ಞಾನ.

ಈ ಮೋಸದ ಬಗೆಗಳು ಒಂದೆರಡಲ್ಲ: ಇಂದು ನಾವು ಬಳಸುವ ಪ್ರತಿಯೊಂದು ಆ್ಯಪ್ ಅಥವಾ ವೆಬ್‌ಸೈಟ್ ಹಿಂದೆ ಇಂತಹ ಹತ್ತಾರು ಬಗೆಯ ಮೋಸಗಳು ಅವಿತು ಕುಂತಿವೆ. ಹ್ಯಾರಿ ಬ್ರಿಗ್ನುಲ್ ಗುರುತಿಸಿರುವಂತೆ ಪ್ರಮುಖವಾದ 12 ಬಗೆಯ ಮೋಸಗಳು ಇಲ್ಲಿವೆ.

ಬೇಟ್ ಆಂಡ್ ಸ್ವಿಚ್: ಅಂದರೆ ಗಾಳ ಹಾಕಿ ಎಳೆಯುವುದು. ನಿಮಗೆ ಆಕರ್ಷಕವಾದ ಆಫರ್ ಒಂದನ್ನು ತೋರಿಸಿ, ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ ಬೇರೆಯದೇ ಕಳಪೆ ವಸ್ತುವನ್ನೋ ಅಥವಾ ದುಬಾರಿ ಸೇವೆಯನ್ನೋ ನಿಮ್ಮ ತಲೆಗೆ ಕಟ್ಟುವುದು.

ಕನ್ಫರ್ಮ್ ಶೇಮಿಂಗ್: ಇದು ಒಂಥರಾ ಎಮೋಷನಲ್ ಬ್ಲ್ಯಾಕ್‌ಮೇಲ್. ನೀವು ಯಾವುದಾದರೂ ದುಬಾರಿ ಇನ್ಶೂರೆನ್ಸ್ ಬೇಡ ಎಂದು ತಿರಸ್ಕರಿಸುವಾಗ, ಇಲ್ಲ, ನನಗೆ ನನ್ನ ಕುಟುಂಬದ ಸುರಕ್ಷತೆ ಮುಖ್ಯವಲ್ಲ ಎಂಬಂತಹ ಆಯ್ಕೆಗಳನ್ನು ನೀಡುವುದು. ನಿಮ್ಮನ್ನು ನೀವೇ ದ್ವೇಷಿಸುವಂತೆ ಮಾಡಿ ಆ ಉತ್ಪನ್ನವನ್ನು ಕೊಳ್ಳುವಂತೆ ಮಾಡುವುದೇ ಇದರ ಹುನ್ನಾರ.

ರೋಚ್ ಮೋಟೆಲ್: ಜಿರಳೆಗಳು ಒಳಗೆ ಹೋಗಲು ಸುಲಭ, ಆದರೆ ಹೊರಬರಲು ದಾರಿಯೇ ಇರುವುದಿಲ್ಲವಲ್ಲ, ಹಾಗೆಯೇ ಇದು. ಒಂದು ಸೇವೆಗೆ ಸಬ್‌ಸ್ಕ್ರೈಬ್ ಆಗಲು ಒಂದೇ ಕ್ಲಿಕ್ ಸಾಕು, ಆದರೆ ಅದನ್ನು ರದ್ದು ಮಾಡಲು ನೀವು ಹತ್ತಾರು ಪುಟಗಳನ್ನು ಜಾಲಾಡಬೇಕು, ಕಸ್ಟಮರ್ ಕೇರ್ಗೆ ಫೋನ್ ಮಾಡಬೇಕು. ಅಮೇಜಾನ್ ಪ್ರೈಮ್ ನಿಂದ ಹೊರಬರುವುದು ಎಷ್ಟು ಕಷ್ಟವಿತ್ತು ಎಂದರೆ, ಅಮೆರಿಕದ ನ್ಯಾಯಾಲಯ ಅಮೇಜಾನ್ ಕಂಪನಿಗೆ 2.5 ಬಿಲಿಯನ್ ಡಾಲರ್ ದಂಡ ವಿಧಿಸಬೇಕಾಯಿತು.

ಫೋರ್ಸ್ಡ್ ಕಂಟಿನ್ಯುಟಿ: ಮೊದಲ ತಿಂಗಳು ಉಚಿತ ಎಂದು ನಿಮ್ಮನ್ನು ಆಕರ್ಷಿಸಿ, ನಂತರ ನೀವು ಮರೆತೇ ಹೋಗಿದ್ದೀರಿ ಎಂದುಕೊಂಡು ನಿಮ್ಮ ಖಾತೆಯಿಂದ ತಿಂಗಳು ತಿಂಗಳು ಹಣ ಕತ್ತರಿಸುವುದು.

ಸ್ನೀಕ್ ಇಂಟು ಬ್ಯಾಸ್ಕೆಟ್: ನೀವು ಸೂಪರ್ ಮಾರ್ಕೆಟ್‌ನಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ ಟ್ರಾಲಿಗೆ ಯಾರೋ ಬಂದು ನೀವು ಕೇಳದ ಸಾಬೂನೋ, ಬಿಸ್ಕತ್ತೋ ಹಾಕಿದರೆ ಹೇಗಿರುತ್ತದೆ? ಆನ್‌ಲೈನ್ ಶಾಪಿಂಗ್‌ನಲ್ಲಿ ನಡೆಯುವುದು ಇದೇ. ನೀವು ಕೊಳ್ಳುವ ವಸ್ತುವಿನ ಜೊತೆಗೆ ಇನ್ಶೂರೆನ್ಸ್, ದಾನ, ಅಥವಾ ಎಕ್ಸ್‌ಟ್ರಾ ವಾರಂಟಿಗಳನ್ನು ನಿಮಗೆ ತಿಳಿಯದಂತೆ ಸೇರಿಸಿಬಿಡುತ್ತಾರೆ.

ಡ್ರಿಪ್ ಪ್ರೈಸಿಂಗ್: ಇದು ಭಾರತದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ದಂಧೆ. ತೋರಿಸುವಾಗ ಕಡಿಮೆ ಬೆಲೆ ತೋರಿಸಿ, ಹಣ ಕಟ್ಟುವ ಕೊನೆಯ ಹಂತದಲ್ಲಿ ಟ್ಯಾಕ್ಸ್, ಹ್ಯಾಂಡ್ಲಿಂಗ್ ಫೀ, ಪ್ಯಾಕೇಜಿಂಗ್ ಫೀ ಎಂದು ಸಾಲು ಸಾಲು ಚಾರ್ಜ್ ಹಾಕಿ ಒಟ್ಟು ಮೊತ್ತವನ್ನು ಏರಿಸಿಬಿಡುವುದು. ಇತ್ತೀಚೆಗೆ ಜೆಪ್ಟೋ ಕಂಪನಿಗೆ 7 ಲಕ್ಷ ರೂಪಾಯಿ ದಂಡ ಬಿದ್ದಿದ್ದು ಇದೇ ಕಾರಣಕ್ಕೆ.

ಇದರ ಜೊತೆಗೆ ಡಿಸ್ಗೈಸ್ಡ್ ಆಡ್ಸ್ (ಸುದ್ದಿಯಂತೆ ಕಾಣುವ ಜಾಹೀರಾತು), ಫ್ರೆಂಡ್ ಸ್ಪ್ಯಾಮ್ (ನಿಮ್ಮ ಹೆಸರಲ್ಲಿ ಸ್ನೇಹಿತರಿಗೆ ಮೆಸೇಜ್ ಕಳಿಸುವುದು), ಪ್ರೈವಸಿ ಜುಕರಿಂಗ್ (ಮಾಹಿತಿ ಕದಿಯುವುದು) ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಭಾರತದಲ್ಲಿ ಇದರ ಹಾವಳಿ ಎಷ್ಟಿದೆ?: ನೀವು ನಂಬಲಾರಿರಿ, 2025ರ ಲೋಕಲ್ ಸರ್ಕಲ್ಸ್ ವರದಿಯ ಪ್ರಕಾರ ಭಾರತದ ಶೇಕಡಾ 97 ರಷ್ಟು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಜನರನ್ನು ಯಾಮಾರಿಸಲು ಇಂತಹ ತಂತ್ರಗಳನ್ನು ಬಳಸುತ್ತಿವೆ. ನಮ್ಮ ಸರ್ಕಾರ ಎಚ್ಚರಿಕೆ ನೀಡಿದ್ದರೂ, ಫ್ಲಿಪ್‌ಕಾರ್ಟ್, ಝೊಮ್ಯಾಟೊ, ಸ್ವಿಗ್ಗಿಯಂತಹ ದಿಗ್ಗಜ ಕಂಪನಿಗಳು ಇನ್ನೂ ಪೂರ್ತಿಯಾಗಿ ದಾರಿಗ ಬಂದಿಲ್ಲ. ಜಾಗತಿಕವಾಗಿ ನೋಡಿದರೆ ಶೇಕಡಾ 80ಕ್ಕೂ ಹೆಚ್ಚು ಜನಪ್ರಿಯ ವೆಬ್‌ಸೈಟ್‌ಗಳು ಈ ಮೋಸದ ಜಾಲದಲ್ಲಿವೆ.

ಕೇವಲ ಹಣವಲ್ಲ, ನೆಮ್ಮದಿಯೂ ಹಾಳು: ಇದು ಕೇವಲ ನಿಮ್ಮ ಜೇಬಿನ ವಿಷಯವಲ್ಲ. ಒಇಸಿಡಿ ಅಧ್ಯಯನಗಳು ಹೇಳುವಂತೆ, ಈ ಡಾರ್ಕ್ ಪ್ಯಾಟರ್ನ್‌ಗಳು ಮನುಷ್ಯರಲ್ಲಿ ಆತಂಕ, ಒತ್ತಡ ಮತ್ತು ಅಸಹಾಯಕತೆಯನ್ನು ಉಂಟುಮಾಡುತ್ತವೆ. ಆ್ಯಪ್‌ಗಳ ನಿರಂತರ ನೋಟಿಫಿಕೇಶನ್‌ಗಳು ನಮ್ಮ ಏಕಾಗ್ರತೆಯನ್ನು ಹಾಳು ಮಾಡಿ, ಒಂದು ರೀತಿಯ ಡಿಜಿಟಲ್ ವ್ಯಸನಕ್ಕೆ ದೂಡುತ್ತವೆ.

ಎಚ್ಚೆತ್ತುಕೊಳ್ಳುವ ಸಮಯ: ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಸಮಯ, ಹಣ ಮತ್ತು ಮಾನಸಿಕ ನೆಮ್ಮದಿ ಮೂರೂ ಈ ಟೆಕ್ ಕಂಪನಿಗಳ ಪಾಲಾಗುತ್ತದೆ. ಬಟನ್‌ಗಳ ಬಣ್ಣ ನೋಡಿ ಮರುಳಾಗಬೇಡಿ, ಸಣ್ಣ ಅಕ್ಷರಗಳಲ್ಲಿ ಬರೆದಿರುವ ಷರತ್ತುಗಳನ್ನು ಓದಿ, ಮತ್ತು ಅನಗತ್ಯ ಆತುರಕ್ಕೆ ಬೀಳಬೇಡಿ.

ಇದು ಟೆಕ್ ಲೋಕದ ಕರಾಳ ಕಥೆಗಳು ಸರಣಿಯ ಮೊದಲ ಅಧ್ಯಾಯವಷ್ಟೇ. ಮುಂದಿನ ದಿನಗಳಲ್ಲಿ, ಈ ಡಿಜಿಟಲ್ ಚಕ್ರವ್ಯೂಹದ ಒಂದೊಂದು ಕೋಟೆಯನ್ನೂ ನಾವು ಭೇದಿಸೋಣ. ಸಿದ್ಧರಾಗಿ.

Nagaraj Vaidya
Nagaraj Vaidya
Editor | Tech Vaidya
108

1 ಕಾಮೆಂಟ್‌ಗಳು

Raghavendra Bhat

Similarly, even on Amazon, even if you are a Prime member, they add Rs 5 as a marketplace fee on every purchase. What is the solution to this?

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.