ಟ್ರೆಂಡಿಂಗ್
ತಂತ್ರಜ್ಞಾನ ಮತ್ತು ನಮ್ಮ ನುಡಿ: ಟೆಕ್ನಾಲಜಿಯ ಆಡು-ಭಾಷೆ ಯಾವುದು?
ಬಹಳ ದಿನಗಳಿಂದ ನನಗೆ ಮತ್ತು ಪ್ರಾಂತೀಯ ಭಾಷೆಗಳನ್ನು ಬಳಸುವವರಿಗೆ ಬರುತ್ತಿರುವ ಪ್ರಶ್ನೆ, ಟೆಕ್ನಾಲಜಿ ಮತ್ತು ನಮ್ಮ ಭಾಷೆ ಯಾಕೆ ಅಷ್ಟು ದೂರ?
ಯಾವುದೇ ವಿಚಾರವನ್ನು ನಾವು ತಿಳಿಯಬೇಕಿದ್ದರೂ ಅದಕ್ಕೆ ನಮಗೆ ಭಾಷೆ ಬೇಕೇ ಬೇಕು. ಭಾಷೆ, ಅಥವಾ ಅರಿವಿನ ಹಾದಿ ಹಲವಿರಬಹುದು, ಅದು ಮಾತಿನ ಮೂಲಕ, ಆಂಗಿಕ ಸಂವಹನದ ಮೂಲ, ಹೀಗೆ,ಹತ್ತು ಹಲವು ದಾರಿಗಳನ್ನು ಬಳಸಿ ನಾವು ಯಾವುದೇ ವಿಚಾರವನ್ನು ತಿಳಿಯುವ ಮತ್ತು ತಿಳಿಸುವ ಕೆಲಸ ಮಾಡುತ್ತಿರಬಹುದು.
ಆದರೆ, ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಭಾಷೆ ಯಾವುದೇ ಗೊತ್ತಿದ್ದರೂ, ಆಂಗ್ಲರು ಕೊಟ್ಟು ಹೋದ ಇಂಗ್ಲಿಷ್ ಭಾಷೆಯೇ ಅದಕ್ಕೆ ಹೆಚ್ಚು ಆಪ್ಯಾಯಮಾನ. ಯಾಕೆ ಹೀಗೆ?
ಕನ್ನಡ ಅಥವಾ ಇತರೇ ಭಾರತೀಯ ಭಾಷೆಗಳು ಯಾಕೆ ತಂತ್ರಜ್ಞಾನಕ್ಕೆ ಹಿಡಿಸುವುದಿಲ್ಲ?
ಇದಕ್ಕೆ ಉತ್ತರ ಸರಳ ಮತ್ತು ಸುಲಭ. ತಂತ್ರಜ್ಞಾನ, ನಾವು ಇಂದು ಬಳಸುವಂತೆ ಬೆಳೆದಿರುವುದು ಪಾಶ್ಚಿಮಾತ್ಯ ದೇಶಗಳಲ್ಲಿ. ಅಂದರೆ ಅಲ್ಲಿನ ಪ್ರಮುಖ ಭಾಷೆ ಇಂಗ್ಲಿಷ್. ಹಾಗೆ ಹೇಳುವುದಾದರೆ, ತಂತ್ರಜ್ಞಾನದ ತಾಯಿಬೇರು ಇರುವುದು ಇಂಗ್ಲಿಷ್‌ನಲ್ಲಿ ಆದ್ದರಿಂದ, ಸುಲಭವಾಗಿ ಬಳಕೆಗೆ ಬಂದಿರುವುದು ಇಂಗ್ಲಿಷ್. ಹೆಚ್ಚಿನೆಲ್ಲ ತಂತ್ರಜ್ಞಾನ ದೈತ್ಯರಿಗೆ ಮೂಲ ಇರುವುದು ಅದೇ ಪಾಶ್ಚಿಮಾತ್ಯ ದೇಶಗಳಲ್ಲಾದ್ದರಿಂದ ಅದು ಸಹಜವಾಗಿಯೇ ಮೊದಲು ಇಂಗ್ಲಿಷ್ ಬಳಸಿದೆ.
ವಿಶ್ವದಾದ್ಯಂತ ಸುಮಾರು ಏಳು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದರೂ, ಹೆಚ್ಚಿನೆಲ್ಲಾ ಬ್ಯುಸಿನೆಸ್ ನಡೆಯುವುದು ಇಂಗ್ಲಿಷ್‌ನಲ್ಲೇ, ಹೆಚ್ಚಿನೆಲ್ಲಾ ಕಾಸಿನ ವ್ಯವಹಾರ ನಡೆಯುವುದು ಇಂಗ್ಲಿಷ್ ಮೂಲದ ಕಂಪೆನಿಗಳಿಂದಲೇ ಅನ್ನುವುದನ್ನು ಅರಿಯಲೇಬೇಕು. ಅದರ ಜೊತೆಗೆ, ಭಾರತೀಯ ಹಾಗೂ ಇತರೇ ಇಂಗ್ಲಿಷೇತರ ಭಾಷೆಗಳಿಂದ ತಂತ್ರಜ್ಞಾನದ ಬೆಳವಣಿಗೆಗೆ ಹಣ ಹೂಡಿಕೆ ಆಗಿದ್ದು ಕಡಿಮೆ, ಹಾಗೂ ಹಾಕಿದ ಬಂಡವಾಳಕ್ಕೆ ಅತಿದೊಡ್ಡ ಪ್ರಮಾಣದಲ್ಲಿ ಹಣ ಹಿಂದಿರುಗಿ ಬರಬೇಕು ಅಂದರೆ ಅದಕ್ಕೆ ಯಾವುದೇ ಪ್ರಾಂತೀಯ ಭಾಷೆಯನ್ನು ಬಳಸಿದರೆ ಅದು ಸಾಕಾಗುವುದು ಕಷ್ಟ.
ಆದರೂ ಭಾರತದಂತಹ ಬಹುಸಂಖ್ಯಾತ, ಹಾಗೂ ಬಹು ಭಾಷೆಗಳಿಂದ ಕೂಡಿದ ದೇಶದಿಂದ ತನಗೆ ಬ್ಯುಸಿನೆಸ್ ಬರಬೇಕು ಅನ್ನುವ ನಿಟ್ಟಿನಲ್ಲಿ, ಹಾಗೂ, ತನ್ನ ವ್ಯವಹಾರದ ವ್ಯಾಪ್ತಿಯನ್ನು ಇಂಗ್ಲಿಷ್‌ಗೂ ಮೀರಿ ಇತರೇ ಭಾಷೆಗಳಿಗೂ ಹರಹಬೇಕು ಅನ್ನುವ ಅನಿವಾರ್ಯತೆಯಿಂದ ಈ ಸಂಸ್ಥೆಗಳು ಇದೀಗ ಇಂಗ್ಲಿಷ್ ಅಲ್ಲದೇ ಬೇರೆ ಭಾಷೆಗಳಿಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆ. ಆದರೆ ಒಂದು ವಿಚಾರ ಗೊತ್ತಾ, ವಿಶ್ವದಾದ್ಯಂತ ಇರುವ ಒಟ್ಟೂ ಅಂತರ್ಜಾಲದ ವ್ಯವಸ್ಥೆಯಲ್ಲಿ, ಮಾಹಿತಿ ಇಂಗ್ಲಿಷ್‌ನಲ್ಲೇ ಸಿಗುವುದು ಸುಮಾರು ೬೦ ಶೇಕಡಾದಷ್ಟು ಅಂದರೆ ಅದು ಅಚ್ಚರಿ ಪಡುವ ಸಂಗತಿಯೇನಲ್ಲ. ಇನ್ನು ಏಐ ಎನ್ನುವ ಮಹಾ ದೈತ್ಯ ಅಷ್ಟು ದೊಡ್ಡದಾಗಿ ಬೆಳೆಯಲು ಇವೇ ಅಮೇರಿಕದಂತಹ ಇಂಗ್ಲಿಷ್ ಮೂಲಭಾಷೆಯ ವ್ಯವಸ್ಥೆಯಿರುವ ಸ್ಥಳಗಳಿಂದ ಮೂಡಿಬಂದಿರುವ ಸಂಸ್ಥೆಗಳಿಂದ ಅನ್ನುವುದು ಗೊತ್ತಿರುವ ವಿಚಾರ.
ಇದೇ ಕಾರಣಕ್ಕೆ ಏಐಯ ೯೦ ಶೇಕಡಾ ದಷ್ಟು ಟ್ರೇನಿಂಗ್ ನಡೆದಿರುವುದು ಇಂಗ್ಲಿಷ್ ಭಾಷೆಯಲ್ಲಿ. ಅಲ್ಲಿ ಕಲಿತ ಕಲಿಕೆಯನ್ನು ಬಳಸಿ ಏಐ ಇತರೇ ಭಾಷೆಗಳಲ್ಲಿ ತನ್ನ ಪಾರುಪತ್ಯ ಸಾಧಿಸುವುದಕ್ಕೆ ಹೊರಟಿದೆ. ಅಲ್ಲದೇ ಪೈಥನ್, ಜಾವಾದಂತಹ ಪ್ರಮುಖ ತಂತ್ರಜ್ಞಾನದ ಭಾಷೆಗಳೂ ಇಂಗ್ಲಿಷ್‌ನಲ್ಲೇ ತಯಾರಾದಂತವು ಅನ್ನುವುದನ್ನೂ ನಾವು ನೆನಪಿಡಬೇಕು.
ಇನ್ನೂ ತಮಾಷೆಯ ವಿಷಯ ಎಂದರೆ, ಯಾವುದರಲ್ಲಿ ಯಾವುದೇ ವಿಚಾರದ ಆವಿರ್ಭಾವ ಆಗಿದೆಯೋ,ಅದನ್ನೇ ಹೆಚ್ಚು ಹೆಚ್ಚು ಬಳಸುವುದು ನಡೆಯುತ್ತದೆ. ಇನ್ನು, ಅದೇ ಮಾಹಿತಿಯನ್ನು ಹೆಚ್ಚು ಹೆಚ್ಚು ಮಂದಿ ಬಳಸುವುದಕ್ಕೆ ತೊಡಗುತ್ತಾರೆ. ಅದು ಇಂಗ್ಲಿಷ್‌ನಲ್ಲೇ ಬಳಸುವುದು ಜಾಸ್ತಿಯಾಗಿರುವುದರಿಂದ, ಇಂಗ್ಲಿಷ್‌ನಲ್ಲಿ ಏಐ ಇನ್ನಷ್ಟನ್ನು ಬಳಸಿಕೊಳ್ಳುತ್ತದೆ.
ನಾವೂ ಅಷ್ಟೇ, ಎಷ್ಟೇ ಕನ್ನಡ ಅಥವಾ ಇತರೇ ಭಾರತೀಯ ಭಾಷೆಗಳನ್ನು ಏಐ ಕಲಿತಿದ್ದರೂ, ಅದರ ಬಳಕೆ ಇಂಗ್ಲಿಷ್‌ನಲ್ಲಿ ಸುಲಭವಾದ್ದರಿಂದ, ಹೆಚ್ಚು ಹೆಚ್ಚು ಇಂಗ್ಲಿಷ್ ಭಾಷೆಯನ್ನೇ ಬಳಸಿಕೊಂಡು ಏಐ ಬಳಕೆಯನ್ನು ನಾವು ಮಾಡುತ್ತಿರುತ್ತೇವೆ. ಇದು ಒಂದು ರೀತಿಯ ವಿಷವರ್ತುಲ ಅಂದರೆ ತಪ್ಪಲ್ಲ. ಬಿಟ್ಟೇನೆಂದರೂ ಬಿಡದೀ ಇಂಗ್ಲಿಚ್ ಮಾಯೆ ಎಂದರೂ ಅದು ಸುಳ್ಳಿಗೆ ದೂರದ ಮಾತಲ್ಲ.
ಹಾಗಿದ್ದರೆ ಕನ್ನಡ ಅಥವಾ ಹಿಂದಿ ಹಾಗೂ ಇತರೇ ಭಾಷೆಗಳು ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುವುದೇ ಇಲ್ವಾ?
ಖಂಡಿತಾ ಸಾಧ್ಯ ಇದೆ. ಆದರೆ ಇದು ನಮ್ಮ ಭಾಷೆಗಳಲ್ಲಿ ಬೆಳೆಯುವ ವೇಗ ಮಾತ್ರ ಸ್ವಲ್ಪ ನಿಧಾನವಾಗಬಹುದು. ಏಐ, ಒಂದು ವಿಷಯವನ್ನು ತಿಳಿಯುವ ಹಾಗೂ ಭಾಷೆಯನ್ನು ಕಲಿಯುವ ವಿಚಾರದಲ್ಲಿ ಹೆಚ್ಚು ವೇಗವನ್ನು ಹೊಂದಿರುವುದರಿಂದ, ಹಿಂದೆ ಯಾವುದೇ ಸಾಫ್ಟ್‌ವೇರ್ ಆಗಲಿ, ತಂತ್ರಜ್ಞಾನದಲ್ಲಿ ಭಾಷಾ ಬಳಕೆಯಾಗಲಿ ಸ್ವಲ್ಪ ನಿಧಾನವಾಗಿದ್ದುದು ನಿಜ. ಆದರೆ ಏಐ ಇರುವುದರಿಂದ ಈ ವೇಗ ಹೆಚ್ಚಾಗುತ್ತದೆ. ಆದರೆ, ಇದಕ್ಕೆ ಪೂರಕವಾಗಿ ಎಲ್ಲಾ ಭಾಷೆಗಳಲ್ಲೂ ತಂತ್ರಜ್ಞಾನಕ್ಕೆ ಮಾಹಿತಿಯನ್ನು ನೀಡುವ ಕೆಲಸ ಆಗಬೇಕು.
ಅಲ್ಲ ಏಐ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವುದಕ್ಕೆ ಸುಲಭ ಮಾರ್ಗವನ್ನು ತೋರಿಸಿಕೊಟ್ಟಿದೆ ಅಲ್ವಾ? ಇದು ನಿಜವೂ ಹೌದು, ಸುಳ್ಳೂ ಹೌದು. ನಿಜ ಯಾಕಂದರೆ, ಏಐ ಬೇರೆ ಬೇರೆ ಭಾಷೆಗಳಿಗೆ ಮಾಹಿತಿಯನ್ನು ಭಾಷಾಂತರಿಸುವ ಕೆಲಸವನ್ನು ವೇಗವಾಗಿ ಮಾಡುವುದನ್ನು ಮಾತ್ರ ಕಲಿತಿದೆ. ಆದರೆ ಭಾವಾಂತರ? ಇದಕ್ಕೆ ಆ ಭಾಷೆಯನ್ನು ಕೇವಲ ಕಲಿತರೆ ಮಾತ್ರ ಸಾಲದು, ಅದು ಅದರ ಆಡು ಭಾಷೆಯಾಗಬೇಕು. ಅದು ಹೇಗೆ? ಅದಕ್ಕೆ ಇನ್ನಷ್ಟು ಮಾಹಿತಿ ಬೇಕು, ಹಾಗು ನಾವು ಅದೇ ಭಾಷೆಯಲ್ಲಿ ನಮ್ಮ ಭಾವಗಳನ್ನು ಹಂಚಿಕೊಳ್ಳುವುದನ್ನು ಹೆಚ್ಚು ಮಾಡಬೇಕು.
ಇದು ದಿನೇ ದಿನೇ ಮಾತೃ ಭಾಷೆಯಿಂದ ದೂರಾಗಿ, ಇನ್ನೊಂದು ಭಾಷೆಗೆ ಜೋತುಬೀಳುತ್ತಿರುವ, ಅದರಲ್ಲೂ ಇಂಗ್ಲಿಷ್‌ಗೆ ಜೋತುಬೀಳುತ್ತಿರುವುದನ್ನು ಗಮನಿಸಿದಾಗ, ದೊಡ್ಡ ಚ್ಯಾಲೆಂಜ್ ಅನ್ನುವ ಭಾವ ನಮಗೆಲ್ಲಾ ಬರುವುದೂ ಸಹಜವೇ.
ಆದರೂ, ಇನ್ನೂ ಕಾಲ ಮಿಂಚಿಲ್ಲ, ನಮ್ಮ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರ ಮೂಲಕ, ಹಾಗೂ ನಮ್ಮ ನಮ್ಮ ಸಂಸ್ಕೃತಿಯೂ ಆ ಮೂಲಕ ಉಳಿಯುತ್ತದೆ ಎನ್ನುವುದನ್ನು ತಿಳಿದು, ತಿಳಿಸುವ ಮೂಲಕ, ಅದಕ್ಕೆ ಹೆಚ್ಚು ಒತ್ತು ಸಿಗುವಂತೆ ಮಾಡುವುದು, ಮಾತೃ ಭಾಷೆ-ಸಂಸ್ಕೃತಿಯ ಮೇಲೆ ಅಭಿಮಾನ ಇರುವವರೆಲ್ಲರೂ ನಿರಂತರವಾಗಿ ಮಾಡಬೇಕಾಗಿರುವ ಕೆಲಸ.
ಇದೇ ನಿಟ್ಟಿನಲ್ಲಿ ಈ ನಮ್ಮ ವೆಬ್ ಪೋರ್ಟಲ್‌ನಂತಹ ಹಲವು ಮೂಲಗಳಿಗೆ ನಾವು ಬಲ-ಬೆಲೆ-ಬೆಂಬಲ ನೀಡಲೇಬೇಕಾಗಿರುವುದು ಸಧ್ಯದ ತುರ್ತು.
ನಾವು-ನೀವು ಎಲ್ಲಾ ಸೇರಿ, ನಮ್ಮ ಭಾಷೆಯನ್ನು ಶ್ರೀಮಂತಗೊಳಿಸೋಣ. ತಂತ್ರಜ್ಞಾನವನ್ನು ನಮ್ಮ ಭಾಷೆಗೆ ಅಳವಡಿಸುವಲ್ಲಿ ನಮ್ಮ ಕಾಣಿಕೆಯನ್ನು ನೀಡುವ ಮೂಲಕ!
ಟೆಕ್-ವಚನ
ನುಡಿ ಉಳಿಸಬೇಕಿದ್ದರೆ ಯಂತ್ರಕೆ ಕಲಿಸು
ಕಲಿಸದ ಭಾಷೆ ಕಾಲದೊಳು ಮಾಯ | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||
❤️ ಈ ಲೇಖನಗಳನ್ನೂ ಓದಿ
❤️ಇವಿ ಹಬ್ ಕನಸಿಗೆ ತಣ್ಣೀರು: ಪರಿಸರ ಸ್ನೇಹಿ ಸಾರಿಗೆಯನ್ನು ಕೊಲ್ಲಲು ಹೊರಟಿದೆಯೇ 2026ರ ಹೊಸ ತೆರಿಗೆ ನೀತಿ?
❤️ಜಾಗತಿಕ ಟೆಕ್ ಟ್ರೆಂಡ್ 2026: ಎಐ ಮತ್ತು ಬಾಹ್ಯಾಕಾಶದ ನಡುವೆ ಶುರುವಾಗಿದೆ ಹೈ ಟೆನ್ಷನ್ ರೇಸ್!
❤️ಅಮರಾವತಿಯಲ್ಲಿ 'ಸೂಪರ್ ಪವರ್' ಪ್ರಯೋಗಾಲಯ; ಕ್ವಾಂಟಮ್ ಕಂಪ್ಯೂಟಿಂಗ್ ಲೋಕಕ್ಕೆ ಭಾರತದ ಭರ್ಜರಿ ಎಂಟ್ರಿ!
❤️ಲೂಪ್ಸ್ (Loops): ಲವ್ ಫೇಲ್ಯೂರ್ ಸಾಂಗ್ ರಿಪೀಟ್ ಮೋಡ್ನಲ್ಲಿ ಕೇಳಿದ್ದೀರಾ? ಅದೇ ಲೂಪ್!
❤️ಮಾರ್ಕ್ ಜಕರ್‌ಬರ್ಗ್ ಮಾಸ್ಟರ್ ಸ್ಟ್ರೋಕ್: ಆ್ಯಪ್ ಸ್ಟೋರ್‌ನಲ್ಲಿ ಧೂಳೆಬ್ಬಿಸುತ್ತಿದೆ ಹೊಸ 'ಮೆಟಾ AI'!
❤️ಕೇವಲ ಸರ್ಚ್ ಇಂಜಿನ್ ಅಲ್ಲ, ಈಗ ಚಿಪ್ ಮೇಕರ್; ಇಂಟೆಲ್ ಹೆಗಲೇರಿ ಎನ್ವಿಡಿಯಾಗೆ ಸವಾಲೆಸೆದ ಗೂಗಲ್!
❤️ಅಡೋಬ್, ಮೈಕ್ರೋಸಾಫ್ಟ್ ಅಥವಾ ಗೂಗಲ್? ನಿಮ್ಮ ಡಾಕ್ಯುಮೆಂಟ್‌ಗಳಿಗೆ ಯಾವ ಸ್ಕ್ಯಾನರ್ ಬೆಸ್ಟ್ ಗೊತ್ತಾ?
❤️ಎಚ್ಚರ! ನೀವು ಎಐ ಬಳಸುತ್ತಿಲ್ಲ, ಎಐ ನಿಮ್ಮ ಮೆದುಳನ್ನೇ ರೀ-ಪ್ರೋಗ್ರಾಮ್ ಮಾಡುತ್ತಿದೆ!
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
🛒 ಆನ್‌ಲೈನ್ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್ ಬಳಸಿ
0 ಕಾಮೆಂಟ್‌ಗಳು
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.