ಡೆಲಿವರಿ ಸ್ಕ್ಯಾಮ್: ರೂ.1.87 ಲಕ್ಷಕ್ಕೆ ಫೋನ್ ಆರ್ಡರ್ ಮಾಡಿದರೆ ಬಾಕ್ಸ್ನಲ್ಲಿ ಮಾರ್ಬಲ್ ಟೈಲ್ ಬಂತು!
| ನಾಗರಾಜ ವೈದ್ಯ
ಊಹಿಸಿಕೊಳ್ಳಿ, ನೀವು ಮೂರು ತಿಂಗಳಿನಿಂದ ಕಾಯುತ್ತಿದ್ದ ಬಿಗ್ ಬಿಲಿಯನ್ ಡೇಸ್ ಸೇಲ್ ಬಂದಿದೆ. ರೂ.1.87 ಲಕ್ಷದ ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 7 ಅನ್ನು ಅಮೆಜಾನ್ನಲ್ಲಿ ಆರ್ಡರ್ ಮಾಡುತ್ತೀರಿ. ಪ್ರತಿ ಗಂಟೆಗೂ ಟ್ರ್ಯಾಕ್ ಮಾಡುತ್ತೀರಿ. ಕೊನೆಗೆ ಡೋರ್ ಬೆಲ್ ಬಾರಿಸುತ್ತದೆ. ಬಾಕ್ಸ್ ಸೀಲ್ಡ್ ಆಗಿದೆ, ಟೇಪ್ ಎಲ್ಲೂ ಹರಿದಿಲ್ಲ. ನೀವು ಖುಷಿಯಿಂದ ಕ್ಯಾಮೆರಾ ಆನ್ ಮಾಡಿ ಬಾಕ್ಸ್ ತೆರೆಯುತ್ತೀರಿ. ಒಳಗೆ ಫೋನ್ ಇಲ್ಲ. ಒಂದು ಬಿಳಿ ಮಾರ್ಬಲ್ ಟೈಲ್ ಅಚ್ಚುಕಟ್ಟಾಗಿ ಪ್ಯಾಕ್ ಆಗಿದೆ. ಇದು ಕಥೆಯಲ್ಲ, ಇದು 2025 ರ ಅಕ್ಟೋಬರ್ 19 ರಂದು ಬೆಂಗಳೂರಿನ ಯಲಚೇನಹಳ್ಳಿಯ ಪ್ರೇಮಾನಂದ್ ಎಂಬ ಸಾಫ್ಟ್ವೇರ್ ಇಂಜಿನಿಯರ್ಗೆ ನಡೆದ ನಿಜವಾದ ಘಟನೆ. ಅವರು ವಿಡಿಯೋ ಮಾಡಿದ್ದರಿಂದ ಹಣ ವಾಪಸ್ ಬಂತು, ವಿಡಿಯೋ ಮಾಡದಿದ್ದರೆ ಏನಾಗುತ್ತಿತ್ತು?
ಇದೊಂದೇ ಘಟನೆ ಘಟನೆಯಲ್ಲ. ಇದು ಭಾರತದಾದ್ಯಂತ ನಡೆಯುತ್ತಿರುವ ದೊಡ್ಡ ಪ್ಯಾಟರ್ನ್ನ ಒಂದು ತುಣುಕು ಮಾತ್ರ. ಸರ್ಕಾರದ ನ್ಯಾಷನಲ್ ಕನ್ಸ್ಯೂಮರ್ ಹೆಲ್ಪ್ಲೈನ್ ಅಂದರೆ ಎನ್ಸಿಎಚ್ ಡೇಟಾ ಪ್ರಕಾರ 2025 ರಲ್ಲಿ ಇ ಕಾಮರ್ಸ್ ವಿರುದ್ಧ 5.1 ಲಕ್ಷ ದೂರುಗಳು ದಾಖಲಾಗಿವೆ. ಇದರಲ್ಲಿ ಫ್ಲಿಪ್ಕಾರ್ಟ್ 1.33 ಲಕ್ಷ ದೂರುಗಳೊಂದಿಗೆ ಮೊದಲ ಸ್ಥಾನದಲ್ಲಿದೆ, ಅಮೆಜಾನ್ 91,248 ದೂರುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2025 ಏಪ್ರಿಲ್ ನಿಂದ 2026 ಜೂನ್ ವರೆಗೆ ಎನ್ಸಿಎಚ್ ಮಧ್ಯಸ್ಥಿಕೆಯಿಂದಲೇ ರೂ.91 ಕೋಟಿ ರಿಫಂಡ್ ಕೊಡಿಸಲಾಗಿದೆ, ಅದರಲ್ಲಿ ರೂ.63 ಕೋಟಿ ಕೇವಲ ಇ ಕಾಮರ್ಸ್ ದೂರುಗಳದ್ದು. ಅಂದರೆ ಪ್ರತಿ ದಿನ ನೂರಾರು ಜನರಿಗೆ ಸೋಪು, ಕಲ್ಲು, ಟೈಲ್ ಬರುತ್ತಿದೆ. ಬೇರೆಲ್ಲ ಹಾಗಿರಲಿ, ಟ್ರ್ಯೂಕ್ ಟ್ರೂಕ್ಲಿಪ್ಸ್ ಆರ್ಡರ್ ಮಾಡಿದ್ದ ನನಗೆ, ಕಳಪೆ ಗುಣಮಟ್ಟದ ಟ್ರಿಮ್ಮರ್ ಡೆಲಿವರಿಯಾಗಿದೆ!
2021 ರ ನಿರ್ಮಾ ಸೋಪಿನಿಂದ 2025 ರ ಟೈಲ್ ವರೆಗಿನ ಟೈಮ್ಲೈನ್
ಈ ಸೋಪು ಸ್ಕ್ಯಾಮ್ ನಿನ್ನೆ ಮೊನ್ನೆ ಶುರುವಾದದ್ದಲ್ಲ. 2021 ರಲ್ಲಿ ಕೇರಳದ ಆಲುವಾದ ನೂರುಲ್ ಅಮೀನ್ ರೂ.70,900 ಕೊಟ್ಟು ಐಫೋನ್ 12 ಆರ್ಡರ್ ಮಾಡಿದರೆ ವಿಮ್ ಪಾತ್ರೆ ತೊಳೆಯುವ ಸೋಪು ಮತ್ತು ರೂ.5 ನಾಣ್ಯ ಬಂದಿತ್ತು. ಪೊಲೀಸ್ ತನಿಖೆಯಲ್ಲಿ ಇನ್ನೊಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿತು. ಆ ಐಫೋನ್ನ ಐಎಂಇಐ ಈಗಾಗಲೇ 2021 ಸೆಪ್ಟೆಂಬರ್ 25 ರಿಂದ ಜಾರ್ಖಂಡ್ನಲ್ಲಿ ಆಕ್ಟಿವ್ ಆಗಿತ್ತು. ಅಂದರೆ ಸೆಲ್ಲರ್ ಫೋನ್ ಅನ್ನು ಮೊದಲೇ ಬೇರೆ ಎಲ್ಲೋ ಮಾರಿ, ಅದೇ ಲಿಸ್ಟಿಂಗ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದ. ಇದು ಪ್ಯಾಕಿಂಗ್ ತಪ್ಪಲ್ಲ, ಪ್ಲಾನ್ಡ್ ಫ್ರಾಡ್.
2022 ಮತ್ತು 2023 ರಲ್ಲಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ನಲ್ಲಿ ಇಂಥದ್ದೇ ಕಥೆಗಳು ರಿಪೀಟ್ ಆದವು. ಒಬ್ಬರು ಐಫೋನ್ 12 ಬುಕ್ ಮಾಡಿದರೆ ಎರಡು ನಿರ್ಮಾ ಸೋಪು ಬಂದಿತ್ತು. ಕೊಪ್ಪಳದ ವಿದ್ಯಾರ್ಥಿ ಹರ್ಷ ಎಸ್ ರೂ.48,999 ಕೊಟ್ಟು ಐಫೋನ್ 11 ಆರ್ಡರ್ ಮಾಡಿದರೆ 140 ಗ್ರಾಂ ಸೋಪು ಮತ್ತು ಒಂದು ಚಿಕ್ಕ ಕೀಪ್ಯಾಡ್ ಫೋನ್ ಬಂದಿತ್ತು. ದೆಹಲಿಯ ಯಶಸ್ವಿ ಶರ್ಮ ತಮ್ಮ ತಂದೆಗೆ ಲ್ಯಾಪ್ಟಾಪ್ ಆರ್ಡರ್ ಮಾಡಿದರೆ ಘಡಿ ಡಿಟರ್ಜೆಂಟ್ ಬಾರ್ ಬಂದಿತ್ತು. ಅವರು ಓಪನ್ ಬಾಕ್ಸ್ ಡೆಲಿವರಿ ಎಂದರೇನು ಎಂದು ಗೊತ್ತಿಲ್ಲದೆ ಒಟಿಪಿ ಮೊದಲೇ ಕೊಟ್ಟುಬಿಟ್ಟಿದ್ದರು. ಇಲ್ಲೇ ದೊಡ್ಡ ಟ್ವಿಸ್ಟ್ ಇದೆ, ಸೀಲ್ಡ್ ಬಾಕ್ಸ್ ಎಂದರೆ ಸೇಫ್ ಎಂಬ ನಂಬಿಕೆಯನ್ನೇ ಹ್ಯಾಕ್ ಮಾಡಲಾಗುತ್ತಿದೆ.
ನಮ್ಮ ಪಾರ್ಸೆಲ್ ಐದು ಕೈ ಬದಲಾಗುತ್ತದೆ, ಕಳ್ಳತನ ಎಲ್ಲಿ ಆಗುತ್ತದೆ?

ನೀವು ಆರ್ಡರ್ ಬಟನ್ ಒತ್ತಿದ ಕ್ಷಣದಿಂದ ನಿಮ್ಮ ಮನೆ ಬಾಗಿಲು ತಲುಪುವವರೆಗೆ ಒಂದು ಪಾರ್ಸೆಲ್ ಕನಿಷ್ಠ ಐದು ಹಂತಗಳನ್ನು ದಾಟುತ್ತದೆ. ಸೆಲ್ಲರ್ ಪ್ಯಾಕಿಂಗ್, ವೇರ್ಹೌಸ್, ಸಾರ್ಟಿಂಗ್ ಹಬ್, ಲೋಕಲ್ ಹಬ್ ಮತ್ತು ಕೊನೆಯ ಮೈಲು ಅಂದರೆ ಲಾಸ್ಟ್ ಮೈಲ್ ಡೆಲಿವರಿ. ಪ್ರತಿ ಹಂತದಲ್ಲೂ ಬದಲಾವಣೆ ಸಾಧ್ಯವಿದೆ, ಆದರೆ ಅತ್ಯಂತ ದುರ್ಬಲವಾದದ್ದು ಕೊನೆಯ ಹಂತವೇ.
ಸೆಲ್ಲರ್ ಹಂತದಲ್ಲಿ ಕೆಲವು ಥರ್ಡ್ ಪಾರ್ಟಿ ಸೆಲ್ಲರ್ಗಳು ಉದ್ದೇಶಪೂರ್ವಕವಾಗಿ ದುಬಾರಿ ಲಿಸ್ಟಿಂಗ್ ಹಾಕಿ ಅಗ್ಗದ ವಸ್ತು ಕಳಿಸುತ್ತಾರೆ. ತೂಕ ಹೊಂದಿಸಲು ಫೋನ್ ಜೊತೆ ಸೋಪಿನ ತೂಕಕ್ಕೆ ಸರಿಯಾಗಿ ನಾಣ್ಯ ಸೇರಿಸುತ್ತಾರೆ. ವೇರ್ಹೌಸ್ ಹಂತದಲ್ಲಿ, ಅಂದರೆ ಭಿವಂಡಿ ಅಥವಾ ಹೈದರಾಬಾದ್ನ ಫುಲ್ಫಿಲ್ಮೆಂಟ್ ಸೆಂಟರ್ನಲ್ಲಿ ಕೇವಲ ತೂಕ ಆಧಾರಿತ ಸ್ಕ್ಯಾನ್ ಮಾತ್ರ ನಡೆಯುತ್ತದೆ. 180 ಗ್ರಾಂ ಫೋನ್ ಬದಲು 180 ಗ್ರಾಂ ಸೋಪು ಇದ್ದರೆ ಸಿಸ್ಟಮ್ ಹಿಡಿಯುವುದಿಲ್ಲ.
ನಿಜವಾದ ಆಟ ಶುರುವಾಗುವುದು ಲಾಸ್ಟ್ ಮೈಲ್ನಲ್ಲಿ. ಸೂರತ್ನಲ್ಲಿ ಇಂಟೆಕ್ಸ್ ಟ್ರಾನ್ಸ್ಪೋರ್ಟೇಶನ್ ಸರ್ವಿಸಸ್ನ ಡೆಲಿವರಿ ಎಕ್ಸಿಕ್ಯೂಟಿವ್ ಜಯ್ ವಿರಾಶ್ ರೂ.8.82 ಲಕ್ಷ ಮೌಲ್ಯದ ಸ್ಯಾಮ್ಸಂಗ್ ಫೋಲ್ಡ್ 8 ಅಲ್ಟ್ರಾ, ಸ್ಯಾನ್ಡಿಸ್ಕ್ ಎಸ್ಎಸ್ಡಿ, ಐಫೋನ್ 17 ಪ್ರೊ ಅನ್ನು ತೆಗೆದು ಡಮ್ಮಿ ಹಾಕಿ ವೇರ್ಹೌಸ್ಗೆ ವಾಪಸ್ ಮಾಡಿದ್ದಾನೆ. ದೆಹಲಿಯಲ್ಲಿ 22 ವರ್ಷದ ಕಿಶನ್ ಎಂಬಾತ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಎರಡರಲ್ಲೂ ರಿಟರ್ನ್ ಕಲೆಕ್ಟ್ ಮಾಡುವಾಗ ನಿಜವಾದ ವಸ್ತು ತೆಗೆದು ಹಳೆಯ ಬಟ್ಟೆ, ಬಳಸಿದ ವಾಚ್ ಹಾಕಿ ಕಂಪನಿಗೆ ವಾಪಸ್ ಕೊಡುತ್ತಿದ್ದ. ಅವನ ಮನೆಯಲ್ಲಿ 38 ನಕಲಿ ರಿಟರ್ನ್ ಪ್ಯಾಕೇಜ್ಗಳು ಸಿಕ್ಕಿವೆ. ವೈರಲ್ ಆಗಿರುವ ಇನ್ನೊಂದು ವಿಧಾನದಲ್ಲಿ ಸಾಲ್ವೆಂಟ್ ಎಂಬ ಕೆಮಿಕಲ್ ಹಾಕಿ ಟೇಪ್ನ ಅಂಟನ್ನು ಮೃದುಗೊಳಿಸಿ, ಹರಿದಿರುವುದು ಗೊತ್ತಾಗದಂತೆ ಬಾಕ್ಸ್ ತೆರೆದು ವಸ್ತು ಬದಲಿಸಿ ಮತ್ತೆ ಫ್ಯಾಕ್ಟರಿ ಫಿನಿಶ್ನಂತೆ ಮುಚ್ಚಲಾಗುತ್ತದೆ.
ನಿಜವಾಗಿಯೂ ಹೊಣೆ ಯಾರು? ಸೆಲ್ಲರ್, ಪ್ಲಾಟ್ಫಾರ್ಮ್ ಅಥವಾ ಡೆಲಿವರಿ ಬಾಯ್?
ಇಲ್ಲೇ ಎಲ್ಲರೂ ಕನ್ಫ್ಯೂಸ್ ಆಗುವುದು. ಕಂಪನಿಗಳು ನಾವು ಕೇವಲ ಮಧ್ಯವರ್ತಿ, ನಾವು ಇಂಟರ್ಮೀಡಿಯರಿ ಎಂದು ಹೇಳುತ್ತವೆ. 2026 ಸೆಪ್ಟೆಂಬರ್ 18 ರಂದು ದೆಹಲಿ ಕಮಿಷನ್ ಮುಂದೆ ಫ್ಲಿಪ್ಕಾರ್ಟ್ ಕೂಡ ಇದೇ ವಾದ ಮಾಡಿತ್ತು. ನಿಜವಾದ ಸೆಲ್ಲರ್ ಲ್ಯುಮಿನರಿ ಲೈಫ್ಸ್ಟೈಲ್ ಪ್ರೈವೇಟ್ ಲಿಮಿಟೆಡ್, ನಾವು ಕೇವಲ ವೇದಿಕೆ ಎಂದು. ಆದರೆ ಕಾನೂನು ಈ ವಾದವನ್ನು ಒಪ್ಪುತ್ತಿಲ್ಲ.
ದೆಹಲಿ ಹೈಕೋರ್ಟ್ ಕ್ರಿಶ್ಚಿಯನ್ ಲುಬುಟಿನ್ ವರ್ಸಸ್ ನಕುಲ್ ಬಜಾಜ್ 2018 ಕೇಸ್ನಲ್ಲಿ 26 ಅಂಶಗಳನ್ನು ಪಟ್ಟಿ ಮಾಡಿದೆ. ವೇರ್ಹೌಸ್, ಲಾಜಿಸ್ಟಿಕ್ಸ್, ಪೇಮೆಂಟ್ ಫೆಸಿಲಿಟೇಶನ್, ಪ್ಲಾಟ್ಫಾರ್ಮ್ ಬ್ರಾಂಡೆಡ್ ಪ್ಯಾಕೇಜಿಂಗ್ ಮಾಡಿದರೆ ನೀವು ಆಕ್ಟಿವ್ ಪಾರ್ಟಿಸಿಪೆಂಟ್, ಸೇಫ್ ಹಾರ್ಬರ್ ಹೋಗುತ್ತದೆ ಎಂದು ಹೇಳಿದೆ. ಅಮೆಜಾನ್ ಎಫ್ಬಿಎ ಮತ್ತು ಫ್ಲಿಪ್ಕಾರ್ಟ್ ಅಶ್ಯೂರ್ಡ್ ಇದನ್ನೆಲ್ಲಾ ಮಾಡುತ್ತವೆ. ಹಾಗಾಗಿ ಅವರು ಕೇವಲ ನೋಟಿಸ್ ಬೋರ್ಡ್ ಅಲ್ಲ.
ಇದರ ಜೊತೆಗೆ ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ 2019 ಮತ್ತು ಇ ಕಾಮರ್ಸ್ ರೂಲ್ಸ್ 2020 ರೂಲ್ 5 ಸ್ಪಷ್ಟವಾಗಿ ಹೇಳುತ್ತದೆ. ಮಾರ್ಕೆಟ್ಪ್ಲೇಸ್ ಸೆಲ್ಲರ್ನಿಂದ ಅಕ್ಯುರೇಟ್ ಡಿಸ್ಕ್ರಿಪ್ಷನ್ ಅಂಡರ್ಟೇಕಿಂಗ್ ತೆಗೆದುಕೊಳ್ಳಬೇಕು, ಸೆಲ್ಲರ್ ಡೀಟೇಲ್ಸ್, ಗ್ರೀವಿಯನ್ಸ್ ಆಫೀಸರ್ ತೋರಿಸಬೇಕು, ತಪ್ಪು ವಸ್ತುವಿಗೆ ರಿಟರ್ನ್ ರಿಫ್ಯೂಸ್ ಮಾಡುವಂತಿಲ್ಲ. ರೂಲ್ 4(3) ಪ್ರಕಾರ ಯಾವುದೇ ಇ ಕಾಮರ್ಸ್ ಎಂಟಿಟಿ ಅನ್ಫೇರ್ ಟ್ರೇಡ್ ಪ್ರಾಕ್ಟೀಸ್ ಮಾಡುವಂತಿಲ್ಲ. ಎನ್ಸಿಡಿಆರ್ಸಿ ಶೇಖ್ ಉಮರ್ ಫಾರೂಕ್ ವರ್ಸಸ್ ಫ್ಲಿಪ್ಕಾರ್ಟ್ 2022 ಕೇಸ್ನಲ್ಲಿ ಸೆಲ್ಲರ್, ಸರ್ವಿಸ್ ಪ್ರೊವೈಡರ್ ಮತ್ತು ಕನ್ಸ್ಯೂಮರ್ ನಡುವೆ ಟ್ರೈಪಾರ್ಟೈಟ್ ಕಾಂಟ್ರಾಕ್ಟ್ ಇದೆ ಎಂದು ಹೇಳಿದೆ. ನೀವು ಇನ್ವಾಯ್ಸ್ ಯಾರ ಹೆಸರಿನಲ್ಲಿ ಕೊಟ್ಟಿದ್ದೀರಿ ಮತ್ತು ಹಣ ಯಾರ ಖಾತೆಗೆ ಹೋಗಿದೆ ಎಂಬುದೇ ನಿರ್ಣಾಯಕ. ಫ್ಲಿಪ್ಕಾರ್ಟ್ ತನ್ನ ಹೆಸರಿನಲ್ಲಿ ಜಿಎಸ್ಟಿ ಇನ್ವಾಯ್ಸ್ ಕೊಟ್ಟು ತನ್ನ ಪೇಮೆಂಟ್ ಗೇಟ್ವೇ ಮೂಲಕ ಹಣ ಪಡೆದರೆ, ಅವನೇ ಸೆಲ್ಲರ್ ಆಫ್ ರೆಕಾರ್ಡ್.
ಕೋರ್ಟ್ ಏನು ಹೇಳುತ್ತಿದೆ ಮತ್ತು ನೀವು ಹೇಗೆ ಬಚಾವ್ ಆಗಬೇಕು?
ಕೋರ್ಟ್ಗಳು ಈಗ ಗ್ರಾಹಕರ ಪರವಾಗಿ ನಿಲ್ಲುತ್ತಿವೆ. ದೆಹಲಿ ಜಿಲ್ಲಾ ಕಮಿಷನ್ ರಿಯಲ್ಮಿ ನಾರ್ಜೊ 50ಎ ಬದಲು ಲೈಫ್ಬಾಯ್ ಸೋಪು ಬಂದ ಕೇಸ್ನಲ್ಲಿ ಫ್ಲಿಪ್ಕಾರ್ಟ್ ರೂ.10,574 ಜೊತೆಗೆ 7 ಪರ್ಸೆಂಟ್ ಬಡ್ಡಿ, ರೂ.5,000 ಮೆಂಟಲ್ ಹರಾಸ್ಮೆಂಟ್ ಮತ್ತು ರೂ.5,000 ಲಿಟಿಗೇಶನ್ ವೆಚ್ಚ ಕೊಡಬೇಕು ಎಂದು ಆದೇಶಿಸಿದೆ. ಕೊಪ್ಪಳ ಜಿಲ್ಲಾ ಕಮಿಷನ್ ಐಫೋನ್ 11 ಬದಲು ಸೋಪು ಬಂದ ಕೇಸ್ನಲ್ಲಿ ಫ್ಲಿಪ್ಕಾರ್ಟ್ ಮತ್ತು ಸೇನ್ ರಿಟೇಲ್ಸ್ ಜಂಟಿಯಾಗಿ ರೂ.25,000 ಪರಿಹಾರ ಮತ್ತು ಪೂರ್ತಿ ರಿಫಂಡ್ ಕೊಡಬೇಕು ಎಂದು ಹೇಳಿದೆ. ಮುಂಬೈ ಉಪನಗರ ಕಮಿಷನ್ ಐಫೋನ್ 14 ಪ್ರೊ ಬದಲು ಬಿಯರ್ಡ್ ಗ್ರೋತ್ ಆಯಿಲ್ ಬಂದ ಕೇಸ್ನಲ್ಲಿ ರೂ.1,11,793 ಜೊತೆಗೆ 9 ಪರ್ಸೆಂಟ್ ಬಡ್ಡಿ ಮತ್ತು ರೂ.70,000 ಪರಿಹಾರ ಕೊಡಲು ಆದೇಶಿಸಿದೆ.
ಈ ತೀರ್ಪುಗಳಿಂದ ಒಂದು ಮಾತು ಸ್ಪಷ್ಟವಾಗುತ್ತದೆ. ಅನ್ಬಾಕ್ಸಿಂಗ್ ವಿಡಿಯೋ ಇದ್ದರೆ ಬರ್ಡನ್ ಆಫ್ ಪ್ರೂಫ್ ನಿಮ್ಮ ಮೇಲಲ್ಲ, ಕಂಪನಿಯ ಮೇಲೆ. ನೀವು ದುಬಾರಿ ವಸ್ತು ಆರ್ಡರ್ ಮಾಡಿದಾಗ ಮಾಡಲೇಬೇಕಾದ ಐದು ಮಂತ್ರಗಳಿವೆ. ಮೊದಲನೆಯದು ರೆಕಾರ್ಡ್ ಬಿಫೋರ್ ಯು ರಿಪ್. ಕೊರಿಯರ್ ಎಡಬ್ಲ್ಯೂಬಿ ಲೇಬಲ್, ಸೀಲ್ಡ್ ಬಾಕ್ಸ್, ಓಪನಿಂಗ್, ಐಎಂಇಐ ಎಲ್ಲವೂ ಒಂದೇ ಕಂಟಿನ್ಯೂಯಸ್ ಶಾಟ್ನಲ್ಲಿ ಬರಬೇಕು. ಎರಡನೆಯದು ಓಪನ್ ಬಾಕ್ಸ್ ಡೆಲಿವರಿ ಇದ್ದರೆ ತಪ್ಪದೇ ಕೇಳಿ. ಡೆಲಿವರಿ ಬಾಯ್ ನಿರಾಕರಿಸಿದರೆ ಒಟಿಪಿ ಕೊಡಬೇಡಿ.
ಮೂರನೆಯದು ಪ್ಯಾಕೇಜಿಂಗ್ ಎಸೆಯಬೇಡಿ. ಇನ್ವಾಯ್ಸ್, ಕೊರಿಯರ್ ಸ್ಟಿಕರ್, ತಪ್ಪು ವಸ್ತುವನ್ನು 30 ದಿನ ಇಡಿ. ನಾಲ್ಕನೆಯದು ಎಸ್ಕಲೇಷನ್ ಲ್ಯಾಡರ್. ಆ್ಯಪ್ನಲ್ಲಿ ರಿಟರ್ನ್, ನಂತರ ಗ್ರೀವಿಯನ್ಸ್ ಆಫೀಸರ್ಗೆ ಐಟಿ ರೂಲ್ಸ್ 2021 ರೂಲ್ 3(2) ಅಡಿ ಇಮೇಲ್, ನಂತರ ಎನ್ಸಿಎಚ್ 1915, ನಂತರ ಇ ದಾಖಿಲ್ ಪೋರ್ಟಲ್ನಲ್ಲಿ ಕನ್ಸ್ಯೂಮರ್ ಕಂಪ್ಲೇಂಟ್. ರೂ.10,000 ಕ್ಕಿಂತ ಹೆಚ್ಚಿನ ನಕಲಿ ವಸ್ತುವಿಗೆ ಸೈಬರ್ಕ್ರೈಮ್ ಡಾಟ್ ಗವ್ ಡಾಟ್ ಇನ್ನಲ್ಲಿ ಎಫ್ಐಆರ್. ಐದನೆಯದು ಚಾರ್ಜ್ಬ್ಯಾಕ್. 60 ರಿಂದ 120 ದಿನದೊಳಗೆ ಬ್ಯಾಂಕ್ಗೆ ಮರ್ಚಂಡೈಸ್ ನಾಟ್ ಆಸ್ ಡಿಸ್ಕ್ರೈಬ್ಡ್ ಎಂದು ಡಿಸ್ಪ್ಯೂಟ್ ಹಾಕಬಹುದು.
ಭವಿಷ್ಯದಲ್ಲಿ ಈ ಸ್ಕ್ಯಾಮ್ ನಿಲ್ಲುತ್ತದೆಯೇ? ಪ್ಲಾಟ್ಫಾರ್ಮ್ಗಳು ಟ್ಯಾಂಪರ್ ಪ್ರೂಫ್ ಸೆಕ್ಯುರಿಟಿ ಟೇಪ್, ರಾಂಡಮೈಸ್ಡ್ ಆಡಿಟ್ ಮಾಡುತ್ತೇವೆ ಎನ್ನುತ್ತವೆ, ಆದರೆ ಲಾಸ್ಟ್ ಮೈಲ್ ಇನ್ನೂ ವೀಕೆಸ್ಟ್ ಲಿಂಕ್ ಆಗಿದೆ. ಮುಂದಿನ ಎರಡು ವರ್ಷಗಳಲ್ಲಿ ಎಐ ವೆಯ್ಟ್ ಪ್ಲಸ್ ಇಮೇಜ್ ಸ್ಕ್ಯಾನ್, ಫೇಸ್ ವೆರಿಫಿಕೇಶನ್ ಇರುವ ಒಟಿಪಿ 2.0 ಮತ್ತು ಫಾಲ್ ಬ್ಯಾಕ್ ಲಯಾಬಿಲಿಟಿ ಕಾನೂನು ಬಂದರೆ ಮಾತ್ರ ಇದು ನಿಲ್ಲಬಹುದು. ಅಲ್ಲಿಯವರೆಗೆ ಸೀಲ್ಡ್ ಬಾಕ್ಸ್ ಎಂದರೆ ಸೇಫ್ ಎಂಬ ನಂಬಿಕೆಯನ್ನು ಬಿಟ್ಟುಬಿಡಿ. ರೆಕಾರ್ಡ್ ಮಾಡುವವನು ಗೆಲ್ಲುತ್ತಾನೆ, ನಂಬುವವನು ಅಳುತ್ತಾನೆ.
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.