ಟ್ರೆಂಡಿಂಗ್
ಟೆಕ್ವೈದ್ಯ: ಒಂದು ವರ್ಷ. ಸಾವಿರಕ್ಕೂ ಹೆಚ್ಚು ಲೇಖನಗಳು.. ಇನ್ನೂ ಇದೆ ಸಾಗುವ ದಾರಿ!
ಒಂದು ವರ್ಷದ ಹಿಂದೆ ನಾವು ಟೆಕ್ವೈದ್ಯ ಇ-ಪೇಪರ್ ಆರಂಭಿಸಿದಾಗ ನಮ್ಮ ಮುಂದೆ ದೊಡ್ಡ ಬಂಡವಾಳವಿರಲಿಲ್ಲ, ದೊಡ್ಡ ತಂಡವಿರಲಿಲ್ಲ. ಇದ್ದದ್ದು ಒಂದೇ ಒಂದು ಸರಳ ಪ್ರಶ್ನೆ. ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ಅದನ್ನು ತಂತ್ರಜ್ಞಾನ ತಿಳಿದವರಿಗೆ ಮಾತ್ರ ಯಾಕೆ ಸೀಮಿತಗೊಳಿಸಬೇಕು? ಪ್ರತಿದಿನ ನಮ್ಮ ಜೇಬಿನಲ್ಲಿರುವ ಮೊಬೈಲ್ ಬದಲಾಗುತ್ತಿದೆ, ನಾವು ಬಳಸುವ ಯುಪಿಐ ಬದಲಾಗುತ್ತಿದೆ, ನಮ್ಮ ಮಕ್ಕಳು ಬಳಸುವ ಇಂಟರ್ನೆಟ್ ಬದಲಾಗುತ್ತಿದೆ, ನಮ್ಮ ಕೆಲಸದ ವಿಧಾನವನ್ನೇ ಬದಲಾಯಿಸುತ್ತಿರುವ ಎಐ ಬರುತ್ತಿದೆ. ಈ ಬದಲಾವಣೆಗಳು ಬೆಂಗಳೂರಿನ ಐಟಿ ಕಂಪನಿಯಲ್ಲಿರುವವರಿಗೆ ಮಾತ್ರವಲ್ಲ, ರಾಯಚೂರಿನ ರೈತನಿಗೂ, ಮೈಸೂರಿನ ವಿದ್ಯಾರ್ಥಿಗೂ, ಧಾರವಾಡದ ಸಣ್ಣ ಅಂಗಡಿಯವರಿಗೂ ಪರಿಣಾಮ ಬೀರುತ್ತವೆ. ಹಾಗಾದರೆ ಆ ಬದಲಾವಣೆಯ ಬಗ್ಗೆ ಅವರಿಗೆ ಅರ್ಥವಾಗುವ ಕನ್ನಡದಲ್ಲಿ ಯಾರು ಹೇಳಬೇಕು ಎಂಬ ಆಲೋಚನೆಯೇ ಟೆಕ್ವೈದ್ಯದ ಆರಂಭಕ್ಕೆ ಕಾರಣ.
ಕಳೆದ 365 ದಿನಗಳಲ್ಲಿ ನಾವು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದೇವೆ. ಇದು ನಮಗೆ ಕೇವಲ ಒಂದು ಸಂಖ್ಯೆ ಅಲ್ಲ. ಪ್ರತಿದಿನ ಬೆಳಗ್ಗೆ ಎದ್ದು, “ಇಂದು ಓದುಗರಿಗೆ ಏನು ಉಪಯುಕ್ತ ಮಾಹಿತಿ ಕೊಡಬಹುದು?” ಎಂದು ಯೋಚಿಸಿದ 365 ದಿನಗಳ ಪರಿಶ್ರಮ. ಈ ಪಯಣದಲ್ಲಿ ನಾವು ಕೇವಲ ಸುದ್ದಿಗಳನ್ನು ಅನುವಾದಿಸಲಿಲ್ಲ. ಎಐ ಎಂದರೆ ಏನು, ಅದು ನಮ್ಮ ಉದ್ಯೋಗವನ್ನು ಕಸಿದುಕೊಳ್ಳುತ್ತದೆಯೇ ಎಂಬ ಆತಂಕದಿಂದ ಹಿಡಿದು, ಅದನ್ನು ಬಳಸಿಕೊಂಡು ನಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುವುದು ಹೇಗೆ ಎಂಬವರೆಗೆ ವಿವರಿಸಲು ಪ್ರಯತ್ನಿಸಿದೆವು. ನಿಮ್ಮ ಫೋನ್ಗೆ ಬಂದ ಒಂದು ಲಿಂಕ್ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು ಎಂಬ ಸೈಬರ್ ಸುರಕ್ಷತೆಯ ಎಚ್ಚರಿಕೆಯನ್ನು ನಿಮ್ಮ ಮನೆಯವರಿಗೂ ಅರ್ಥವಾಗುವಂತೆ ಹೇಳಲು ಪ್ರಯತ್ನಿಸಿದೆವು. ಹೊಸ ಮೊಬೈಲ್ ಬಿಡುಗಡೆಯಾದಾಗ ಅದರ ಕ್ಯಾಮೆರಾ ಎಷ್ಟು ಮೆಗಾಪಿಕ್ಸೆಲ್ ಎಂಬುದಕ್ಕಿಂತ ಅದು ನಿಮ್ಮ ನಿಜ ಜೀವನದ ಬಳಕೆಗೆ ಯೋಗ್ಯವೇ ಎಂಬುದನ್ನು ಪ್ರಾಮಾಣಿಕವಾಗಿ ವಿಶ್ಲೇಷಿಸಿದೆವು. ಸಂಕೀರ್ಣವಾದ ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸುವುದು ಸುಲಭ, ಅದನ್ನು ಸರಳಗೊಳಿಸುವುದೇ ಕಷ್ಟ. ನಾವು ಎರಡನೆಯದನ್ನು ಆಯ್ಕೆ ಮಾಡಿಕೊಂಡೆವು.
ಇ-ಪೇಪರ್ ಆಗಿ ಆರಂಭವಾದ ಟೆಕ್ವೈದ್ಯದ ಪಯಣ ಕೇವಲ ಇಪ್ಪತ್ತು ವಾರಗಳಲ್ಲಿ ವೆಬ್ ಪೋರ್ಟಲ್ ಆಗಿ ಮತ್ತಷ್ಟು ಅಡ್ವಾನ್ಸ್ಡ್ ರೂಪ ಪಡೆದುಕೊಂಡಿತು. ಈಗ ಅದು ಒಂದು ಪತ್ರಿಕೆಯ ಪುಟಗಳ ಮಿತಿಯಲ್ಲಿಲ್ಲ. ದಿನದ 24 ಗಂಟೆಯೂ, ಯಾವುದೇ ಕ್ಷಣದಲ್ಲೂ ಹೊಸ ಬೆಳವಣಿಗೆಗಳನ್ನು ಓದುಗರಿಗೆ ತಲುಪಿಸುವ ಡಿಜಿಟಲ್ ವೇದಿಕೆಯಾಗಿದೆ. ಪ್ರತಿದಿನ ಸಾವಿರಾರು ಜನರು ನಮ್ಮನ್ನು ಓದುತ್ತಿದ್ದಾರೆ ಎಂಬುದು ನಮಗೆ ಕೇವಲ ವ್ಯೂಸ್ನ ಲೆಕ್ಕವಲ್ಲ, ಅದು ನೀವು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ಅಳತೆ.
ಹಾಗಾದರೆ, ಟೆಕ್ವೈದ್ಯ ಎಂದರೇನು? ನಮ್ಮ ಪಾಲಿಗೆ ಟೆಕ್ವೈದ್ಯ ಎಂದರೆ ಕೇವಲ ಒಂದು ವೆಬ್ಸೈಟ್ ಅಲ್ಲ. ಹೆಸರಿನಲ್ಲೇ ಹೇಳುವಂತೆ, ತಂತ್ರಜ್ಞಾನದ ಗೊಂದಲಗಳಿಗೆ ಸರಳ ಪರಿಹಾರ ಮತ್ತು ಸ್ಪಷ್ಟ ವಿವರಣೆ ನೀಡುವ ಒಂದು ವೇದಿಕೆ. ಹೊಸ ತಂತ್ರಜ್ಞಾನವನ್ನು ನಾವು ಕುರುಡಾಗಿ ಹೊಗಳುವುದಿಲ್ಲ, ಅದರ ಹಿಂದಿರುವ ಅಪಾಯ, ಅವಕಾಶ ಮತ್ತು ಪರಿಣಾಮವನ್ನೂ ಪ್ರಶ್ನಿಸುತ್ತೇವೆ. ಓದುಗನಿಗೆ ಮಾಹಿತಿ ಕೊಡುವುದಷ್ಟೇ ಮುಖ್ಯವಲ್ಲ, ಅವನಿಗೆ ಅರ್ಥವಾಗುವಂತೆ ಮಾಹಿತಿ ಕೊಡುವುದು ಮುಖ್ಯ ಎಂಬುದು ನಮ್ಮ ನಂಬಿಕೆ.
ಈ ಒಂದು ವರ್ಷದ ಹಾದಿಯಲ್ಲಿ ಜಾಹೀರಾತು ಬೆಂಬಲ ಇದ್ದ ದಿನಗಳೂ ಇದ್ದವು, ಒಂದೇ ಒಂದು ರೂಪಾಯಿ ಆದಾಯವಿಲ್ಲದೆ ಕೇವಲ ನಮ್ಮದೇ ನಂಬಿಕೆಯ ಮೇಲೆ ಸಾಗಿದ ದಿನಗಳೂ ಇದ್ದವು. ಆದರೆ ನಮ್ಮ ಪ್ರಕಟಣೆ ಒಂದೇ ಒಂದು ದಿನವೂ ನಿಂತಿಲ್ಲ. ಏಕೆಂದರೆ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಲುಪಿಸುವುದು ಕೇವಲ ವ್ಯವಹಾರವಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿ ಎಂಬುದು ಮೊದಲ ದಿನದಿಂದಲೂ ನಮಗೆ ಸ್ಪಷ್ಟವಾಗಿತ್ತು. ಒಂದು ಮಾಧ್ಯಮ ನಿರಂತರವಾಗಿ ಬೆಳೆಯಬೇಕಾದರೆ ಓದುಗರ ನಂಬಿಕೆಯ ಜೊತೆಗೆ ಆರ್ಥಿಕ ಸ್ಥಿರತೆಯೂ ಅಗತ್ಯ. ಸಂಸ್ಥೆಗಳು ಮತ್ತು ಬ್ರ್ಯಾಂಡ್ಗಳು ನಮ್ಮೊಂದಿಗೆ ಕೈಜೋಡಿಸಿದರೆ ಕನ್ನಡದಲ್ಲಿ ಇನ್ನಷ್ಟು ಉತ್ತಮವಾದ ಪತ್ರಿಕೋದ್ಯಮ ಮತ್ತು ಉಪಯುಕ್ತವಾದ ಟೆಕ್ ಕಂಟೆಂಟ್ಗಳನ್ನು ನಿರಂತರವಾಗಿ ತಲುಪಿಸಲು ಇನ್ನಷ್ಟು ಉತ್ಸಾಹ ಮೂಡುವುದಂತೂ ಸುಳ್ಳಲ್ಲ.
ಈ ಸಾವಿರಕ್ಕೂ ಹೆಚ್ಚು ಲೇಖನಗಳ ಹಿಂದೆ ಒಬ್ಬನ ಶ್ರಮವಿಲ್ಲ. ಪ್ರತಿದಿನ ಓದಿ, ತಿದ್ದಿ, ಪ್ರತಿಕ್ರಿಯೆ ಕೊಟ್ಟು, ವಾಟ್ಸಾಪ್ನಲ್ಲಿ ಹಂಚಿಕೊಂಡು, ತಪ್ಪುಗಳನ್ನು ತೋರಿಸಿಕೊಟ್ಟ ಪ್ರತಿಯೊಬ್ಬ ಓದುಗರೂ, ನಮ್ಮ ಜೊತೆ ಬರೆದ ಲೇಖಕರು, ತಾಂತ್ರಿಕವಾಗಿ ನೆರವಾದ ಗೆಳೆಯರು, ಮೊದಲ ದಿನದಿಂದ ಬೆನ್ನುತಟ್ಟಿದ ಹಿರಿಯರು ಇದರಲ್ಲಿ ಇದ್ದೀರಿ. ನಿಮ್ಮ ಒಂದು ಶೇರ್, ಒಂದು ಕಮೆಂಟ್, ಒಂದು “ಇದು ಉಪಯುಕ್ತವಾಗಿತ್ತು” ಎಂಬ ಮಾತೇ ಟೆಕ್ವೈದ್ಯವನ್ನು ನಡೆಸುತ್ತಿರುವ ದೊಡ್ಡ ಇಂಧನ. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ಆದರೆ ಇದು ಸಂಭ್ರಮಿಸಿ ನಿಲ್ಲುವ ಹಂತವಲ್ಲ. ನಾವು ಆರಂಭಿಸಿದಾಗ ಇದ್ದ ವೇದಿಕೆಗಿಂತ ಇಂದು ಟೆಕ್ವೈದ್ಯ ದೊಡ್ಡದಾಗಿದೆ, ಹೆಚ್ಚು ವಿಸ್ತಾರವಾಗಿದೆ ಮತ್ತು ಹೆಚ್ಚು ಜನರನ್ನು ತಲುಪುತ್ತಿದೆ. ಯಾವುದೇ ದೊಡ್ಡ ಸಂಸ್ಥೆಯ, ಆರ್ಥಿಕ ಶಕ್ತಿಯ ಬೆಂಬಲ ಇಲ್ಲದೇ, ಸ್ವತಂತ್ರ ಮತ್ತು ಪ್ರಾಮಾಣಿಕ ಪತ್ರಿಕೋದ್ಯಮದ ಹಾದಿಯಲ್ಲಿರುವ ನಮ್ಮ ಈ ಬೆಳವಣಿಗೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಅದಕ್ಕಿಂತಲೂ ಹೆಚ್ಚು ಹೆಮ್ಮೆ ಇರುವುದು ಜಾಹೀರಾತು ಇರಲಿ, ಇಲ್ಲದಿರಲಿ, ಪರಿಸ್ಥಿತಿ ಹೇಗೇ ಇರಲಿ, ಓದುಗರಿಗೆ ಉಪಯುಕ್ತವಾದ ಟೆಕ್ ಕಂಟೆಂಟ್ ಪ್ರಕಟಿಸುವ ಕೆಲಸವನ್ನು ನಾವು ನಿಲ್ಲಿಸಿಲ್ಲ ಎಂಬುದರ ಬಗ್ಗೆ. ಸಾವಿರ ಲೇಖನಗಳು ನಮ್ಮ ಪಯಣದ ಒಂದು ಮೈಲಿಗಲ್ಲು ಮಾತ್ರ, ನಿಜವಾದ ಗುರಿ ಇನ್ನೂ ಮುಂದಿದೆ. ಮುಂದಿನ ದಿನಗಳಲ್ಲಿ ಟೆಕ್ವೈದ್ಯ ಕನ್ನಡದ ಟೆಕ್ ಪತ್ರಿಕೋದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಧ್ವನಿಗಳಲ್ಲಿ ಒಂದಾಗಿ, ಇನ್ನಷ್ಟು ಆಳವಾದ ವಿಶ್ಲೇಷಣೆ, ವಿಡಿಯೋ ವಿವರಣೆಗಳು ಮತ್ತು ಸೈಬರ್ ಜಾಗೃತಿಯಂತಹ ಕೆಲಸಗಳ ಮೂಲಕ ಇನ್ನಷ್ಟು ಜನರನ್ನು ತಲುಪಬೇಕು ಎಂಬುದು ನಮ್ಮ ಗುರಿ.
ಈ ಪಯಣದಲ್ಲಿ ನಮ್ಮ ಜೊತೆ ಮುಂದೆಯೂ ಇರಿ, ನಿರಂತರವಾಗಿ ಓದುತ್ತಿರಿ — www.techvaidyaglobal.com
- ನಾಗರಾಜ ವೈದ್ಯ, ಸಂಪಾದಕ, ಟೆಕ್ವೈದ್ಯ ಗ್ಲೋಬಲ್
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.