ಭಾರತಕ್ಕೆ ಕೋಡು ತರಿಸಿದ ಕ್ಯೂಆರ್ ಕೋಡ್ ಕ್ರಾಂತಿ: ಯುಪಿಐಗೆ ದಶಕದ ಹೊಳಪು!
ಒಂದೆಡೆ demonetization (ನೋಟು ಅಮಾನ್ಯೀಕರಣ) ನ ಬಿಸಿ ಭಾರತವನ್ನು ತಲ್ಲಣಗೊಳಿಸಿದ್ದರೆ, ಇನ್ನೊಂದೆಡೆ ಒಂದು ಕ್ರಾಂತಿ ಭಾರತವನ್ನು ಡಿಜಿಟಲ್ ನಕಾಶೆಯಲ್ಲಿ ವಿಶ್ವವನ್ನೇ ಬೆರಗುಗೊಳಿಸುವ ರೀತಿ ಬೆಳೆಸುವ ವೇದಿಕೆ ಸಿದ್ಧವಾಗುತ್ತಿತ್ತು.
ಯುಪಿಐ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್. ಭಾರತವನ್ನು ಕ್ಯಾಶ್ಲೆಸ್ ಆಗಿಸುವಲ್ಲಿ ಯುಪಿಐ ಎನ್ನುವ ಸರಳ, ಅಷ್ಟೇ ಅದ್ಭುತ ವ್ಯವಸ್ಥೆಯ ಪಾತ್ರ ದೊಡ್ಡದು.
ಬಿಲಿಯನ್-ಟ್ರಿಲಿಯನ್ ಡಾಲರ್ಗಳ ವ್ಯವಹಾರ ನಡೆಸುತ್ತಿರುವ ವೀಸಾ-ಮಾಸ್ಟರ್ ಕಾರ್ಡ್ನಂತಹ ಆನ್ಲೈನ್ ಪೇಮೆಂಟ್ ವ್ಯವಸ್ಥೆಗಳನ್ನೇ ಬುಡಮೇಲು ಮಾಡುವಂತೆ ಬೆಳೆದಿದೆ ಯುಪಿಐ.
ಡಿಜಿಟಲ್ ಪೇಮೆಂಟನ್ನು ಹೆಚ್ಚು ವ್ಯಾಪಕಗೊಳಿಸಬೇಕು ಎನ್ನುವ ಇರಾದೆಯನ್ನು ಸರಕಾರ ವ್ಯಕ್ತಪಡಿಸಿದಾಗ, ಯಾರಿಗೂ ಈ ಕ್ರಾಂತಿಯ ಅರಿವಿರಲಿಲ್ಲ. ರಸ್ತೆ ಬದಿ ವ್ಯಾಪಾರಿಯೊಬ್ಬರು, ತಮ್ಮ ಗಾಡಿಯಲ್ಲಿ ಪೇಮೆಂಟ್ ಮಷಿನ್ ಇಟ್ಟುಕೊಳ್ಳಬೇಕಾ ಎಂದು ನಗಾಡಿದವರೂ ಇದರ ಸತ್ಪ್ರಯೋಜನವನ್ನು ಕಂಡು ಮೂಗಿಗೆ ಬೆರಳಿಡುವ ಕಾಲ ಬಂದಾಗಿದೆ.
ಹಳ್ಳಿ ಮೂಲೆಯಲ್ಲಿ ಕುಳಿತಿರುವ ಅಜ್ಜಿಗೆ ಎಲ್ಲೋ ಇನ್ನೊಂದೂರಿನಲ್ಲಿರುವ ಮೊಮ್ಮಗ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದು ಇಷ್ಟು ಸುಲಭ ಎಂದು ಹೇಳಿಕೊಡುವ ಮೂಲಕ ಅವಳನ್ನು ಕೂಡ ಯುಪಿಐ ಲೋಕಕ್ಕೆ ಪರಿಚಯಿಸುತ್ತಿದ್ದಾನೆ.
ಇದು ಬರೀ ಪೇಮೆಂಟ್ ಕಥೆಯಲ್ಲೋ ಅಣ್ಣ…!
ಭಾರತ ಡಿಜಿಟಲ್ ಪೇಮೆಂಟ್ ಲೋಕದ ದೊಡ್ಡಣ್ಣನಾಗಿ ಬೆಳೆಯುತ್ತ, ತನ್ನ ಈ ಟೆಕ್ನಾಲಜಿಯನ್ನು ಹತ್ತಾರು ದೇಶಗಳಿಗೆ ಈಗಾಗಲೇ ನೀಡುವ ಮೂಲಕ ಒಂದು ಹೊಸ ಭಾಷ್ಯವನ್ನು ಬರೆಯುತ್ತಿರುವುದು, ಒಂದು ಸಣ್ಣ ಯೋಚನೆ ಹೇಗೆ ನಮ್ಮ ಲೋಕವನ್ನೇ ಬದಲಾಯಿಸಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ.
ಹಾಗೆ ನೋಡಿದರೆ ಇದು ಒಂದೇ ರಾತ್ರಿಯಲ್ಲಿ ಉಂಟಾದ ಕ್ರಾಂತಿಯೂ ಅಲ್ಲ, ಬೇರೆಲ್ಲೂ ಈ ರೀತಿಯ ಪ್ರಯತ್ನಗಳು ನಡೆದೇ ಇಲ್ಲ ಅಂತಲೂ ಅಲ್ಲ. ೨೦೦೭ರಷ್ಟು ಹಿಂದೆಯೇ, ಸ್ಮಾರ್ಟ್ಫೋನ್ಗಳ ಬಳಕೆಯೇ ಇಲ್ಲದ ಕಾಲದಲ್ಲಿ ಕೀನ್ಯಾ ದೇಶದಲ್ಲಿ ಎಮ್-ಪೇಸಾ ಎನ್ನುವ ವ್ಯವಸ್ಥೆಯ ಮೂಲಕ ಮೊಬೈಲ್ ಸಂಸ್ಥೆಯೊಂದು ಗ್ರಾಮ ಗ್ರಾಮದ ಪ್ರತಿಯೊಬ್ಬರನ್ನೂ ಕೇವಲ ಸಿಮ್-ಎಸ್ಎಂಸ್ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದು ಕೂರಿಸಿತು. ಈ ಹಿಂದೆ ಯಾವುದೇ ಬ್ಯಾಂಕ್ನಿಂದ ಸಾಧ್ಯವಾಗದ, ನಾಡಿನ ಮೂಲೆ ಮೂಲೆಗೂ ತಲುಪುವ ಸಾಧ್ಯತೆಯನ್ನು ತೋರಿಸಿಕೊಟ್ಟಿತು.
ಇದಲ್ಲದೇ ಬೇರೆಬೇರೆ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿರಬಹುದು. ಆದರೆ ಇಷ್ಟು ಸಿಂಪಲ್ ಆಗಿ ಬಳಸಬಹುದಾದ, ಹಾಗೂ ಬ್ಯಾಂಕ್ ಅಕೌಂಟ್ ಹೊಂದಿರುವ, ಸ್ಮಾರ್ಟ್ ಫೋನ್ ಬಳಸುವ ಯಾರೇ ಆಗಲಿ ಬಳಸಬಹುದಾದ (ಹಣ ಪಾವತಿ-ಸ್ವೀಕಾರ ಎರಡರಲ್ಲೂ) ವ್ಯವಸ್ಥೆಯನ್ನು ಕಂಡ ಲೋಕ ಬೆಕ್ಕಸಬೆರಗಾಗಿದೆ. ಇದೀಗ ಎಸ್ಎಂಸ್ ಅಥವಾ ಕಾಲ್ ಮೂಲಕವೂ ಯುಪಿಐ ಬಳಸಬಹುದಾದ ವ್ಯವಸ್ಥೆಯೂ ಬಂದಿರುವುದು ಇದರ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ದೇಶ ದೇಶಗಳಲ್ಲಿ ಭಾರತದ ಮುದ್ರೆ
ಮೊದಲಿಗೆ ಫ್ರಾನ್ಸ್, ನಂತರ ಸಿಂಗಪೂರ್, ಯುಏಇ, ಭೂತಾನ್, ನೇಪಾಳ, ಮಾರಿಶಸ್, ಥೈಲ್ಯಾಂಡ್, ಸೈಪ್ರಸ್, ಕತಾರ್, ಶ್ರೀಲಂಕಾ ಇಸ್ರೇಲ್ ದೇಶದಲ್ಲಿ ಅಳವಡಿಕೆಯಾಗಿದ್ದು, ಮುಂದೆ, ಅತಿ ಶೀಘ್ರದಲ್ಲಿ ಇಂಗ್ಲಂಡ್, ಇಂಡೋನೇಶಿಯಾದಲ್ಲೂ ಯುಪಿಐ ತನ್ನ ವ್ಯಾಪ್ತಿಯನ್ನು ಕಾಣಲಿದೆ.
ಇಷ್ಟಕ್ಕೇ ಮುಗಿದಿಲ್ಲ ಯುಪಿಐ ಕಮಾಲ್. ಪೆರು, ನಮೀಬಿಯಾ, ಇತ್ಯಾದಿ ದೇಶಗಳು ತಮ್ಮದೇ ಆದ ಯುಪಿಐ ರೀತಿಯ ತಂತ್ರಜ್ಞಾನವನ್ನು ಡೆವಲಪ್ ಮಾಡಿಕೊಳ್ಳಲು ಭಾರತ ನೆರವಾಗುತ್ತಿದೆ.
ಒಂದೆಡೆ (ಫ್ರಾನ್ಸ್, ಯುಏಇ ಇತ್ಯಾದಿ) ನಮ್ಮ ಯುಪಿಐ ಆಪ್ ಮೂಲಕ, ಇನ್ನೊಂದು ದೇಶದಲ್ಲಿ ಅಲ್ಲಿನ ಕರೆನ್ಸಿಯಲ್ಲಿ ಅವರಿಗೆ ಹಣ ವರ್ಗಾವಣೆ ಆಗುವ ವ್ಯವಸ್ಥೆ ಇದ್ದರೆ, ಇನ್ನು ಕೆಲವು ದೇಶಗಳಲ್ಲಿ (ಭೂತಾನ್) ನಮ್ಮ ದೇಶದಲ್ಲಿರುವಂತೆಯೇ ಕ್ಯೂಆರ್ ಕೋಡ್ಗಳಿದ್ದು, ಎಲ್ಲವೂ ಒಂದೇ ಪ್ಲಾಟ್ಫಾರ್ಮ್ನಲ್ಲಿ ಬಂದು, ನೇರವಾಗಿ ಹಣ ವರ್ಗಾವಣೆ ಆಗುವುದು, ಮೂರನೇದು, ಆಯಾ ದೇಶದ್ದೇ ಆದ ಯುಪಿಐ ರೀತಿಯ ಹಣ ವರ್ಗಾವಣೆ ವ್ಯವಸ್ಥೆಯನ್ನು ಕಟ್ಟಿ ಕೊಡುವುದು.
ನಂಬರ್ಗಳ ಲೋಕದಲ್ಲಿ
೨೦೧೬ದಲ್ಲಿ ೫೦೦೦೦ದಷ್ಟಿದ್ದ ದೈನಂದಿನ ವ್ಯವಹಾರ ಡಿಸೆಂಬರ್ ೨೦೨೫ರ ವೇಳೆಗೆ ೬೯೮ ದಶಲಕ್ಷಕ್ಕೆ ತಲುಪಿದೆ.
೨೦೨೫ರ ಡಿಸೆಂಬರ್ ಒಂದೇ ತಿಂಗಳಲ್ಲಿ ೨೧.೬೩ ಬಿಲಿಯನ್ ವ್ಯವಹಾರಗಳು ನಡೆದಿದ್ದೂ ದಾಖಲೆ.
ಭಾರತದ ಯುಪಿಐ ಪ್ಲಾಟ್ಫಾರ್ಮ್ ಒಂದರಲ್ಲೇ, ವಿಶ್ವದ ಅರ್ಧದಷ್ಟು ಡಿಜಿಟಲ್ ವ್ಯವಹಾರಗಳು ನಡೆಯುತ್ತಿದೆ.
ದೇಶದ ಒಟ್ಟಾರೆ ಡಿಜಿಟಲ್ ವ್ಯವಹಾರದ ಪೈಕಿ ಯುಪಿಐ ಪಾಲು, ೮೪%, ಇದು ಖಂಡಿತಾ ವಿಸಾ-ಮಾಸ್ಟರ್ ಕಾರ್ಡ್ನಂತಹ ಡಿಜಿಟಲ್ ಪಾವತಿಯ ದೈತ್ಯರನ್ನು ಥರಗುಟ್ಟಿಸಿದೆ.
೨೦೨೫ರಲ್ಲಿ ೩.೪ ಟ್ರಿಲಿಯನ್ ಡಾಲರ್ ವ್ಯವಹಾರ ನಡೆಸುವ ಮೂಲಕ ಜರ್ಮನಿಯ ಜಿಡಿಪಿಯನ್ನು ಮೀರಿಸಿದೆ. ನ್ಯೂಜಿಲ್ಯಾಂಡ್ ಜಿಡಿಪಿಯನ್ನು ಅಕ್ಟೋಬರ್ ೨೦೨೪, ಗ್ರೀಸ್ ಜಿಡಿಪಿಯನ್ನು ಮೇ ೨೦೨೪, ಫಿನ್ಲ್ಯಾಂಡ್ ಮತ್ತು ಪೋರ್ಚುಗಲ್ ಜಿಡಿಪಿಯನ್ನು ಮೇ ೨೦೨೫ರ ಒಂದೇ ತಿಂಗಳಿನಲ್ಲಿ ಮೀರಿಸಿದೆ.
ಹತ್ತು ವರ್ಷಗಳ ಈ ಪ್ರಯಾಣ ಕೇವಲ ಆರಂಭ ಅಷ್ಟೇ. ಬೇರೆ ಬೇರೆ ರೂಪದಲ್ಲಿ ಈ ಪೇಮೆಂಟ್ ವ್ಯವಸ್ಥೆ ಉಳಿದ ಡಿಜಿಟಲ್ ವ್ಯವಹಾರ ವ್ಯವಸ್ಥೆಗಳಿಗೆ ಟಕ್ಕರ್ ಕೊಡುತ್ತಿದೆ. ದಿನೇ ದಿನೇ ಅನೂಹ್ಯ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಜೇಬಲ್ಲಿ ಯಾವುದೇ ವಾಲೆಟ್ ಇಲ್ಲದೇ, ಕೈಯಲ್ಲಿ ಕಾಸು-ಕಾರ್ಡು ಇಲ್ಲದೇ, ಕೇವಲ ಮೊಬೈಲ್ ಫೋನ್ ಇಟ್ಟುಕೊಂಡು ಊರೂರು ಅಲೆಯುವ ಧೈರ್ಯ ನೀಡಿದೆ.
ಕೆಲವೊಂದೆಡೆ ವಾಮ ಮಾರ್ಗದಲ್ಲಿ ಸಾಗುವವರಿಗೆ ಅವ್ಯವಹಾರದ ದಾರಿಯನ್ನೂ ಮಾಡಿಕೊಟ್ಟಿದೆ. ಡಿಜಿಟಲ್ ವ್ಯವಸ್ಥೆಯನ್ನು ಅರಿಯದ ಮುಗ್ಧರನ್ನು ಅವರ ಹಣವನ್ನು ಬಲಿಯಾಗಿಸಿದೆ. ಆದರೆ, ಬದಲಾದ ಕಾಲಕ್ಕೆ ತಕ್ಕ ಹಾಗೆ ನಾವೂ ಬದಲಾಗುತ್ತಾ ಸಾಗುವುದು ಮಾತ್ರ ಉಳಿದಿರುವ ದಾರಿ ಎನ್ನುವುದನ್ನು ಅರಿತು ಮುಂದೆ ಸಾಗುವುದೇ ನಮಗಿರುವ ಆಯ್ಕೆ ಎನ್ನುವುದು ಸತ್ಯ ಸತ್ಯ.
ಇದೆಲ್ಲದರ ಜೊತೆಗೆ, ಸಧ್ಯಕ್ಕೆ ಯುಪಿಐ ವ್ಯವಹಾರಗಳು ನಮಗೆಲ್ಲಾ ಉಚಿತವಾಗಿ ಲಭ್ಯವಿದೆ, ಕಾರಣ ಭಾರತ ಸರಕಾರ ಆದಕ್ಕಾಗಿ ವಿಶೇಷ ಸಬ್ಸಿಡಿಯನ್ನು ಮೀಸಲಿಟ್ಟಿದೆ. ಒಂದು ದಿನ, ಒಂದು ಕ್ಷಣದ ನಿರ್ಧಾರದಲ್ಲಿ ಇದು ಬದಲಾಗಲೂಬಹುದು. ಯುಪಿಐಯ ಬೆನ್ನೆಲುಬಾಗಿರುವ ಎನ್ಪಿಸಿಐ (National Payments Corporation of India) ಬೇರೆ ಬೇರೆ ರೂಪಗಳಲ್ಲಿ ಗಳಿಕೆ ಮಾಡುತ್ತಿರುವುದರಿಂದ ಹಾಗೂ ಸಬ್ಸಿಡಿಯ ಮೂಲಕ ಇಷ್ಟೊಂದು ವ್ಯವಹಾರಗಳನ್ನು ಮಾಡುವುದಕ್ಕೆ ಯಾವುದೇ ಫೀಸ್ ಇಲ್ಲದೇ ಅವಕಾಶ ಮಾಡಿಕೊಡುವುದು ಸಾಧ್ಯವಾಗಿದೆ ಅನ್ನುವುದು ಮಾತ್ರ ಸಧ್ಯದ ಸತ್ಯ.
ಅದೇನೇ ಇರಲಿ. ಇಷ್ಟು ವೇಗದಲ್ಲಿ ನಂಬರ್ಗಳೇ ಅಂಬರ ತಲುಪಿದ್ರೆ ಅದು ಯುಪಿಐಯಲ್ಲಿ ಮಾತ್ರ ಅಂತ ನಾವು ಎದೆತಟ್ಟಿ ಹೇಳಬಹುದು. ಹಾಗಾಗಿ ಸಾಧನೆಯ ಮೈಲಿಗಲ್ಲಿನ ಜೊತೆ, ಸಾರ್ಥಕತೆಯ ನಗುವನ್ನು ಹೊತ್ತು, ಭಾರತದ ಡಿಜಿಟಲ್ ಕ್ರಾಂತಿ ವಿಶ್ವಕ್ಕೆ ಬೆಳಕು ತೋರುತ್ತಿದೆ ಎನ್ನುವುದು ನಿಜ.
ಟೆಕ್-ವಚನ
ಜೇಬಿನಲಿ ಹಣ ಬೇಕಿಲ್ಲ, ನೋಟಿನ ಹಂಗಿಲ್ಲ
ಮೊಬೈಲ ಸ್ಕ್ಯಾನಲ್ಲೇ ಸಲ್ಲುವುದು | ಜಗದೊಳು
ಯೂಪಿಐ (UPI) ಹೊನ್ನಿನ ಹೊಳೆ ತಂತ್ರಜ್ಞ ||
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.