ಫ್ರೈಬರ್ಗ್ ಮಿನ್ಸ್ಟರ್: ಕೆಲಸಕ್ಕೆ ಬೆಲೆ ಕೊಡದವರಿಗೆ ಕಲೆಯಲ್ಲೇ ಉತ್ತರ ಕೊಟ್ಟ ಶಿಲ್ಪಿ! - Tech Vaidya

ಫ್ರೈಬರ್ಗ್ ಮಿನ್ಸ್ಟರ್: ಕೆಲಸಕ್ಕೆ ಬೆಲೆ ಕೊಡದವರಿಗೆ ಕಲೆಯಲ್ಲೇ ಉತ್ತರ ಕೊಟ್ಟ ಶಿಲ್ಪಿ!

| ನಾಗರಾಜ ವೈದ್ಯ

ಜರ್ಮನಿಯ ಫ್ರೈಬರ್ಗ್‌ನಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊತ್ತಿರುವ ಒಂದು ಕಟ್ಟಡವಿದೆ. ಫ್ರೈಬರ್ಗ್ ಮಿನ್ಸ್ಟರ್. ಅದನ್ನು ನೋಡಲು ಹೋಗುವವರಿಗೆ ಅದರ ಎತ್ತರ, ವಾಸ್ತುಶಿಲ್ಪ, ಕಲ್ಲಿನ ಕೆತ್ತನೆಗಳು, ಶತಮಾನಗಳ ಇತಿಹಾಸ ಎಲ್ಲವೂ ಕಣ್ಣಿಗೆ ಬೀಳುತ್ತದೆ. ಆದರೆ ಆ ಕಟ್ಟಡದ ಮೇಲೆ ಕುಳಿತಿರುವ ಸುಮಾರು 91 ಗರ್ಗಾಯಿಲ್‌ಗಳಲ್ಲಿ ಒಂದು ಮಾತ್ರ ನೋಡಿದವರ ಗಮನವನ್ನು ಬೇರೆ ರೀತಿಯಲ್ಲಿ ಸೆಳೆಯುತ್ತದೆ. ಗರ್ಗಾಯಿಲ್‌ಗಳು ಅಂದರೆ ಅಲಂಕಾರಕ್ಕಾಗಿ ಮಾತ್ರ ಇಟ್ಟಿರುವ ಮೂರ್ತಿಗಳಲ್ಲ. ಮಳೆ ಬಂದಾಗ ಕಟ್ಟಡದ ಮೇಲ್ಛಾವಣಿಯ ನೀರು ಗೋಡೆಗೆ ಅಂಟಿಕೊಂಡು ಕಟ್ಟಡವನ್ನು ಹಾಳು ಮಾಡದಂತೆ, ಆ ನೀರನ್ನು ಹೊರಕ್ಕೆ ಚಿಮ್ಮಿಸುವ ಕಲ್ಲಿನ ನೀರುಹರಿವಿನ ವ್ಯವಸ್ಥೆಯ ಭಾಗವೇ ಈ ಮೂರ್ತಿಗಳು. ಆದರೆ ಈ 91ರಲ್ಲಿ ಒಬ್ಬ ಮಾತ್ರ ತನ್ನ ಕೆಲಸವನ್ನು ಮಾಡುವುದಕ್ಕಿಂತ ತನ್ನ ಅಭಿಪ್ರಾಯವನ್ನೇ ಜಗತ್ತಿಗೆ ಹೇಳುತ್ತಿರುವಂತೆ ಕಾಣುತ್ತಾನೆ.

ಒಬ್ಬ ಮನುಷ್ಯ ತನ್ನ ಪ್ಯಾಂಟ್ ಕೆಳಗೆಳೆದು, ತನ್ನ ಬೆತ್ತಲೆ ಹಿಂಭಾಗವನ್ನೇ ಹೊರಗಡೆ, ನಗರದ ಕಡೆಗೆ ತಿರುಗಿಸಿ ಕೂತಿದ್ದಾನೆ. ಜರ್ಮನ್‌ನಲ್ಲಿ ಇದಕ್ಕೆ ‘Hinternentblößer’ ಎಂಬ ಹೆಸರು. ಸರಳವಾಗಿ ಹೇಳುವುದಾದರೆ, ‘ಹಿಂಭಾಗ ತೋರಿಸುವವನು’. ಈಗ ಪ್ರಶ್ನೆ ಬರುತ್ತದೆ: ಎಂಟು ಶತಮಾನಗಳ ಹಿಂದಿನ ಕಟ್ಟಡದ ಮೇಲೆ ಇಂಥ ಮೂರ್ತಿ ಯಾಕೆ? ಯಾರಿಗೆ ಈ ಗೌರವ? ಯಾಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ? ಇದಕ್ಕೆ ಒಂದು ಜನಪ್ರಿಯ ದಂತಕಥೆಯಿದೆ. ಕಟ್ಟಡದ ಕೆಲಸ ಮಾಡಿದ ಶಿಲ್ಪಿಗೆ ತನ್ನ ಕೆಲಸಕ್ಕೆ ಸರಿಯಾದ ಸಂಭಾವನೆ ಸಿಗಲಿಲ್ಲವಂತೆ. ಸಂಬಳ ಕಡಿಮೆ ಮಾಡಿದ್ದರೋ, ತಡ ಮಾಡಿದ್ದರೋ, ಕೆಲಸ ಮುಗಿದ ಮೇಲೆ ಮಾತು ಬದಲಾಯಿಸಿದ್ದರೋ ಎಂಬುದಕ್ಕೆ ಖಚಿತ ದಾಖಲೆ ಇಲ್ಲ. ಆದರೆ ಶಿಲ್ಪಿಗೆ ಸಿಟ್ಟು ಬಂದಿತಂತೆ. ಆ ಕಾಲದಲ್ಲಿ ಇವತ್ತಿನಂತೆ ಇಮೇಲ್ ಇರಲಿಲ್ಲ, ಕಾನೂನು ನೋಟಿಸ್ ಇರಲಿಲ್ಲ, ಗ್ರಾಹಕರಿಗೆ ‘ನಿಮ್ಮ ಪಾವತಿ ಬಾಕಿಯಿದೆ’ ಎಂದು ಐದು ಬಾರಿ ರಿಮೈಂಡರ್ ಕಳಿಸುವ ವ್ಯವಸ್ಥೆಯೂ ಇರಲಿಲ್ಲ. ಹಾಗಾಗಿ ಆ ಶಿಲ್ಪಿ ತನ್ನ ಪ್ರತಿಭಟನೆಯನ್ನು ಒಂದು ವಿಶಿಷ್ಟ ರೀತಿಯಲ್ಲಿ ದಾಖಲಿಸಿದನೆಂಬುದು ಕಥೆ. ‘ನನ್ನ ಕೆಲಸಕ್ಕೆ ಬೆಲೆ ಕೊಡಲಿಲ್ಲವೇ? ಹಾಗಾದರೆ ನನ್ನ ಉತ್ತರ ಇಲ್ಲಿದೆ ನೋಡಿ’ ಎಂಬಂತೆ, ತನ್ನ ಹಿಂಭಾಗವನ್ನೇ ಕಟ್ಟಡದ ಹೊರಗೆ ತೋರಿಸುವ ಮೂರ್ತಿಯನ್ನು ಕೆತ್ತಿಬಿಟ್ಟನಂತೆ.

ಈ ಕಥೆ ನಿಜವೇ? ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಫ್ರೈಬರ್ಗ್‌ನ ಅಧಿಕೃತ ಮಾಹಿತಿಯಲ್ಲೂ ಈ ಸಂಬಳದ ಕಥೆಗೆ ದೃಢವಾದ ಐತಿಹಾಸಿಕ ಸಾಕ್ಷ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈಗ ಕಾಣುತ್ತಿರುವ ಶಿಲ್ಪವೂ ಮೂಲ ಶಿಲ್ಪವಲ್ಲ; ನಂತರದ ಕಾಲದಲ್ಲಿ ಅದರ ಪ್ರತಿಕೃತಿ ಮಾಡಲಾಗಿದೆ ಎಂಬ ದಾಖಲೆಗಳಿವೆ. ಅಂದರೆ, ‘ಸಂಬಳ ಕೊಡಲಿಲ್ಲ, ಅದಕ್ಕೆ ಶಿಲ್ಪಿ ಹೀಗೆ ಮಾಡಿದ’ ಎನ್ನುವುದು ಇತಿಹಾಸದ ಸತ್ಯ ಎಂದು ಹೇಳಲು ಆಗುವುದಿಲ್ಲ. ಆದರೆ ಕೆಲವೊಮ್ಮೆ ಇತಿಹಾಸದ ಸತ್ಯಕ್ಕಿಂತಲೂ ಒಂದು ದಂತಕಥೆಯೊಳಗೆ ಅಡಗಿರುವ ಸಾಮಾಜಿಕ ಸತ್ಯ ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಈ ಕಥೆಯಲ್ಲಿರುವ ಅತ್ಯಂತ ವಿಚಿತ್ರ ಸಂಗತಿ ಏನೆಂದರೆ, ಸುಮಾರು ಎಂಟು ನೂರು ವರ್ಷಗಳ ನಂತರವೂ ಅದು ನಮಗೆ ಅರ್ಥವಾಗುತ್ತದೆ. ಯಾಕೆಂದರೆ ಆಗಿನ ಕೆಲಸ ಮಾಡಿಸುವವರ ಮನಸ್ಥಿತಿಯೂ, ಇಂದಿನ ಕೆಲವು ಕೆಲಸ ಮಾಡಿಸುವವರ ಮನಸ್ಥಿತಿಯೂ ಅಷ್ಟೇನೂ ಬದಲಾಗಿಲ್ಲ.

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ

ಆಗ ಶಿಲ್ಪಿ ಇದ್ದ. ಈಗ ಡಿಸೈನರ್ ಇದ್ದಾನೆ. ಆಗ ಕಲ್ಲು ಕೆತ್ತುವವನಿದ್ದ. ಈಗ ಗ್ರಾಫಿಕ್ ಡಿಸೈನರ್, ಬರಹಗಾರ, ವೀಡಿಯೋ ಎಡಿಟರ್, ಫೋಟೋಗ್ರಾಫರ್, ವೆಬ್ ಡೆವಲಪರ್, ಕೋಡರ್, ಅನಿಮೇಟರ್, ಕನ್ಸಲ್ಟೆಂಟ್ ಹೀಗೆ ಸಾವಿರಾರು ರೀತಿಯಲ್ಲಿ ತಮ್ಮ ಕೌಶಲ್ಯವನ್ನು ಮಾರಿಕೊಂಡು ಬದುಕುತ್ತಿರುವ ಜನರಿದ್ದಾರೆ. ಕಾಲ ಬದಲಾಗಿದೆ, ಉಪಕರಣ ಬದಲಾಗಿದೆ, ಕೆಲಸದ ಸ್ವರೂಪ ಬದಲಾಗಿದೆ. ಆದರೆ ‘ಇದು ಅಷ್ಟು ದೊಡ್ಡ ಕೆಲಸವೇನಲ್ಲ’ ಎನ್ನುವ ಅದ್ಭುತವಾದ ವಾಕ್ಯ ಮಾತ್ರ ಇನ್ನೂ ಬದುಕಿದೆ.

‘ಫೋಟೋಶಾಪ್‌ನಲ್ಲಿ ಎರಡು ಕ್ಲಿಕ್ ಅಷ್ಟೇ ತಾನೆ? ಇದಕ್ಕೆ ಇಷ್ಟೊಂದು ಚಾರ್ಜ್ ಯಾಕೆ?’ ಎನ್ನುವವರು ಸಿಗುತ್ತಾರೆ. ಅವರಿಗೆ ಆ ಎರಡು ಕ್ಲಿಕ್‌ಗಳ ಹಿಂದೆ ಇರುವ ಹತ್ತು ವರ್ಷಗಳ ಅಭ್ಯಾಸ ಕಾಣಿಸುವುದಿಲ್ಲ. ಟೈಪಿಂಗ್ ಮಾಡುವುದು ಎಲ್ಲರಿಗೂ ಬರುತ್ತದೆ; ಆದರೆ ಒಂದು ವಿಚಾರವನ್ನು ಓದಿಸಿಕೊಂಡು ಹೋಗುವಂತೆ ಬರೆಯುವುದು ಬೇರೆ ಕೌಶಲ್ಯ. ಕ್ಯಾಮೆರಾ ಹಿಡಿಯುವುದು ಎಲ್ಲರಿಗೂ ಬರುತ್ತದೆ; ಆದರೆ ಒಂದು ಫೋಟೋದಲ್ಲಿ ಕಥೆ ಹಿಡಿಯುವುದು ಬೇರೆ ಕೌಶಲ್ಯ. ಸಾಫ್ಟ್‌ವೇರ್ ತೆರೆಯುವುದು ಎಲ್ಲರಿಗೂ ಬರುತ್ತದೆ; ಆದರೆ ಅದರಲ್ಲಿ ಕೆಲಸವನ್ನು ವೇಗವಾಗಿ, ನಿಖರವಾಗಿ ಮತ್ತು ನಿರೀಕ್ಷೆಗಿಂತ ಚೆನ್ನಾಗಿ ಮುಗಿಸುವುದು ಬೇರೆ ಕೌಶಲ್ಯ. ಹೊರಗಿನಿಂದ ನೋಡಿದವರಿಗೆ ಅದು ‘ಎರಡು ಕ್ಲಿಕ್’. ಕೆಲಸ ಮಾಡುವವನಿಗೆ ಮಾತ್ರ ಆ ಎರಡು ಕ್ಲಿಕ್‌ಗಳ ಹಿಂದೆ ಎಷ್ಟು ಸಾವಿರ ಕ್ಲಿಕ್‌ಗಳು, ಎಷ್ಟು ತಪ್ಪುಗಳು, ಎಷ್ಟು ಪ್ರಯೋಗಗಳು, ಎಷ್ಟು ರಾತ್ರಿಗಳು ಹೋಗಿವೆ ಎಂಬುದು ಗೊತ್ತು.

ಇನ್ನೊಂದು ವರ್ಗದವರು ಇರುತ್ತಾರೆ. ‘ನಮ್ಮ ಪರಿಚಯ ಇದೆ ಅಲ್ವಾ ಸರ್, ಸ್ವಲ್ಪ ಕಡಿಮೆ ಮಾಡಿ’ ಎನ್ನುವವರು. ಅದರ ನಂತರ ಇನ್ನೊಂದು ಅಮೋಘವಾದ ವಾಕ್ಯ ಬರುತ್ತದೆ: ‘ನಮ್ಮ ಹುಡುಗನೂ ಕ್ಯಾನ್ವಾದಲ್ಲಿ ಇದೇ ತರ ಮಾಡ್ತಾನೆ.’ ಹೌದು, ಮಾಡಲಿ. ಕ್ಯಾನ್ವಾದಲ್ಲಿ ಮಾಡಲಿ, ಮೊಬೈಲ್‌ನಲ್ಲಿ ಮಾಡಲಿ, ಎಐನಲ್ಲಿ ಮಾಡಲಿ. ಸಮಸ್ಯೆ ಅದಲ್ಲ. ಸಮಸ್ಯೆ ಏನೆಂದರೆ, ಒಂದು ಕೆಲಸವನ್ನು ಯಾರಾದರೂ ಮಾಡಬಹುದು ಎಂಬ ಕಾರಣಕ್ಕೆ ಆ ಕೆಲಸ ಮಾಡುವ ಪ್ರತಿಯೊಬ್ಬರ ಕೌಶಲ್ಯದ ಬೆಲೆ ಒಂದೇ ಆಗುವುದಿಲ್ಲ. ಮನೆಯಲ್ಲಿರುವ ಯಾರಿಗಾದರೂ ಸ್ಕ್ರೂಡ್ರೈವರ್ ಕೊಟ್ಟು ‘ಫ್ಯಾನ್ ತೆಗೆದು ಹಾಕು’ ಎಂದರೆ ಬಹುಶಃ ತೆಗೆದುಹಾಕಬಹುದು. ಅದೇ ವ್ಯಕ್ತಿಗೆ ಒಂದು ದೊಡ್ಡ ಯಂತ್ರದ ದೋಷ ಹುಡುಕಿ ಸರಿಪಡಿಸಲು ಕೊಟ್ಟರೆ? ಆಗ ‘ಸ್ಕ್ರೂಡ್ರೈವರ್ ಹಿಡಿಯುವುದು ಗೊತ್ತಿದೆ’ ಎನ್ನುವುದಕ್ಕೂ ‘ಕೆಲಸ ಗೊತ್ತಿದೆ’ ಎನ್ನುವುದಕ್ಕೂ ಇರುವ ವ್ಯತ್ಯಾಸ ಅರ್ಥವಾಗುತ್ತದೆ.

ಮತ್ತೊಂದು ವಿಶೇಷ ಪ್ರಭೇದವಿದೆ. ಅವರಿಗೆ ಹಣ ಕೊಡಲು ಬಜೆಟ್ ಇರುವುದಿಲ್ಲ, ಆದರೆ ಕನಸು ಮಾತ್ರ ದೊಡ್ಡದಿರುತ್ತದೆ. ‘ಈಗ ಬಜೆಟ್ ಇಲ್ಲ ಸರ್. ನೀವು ಫ್ರೀಯಾಗಿ ಮಾಡಿಕೊಡಿ. ಮುಂದೆ ದೊಡ್ಡ ಪ್ರಾಜೆಕ್ಟ್ ಬರುತ್ತೆ. ನಿಮ್ಮ ಕೆಲಸಕ್ಕೆ ಒಳ್ಳೆಯ ಎಕ್ಸ್‌ಪೋಸರ್ ಸಿಗುತ್ತೆ.’ ಈ ‘ಎಕ್ಸ್‌ಪೋಸರ್’ ಎನ್ನುವ ಕರೆನ್ಸಿ ಬಹಳ ವಿಚಿತ್ರ. ಅದನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಲಾಗುವುದಿಲ್ಲ. ವಿದ್ಯುತ್ ಬಿಲ್ ಕಟ್ಟಲಾಗುವುದಿಲ್ಲ. ಬಾಡಿಗೆ ಕೊಡಲಾಗುವುದಿಲ್ಲ. ಕಿರಾಣಿ ಅಂಗಡಿಯವನಿಗೆ ತೋರಿಸಿದರೆ ಆತ ಕೂಡ ಬಹುಶಃ ‘ಸಾರ್, ಎಕ್ಸ್‌ಪೋಸರ್ ಕೊಡಿ, ಅಕ್ಕಿ ತೆಗೆದುಕೊಂಡು ಹೋಗಿ’ ಎನ್ನುವುದಿಲ್ಲ. ಆದರೆ ಸೃಜನಶೀಲ ಕೆಲಸ ಮಾಡುವವರ ಬಳಿ ಮಾತ್ರ ಈ ಕರೆನ್ಸಿ ಯಾವಾಗಲೂ ಮಾನ್ಯವಾಗಿರಬೇಕು ಎಂಬ ನಿರೀಕ್ಷೆ. ‘ನಿಮ್ಮ ಹೆಸರು ಬರುತ್ತೆ’ ಎನ್ನುತ್ತಾರೆ. ಹೆಸರು ಬಂದರೂ ಅದರ ಜೊತೆಗೆ ಮನೆಯ ಖರ್ಚು ಬರುತ್ತದೆಯೇ ಎಂಬ ಪ್ರಶ್ನೆಯನ್ನು ಮಾತ್ರ ಕೇಳುವುದಿಲ್ಲ.

ಸಂಬಂಧಿತ ಲೇಖನಗಳು

Related News ಎಐ ಆನೆ ಹೊಟ್ಟೆಗೆ ಐದು ಕೋಟಿಯ ಮಜ್ಜಿಗೆ! ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರದ ಮಕ್ಕಳಾಟ!
Related News ಗುರುವಿನಾಚೆಗೆ 4.6 ಶತಕೋಟಿ ವರ್ಷ ಹಳೆಯ ಗ್ರಹಗಳ ಕಾರ್ಖಾನೆ ಪತ್ತೆ! ಭೂಮಿಗೆ ಬೀಳುವ ಉಲ್ಕೆಗಳ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
Related News ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಹುಡುಕುವ ಕಣ್ಣಿಗೆ ಬೇಕಾಗಿದೆ ಪೊರೆ ಚಿಕಿತ್ಸೆ!
Related News ಭೇಡ್ತಿ - ಅಘನಾಶಿನಿ — ಅಣೆಕಟ್ಟು ಇಲ್ಲದ ನದಿ ಏನನ್ನು ಉಳಿಸಿಕೊಂಡಿದೆ?
Related News ನದಿ ತಿರುವಿನ ಉಮೇದಿಯಲ್ಲಿದ್ದವರೇ ಹೇಳಿ; ಸಮುದ್ರಕ್ಕೆ ಹೋಗುವ ನೀರು ಯಾರದ್ದು?

ಇನ್ನು ಈಗ ಹೊಸ ತಲೆಮಾರಿನ ಒಂದು ಆವೃತ್ತಿ ಬಂದಿದೆ. ‘ಇದನ್ನ ಈಗ ಎಐ ಎರಡು ಸೆಕೆಂಡಲ್ಲಿ ಮಾಡಿಕೊಡುತ್ತೆ ಅಲ್ವಾ? ನೀವು ಯಾಕೆ ಇಷ್ಟು ಸಮಯ ತೆಗೆದುಕೊಳ್ಳುತ್ತೀರಾ?’ ಎನ್ನುವುದು. ಎಐ ಬಂದಿರುವುದು ಸತ್ಯ. ಅದು ಕೆಲಸದ ವಿಧಾನವನ್ನು ಬದಲಾಯಿಸುತ್ತಿದೆ ಎಂಬುದೂ ಸತ್ಯ. ಆದರೆ ಉಪಕರಣ ವೇಗವಾಗಿದೆ ಎಂದ ಮಾತ್ರಕ್ಕೆ ಕೌಶಲ್ಯದ ಅಗತ್ಯ ಮುಗಿದುಹೋಗುವುದಿಲ್ಲ. ಕ್ಯಾಮೆರಾ ಬಂದಾಗ ಚಿತ್ರಕಾರರು ಮುಗಿದುಹೋಗಲಿಲ್ಲ. ಕಂಪ್ಯೂಟರ್ ಬಂದಾಗ ಟೈಪಿಸ್ಟ್‌ಗಳ ಕೆಲಸ ಬದಲಾಯಿತು, ಆದರೆ ಬರವಣಿಗೆ ಮುಗಿಯಲಿಲ್ಲ. ಎಐ ಬಂದರೂ ಯೋಚನೆ, ಆಯ್ಕೆ, ಸಂಪಾದನೆ, ಸಂದರ್ಭ, ರುಚಿ ಮತ್ತು ಜವಾಬ್ದಾರಿ ಎನ್ನುವ ಸಂಗತಿಗಳು ಎಲ್ಲಿಗೂ ಹೋಗುವುದಿಲ್ಲ. ಇಲ್ಲದಿದ್ದರೆ ಫ್ರೈಬರ್ಗ್ ಮಿನ್ಸ್ಟರ್‌ನಂತಹ ಕಟ್ಟಡವನ್ನೂ ಜೆಸಿಬಿ ಬಳಸಿ ಕೆಲವೇ ದಿನಗಳಲ್ಲಿ ಕಟ್ಟಬಹುದು. ಆದರೆ ಅದನ್ನು 800 ವರ್ಷಗಳ ನಂತರವೂ ಜನರು ನೋಡಲು ಬರುವಂತೆ ಮಾಡುವುದು ಕಲ್ಲು ಮಾತ್ರವಲ್ಲ; ಅದರ ಹಿಂದೆ ಇರುವ ಕೌಶಲ್ಯ ಮತ್ತು ದೃಷ್ಟಿ.

ಇನ್ನು ಒಂದು ಪ್ರತ್ಯೇಕ ಪುರಾಣವೇ ಇದೆ — ರಿವಿಷನ್ ಪುರಾಣ. ‘ಚೆನ್ನಾಗಿದೆ ಸರ್. ಆದರೆ ಸ್ವಲ್ಪ ಬೇರೆ ತರ ಮಾಡಿ.’ ನಂತರ, ‘ಇನ್ನೊಂದು ಆಪ್ಷನ್ ಕೊಡಿ.’ ಅದರ ನಂತರ, ‘ಇದು ಸ್ವಲ್ಪ ಪಾಪ್ ಆಗಬೇಕು.’ ಮತ್ತೊಮ್ಮೆ, ‘ನಮ್ಮ ಅತ್ತೆಗೆ ತೋರಿಸಬೇಕು.’ ಅತ್ತೆಯ ನಂತರ ಮಾವ, ಮಾವನ ನಂತರ ಮಗ, ಮಗನ ನಂತರ ಸ್ನೇಹಿತ, ಸ್ನೇಹಿತನ ನಂತರ ‘ನಮ್ಮ ಬಾಸ್‌ಗೆ ಒಮ್ಮೆ ತೋರಿಸೋಣ’. ಕೊನೆಗೆ ಡಿಸೈನರ್ ಬಳಿ Version 27_final_FINAL_last_latest_ok.psd ಎಂಬ ಫೈಲ್ ಇರುತ್ತದೆ. ಯಾವುದು ಅಂತಿಮವೋ ಆ ಫೈಲ್‌ಗೇ ಗೊತ್ತಿರುವುದಿಲ್ಲ. ಮೂರು ತಿಂಗಳ ನಂತರ ಮಾತ್ರ ಮತ್ತೊಂದು ಸಂದೇಶ: ‘ಸರ್, ಆ ಇನ್ವಾಯ್ಸ್ ಸ್ವಲ್ಪ ನೋಡ್ತೀರಾ?’ ಆಗ ಪಾವತಿಯ ವಿಚಾರ ಮಾತ್ರ ನೆನಪಿಗೆ ಬರುತ್ತದೆ.

ವಿಪರ್ಯಾಸ ಏನೆಂದರೆ, ತಮ್ಮ ಕೆಲಸಕ್ಕೆ ಮಾತ್ರ ಎಲ್ಲರೂ ಸಮಯದ ಬೆಲೆ ಗೊತ್ತಿಟ್ಟುಕೊಳ್ಳುತ್ತಾರೆ. ವಕೀಲರ ಬಳಿ ಹೋದರೆ ಸಲಹೆಗೆ ಶುಲ್ಕ. ವೈದ್ಯರ ಬಳಿ ಹೋದರೆ ಕೆಲವು ನಿಮಿಷಗಳ ಭೇಟಿಗೂ ಶುಲ್ಕ. ಇಂಜಿನಿಯರ್ ಬಂದರೆ ಪರಿಶೀಲನೆಗೂ ಶುಲ್ಕ. ಅಕೌಂಟೆಂಟ್ ಕೆಲಸ ಮಾಡಿದರೆ ಸಮಯದ ಲೆಕ್ಕ. ಆದರೆ ಇನ್ನೊಬ್ಬನ ಹತ್ತು ವರ್ಷಗಳ ಅನುಭವ, ಕಲಿಕೆಯ ಹಿಂದೆ ಖರ್ಚಾದ ಹಣ, ಅವನು ಕಲಿತ ಸಾಫ್ಟ್‌ವೇರ್, ಅವನು ಬೆಳೆಸಿಕೊಂಡಿರುವ ಶೈಲಿ, ರಾತ್ರಿ ಕುಳಿತು ಮುಗಿಸಿದ ಕೆಲಸ, ಕ್ಲೈಂಟ್‌ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಕೊಟ್ಟ ಪರಿಹಾರ — ಇವೆಲ್ಲದರ ಬೆಲೆ ಕೇಳಿದಾಗ ಮಾತ್ರ ‘ಸ್ವಲ್ಪ ಕಡಿಮೆ ಮಾಡಿ ಸರ್’ ಎನ್ನುವುದು ಶುರುವಾಗುತ್ತದೆ. ತಮ್ಮ ಕೆಲಸದ ಒಂದು ಗಂಟೆ ಅಮೂಲ್ಯ; ಇನ್ನೊಬ್ಬರ ಹತ್ತು ವರ್ಷದ ಅನುಭವ ಮಾತ್ರ ‘ಒಂದು ಚಿಕ್ಕ ಕೆಲಸ’.

ಕೆಲಸದ ಬೆಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು. ಬಾರ್ಗೇನ್ ಮಾಡಬಹುದು. ಬಜೆಟ್ ಕಡಿಮೆ ಇದ್ದರೆ ಹೇಳಬಹುದು. ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಒಂದು ವಿಷಯ ಮಾತ್ರ ನೆನಪಿಟ್ಟುಕೊಳ್ಳಬೇಕು — ಬೆಲೆ ಮತ್ತು ಮೌಲ್ಯ ಒಂದೇ ಅಲ್ಲ. ನೀವು ಒಂದು ಕೆಲಸಕ್ಕೆ ಕಡಿಮೆ ಹಣ ಕೊಡಬಹುದು. ಆದರೆ ಆ ಕೆಲಸ ಮಾಡಲು ಬೇಕಾದ ಕೌಶಲ್ಯವನ್ನು ಕಡಿಮೆ ಮಾಡಲಾಗುವುದಿಲ್ಲ. ಒಬ್ಬ ಡಿಸೈನರ್‌ನ ಕೆಲಸಕ್ಕೆ ನೀವು ಸಾವಿರ ರೂಪಾಯಿ ಕೊಟ್ಟರೂ, ಅವನಿಗೆ ಆ ಕೆಲಸ ಕಲಿಯಲು ಹತ್ತು ವರ್ಷ ಬೇಕಾಗಿರಬಹುದು. ನೀವು ಒಂದು ಲೇಖನಕ್ಕೆ ಕೊಡುವ ಹಣ ಕಡಿಮೆಯಿರಬಹುದು; ಆದರೆ ಅದನ್ನು ಬರೆಯುವವನ ಅನುಭವದ ವರ್ಷಗಳನ್ನು ನೀವು ಕಡಿಮೆ ಮಾಡಲಾಗುವುದಿಲ್ಲ. ಮೌಲ್ಯವನ್ನು ನೀವು ಒಪ್ಪಿಕೊಳ್ಳದಿದ್ದರೂ ಅದು ಅಲ್ಲಿ ಇರುತ್ತದೆ. ಕಲ್ಲಿನೊಳಗಿನ ಶಿಲ್ಪದಂತೆ.

ಫ್ರೈಬರ್ಗ್‌ನ ಆ ಶಿಲ್ಪಿಗೆ ಒಂದು ದೊಡ್ಡ ಅನುಕೂಲ ಇತ್ತು. ಅವನ ಕಾಲದಲ್ಲಿ ಪ್ರತಿಭಟನೆಯೂ ಸ್ವಲ್ಪ ಶಾಶ್ವತವಾಗಿರಬಹುದಿತ್ತು. ಕಲ್ಲು ಇತ್ತು. ಕೆತ್ತನೆ ಇತ್ತು. ಕಟ್ಟಡ ಇತ್ತು. ತನ್ನ ಅಸಮಾಧಾನವನ್ನು ಅಲ್ಲಿ ಬಿಟ್ಟು ಹೋಗುವ ಅವಕಾಶ ಇತ್ತು. ಈಗಿನ ಸೃಜನಶೀಲ ಕೆಲಸಗಾರರು ಅಷ್ಟು ಅದೃಷ್ಟವಂತರಲ್ಲ. ನಾವು ಹಿಂಭಾಗ ತೋರಿಸಿದರೆ ಇನ್‌ಸ್ಟಾಗ್ರಾಂನ ಮಾರ್ಗಸೂಚಿ ನೆನಪಾಗುತ್ತದೆ. ಲಿಂಕ್ಡ್‌ಇನ್‌ನ ವೃತ್ತಿಪರ ಶಿಷ್ಟಾಚಾರ ನೆನಪಾಗುತ್ತದೆ. ವಾಟ್ಸ್‌ಆ್ಯಪ್‌ನಲ್ಲಿ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಹುತೇಕ ಸಂದರ್ಭಗಳಲ್ಲಿ ನಾವು ಮಾಡುವುದು ಒಂದೇ — ನಗುತ್ತಾ ‘ಪರವಾಗಿಲ್ಲ ಸರ್’ ಎನ್ನುವುದು, ಮತ್ತೊಂದು ರಿವಿಷನ್ ಮಾಡುವುದು, ಇನ್ವಾಯ್ಸ್ ಕಳುಹಿಸುವುದು, ಮತ್ತೆ ರಿಮೈಂಡರ್ ಮಾಡುವುದು ಮತ್ತು ಕೊನೆಗೆ ‘ಸರ್, ಪೇಮೆಂಟ್ ಯಾವಾಗ?’ ಎಂದು ಕೇಳುವುದಕ್ಕೂ ಮುಜುಗರಪಡುವುದು.

ಆದರೆ ಆ ಹಳೆಯ ಕಲ್ಲಿನ ಮನುಷ್ಯ ಮಾತ್ರ ಎಂಟು ನೂರು ವರ್ಷಗಳಿಂದ ತನ್ನ ಕೆಲಸ ಮಾಡುತ್ತಲೇ ಇದ್ದಾನೆ. ಮಳೆ ಬಂದಾಗ ನೀರು ಹೊರಗೆ ಚಿಮ್ಮಿಸುತ್ತಾನೆ. ಜೊತೆಗೆ, ತನ್ನ ಕಥೆಯನ್ನು ನೋಡಲು ಬರುವ ಪ್ರತಿಯೊಬ್ಬರಿಗೂ ಒಂದು ವಿಚಿತ್ರ ಪ್ರಶ್ನೆಯನ್ನೂ ಕೇಳುತ್ತಾನೆ: ‘ನಿಮಗೆ ಕೆಲಸ ಮಾಡುವವನ ಬೆಲೆ ಗೊತ್ತಿದೆಯೇ?’

ಆ ಶಿಲ್ಪಿಯ ಸಂಬಳದ ಕಥೆ ನಿಜವಾಗಿರಬಹುದು. ದಂತಕಥೆಯಾಗಿರಬಹುದು. ಇತಿಹಾಸ ಅದನ್ನು ಖಚಿತಪಡಿಸಿಲ್ಲ. ಆದರೆ ಕಥೆಯೊಳಗಿನ ವ್ಯಂಗ್ಯ ಮಾತ್ರ ಇಂದಿಗೂ ಅರ್ಥವಾಗುತ್ತದೆ. ಆಗ ಶಿಲ್ಪಿ ಇದ್ದ, ಕೆಲಸ ಮಾಡಿಸುವವನು ಇದ್ದ. ಈಗ ಡಿಸೈನರ್ ಇದ್ದಾನೆ, ಕ್ಲೈಂಟ್ ಇದ್ದಾನೆ. ಆಗ ಕಲ್ಲು ಇತ್ತು, ಈಗ ಕಂಪ್ಯೂಟರ್ ಇದೆ. ಆಗ ಸಂಬಳದ ಬಗ್ಗೆ ಮಾತುಕತೆ ಇತ್ತು, ಈಗ ಬಜೆಟ್, ಡಿಸ್ಕೌಂಟ್, ಎಕ್ಸ್‌ಪೋಸರ್, ಎಐ ಮತ್ತು ಅನಂತ ರಿವಿಷನ್‌ಗಳಿವೆ. ಉಪಕರಣಗಳು ಬದಲಾಗಿವೆ. ಭಾಷೆ ಬದಲಾಗಿದೆ. ಆದರೆ ಕೆಲಸದ ಬೆಲೆ ಕಡಿಮೆ ಮಾಡಲು ಪ್ರಯತ್ನಿಸುವ ಮನಸ್ಥಿತಿ ಮಾತ್ರ ಬಹುಶಃ ಅಷ್ಟೇ ಹಳೆಯದು.

ಆದ್ದರಿಂದ ಮುಂದಿನ ಬಾರಿ ಯಾರಾದರೂ ‘ಇದೇನು ಮಹಾ ಕೆಲಸ?’ ಎಂದು ಕೇಳಿದರೆ, ತಕ್ಷಣ ಕೋಪ ಮಾಡಿಕೊಳ್ಳಬೇಕಿಲ್ಲ. ಒಂದು ಕ್ಷಣ ನಗಬಹುದು. ಏಕೆಂದರೆ ಅವರಿಗೆ ಕೆಲಸದ ಫಲಿತಾಂಶ ಮಾತ್ರ ಕಾಣುತ್ತಿದೆ; ಅದರ ಹಿಂದೆ ನಿಂತಿರುವ ವರ್ಷಗಳು ಕಾಣುತ್ತಿಲ್ಲ. ಅವರಿಗೆ ಡಿಸೈನ್ ಕಾಣುತ್ತಿದೆ; ಅಭ್ಯಾಸ ಕಾಣುತ್ತಿಲ್ಲ. ಅವರಿಗೆ ವೀಡಿಯೋ ಕಾಣುತ್ತಿದೆ; ಅದರ ಹಿಂದೆ ಕುಳಿತ ಎಡಿಟರ್‌ನ ಗಂಟೆಗಳು ಕಾಣುತ್ತಿಲ್ಲ. ಅವರಿಗೆ ಒಂದು ಲೇಖನ ಕಾಣುತ್ತಿದೆ; ಅದರ ಹಿಂದೆ ಓದಿದ, ಬರೆದ, ತಿದ್ದಿದ ವರ್ಷಗಳು ಕಾಣುತ್ತಿಲ್ಲ. ಮತ್ತು ಬಹುಶಃ ಅದಕ್ಕೇ ಫ್ರೈಬರ್ಗ್‌ನ ಆ ವಿಚಿತ್ರ ಗರ್ಗಾಯಿಲ್ ಇಷ್ಟು ಶತಮಾನಗಳಾದರೂ ನಮಗೆ ಇಷ್ಟವಾಗುತ್ತದೆ. ಅದು ಕೇವಲ ಮಳೆನೀರನ್ನು ಗೋಡೆಯಿಂದ ದೂರಕ್ಕೆ ಚಿಮ್ಮಿಸುವ ಕಲ್ಲಿನ ಮೂರ್ತಿಯಲ್ಲ. ಕೆಲಸದ ಬೆಲೆ ಗೊತ್ತಿಲ್ಲದವರಿಗೆ ಎಂಟು ನೂರು ವರ್ಷಗಳ ಹಿಂದಿನಿಂದಲೂ ಬಂದಿರುವ ಒಂದು ಕಲ್ಲಿನ ಸಟೈರ್.  ಸಂಬಳ ಕಡಿಮೆ ಮಾಡಬಹುದು. ಬಿಲ್ ಪೆಂಡಿಂಗ್ ಇಡಬಹುದು. ‘ಇದು ಸಿಂಪಲ್ ಕೆಲಸ’ ಎಂದು ಹೇಳಬಹುದು. ‘ನಮ್ಮ ಹುಡುಗನೂ ಮಾಡ್ತಾನೆ’ ಎನ್ನಬಹುದು. ‘ಎಐನಲ್ಲಿ ಫ್ರೀಗೆ ಆಗುತ್ತೆ’ ಎನ್ನಬಹುದು. ‘ಈಗ ಮಾಡಿಕೊಡಿ, ಮುಂದೆ ದೊಡ್ಡ ಕೆಲಸ ಕೊಡ್ತೀವಿ’ ಎನ್ನಬಹುದು. ಆದರೆ ಕೆಲಸ ಮಾಡಿದವನ ಮನಸ್ಸಿನಲ್ಲಿ ಏನಾಗುತ್ತದೆ ಎನ್ನುವುದನ್ನು ಮಾತ್ರ ನೀವು ನಿಮ್ಮ ಬಜೆಟ್ ಶೀಟ್‌ನಲ್ಲಿ ಲೆಕ್ಕ ಹಾಕಲು ಸಾಧ್ಯವಿಲ್ಲ.

ಕೆಲವೊಮ್ಮೆ ಪ್ರತಿಭಟನೆ ನೋಟಿಸ್‌ನಲ್ಲಿ ಬರುವುದಿಲ್ಲ. ಜಗಳದಲ್ಲೂ ಬರುವುದಿಲ್ಲ. ನೇರವಾಗಿ ಕಲ್ಲಿನಲ್ಲೇ ಉಳಿದುಬಿಡುತ್ತದೆ. 😄

Nagaraj Vaidya
Nagaraj Vaidya is the Editor-in-Chief of Tech Vaidya Global and a technology analyst with 18 years of journalism experience. He covers AI, Agritech, Cybersecurity, and Digital Trends, helping readers understand the technologies shaping the future. He is the author of AI Bhagavad Gita.
1,191 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp