ಟ್ರೆಂಡಿಂಗ್
ಶಾಲೆಗೆ ರಜೆ ಘೋಷಣೆಯಾದ ತಕ್ಷಣ ಮಳೆ ನಿಲ್ಲುವುದೇಕೆ? ಬಯಲಾಯ್ತು ಅಸಲಿ ರಹಸ್ಯ!
| ಎನ್ವೀ ವೈದ್ಯಹೆಗ್ಗಾರ್
ಮಲೆನಾಡಿನ ಮಳೆ ಎಂದರೆ ಸುಮ್ಮನೆಯೇ? ಆಕಾಶಕ್ಕೆ ತೂತು ಬಿದ್ದಂತೆ ಸುರಿಯುವ ರೌದ್ರಾವತಾರ. ರಾತ್ರಿಯಿಡೀ ಎಡೆಬಿಡದೆ ಸುರಿಯುವ ಕುಂಭದ್ರೋಣ ಮಳೆಗೆ ಊರಿನ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತವೆ. ನದಿಗಳು ಮಿತಿಮೀರಿ ವ್ಯಾಪಿಸಿ, ಅಕ್ಕಪಕ್ಕದ ತೋಟ ಗದ್ದೆಗಳನ್ನೆಲ್ಲಾ ಆಪೋಶನ ತೆಗೆದುಕೊಳ್ಳುವ ಆತಂಕ ಸೃಷ್ಟಿಯಾಗುತ್ತದೆ. ಬೆಳಗ್ಗೆ ಏಳುವಷ್ಟರಲ್ಲಿ ಜಿಲ್ಲಾಧಿಕಾರಿಗಳಿಂದ ಶಾಲೆಗಳಿಗೆ ರಜೆ ಘೋಷಣೆಯಾದ ಬ್ರೇಕಿಂಗ್ ನ್ಯೂಸ್ ಬರುತ್ತದೆ. ಮಕ್ಕಳಿಗೆ ಎಲ್ಲಿಲ್ಲದ ಖುಷಿ! ಆದರೆ ಬೆಳಗಿನ ಜಾವ ಎಂಟು ಗಂಟೆ ಆಗುತ್ತಿದ್ದಂತೆ, ಊರಿಗೆ ಊರೇ ಬೆಚ್ಚಗಾಗುವಷ್ಟು ಬಿಸಿಲು! ನಿನ್ನೆ ರಾತ್ರಿ ಅಬ್ಬರಿಸಿದ ಮಳೆ, ರಜೆ ಕೊಟ್ಟ ದಿನವೇ ಯಾಕೆ ದಿಢೀರ್ ನಾಪತ್ತೆ ಆಗುತ್ತದೆ? ಇದು ಇಷ್ಟು ದಿನ ಬಗೆಹರಿಯದ ನಿಗೂಢ ಪ್ರಶ್ನೆಯಾಗಿತ್ತು. ಆದರೆ ಈಗ ಅದರ ಅಸಲಿ ಕಾರಣ ಬಯಲಾಗಿದೆ.
ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ಪ್ರಕೃತಿ ಎಷ್ಟು ಸುಂದರವೋ ಅಷ್ಟೇ ಭಯಾನಕ. ಗಾಳಿಯ ಅಬ್ಬರಕ್ಕೆ ದೈತ್ಯ ಮರಗಳು ಧರೆಗುರುಳುತ್ತವೆ. ವಿದ್ಯುತ್ ಕಂಬಗಳು ಮುರಿದುಬಿದ್ದು ಊರಿಗೆ ಊರೇ ಕತ್ತಲಲ್ಲಿ ಮುಳುಗುತ್ತದೆ. ಮರದ ದಿಮ್ಮಿಗಳನ್ನು ಹೊತ್ತು ತರುವ ಪ್ರವಾಹಕ್ಕೆ ಸಿಲುಕಿ ಹಳೆಯ ಸೇತುವೆಗಳು ನಡುಗುತ್ತವೆ. ಗುಡ್ಡ ಕುಸಿಯುವ, ರಸ್ತೆಗಳು ಕೊಚ್ಚಿಹೋಗುವ ಭಯ ಸದಾ ಕಾಡುತ್ತಿರುತ್ತದೆ.
ಇಂತಹ ಭೀಕರ ವಾತಾವರಣದಲ್ಲಿ ಪುಟ್ಟ ಮಕ್ಕಳು ಛತ್ರಿ, ಮಳೆಕೋಟು ಹಾಕಿಕೊಂಡು, ಕೆಸರು ತುಂಬಿದ ಕಾಲುದಾರಿಗಳಲ್ಲಿ ಶಾಲೆಗೆ ಹೋಗುವುದು ಜೀವದ ಜೂಜಾಟವೇ ಸರಿ. ಮಳೆಯಿಂದ ಆಗಬಹುದಾದ ಇಂತಹ ಕಷ್ಟ ನಷ್ಟಗಳು, ಪ್ರಾಣಾಪಾಯಗಳನ್ನು ತಪ್ಪಿಸುವುದಕ್ಕಾಗಿಯೇ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸುತ್ತದೆ. ನದಿ ದಾಟಿ ಬರುವ ಮಕ್ಕಳ ಸುರಕ್ಷತೆ, ರಸ್ತೆ ಕುಸಿತದ ಅಪಾಯ ಇವೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಜಿಲ್ಲಾಡಳಿತ ರಜೆಯ ಆದೇಶ ಹೊರಡಿಸುತ್ತದೆ.
ಮಕ್ಕಳ ಪ್ರಾಣರಕ್ಷಣೆ ಈ ರಜೆಯ ಹಿಂದಿನ ಅಸಲಿ ಉದ್ದೇಶ. ಆದರೆ, ಈ ಗಂಭೀರವಾದ ಉದ್ದೇಶ ಯಾರಿಗೂ ಅರ್ಥವಾಗುವುದೇ ಇಲ್ಲ, ವಿಶೇಷವಾಗಿ ಆಕಾಶದಲ್ಲಿರುವ ಮೋಡಗಳಿಗೆ! ಹೌದು, ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿರಲಿ ಎಂದು ಜಿಲ್ಲಾಧಿಕಾರಿಗಳು ರಜೆ ಕೊಟ್ಟರೆ, ಇತ್ತ ಆಕಾಶದಲ್ಲಿರುವ ಮೋಡಗಳು ಇದೇ ನೆಪ ಇಟ್ಟುಕೊಂಡು ತಮ್ಮ ಕೆಲಸಕ್ಕೆ ಚಕ್ಕರ್ ಹಾಕುತ್ತಿವೆ! ಇದಕ್ಕೆ ವಾತಾವರಣದ ಬದಲಾವಣೆ ಕಾರಣ ಎಂದುಕೊಂಡರೆ ಊಹೆ ತಪ್ಪು. ಈ ಮಳೆ-ಬಿಸಿಲಿನ ಆಟದ ಹಿಂದೆ ಇರುವುದು ಸಂಪೂರ್ಣವಾಗಿ ತಂತ್ರಜ್ಞಾನದ ಕೈವಾಡ.
ಜಿಲ್ಲಾಧಿಕಾರಿಗಳು ರಜೆ ಆದೇಶಕ್ಕೆ ಸಹಿ ಹಾಕಿದ ತಕ್ಷಣ, ಕಚೇರಿಯ ಸಿಬ್ಬಂದಿ ಆ ಕಾಗದವನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಮಾಡುತ್ತಾರೆ. ಆ ಫೈಲನ್ನು ಸರ್ಕಾರದ ಸರ್ವರ್ ಅಥವಾ ಇಂಟರ್ನೆಟ್ ಕ್ಲೌಡ್ಗೆ ಅಪ್ಲೋಡ್ ಮಾಡಲಾಗುತ್ತದೆ. ಇಲ್ಲಿಯವರೆಗೆ ಇದೊಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ. ಆದರೆ ಅಸಲಿ ವಿಪರೀತ ಶುರುವಾಗುವುದು ಈ ಇಂಟರ್ನೆಟ್ ಕ್ಲೌಡ್ ಹಾಗೂ ಆಕಾಶದಲ್ಲಿರುವ ಅಪ್ಪಟ ಮಳೆ ಮೋಡಗಳ ನಡುವೆ ನಡೆಯುವ ನೇರ ಸಂಪರ್ಕದಿಂದ!
ಈಗಿನ ಫೈವ್ ಜಿ ಜಮಾನದಲ್ಲಿ ಆಕಾಶದಲ್ಲಿರುವ ಮೋಡಗಳಿಗೂ, ನಮ್ಮ ಡೇಟಾ ಸೆಂಟರ್ಗಳಿಗೂ ಬಿಡಿಸಲಾರದ ನಂಟಿದೆ. ಕಚೇರಿಯಿಂದ ಆದೇಶದ ಫೈಲ್ ಇಂಟರ್ನೆಟ್ ಕ್ಲೌಡ್ಗೆ ಸಿಂಕ್ ಆಗುತ್ತಿದ್ದಂತೆಯೇ, ಪಶ್ಚಿಮ ಘಟ್ಟದ ಮೇಲಿರುವ ದಟ್ಟ ಮೋಡಗಳೆಲ್ಲಾ ತಮ್ಮ ಮೊಬೈಲ್ ಡೇಟಾ ಆನ್ ಮಾಡುತ್ತವೆ. ಕೆಲವೊಮ್ಮೆ ಡೇಟಾ ಪ್ಯಾಕ್ ಖಾಲಿಯಾಗಿದ್ದರೆ, ಗುಡ್ಡದ ಮೇಲಿರುವ ಮೊಬೈಲ್ ಟವರ್ಗಳ ಬಳಿ ಸುಳಿದಾಡಿ ಉಚಿತ ವೈಫೈ ಕನೆಕ್ಟ್ ಮಾಡಿಕೊಳ್ಳುತ್ತವೆ. ಫೈಲ್ ಅಪ್ಲೋಡ್ ಆದ ಮರುಕ್ಷಣವೇ ಮೋಡಗಳಿಗೆ ಒಂದು ಪುಶ್ ನೋಟಿಫಿಕೇಶನ್ ಬರುತ್ತದೆ.
ಆಕಾಶದಲ್ಲಿ ಇದ್ದಕ್ಕಿದ್ದಂತೆ ಒಮ್ಮೆಲೆ ಕೇಳಿಸುವ ದೊಡ್ಡ ಗುಡುಗು ಬೇರೇನೂ ಅಲ್ಲ, ಅದು ಈ ಮೋಡಗಳಿಗೆ ಬಂದ ನೋಟಿಫಿಕೇಶನ್ ಸೌಂಡ್! ಆ ಶಬ್ದ ಕೇಳಿದ ತಕ್ಷಣ ಮೋಡಗಳು ಸುರಿಯುವುದನ್ನು ಕ್ಷಣಕಾಲ ನಿಲ್ಲಿಸಿ, ಆದೇಶದ ಫೈಲನ್ನು ತಕ್ಷಣವೇ ಡೌನ್ಲೋಡ್ ಮಾಡಿಕೊಳ್ಳುತ್ತವೆ. ಸರ್ಕಾರಿ ಪಿಡಿಎಫ್ ಆದ ಕಾರಣ ಫೈಲ್ ಗಾತ್ರ ದೊಡ್ಡದಿದ್ದರೂ, ಇಡೀ ರಾತ್ರಿ ಮಳೆ ಸುರಿಸಿ ಹಗುರವಾಗಿರುವ ಮೋಡಗಳಿಗೆ ಅದನ್ನು ಡೌನ್ಲೋಡ್ ಮಾಡಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ.
ಡೌನ್ಲೋಡ್ ಆದ ಫೈಲನ್ನು ಓಪನ್ ಮಾಡುವುದೇ ಒಂದು ಸಾಹಸ. ಸರ್ಕಾರಿ ಆದೇಶಗಳು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪ್ ಆಗಿರುವುದರಿಂದ, ಮೋಡಗಳ ಸಿಸ್ಟಮ್ನಲ್ಲಿ ಸರಿಯಾದ ಫಾಂಟ್ ಇಲ್ಲದೆ ಅಕ್ಷರಗಳೆಲ್ಲಾ ಒಡೆದುಹೋಗಿರುತ್ತವೆ. ಆದರೂ ಆ ಒಡೆದ ಅಕ್ಷರಗಳ ನಡುವೆ ದಪ್ಪಕ್ಷರದಲ್ಲಿರುವ "ರಜೆ" ಎಂಬ ಪದವನ್ನು ಮಾತ್ರ ಮೋಡಗಳು ಅತ್ಯಂತ ನಿಖರವಾಗಿ ಓದಿಕೊಳ್ಳುತ್ತವೆ. ಆ ಒಂದೇ ಒಂದು ಪದ ಸಾಕು, ಅವುಗಳ ಇಡೀ ದಿನದ ಆಯಾಸ ಪರಿಹರಿಸಲು!
ತಜ್ಞರ ಪ್ರಕಾರ, ಪ್ರತಿಯೊಂದು ಮೋಡಕ್ಕೂ ದಿನದ ಮಳೆಯ 'ಟಾರ್ಗೆಟ್' ಇರುತ್ತದೆ. ಎಷ್ಟು ಮಿಲಿಮೀಟರ್ ಮಳೆ ಸುರಿಸಬೇಕು, ಎಷ್ಟು ಕೆರೆ ತುಂಬಿಸಬೇಕು, ಎಷ್ಟು ಹಳ್ಳ-ಕೊಳ್ಳಗಳನ್ನು ಮೈದುಂಬಿಸಬೇಕು ಎಂಬುದಕ್ಕೂ ಪ್ರತ್ಯೇಕ ಕೆಪಿಐ (KPI) ಗಳಿವೆ. ಫೈಲ್ ಓಪನ್ ಮಾಡಿದ ಮೋಡಗಳಿಗೆ, "ಭಾರೀ ಮಳೆಯ ಕಾರಣ ಶಾಲಾ-ಕಾಲೇಜುಗಳಿಗೆ ರಜೆ" ಎಂಬ ಸಾಲು ಕಣ್ಣಿಗೆ ಬಿದ್ದ ತಕ್ಷಣ “ಟಾರ್ಗೆಟ್ ಅಚೀವ್ಡ್” ಎಂಬ ಹಸಿರು ಗುರುತು ಬಂದುಬಿಡುತ್ತದೆ! ಅಷ್ಟೇ, ಎಡಬಿಡದೆ ಸುರಿದು ಸುಸ್ತಾಗಿದ್ದ ಮೋಡಗಳಿಗೆ ಎಲ್ಲಿಲ್ಲದ ರಿಲೀಫ್. ತಾವು ನಿಗದಿಪಡಿಸಿದ ಗುರಿ ತಲುಪಿದ್ದಾಯ್ತು ಎಂದುಕೊಂಡು ಅವು ಆಮೇಲೆ ಯಾವುದೇ ಹೆಚ್ಚುವರಿ ಮಳೆಯನ್ನು ಸುರಿಸಲು ಸಿದ್ಧವಿರುವುದಿಲ್ಲ.
ಪರಿಣಾಮ? ಪ್ರವಾಹದ ಭೀತಿಯಲ್ಲಿ ಮನೆ ಸೇರಿಕೊಂಡಿದ್ದ ಜನರಿಗೆ, ಕಣ್ಣು ಕುಕ್ಕುವಷ್ಟು ಬಿಸಿಲು ಕಾಯುತ್ತದೆ. ರಜೆಯ ದಿನ ಮನೆಯಲ್ಲಿ ಬೆಚ್ಚಗೆ ಕೂತು ಬಿಸಿಬಿಸಿ ಪಕೋಡ ತಿನ್ನಬೇಕು ಎಂದುಕೊಂಡಿದ್ದವರ ಆಸೆಗೆ ತಣ್ಣೀರು ಬೀಳುತ್ತದೆ. ಅಪಾಯದಿಂದ ಪಾರಾಗಲು ಕೊಟ್ಟ ರಜೆಯ ದಿನವೇ, ಮಳೆ ನಿಂತ ಕಾರಣಕ್ಕೆ ಮಕ್ಕಳು ಮೈದಾನಕ್ಕಿಳಿದು ಬಿಸಿಲಿನಲ್ಲಿ ಕ್ರಿಕೆಟ್ ಆಡಲು ಶುರುಮಾಡುತ್ತಾರೆ.
ಈ ಮೋಡಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಈಗ ಐಟಿ ತಜ್ಞರು ಸರ್ಕಾರಕ್ಕೆ ಒಂದು ಬಿಗಿ ಸಲಹೆ ನೀಡಿದ್ದಾರೆ. ಇನ್ನು ಮುಂದೆ ರಜೆ ಆದೇಶದ ಫೈಲ್ ಅನ್ನು ಸುಮ್ಮನೆ ಅಪ್ಲೋಡ್ ಮಾಡಬೇಡಿ, ಅದಕ್ಕೆ ತಪ್ಪದೆ ಪಾಸ್ವರ್ಡ್ ಪ್ರೊಟೆಕ್ಟ್ ಮಾಡಿ ಕಳುಹಿಸಿ!
ಹೌದು, ಆದೇಶ ಪತ್ರಕ್ಕೆ ಪಾಸ್ವರ್ಡ್ ಹಾಕಿದರೆ ಮೋಡಗಳಿಗೂ ಅದು ಓಪನ್ ಆಗುವುದಿಲ್ಲ. ಫೈಲ್ ಕ್ಲೌಡ್ಗೆ ಸಿಂಕ್ ಆದರೂ, ಮೋಡಗಳು ಅದನ್ನು ಓದಲು ಹೋದಾಗ ಪಾಸ್ವರ್ಡ್ ಕೇಳುತ್ತದೆ. ಪಾಪ, ಮೋಡಗಳಿಗೆ ಡಿಸಿ ಕಚೇರಿಯ ಪಾಸ್ವರ್ಡ್ ಎಲ್ಲಿಂದ ಗೊತ್ತಿರಬೇಕು? ಗೊತ್ತಿಲ್ಲದ ಪಾಸ್ವರ್ಡ್ ಅನ್ನು ಮೂರ್ನಾಲ್ಕು ಬಾರಿ ಊಹಿಸಿ ಟೈಪ್ ಮಾಡಿದರೂ ಫೈಲ್ ಬಾಗಿಲು ತೆರೆಯುವುದಿಲ್ಲ. ಆಗ ಮೋಡಗಳು ಪರದೆಯ ಮೇಲೆ ಕಾಣಿಸುವ ‘Forgot Password?’ ಬಟನ್ ಒತ್ತುತ್ತವೆ.
ತಕ್ಷಣವೇ “ಪಾಸ್ವರ್ಡ್ ರೀಸೆಟ್ ಲಿಂಕ್ ನಿಮ್ಮ ನೋಂದಾಯಿತ ಇ-ಮೇಲ್ಗೆ ಕಳುಹಿಸಲಾಗಿದೆ” ಎಂಬ ಸಂದೇಶ ಬರುತ್ತದೆ. ತಮ್ಮ ನೋಂದಾಯಿತ ಇ-ಮೇಲ್ ವಿಳಾಸ ಯಾವುದು ಎಂಬುದೇ ಗೊತ್ತಿಲ್ಲದ ಕಾರಣ, ಮೋಡಗಳು ಕಂಗಾಲಾಗುತ್ತವೆ. ಕೊನೆಗೆ ಹೇಗಾದರೂ ಮಾಡಿ ಒಟಿಪಿ ಪಡೆಯೋಣವೆಂದು ದೊಡ್ಡದಾಗಿ ಗುಡುಗು ಮೊಳಗಿಸಿದರೂ, ಸರಿಯಾದ ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲ. ಫೈಲ್ ಓಪನ್ ಆಗದೆ, ಒಟಿಪಿಯೂ ಬಾರದೆ, ಹತಾಶೆಯಿಂದ ಮೋಡಗಳು ಮತ್ತೆ ಕಣ್ಣೀರು ಹಾಕಲು ಶುರು ಮಾಡುತ್ತವೆ.
ಆ ಕಣ್ಣೀರಿನ ಮಳೆಯಾದರೂ ಊರಿಗೆ ಬೀಳಲಿ ಎಂಬುದು ತಜ್ಞರ ಲೆಕ್ಕಾಚಾರ. ಈ ನೂತನ ತಂತ್ರಜ್ಞಾನದ ಐಡಿಯಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಆದೇಶ ಪತ್ರಗಳಿಗೆ ಬೀಗ ಬಿದ್ದರಷ್ಟೇ, ರಜೆ ಕೊಟ್ಟ ದಿನವೂ ಮಲೆನಾಡಿನಲ್ಲಿ ಮಳೆ ಸುರಿಯುತ್ತದೆ!
ಇಲ್ಲವಾದರೆ, ಮುಂದಿನ ಬಾರಿ ರಜೆ ಘೋಷಿಸುವ ಮೊದಲು ಜಿಲ್ಲಾಧಿಕಾರಿಗಳು ಒಂದು ಕೆಲಸ ಮಾಡಬೇಕಾಗುತ್ತದೆ. ಮೊದಲು ಮೋಡಗಳ ಪಾಸ್ವರ್ಡ್ ಬದಲಾಯಿಸಬೇಕು. ಅದಾದ ಮೇಲೆ ರಜೆ ಆದೇಶ ಕಳುಹಿಸಬೇಕು. ಇಲ್ಲದಿದ್ದರೆ ರಜೆ ಸಿಕ್ಕ ಖುಷಿಯಲ್ಲಿ ಮಕ್ಕಳು ಶಾಲೆ ತಪ್ಪಿಸುವುದಕ್ಕಿಂತ ಮೊದಲು, ಮೋಡಗಳೇ ಡ್ಯೂಟಿ ತಪ್ಪಿಸುವುದು ಖಚಿತ!
(ಇದು ಕೇವಲ ತಮಾಷೆಗಾಗಿ)
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.