ಟ್ರೆಂಡಿಂಗ್

ಕರೆಂಟು: ಬಿಲ್‌ ಭಾರ ಇಳಿಸಿಕೊಳ್ಳಿ! - Tech Vaidya

ಕರೆಂಟು: ಬಿಲ್‌ ಭಾರ ಇಳಿಸಿಕೊಳ್ಳಿ!

ಟೆಕ್‌-ಕಿಲ!, ಬಡೆಕ್ಕಿಲಕತ್ತಲಾಗುತ್ತಿದ್ದ ಹಾಗೆ, ಮನೆಯೊಳಗೆ ಒಂದು ದೀಪ, ಅದರ ಸುತ್ತ ಜೀವನ. ರಾತ್ರಿ ೯ರ ಆಸುಪಾಸಿಗೆ ಎಲ್ಲರೂ ಚಾಪೆ ಹಾಸಿ ಮಲಗಿಯೂ ಆಯ್ತು. ೧೮೭೯ಕ್ಕೂ ಮೊದಲು ಭಾರತದಲ್ಲಿ, ೧೯೦೨ಕ್ಕೂ ಮೊದಲು ಕರ್ನಾಟಕದಲ್ಲಿ ಈ ಚಿತ್ರಣ ಸಾಮಾನ್ಯ. ನಿಜ ಹೇಳ್ಬೇಕು ಅಂದ್ರೆ ಮನೆ ಮನೆಗೂ ವಿದ್ಯುದ್ದೀಪ ಬರುವಾಗ ಇನ್ನೂ ಹಲವು ದಶಕಗಳೇ ಸಂದವು.
ಆಗ ಒಂದು ಮನೆಗೆ ಒಂದು ಲೈಟು ಅಂದರೇ ಲಕ್ಷುರಿ. ಆದರೀಗ, ಕರೆಂಟಿಲ್ಲದೆ ಬದುಕುವುದೇ ದುಸ್ತರ. ಅದೇ ನಾಲ್ಕು ವರ್ಷಗಳ ಹಿಂದೆ ಪ್ರತಿ ಮನೆಗೆ ೨೦೦ ಯುನಿಟ್‌ನಷ್ಟು ಫ್ರೀ ವಿದ್ಯುತ್‌ ಬಂದಾಗಂತೂ, ಎಲ್ಲರೂ ಸಂಭ್ರಮಿಸಿದ್ದನ್ನೂ ನೋಡಿದ್ದೇವೆ. ಆದರೇನು ಮಾಡೋಣ, ಕರೆಂಟ್‌ ಬಿಲ್‌ ಸೊನ್ನೆ ಬರುವುದು ಒಂದೆಡೆಯಾದ್ರೆ, ಬಿಲ್ಲು ಬರುವ ಮನೆಗಳಿಗೆ, ಬರೆಯ ಮೇಲೆ ಬರೆ. ದಿನೇ ದಿನೇ, ರಾಜ್ಯದಲ್ಲಷ್ಟೇ ಅಲ್ಲ, ದೇಶದಾದ್ಯಂತ ಕರೆಂಟ್‌ ಬಿಲ್‌ ಏರುತ್ತಿದೆಯೇ ಹೊರತು, ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ.
ಹೀಗಿರುವಾಗ, ಕರೆಂಟು ಇಲ್ಲದೇ ಬದುಕುವುದಕ್ಕೆ ಹೊರಡುವುದು ಸಾಧ್ಯವಾ? ಛೇ ಛೇ ಚಾನ್ಸೇ ಇಲ್ಲ!  ಹಾಗಾಗಿ ವಿದ್ಯುತ್‌ ಅನ್ನು ಇತರೇ, ಸೋಲಾರ್‌ನಂತಹ ಕಡಿಮೆ ಖರ್ಚಿನ ಮೂಲಗಳಿಂದ ಪಡೆಯುವುದನ್ನು ಕೆಲವರು ಪ್ರಯತ್ನಿಸಿದರೂ, ಪ್ರತಿ ಮನೆಯೂ ಸೂರ್ಯವಿದ್ಯುತ್‌ನಿಂದ ಬೆಳಗುವ ದಿನ ಸಧ್ಯಕ್ಕಂತೂ ಸಾಧ್ಯವಿಲ್ಲ ಅನ್ನುವುದು ಸತ್ಯ.
ಇನ್ನು ಕಳೆದ ಒಂದು ವರ್ಷದಲ್ಲೇ ಕರ್ನಾಟಕದ ವಿದ್ಯುತ್‌ ದರ ಎರಡು ಬಾರಿ ಏರಿಕೆಯಾಗಿರುವುದರ ಹೊರತಾಗಿಯೂ ನಮ್ಮ ವಿದ್ಯುತ್‌ ಬಳಕೆಯಂತೂ ಕಮ್ಮಿಯಾಗದೇ ಇರುವುದು ಯಾವ ಬಳಕೆದಾರನಿಗೂ ಖುಷಿ ಕೊಡುವ ವಿಷಯ ಅಲ್ಲವೇ ಅಲ್ಲ.
ಇದಕ್ಕೂ ಒಂದು ಪರಿಹಾರ ಇದೆ, ಎನ್ನುವ ಈ ಒಂದು ವಾಕ್ಯವನ್ನು ನೀವು ಓದಿಯೇ, ಇದೊಂದು ಹೊಸ ಟ್ರ್ಯಾಪ್‌ ಅಂದುಕೊಂಡರೆ, ಅದು ತಪ್ಪು. ಮೊದಲಿಗೆ, ವಿದ್ಯುತ್‌ ಅನಗತ್ಯ ಬಳಸುವುದನ್ನು ಕಡಿಮೆ ಮಾಡುವುದು, ಹೆಚ್ಚು ಹೆಚ್ಚು ನವೀಕರಿಸಬಲ್ಲ ವಿದ್ಯುತ್‌ ಮೂಲಗಳನ್ನು ಬಳಸುವುದು ಇತ್ಯಾದಿಯನ್ನು ನಾವು ಮಾಡಲೇಬೇಕು ಎನ್ನುವ ಹಳೇ ರಾಗವನ್ನು ಮತ್ತೆ ನಾನು ಉಸುರಿದರೂ, ಇಲ್ಲೊಂದು ತಂತ್ರಜ್ಞಾನ ಪ್ರೇರಿತ ದಾರಿ ಇದೆ. ಇದನ್ನು ನಾವು ಬಳಸಲು ಶುರು ಮಾಡಿದರೆ, ಏರಿದ ಬಿಲ್‌ ಭಾರ, ಸ್ವಲ್ಪವಾದರೂ ತಗ್ಗೀತು.
ವಿದ್ಯುತ್‌ ಕಳ್ಳರನ್ನು ಹಿಡಿಯೋಣ
ಮೊದಲಿಗೆ ಮನೆಯಲ್ಲಿರುವ ವಿದ್ಯುತ್‌ ಕಳ್ಳರನ್ನು ಹಿಡಿಯುವುದು ಲೇಸು. ಇದು ಆ ಹಳೇ ಕಾಲದ ರೀತಿ, ಕರೆಂಟ್‌ ಲೈನಿಗೆ ವಯರ್‌ ಹಾಕಿ ಪವರ್‌ ಕದಿಯುವುದಲ್ಲ. ನಿಮ್ಮ ಮನೆಯಲ್ಲೇ ಅನಗತ್ಯ ವಿದ್ಯುತ್‌ ಹೀರುವ ವಸ್ತುಗಳಿದ್ದರೆ, ನೀವು ಅವುಗಳನ್ನು ಮನೆಯಲ್ಲಿಟ್ಟುಕೊಂಡು ಉಳಿಸುವ ದುಡ್ಡಿಗಿಂತ, ಅದರ ಹೆಸರಲ್ಲಿ ಕೊಡುವ ಕರೆಂಟ್‌ ಬಿಲ್ಲ್‌ ಹೆಚ್ಚಾದೀತು.
ಹಳೇ ಫ್ರಿಜ್‌, ಸುಮಾರು ೧೦ ವರ್ಷ ದಾಟಿದೆ ಅಂದರೆ ಇಂದಿನ ೫ ಸ್ಟಾರ್‌ ಫ್ರಿಜ್‌ಗಳಿಗೆ ಹೋಲಿಸಿದರೆ, ೬೦-೮೦ ಶೇಕಡಾ ಹೆಚ್ಚು ವಿದ್ಯುತ್‌ ಖರ್ಚು ಮಾಡುತ್ತವೆ. ಹಾಗೇ, ನಿಮ್ಮ ಹಳೇ ಫ್ಯಾನ್‌ಗಳು ಈಗ ಬಂದಿರುವ, ಹೊಸದಕ್ಕೆ ಸ್ವಲ್ಪ ಹೆಚ್ಚು ಖರ್ಚು ಎನಿಸುವ ಬಿಎಲ್‌ಡಿಸಿ ಫ್ಯಾನ್‌ಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ವಿದ್ಯುತ್‌ ಹೀರುತ್ತವೆ. ಅಂದರೆ, ಬೇಸಗೆಯಿರಲಿ, ಮಳೆ-ಛಳಿ ಇರಲಿ, ಇಡೀ ದಿನ ತಿರುಗುವ ನಿಮ್ಮ ಹಳೇ ಫ್ಯಾನ್‌ ಬದಲಿಸಿದರೆ, ಒಂದೇ ವರ್ಷಕ್ಕೆ ನೀವು ಒಂದು ಫ್ಯಾನಿಗೆ ೪೦೦-೬೦೦ ರೂಪಾಯಿಯಷ್ಟು  ಹಣ ಉಳಿಸಬಹುದು ಎಂದರೆ ನಂಬಲೇಬೇಕು.
ಹಾಗೇ ಸುಮ್ಮನೇ ಸ್ಟ್ಯಾಂಡ್‌ಬೈಯಲ್ಲಿ ಆನ್‌ ಇಟ್ಟಿರುವ ನಿಮ್ಮ ಟಿವಿಯ ಸೆಟ್‌ ಟಾಪ್‌ ಬಾಕ್ಸ್‌ ಕೂಡ ತಣ್ಣನೆ ಸ್ವಲ್ಪೇ ಸ್ವಲ್ಪ ಕರೆಂಟ್‌ ಖರ್ಚು ಮಾಡುತ್ತಲೇ ಇರುತ್ತದೆ. ಬೇಡ ಅಂದಾಗ, ಹಾಗೇ ಅದನ್ನು ಆಫ್‌ ಮಾಡಿ, ಡಿಸ್ಕನೆಕ್ಟ್‌ ಮಾಡಿಬಿಡಿ! ಅದಕ್ಕೇನು ಕಷ್ಟ ಇದೆ ಹೇಳಿ?
ಹಾಗೇ ಆನ್‌ ಇಟ್ಟ ನಿಮ್ಮ ಗೀಸರ್‌ ಕೂಡ ನಿಮ್ಮ ಬಿಲ್‌ ಏರಿಸುವಲ್ಲಿ ಅತಿದೊಡ್ಡ ಪಾಲುದಾರ. ಬೇಕಾದಾಗ ಮಾತ್ರ, ಬಳಕೆಯ ೨೦ ನಿಮಿಷ ಮುನ್ನ ಅದನ್ನು ಆನ್‌ ಮಾಡಿ, ನಂತರ ಆಫ್‌ ಮಾಡುವ ಜಾಯಮಾನ ಇಟ್ಟುಕೊಳ್ಳಿ, ನಿಮ್ಮ ಮನೆಯವರಿಗೂ ಇವುಗಳನ್ನು ತಿಳಿಸಿ ಹೇಳಿ. ಯಾಕಂದ್ರೆ, ಬಿಲ್‌ ಕಟ್ಟುವವರು ನೀವಲ್ವಾ?
ಫೋನ್‌ ಚಾರ್ಜರ್‌, ಲ್ಯಾಪ್‌ಟಾಪ್‌ ಚಾರ್ಜರ್‌, ಇದ್ದರೆ ನಿಮ್ಮ ಮೈಕ್ರೋವೇವ್‌ ಅವನ್‌, ಬೇಡ ಅಂದಾಗ ಆಫ್‌ ಮಾಡಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಇವೆಲ್ಲಕ್ಕೂ ಕಳಶಪ್ರಾಯವಾಗಿ ಬರುವುದು, ಇದೀಗ ಎಲ್ಲೆಡೆ ಇನ್ಸ್ಟಾಲ್‌ ಆಗುತ್ತಿರುವ ಸ್ಮಾರ್ಟ್‌ ಮೀಟರ್ ಗಳು.
ದೇಶದಾದ್ಯಂತ ಈಗಾಗಲೇ ನಾಲ್ಕು ಕೋಟಿಗೂ ಈ ರೀತಿಯ ಮೀಟರ್‌ಗಳನ್ನು ಅಳವಡಿಸಲಾಗಿದೆ. ನಿಮ್ಮಲ್ಲೂ ಇದು ಅಳವಡಿಕೆಯಾಗಿದ್ದರೆ, ಇನ್ನೇನು ಆಗುವುದಿದ್ದರೆ, ನಿಮ್ಮ ವಿದ್ಯುತ್‌ ಬಳಕೆಯನ್ನು ನಿಯಮಿತವಾಗಿ ನೀವು ಆಪ್‌ ಒಂದರ ಮೂಲಕ ಮಾನಿಟರ್‌ ಮಾಡಬಹುದು.  ಈ ಮೀಟರ್‌ಗಳ ಬಳಕೆಯಿಂದ, ಪೀಕ್‌ ಅವರ್‌ನಲ್ಲಿ ಹೆಚ್ಚು ಹಾಗೂ ಆಫ್‌ ಪೀಕ್‌ ಅವರ್‌ನಲ್ಲಿ ಕಡಿಮೆ ದರವನ್ನ ಚಾರ್ಜ್‌ ಮಾಡಲಾಗುತ್ತದೆ. ಅಂದರೆ, ನೀವು ಈ ಸಮಯವನ್ನು ನೋಡಿಕೊಂಡು ಕೆಲವೊಂದು ಕೆಲಸಗಳನ್ನು ಮಾಡಿಕೊಳ್ಳಬಹುದು, ನಿಮ್ಮ ವಾಷಿಂಗ್‌ ಮಷಿನ್‌ ಬಳಸುವುದು, ಗೀಸರ್‌ ಬಳಸುವುದು ಇತ್ಯಾದಿ. 
ಕೇವಲ ನಿಮ್ಮ ಮೀಟರ್‌ ಬಳಕೆಯನ್ನು ಮಾನಿಟರ್‌ ಮಾಡುತ್ತಲೇ ಮೊದಲ ಮೂರೇ ತಿಂಗಳಲ್ಲಿ ನಿಮ್ಮ ಬಿಲ್ಲನ್ನು ೧೦-೧೫ ಶೇಕಡಾ ಕಡಿಮೆ ಮಾಡಿಕೊಳ್ಳುವ ಸಾಧ್ಯತೆ ಇದೆ ಅಂದರೆ, ಅದನ್ಯಾಕೆ ಬಳಸಿಕೊಳ್ಳಬಾರದು. ಆದರೆ ೀ ವರ್ಷದಾರಂಭದಲ್ಲೇ ೨೫ ಕೋಟಿ ಸ್ಮಾರ್ಟ್‌ ಮೀಟರ್‌ಗಳು ಅಳವಡಿಕೆಯಾಗಬೇಕಿದ್ದರೂ, ಅದರ ೨೦ ಶೇಕಡಾವನ್ನೂ ತಲುಪುವುದಕ್ಕೆ ನಮಗೆ ಸಾಧ್ಯವಾಗದೇ ಇರುವುದು ದುಃಖದ ವಿಚಾರ ಅನ್ನೋದು ಸತ್ಯ ಬಿಡಿ.

ಆದರೂ ತಂತ್ರಜ್ಞಾನ ಇಲ್ಲದ ಬದುಕೇ ಇಲ್ಲದ ಈ ದಿನಗಳಲ್ಲಿ, ಆ ತಂತ್ರಜ್ಞಾನದ ಬಳಕೆಗೆ ವಿದ್ಯುತ್‌ ಬೇಕೇ ಬೇಕು ಅನ್ನುವುದೂ ಸತ್ಯ. ಒಂದೆಡೆ ನವೀಕರಿಸಬಹುದಾದ ವಿದ್ಯುತ್‌ ಮೂಲಗಳ ಬಳಕೆಯ ಕಡೆ ಗಮನ ಕೊಟ್ಟು, ಇನ್ನೊಂದೆಡೆ ಇರುವ ವಿದ್ಯುತ್‌ ಅನ್ನು ಬೇಕಾಬಿಟ್ಟಿ ಬಳಸದೇ, ಜವಾಬ್ದಾರಿಯುತವಾಗಿರುವ ಮೂಲಕ, ಜೊತೆಗೆ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆ ಮಾಡಿಸಿಕೊಂಡು, ಅದರಿಂದ ಇನ್ನಷ್ಟು ಉಳಿತಾಯ ಮಾಡಿಕೊಳ್ಳುವ ಮೂಲಕ ಬಿಲ್‌ ಬರೆಯನ್ನು ಕಡಿಮೆ ಮಾಡಿಸಿಕೊಳ್ಳುವತ್ತ ನಮ್ಮ ಗಮನಹರಿಸೋಣ. ಏನಂತೀರಾ?

ಟೆಕ್‌-ವಚನ
ಕಾಣದ ಕಳ್ಳ ಕರೆಂಟು ಕದಿಯುತಿದೆ ಮನೆಯೊಳಗೆ
ಕಣ್ಣು ತೆರೆದರೆ ಬಿಲ್ಲು ಕಡಿಮೆಯಾದೀತು | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||

Badekkila Pradeep
Badekkila Pradeep Writer, Voiceover Artist
463 Views
ಶೇರ್ ಮಾಡಿ

1 ಕಾಮೆಂಟ್‌ಗಳು

ರಮೇಶ್ ಗಾಂವ್ಕಾರ

ಬರಹ ಚೆನ್ನಾಗಿದೆ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp