ಎಲ್ಲೆಲ್ಲೂ ಏಐ: ಏಐಯೇ ಮೊದಲ ಗುರು, ಏಐ ಮೊದಲ ಪಾಠಶಾಲೆ! - Tech Vaidya

ಎಲ್ಲೆಲ್ಲೂ ಏಐ: ಏಐಯೇ ಮೊದಲ ಗುರು, ಏಐ ಮೊದಲ ಪಾಠಶಾಲೆ!

ಟೆಕ್‌-ಕಿಲ!, ಬಡೆಕ್ಕಿಲ

ನೀವು ಬಸ್ಸಲ್ಲಿ ಹೋಗುತ್ತಿರಿ, ಅಥವಾ ಯಾರ ಜೊತೆಯೋ ಮಾತನಾಡುತ್ತಿರಿ, ಊಟ ಆಯ್ತಾ, ತಿಂಡಿ ಏನು ಅನ್ನೋವಷ್ಟು ಕಾಮನ್ನಾಗಿ ಬಳಕೆಯಾಗುತ್ತಿರುವ ಟಾಪಿಕ್‌ ಏಐ. ನಮ್ಮ ಜೀವನವನ್ನು ನಮಗೇ ಗೊತ್ತಿಲ್ಲದ ಹಾಗೆ ತುಂಬಿಕೊಳ್ಳುತ್ತಿದೆ ಏಐ.
ಹೇಳಿ ಕೇಳಿ ಕೃತಕ ಬುದ್ಧಿಮತ್ತೆ ಅನಿಸಿಕೊಂಡರೂ, ಸಹಜ ಎನಿಸುವಂತೆ, ನಮ್ಮೆಲ್ಲರನ್ನು ಆವರಿಸಿಕೊಂಡಿರುವ ಏಐ ಇಲ್ಲದೇ ಬದುಕುವುದು ಹೇಗೆ ಎನ್ನುವ ಮಟ್ಟಿಗೆ ಅದರ ಕಬಂಧ ಬಾಹುಗಳನ್ನು ಅದು ಚಾಚಿಕೊಳ್ಳುತ್ತಲೇ ಇದೆ. ಇದು ಒಳ್ಳೆಯದೋ ಕೆಟ್ಟದ್ದೋ ಅನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೊರಡುವುದಕ್ಕೆ ಇದು ಸೂಕ್ತ ಕಾಲ ಅಲ್ಲ. 
ಆದರೆ ಇದು ಇನ್ನೊಂದು ರೀತಿಯ ಬೆಳವಣಿಗೆಯನ್ನೂ ತರುತ್ತಿದೆ. ಇಂದು ನಾವು ಏಐಯನ್ನು ಬೆಳೆದು ದೊಡ್ಡವರಾದ ಮೇಲೆ ನಮ್ಮ ಜೀವನದ ಭಾಗವಾಗಿಸಿಕೊಳ್ಳುತ್ತಿದ್ದೇವೆ, ಓಕೆ. ಆದರೆ ಇನ್ನೊಂದು ಜನರೇಶನ್ ಸದ್ದಿಲ್ಲದೇ ಬೆಳೆಯುತ್ತಿದೆ, ಮತ್ತದು ಏಐ ಅಂದರೆ ಜೀವನದ ಒಂದು ಭಾಗ ಎನ್ನುವುದು ಅದು ತನ್ನ ಕಣ್ತೆರೆಯುವಾಗಲೇ ಕಾಣುತ್ತಿದೆ. ಇದು ಇಲ್ಲದೇ ಬದುಕಲೂ ಸಾಧ್ಯವಿದೆ ಎನ್ನುವ ಸತ್ಯವೂ ಆ ಜನಾಂಗಕ್ಕೆ ಗೊತ್ತಿಲ್ಲದೇ ಹೋಗುವ ಸಾಧ್ಯತೆ ಇಲ್ಲ ಅನ್ನುವುದಕ್ಕೆ ನಮ್ಮ ಸುತ್ತಮುತ್ತಲಿನ ಲೋಕವೇ ಸಾಕ್ಷಿ ಹೇಳುತ್ತಿದೆ.

ಎಷ್ಟು ಆಪ್ತ? ಎಷ್ಟು ಸೂಕ್ತ?
ಏಐ ಗುರು, ಮನುಷ್ಯನಿಂದಲೇ ಕಲಿತು, ಈಗ ಮನುಷ್ಯನಿಗೇ ಕಲಿಸಲು ರೆಡಿಯಾಗಿದೆ.
ಹಾಗೆ ನೋಡಿದರೆ ಏಐ ನಿಮ್ಮ ಮಗುವಿಗೆ ಏನು ಸೂಕ್ತ ಅನ್ನುವುದನ್ನು ಅರಿಯುವುದಕ್ಕಾಗಿಯೇ ಡಿಸೈನ್‌ ಆಗಿದೆ. ಅದರ ಅರ್ಥ ನಿಮ್ಮ ಮಗುವನ್ನು ಅರಿತು, ಅದರ ಕಲಿಕೆಯ ವೇಗಕ್ಕೆ ತಕ್ಕುದಾಗಿ ಅದನ್ನು ಟ್ರೇನ್‌ ಮಾಡುವುದು ಅದರ ಗಟ್ಟಿತನ. 
ಒಂದು ಕ್ಲಾಸಿನಲ್ಲಿ 40 ಮಕ್ಕಳಿದ್ದರೆ, ಒಬ್ಬೊಬ್ಬರ ಕಲಿಯುವಿಕೆಯ ವೇಗ ಒಂದೊಂದು, ಹಾಗಾಗಿ, ವೇಗವಾಗಿ ಅರ್ಥೈಸಿಕೊಳ್ಳುವವರಿಗೆ ನಿಧಾನ ಅನಿಸುವ, ನಿಧಾನ ಕಲಿಯುವವರಿಗೆ ಬೇಗೆ ಅನಿಸುವ ವೇಗದಲ್ಲಿ ಮೇಷ್ಟ್ರು ಪಾಠ ಮಾಡಬೇಕಾಗುತ್ತಿತ್ತು, ಒಬ್ಬೊಬ್ಬರನ್ನೂ ಗಮನಿಸುತ್ತಾ ಹೋಗುವುದು ಅಸಾಧ್ಯವೂ ಆಗಿತ್ತು. ಈ ಕಷ್ಟವನ್ನು ನಿವಾರಿಸಿದೆ ಏಐ.
ವಾರಕ್ಕೆ ಒಮ್ಮೆಯಾದರೂ ಏಐ ಬಳಸೋ ಟೀಚರ್‌ಗಳು ಇಡೀ ವರ್ಷದಲ್ಲಿ ಆರೇಳು ವಾರಗಳನ್ನು ಉಳಿಸಿಕೊಳ್ಳಬಲ್ಲರು ಅಂತ ಒಂದು ಅಧ್ಯಯನ ಹೇಳುತ್ತದೆ. ಒಂದೆಡೆ ವಿದ್ಯಾರ್ಥಿಗಳನ್ನ, ಇನ್ನೊಂದೆಡೆ ಟೀಚರ್‌ಗಳನ್ನೂ ಇನ್ನಷ್ಟು ಶಕ್ತರನ್ನಾಗಿಸುವುದರಲ್ಲಿ ಏಐ ಖಂಡಿತಾ ಸಹಾಯ ಮಾಡೀತು.
ಇದು ಖಂಡಿತಾ, ಆದರೆ, ಏಐ ನಾವು ನೀವು ನೋಡಿದ ಪಾಠ, ಟೀಚರ್‌ಗಳು ಗಮನಿಸಿದ ಸಣ್ಣ ಸಣ್ಣ ವಿಚಾರಗಳು, ನಮ್ಮ ಜೀವನದಲ್ಲಿ ಅವರು ಮಾಡಿದ ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾದೀತಾ? ನೀವು ಒಂದು ದಿನ ಸುಮ್ಮನೇ ಬೇಜಾರಿನಲ್ಲಿ ಕುಳಿತುಕೊಂಡಿರುವುದನ್ನು ಗಮನಿಸಿದ ನಿಮ್ಮ ಮೇಷ್ಟ್ರು ನಿಮ್ಮನ್ನು ಪಕ್ಕ ಕರೆಸಿಕೊಂಡು ನಿಮಗೆ ಸಮಾಧಾನ ಮಾಡಿಸಿದ್ದಿದೆಯಲ್ಲಾ, ಅದು ನಿಮ್ಮ ಜೀವನವನ್ನೇ ಬದಲಿಸಿಬಿಟ್ಟಿರುತ್ತದೆ. ಇದನ್ನು ಏಐ ಹೇಗೆ feel ಮಾಡಿಕೊಳ್ಳುವುದಕ್ಕೆ ಸಾಧ್ಯ, ಇದೆಲ್ಲಾ ಒಂದು ಹೃದಯ ತಿಳಿದುಕೊಳ್ಳುವುದು, ಅದಕ್ಕೆ ಸರಿಯಾಗಿ ಸಂವೇದಿಸುವುದು ಮಾತ್ರ ನಿರೀಕ್ಷಿಸಿಬಹುದು.
ಯುನೆಸ್ಕೋ ಹೇಳಿಕೆಯಲ್ಲಿ ಕೂಡ ಏಐ ಅನ್ನು ಅತಿಯಾಗಿ ಬಳಸಿದರೆ ಅದರ ಫಲಕ್ಕಿಂತ ಹೆಚ್ಚು ತೊಂದರೆಗಳೇ ಆಗುವುದನ್ನು ಗಮನಕ್ಕೆ ತಂದಿದೆ. ಏಐ ಜೊತೆಗೆ ನಮ್ಮ ಟೀಚರ್‌ ಕೂಡ ಇದ್ರೆ ಅವರ ಕೆಲಸಕ್ಕೆ ಹೆಚ್ಚಿನ ಪುಷ್ಟಿ ಬರುತ್ತದೆ, ಅದು ಬಿಟ್ಟು ಟೀಚರನ್ನೇ ಬದಲಾಯಿಸಿ ಅಲ್ಲಿ ಏಐ ಯನ್ನು ಕುಳ್ಳಿರಿಸಿದರೆ, ಅದು ವಿರುದ್ಧ ಫಲಗಳನ್ನು ಕೊಡುವುದು ಜಾಸ್ತಿ.
ಇನ್ನು ದೇಶದಲ್ಲಿ ಏಐ ಟ್ಯೂಟರಿಂಗನ್ನು ಹೆಚ್ಚು ಹೆಚ್ಚು ತರುವುದಕ್ಕೆ ಒತ್ತು ನೀಡಲಾಗುತ್ತಿದೆ. ಆದರೆ ದೇಶದ ೫೦ ಶೇಕಡಾ ಭಾಗದಲ್ಲಿ ಇಂಟರ್ನೆಟ್‌ ಆಗಲಿ, ಕಂಪ್ಯೂಟರ್‌ಗಳಾಗಲಿ ಇಲ್ಲ. ಅದರಲ್ಲೂ ಹಳ್ಳಿ ಪ್ರದೇಶಗಳಲ್ಲಂತೂ ಇದರ ಸಂಖ್ಯೆ ಕಮ್ಮಿ ಅದರರ್ಥ ಈ ಟ್ಯೂಟರ್‌ಗಳ ಅಗತ್ಯ ಹೆಚ್ಚಿರುವಲ್ಲಿ ಅವುಗಳು ತಲುಪುವುದೇ ಸಾಧ್ಯ ಇಲ್ಲ ಅಂದರೆ ಇದಕ್ಕೆ ಒತ್ತು ಕೊಟ್ಟೂ ಪ್ರಯೋಜನ ಇಲ್ಲ ಅಂದಾಯ್ತು.
ರಾಜ್ಯದಲ್ಲೂ 12 ಲಕ್ಷ ವಿದ್ಯಾರ್ಥಿಗಳಿ ಏಐ ಪವರ್ಡ್‌ ಟ್ಯೂಟರ್‌ಗಳ ವ್ಯವಸ್ಥೆಯ ಬಗ್ಗೆಯೂ ಈ ಬಾರಿಯ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರರ್ಥ ಒಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಏಐ ವಿದ್ಯೆ ಬೇಗ ಸಿಗಲಿದೆ. ಆದರೆ ಇದಕ್ಕೆ ಪೂರಕವಾದ ವ್ಯವಸ್ಥೆಗಳು ಆಗಬೇಕು, ಅದಕ್ಕೆ ತಕ್ಕುದಾಗಿ ಸರಕಾರವೂ ಕೆಲಸ ಮಾಡಬೇಕು.
ಯಾವುದೇ ಕೆಲಸ ಮಾಡಿದರೂ, ಏಐ ಎಲ್ಲಾ ಹೇಳಿಕೊಡುತ್ತದೆ ಅಂತ ಹೇಳಿ ನಾವು ಮನುಷ್ಯರು, ನಮ್ಮ ಜೀವನವನ್ನು ನಾವೇ ಮಗುವಿಗೆ ಕಲಿಸಿಕೊಡಬೇಕು. ಇಲ್ಲವಾದರೆ, ಬಾಲ್ಯದಲ್ಲೇ ಹಣ್ಣು ತರಕಾರಿ ತಿನ್ನಲು ಕಲಿಸಿ, ಮನೆಯಲ್ಲೇ ಬೆಳೆಸಿದ ಹುಲಿಯ ತೆರದಲ್ಲಿ ನಮ್ಮ ಮುಂದಿನ ಜನಾಂಗ ಕೂಡ ತಮ್ಮತನವನ್ನು ಇಲ್ಲದೇ ಬದುಕುವುದನ್ನು ಕಾಣಬೇಕಾದೀತು.
ದ್ರೋಣಾಚಾರ್ಯರಿಗೆ ಅರ್ಜುನನಿಗಿಂತ ಮೊದಲೇ ಅವನ ಸಾಮರ್ಥ್ಯ ಅರಿವಿಗೆ ಬಂದಿತ್ತು, ಚಾಣಕ್ಯ ಚಂದ್ರಗುಪ್ತನಿಗೆ ಕೇವಲ ರಾಜನೀತಿಯ ಪಾಠ ಕಲಿಸಿದ್ದಲ್ಲ, ಅವನಲ್ಲಿ ಅದನ್ನು ಅಂತರ್ಗತವಾಗಿಸಿದರು, ರಾಮಾನುಜನ್‌ ಅವರ ಗಣಿತ ಸಿದ್ಧಾಂತಗಳನ್ನು ಹಾರ್ಡಿ ಕೇವಲ ನೋಡಿ ಸಮ್ಮತಿ ಸೂಚಿಸಿದ್ದಲ್ಲ, ಅದಕ್ಕೆ ಸೂಕ್ತ ವೇದಿಕೆ ಮಾಡಿಸಿಕೊಟ್ಟರು.
ಏಐ ನಿಮಗೆ ನಮಗೆ ಎಲ್ಲವನ್ನೂ ಹೇಳಿಕೊಟ್ಟೀತು, ಆದರೆ ಗುರು-ಶಿಷ್ಯ ಬಾಂಧವ್ಯವನ್ನು ಅದು replace ಮಾಡಿಕೊಡುವುದು ಅಸಾಧ್ಯ. ಅದರೊಂದಿಗೆ transactional ಸಂಬಂಧ ಹೊರತು, ಭಾವನಾತ್ಮಕ ಸಂಬಂಧವನ್ನು ಬೆಳೆಸುವುದು ದುಸ್ತರ.
ಟೆಕ್‌-ವಚನ
ಬೀಜ ಬಿತ್ತುವ ಯಂತ್ರ ಬಂದರೂ ಮಳೆ ಬೇಕು
ಮಗುವಿಗೆ ಜ್ಞಾನದ ಜೊತೆ ಪ್ರೀತಿ ಬೇಕು | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||

Nagaraj Vaidya
Nagaraj Vaidya is the Editor-in-Chief of Tech Vaidya Global and a technology analyst with 18 years of journalism experience. He covers AI, Agritech, Cybersecurity, and Digital Trends, helping readers understand the technologies shaping the future. He is the author of AI Bhagavad Gita.
477 Views
ಶೇರ್ ಮಾಡಿ

1 ಕಾಮೆಂಟ್‌ಗಳು

Gururaj shetty

ಲೇಖನ ಚೆನ್ನಾಗಿದೆ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp