ಚಿತ್ರಚೈತ್ರ: ಚಿತ್ರ ಮುಗಿದರೂ ಮುಗಿಯದ ಪಾತ್ರಗಳು!
| ಚೈತ್ರಿಕಾ ವೈದ್ಯ
ಪುಸ್ತಕ ಓದುವಾಗ ಒಳ್ಳೊಳ್ಳೇ ಸಾಲುಗಳನ್ನು ಮಾರ್ಕ್ ಮಾಡಿಕೊಳ್ಳುವ, ಮತ್ತೆ ಮತ್ತೆ ಓದುವ ಅಭ್ಯಾಸ ಕೆಲವರಿಗಿರುತ್ತದೆ. ಹಾಗೆಯೇ ಸಿನಿಮಾದ ಕೆಲ ದೃಶ್ಯಗಳನ್ನು, ಅಂತ್ಯವನ್ನು, ಇಂಟರ್ವಲ್ ಸಮಯದಲ್ಲಿ ಮೈ ನವಿರೇಳುಸುವ ಮ್ಯೂಸಿಕನ್ನು ಮತ್ತೆ ಮತ್ತೆ ನೋಡುವ, ಕೇಳುವ ಹುಚ್ಚು ನನಗಿದೆ.
ನೆಟ್ಫ್ಲಿಕ್ಸಿನಲ್ಲಿ ‘ಇರಟ್ಟಾ’ ಎಂಬ ಮಲಯಾಳಮ್ ಸಿನಿಮಾವೊಂದಿದೆ. ಬಹುಷಃ ಈಗಾಗಲೇ ನೀವೆಲ್ಲ ನೋಡಿರಲೂಬಹುದು. ರೋಹಿತ್ ಎಮ್.ಜಿ ಕೃಷ್ಣನ್ ಅವರ ನಿರ್ದೇಶನದ ಒಂದು ವಿಭಿನ್ನವಾದ ಥ್ರಿಲ್ಲರ್ ಚಿತ್ರ. ಇರಟ್ಟಾ ಎಂದರೆ ಎರಡು ಅಥವಾ ಅವಳಿ ಎಂದರ್ಥ. ಅವಳಿ ಸಹೋದರ ಪೊಲೀಸ್ ಅಧಿಕಾರಿಗಳ ಬದುಕಿನ ಸುತ್ತ ಸಾಗುವ ಈ ಸಿನಿಮಾ, ಮೊದಲಿಗೆ ಸಾಮಾನ್ಯ ಪೊಲೀಸ್ ಕಥೆಯಂತೆ ಕಾಣಿಸಿದರೂ, ಮುಂದುವರಿದಂತೆ ಗಾಢವಾದ ಮನೋವೈಜ್ಞಾನಿಕ ಡ್ರಾಮಾಕ್ಕೆ ತಿರುಗುತ್ತದೆ. ಮಾನವ ಸಂಬಂಧಗಳು, ಬಾಲ್ಯದ ನೆನಪುಗಳು, ಕುಟುಂಬದ ಒತ್ತಡಗಳು ಇವುಗಳ ಸಮನ್ವಯದಲ್ಲಿ ಕಥೆ ಬಲವಾಗುತ್ತದೆ. ಒಂದು ಸಂಬಂಧದಲ್ಲಿನ ಸಂಕೀರ್ಣತೆಯನ್ನು ಬಿಚ್ಚಿಡುತ್ತದೆ. ಚಿಕ್ಕಂದಿನಲ್ಲೇ ಅಣ್ಣ ತಮ್ಮ ಇಬ್ಬರ ಹಾದಿಯೂ ಬೇರೆ ಬೇರೆ ಆದರೂ ಮತ್ತೆ ಎದುರು ಬದುರಾಗುವಂತೆ ಮಾಡಿದ್ದು ಪೊಲೀಸ್ ಉದ್ಯೋಗ. ಆದರೆ ಅಲ್ಲಿಯೂ ಒಬ್ಬರನ್ನು ಕಂಡರೆ ಒಬ್ಬರಿಗಾಗದು. ಹೀಗಿರುವಾಗ ಸ್ಟೇಷನ್ನಲ್ಲಿಯೇ ತಮ್ಮನ ಸಾವಾಗಿಬಿಡತ್ತದೆ. ಅದು ಕೊಲೆಯೋ? ಇನ್ನೇನೋ? ಎಂಬ ತನಿಖೆ ಅಣ್ಣನೇ ಮಾಡುತ್ತಾನೆ. ಹಾಗಿದ್ದರೆ ತಮ್ಮನ ಸಾವಿಗೆ ಕಾರಣ ಏನು? ಆ ಸಾವು, ಮತ್ತದಕ್ಕೆ ಕಾರಣವಾದ ವಿಷಯ ಅಣ್ಣನ ಜೀವನದ ದಿಕ್ಕನ್ನೇ ಹೇಗೆ ಬದಲಾಯಿಸುತ್ತದೆ? ಎಂಬುದೇ ಕತೆ. ಈ ಚಿತ್ರದ ಕ್ಲೈಮ್ಯಾಕ್ಸ್ ಅದೆಷ್ಟು ಕಾಡುತ್ತದೆ ಎಂದರೆ, ಕೊನೆಯಲ್ಲಿ ಆ ಅಣ್ಣ (ಪ್ರಮೋದ್) ತನ್ನ ಫೋನನ್ನು ನೆಲಕ್ಕೆ ಕುಕ್ಕಿದಾಗ ಅದು ಒಡೆಯುವಂತೆ ನಮ್ಮ ಮನಸ್ಸೂ ಒಡೆದು ಹೋಗುತ್ತದೆ. ಆಕೆಯ ‘ಹಲೋ ಹಲೋ’ ಎಂಬ ದನಿ ನಮ್ಮೊಳಗೆ ಪ್ರತಿಧ್ವನಿಸುತ್ತಿರುತ್ತದೆ. ಹೇಗಾದರೂ ಎಲ್ಲವನ್ನು ಸರಿ ಮಾಡಲು ಬಂದಿದ್ದರೆ ಎಂದು ಹಳಹಳಿಸುವಂತೆ ಮಾಡುತ್ತದೆ.
ಎಂದಿಗೂ ಒಪ್ಪಿಕೊಳ್ಳಲಾಗದ ಸತ್ಯವನ್ನೇ ಬದುಕು ನಮ್ಮ ಮುಂದೆ ಇಡತ್ತದೆ ಎಂಬ ವಾಸ್ತವ ಬೆಚ್ಚಿ ಬೀಳಿಸುತ್ತದೆ. ಅಣ್ಣ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವಾಗ ತಮ್ಮನ ಪ್ರತಿಬಿಂಬ ಕಾಣಿಸುವ ಆ ದೃಶ್ಯ ಎಷ್ಟು ತೀವ್ರವಾಗಿದೆಯೆಂದರೆ ಆ ಅನುಭವವನ್ನು ನೀವು ಸಿನಿಮಾ ನೋಡಿಯೇ ಪಡೆಯಬೇಕು. ಹಾಗೇ ಇಡಿ ಚಿತ್ರದ ಕಲರ್ ಥೀಮ್ ಮತ್ತೆ ಮ್ಯೂಸಿಕ್ ಇದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿದೆ. ಇನ್ನು ಹೀರೋ ಜೋಜು ಜಾರ್ಜ್ ನ ನಟನೆಯಂತೂ ಅದ್ಭುತ. ಈ ಹೀರೋ ಬಗ್ಗೆಯಾಗಲಿ, ಮಲಯಾಳಮ್ ಇಂಡಸ್ಟ್ರಿ ಬಗ್ಗೆಯಾಗಲಿ ಏನೂ ಗೊತ್ತಿಲ್ಲದ ದಿನಗಳಲ್ಲಿ ಈ ಸಿನಿಮಾ ನೋಡಿದ್ದರಿಂದ ಅವನ ಡಬಲ್ ಆಕ್ಟಿಂಗ್ ನೋಡಿ ನಿಜಕ್ಕೂ ಇಬ್ಬರೇ ಇರಬಹುದೆ ಎಂದು ಗೂಗಲ್ ಮಾಡಿದ್ದೆ. ಆ ಮಟ್ಟಿಗೆ ಅವಳಿ ಜವಳಿಗಳ ನಡುವಿನ ವ್ಯತ್ಯಾಸವನ್ನು ಅಷ್ಟು ನಿಖರವಾಗಿ ತೋರಿಸಿ, ನಿಜಕ್ಕೂ ಇಬ್ಬಿಬ್ಬರು ಇದ್ದಾರೆನೋ ಎಂಬಷ್ಟು ಜೀವ ತುಂಬಿ, ಸೊಗಸಾಗಿ ನಟಿಸಿದ್ದಾನೆ.
ಇದೇ ನಟನ ‘ಪಣಿ’ ಎಂಬ ಚಿತ್ರವೊಂದಿದೆ. ಸೋನಿ ಲೈವ್ನಲ್ಲಿ ಕನ್ನಡದಲ್ಲಿಯೇ ಲಭ್ಯವಿದೆ. ಜೋಜು ಜಾರ್ಜವರೇ ನಿರ್ದೇಶಿಸಿರುವ, ಅವರದ್ದೇ ನಿರ್ಮಾಣದ ಮೊಟ್ಟ ಮೊದಲ ಚಿತ್ರ ಇದು. ಗಿರಿ ಎಂಬ ಆ ಪಾತ್ರ, ಆತನ ಚಂದದ ಪ್ರಿಂಟೆಡ್ ಶರ್ಟ್ಗಳು, ಹೆಂಡತಿಯನ್ನು ಆತ ಪ್ರೀತಿಸುವ ಬಗೆ, ತೀವ್ರವಾದ ಭಾವನೆಗಳನ್ನು ನಿಶ್ಶಬ್ದದಿಂದಲೇ ವ್ಯಕ್ತ ಪಡಿಸುವ ಆ ನಟನೆ ಈಗಲೂ ಕಣ್ಣುಗಳನ್ನು ಕಟ್ಟುತ್ತವೆ. ಇನ್ನು ಅಭಿನಯದ ಬಗ್ಗೆ ಮತ್ತೆ ಎರಡು ಮಾತಿಲ್ಲ. ಮತ್ತಿದರಲ್ಲಿ ಇಬ್ಬರು ಹುಡುಗರಿದ್ದಾರೆ ಸಾಗರ್ ಸೂರ್ಯ ಹಾಗೂ ಜುನೈಜ್ ವಿ.ಪಿ. ಅವರ ನಟನೆಯಂತೂ ರಕ್ತ ಕುದಿಯುವಂತೆ ಮಾಡುತ್ತದೆ. ಒಬ್ಬ ಖಳನಯಕನಾಗಿ ನಟಿಸುವಾಗ ಆತನನ್ನು ಹಾಗೇ ಚಚ್ಚಿಬಿಡಬೇಕೆನಿಸುವಷ್ಟರ ಮಟ್ಟಿಗೆ ಪ್ರೇಕ್ಷಕ ರೊಚ್ಚಿಗೆದ್ದರೆ ಅದೇ ಆ ನಟನ ಗೆಲುವಲ್ಲವೇ? ಹಾಗೆ ನೋಡಿದರೆ ಈ ಚಿತ್ರ ನಿರ್ದೇಶನ, ಅಭಿನಯ, ಕಥೆ, ಕಾಸ್ಟಿಂಗ್ ಎಲ್ಲದರಲ್ಲೂ ಗೆದ್ದಿದೆ. ಅತ್ತ ಇರಟ್ಟಾದ ಕ್ಲೈಮ್ಯಾಕ್ಸ್ ಮನಸ್ಸನ್ನು ವಿಚಲಿತವಾಗಿಸಿದರೆ, ಈ ಪಣಿ ಚಿತ್ರದ ಕ್ಲೈಮ್ಯಾಕ್ಸ್ ಅಷ್ಟೇ ಸಂತೃಪ್ತಿ ಕೊಡುತ್ತದೆ. ಆ ಸ್ಯಾಟಿಸ್ಫ್ಯಾಕ್ಷನ್ ಸಲುವಾಗಿಯಾದರೂ ಈ ಚಿತ್ರವನ್ನು ನೋಡಲೇಬೇಕು. ಬಹುಶಃ ಒಳ್ಳೆಯ ಸಿನಿಮಾ ಎಂದರೆ ಇದೇ ಇರಬೇಕು—ಒಂದು ಸಿನಿಮಾ ಮುಗಿದ ಮೇಲೂ ಅದು ನಮ್ಮೊಳಗೆ ಮುಗಿಯದೇ ಇರುವುದು.

ನಾನಂತೂ ಸಿನಿಮಾವನ್ನು ಬರೀ ಮನೋರಂಜನೆಗಾಗಿಯಷ್ಟೇ ಅಲ್ಲದೇ ಮನಸನ್ನು ಮಂಥಿಸಿಕೊಳ್ಳಲೂ ನೋಡಬೇಕೆಂದು ನಂಬಿದ್ದೇನೆ. ಪರದೆ ಮೇಲಿನ ಪಾತ್ರಗಳು ಹೇಗೆ ನಮ್ಮನ್ನು ನಕ್ಕು ಹಗುರಾಗಿಸುತ್ತವೆಯೋ ಹಾಗೇ ನಮ್ಮೊಳಗೊಂದು ಭಾರವನ್ನೂ ಉಳಿಸಬೇಕು, ಸಿನಿಮಾದ ಆಚೆಯೂ ಆ ಪಾತ್ರ, ಆ ಕಥೆ ನಮ್ಮಲ್ಲಿ ಬೆಳೆಯುತ್ತ ಹೋಗಬೇಕು. ಗರುಡ ಗಮನ ವೃಷಭ ವಾಹನದ ಹರಿ ಮತ್ತು ಶಿವ ಕಥೆಯಲ್ಲಿ ಸತ್ತು ಹೋದರೂ ನಮ್ಮೊಳಗೆ ಜೀವಂತವಾಗೇ ಇರುತ್ತಾರೆ. ಕಾಂತಾರದ ಶಿವ ಕೋಲ ಕಟ್ಟಿ ಕಾಡಿನಲ್ಲಿ ಅದೃಶ್ಯವಾದರೂ ನಮ್ಮೊಳಗೆ ‘ಹೋ’ ಎಂದು ಘರ್ಜಿಸುತ್ತಲೇ ಇರುತ್ತಾನೆ. ವನಪ್ರಸ್ಥಂ ಚಿತ್ರದಲ್ಲಿನ ಕುಂಜಿಕುಟ್ಟನ್ನ ಸಾವಿನ ಸುದ್ದಿ ಕೇಳಿ ಸುಭದ್ರ ಹಣೆಯ ಕುಂಕುಮವನ್ನಳಿಸಿಕೊಂಡರೂ, ಆತ ನಮ್ಮ ಕಣ್ಣೊಳಗೆ ಕಥಕ್ಕಳಿಯಾಡುತ್ತಲೇ ಇರುತ್ತಾನೆ.
ಚಿತ್ರ ಮುಗಿಯಬಹುದು, ಪಾತ್ರಗಳಲ್ಲ. ಅವು ಮುಗಿಯಲೂಬಾರದು.
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.