ಅಪ್ಪ ಹಾಕಿದ ಆಲದಮರವಲ್ಲ, ಅಪ್ಡೇಟ್ ಆದ ತಂತ್ರಜ್ಞಾನವೇ ಜ್ಞಾನದೀವಿಗೆ! - Tech Vaidya

ಅಪ್ಪ ಹಾಕಿದ ಆಲದಮರವಲ್ಲ, ಅಪ್ಡೇಟ್ ಆದ ತಂತ್ರಜ್ಞಾನವೇ ಜ್ಞಾನದೀವಿಗೆ!

ಟೆಕ್‌-ಕಿಲ!, ಬಡೆಕ್ಕಿಲ

ಮೊನ್ನೆ ಯಾವುದೋ ಮ್ಯಾಗಜಿನ್‌ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಕೇಳಿಬಂದ ಮಾತು, ಓದುವ ಮನಸು ನಮ್ಮದಾಗಬೇಕು. ಓದು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ಪುಸ್ತಕ ಓದಿದರೆ ಮನಸು ಇನ್ನಷ್ಟು ಪಕ್ವವಾಗುತ್ತದೆ, ಇತ್ಯಾದಿ!
ಮೊಬೈಲ್‌ ಕೈಯಲಿದ್ದರೆ ಅದು ತಂತ್ರಜ್ಞಾನವಾದರೆ, ಪುಸ್ತಕ ಓದುವುದು ಜ್ಞಾನ-ತಂತ್ರ ಅನ್ನುವ ಸಾಲು ಇದರಿಂದ ನನ್ನ ಕಿವಿಯಲ್ಲಿ ಅನುರಣನವಾಗುತ್ತಿತ್ತು.
ಆದರೆ, ಇದು ಇಂದು ಎಷ್ಟು ನಿಜ?
ಜ್ಞಾನದೀವಿಗೆಯಾಗಿ ಪುಸ್ತಕಗಳ ಭಂಡಾರವನ್ನು ನೋಡುತ್ತಿದ್ದ ಕಾಲ ನಿಧಾನವಾಗಿ ದೂರವಾಗಿಬಿಡುತ್ತಿದೆ. ಅಂತರ್ಜಾಲದಲ್ಲಿ ಜ್ಞಾನದ ಜ್ವಾಲೆಯನ್ನು ಹತ್ತಿಸುವ ಹಾದಿ ಇನ್ನಷ್ಟು ಸುಗಮವಾಗಿದೆ. ಹಾಗಿರುವಾಗ, ಅಪ್ಪ ಹಾಕಿದ ಆಲದಮರಕ್ಕೇ ಜೋತುಬೀಳುವ ಅಗತ್ಯ ಇಲ್ಲದಾಗಿದೆ.
ನಾನೊಬ್ಬ ಟೆಕ್‌-ನಾಲೆಜ್‌ ಪ್ರಿಯ. ಅಂದರೆ, ಟೆಕ್‌ ಬಳಕೆಯ ಹಿಂದೆ ಹೆಚ್ಚು ಮನಸು ಇಡುವವನು. ಅದೇ ಕಾರಣಕ್ಕೆ, ಇಲ್ಲಿ, ನಿಮ್ಮ ಜೊತೆ ಟೆಕ್‌ ಹೇಗೆ ಕೆಲಸ ಮಾಡುತ್ತದೆ ಅನ್ನುವುದಕ್ಕಿಂತ ಹೆಚ್ಚು, ಟೆಕ್‌ ಯಾಕೆ ನಮಗೆ ಬೇಕು ಎನ್ನುವ ಪ್ರಶ್ನೆಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಒಂದಿಷ್ಟು ಮಾತು-ಕತೆ ಮಾಡುವುದು ಟೆಕ್‌-ಕಿಲದ ಉದ್ದೇಶ.
ಟೆಕ್ಕಿಲ್ಲದ ಲೋಕವನ್ನು ಇಂದು ಊಹಿಸುವುದೂ ಅಸಾಧ್ಯ. ಆದರೆ ಟೆಕ್‌ ಅನ್ನುವುದು ಕಬ್ಬಿಣದ ಕಡಲೆಯಾಗಿ ಅಲ್ಲ, ಕಬ್ಬಿನ ಹಾಲಿನಂತೆ ಮಧುರವಾಗಬೇಕು ಅಂದರೆ ಅದನ್ನು ಬಿಗಿದಪ್ಪಿಕೊಳ್ಳಬೇಕು. ಅದು ನಮ್ಮ ಜೀವನವನ್ನು ಇನ್ನಷ್ಟು ಸಶಕ್ತಗೊಳಿಸಬೇಕು ಅಷ್ಟೇ ಹೊರತು ಅದರ ಹಿಂದಿನ ಟೆಕ್ನಾಲಜಿಯ ಕುರಿತು ತಲೆಕೆಡಿಸಿಕೊಂಡು ನಮ್ಮ ಸಮಯ ವ್ಯರ್ಥಮಾಡಿಕೊಳ್ಳಬೇಕಿಲ್ಲ. ಭಗವಂತನ ಸೃಷ್ಟಿಯನ್ನು ಸಂಪೂರ್ಣವಾಗಿ ಅನುಭವಿಸಲು ಹೇಗೆ ನಾವು ಭಗವಂತನನ್ನೇ ಅರ್ಥಮಾಡಿಕೊಳ್ಳಲೇಬೇಕಿಲ್ಲವೋ, ಹಾಗೆ ಈ ಟೆಕ್ ಕೂಡ, ಏನು, ಎತ್ತ ಅನ್ನುವ ಸಂಕೀರ್ಣತೆಯಲ್ಲಿ ಮುಳುಗುವುದನ್ನು ಬಿಟ್ಟು, ಅದನ್ನು ಆಲಂಗಿಸಿಕೊಳ್ಳಬೇಕು ಅನ್ನುವುದು ನನ್ನ ಫಿಲಾಸಫಿ.
ಲೇಟೆಸ್ಟ್‌ ಗ್ಯಾಜೆಟ್‌, ಟೆಕ್ನಾಲಜಿ ಬಳಸುವುದು ನಮ್ಮನ್ನು ಉಳಿದವರಿಗಿಂತ ಎತ್ತರದವರು ಅನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಅದರ ಮೂಲಕ ನಾವು ನಮ್ಮ ಕೆಲಸವನ್ನು ಎಷ್ಟು ಸಮರ್ಥವಾಗಿ ಮಾಡಬಲ್ಲೆವು ಎನ್ನುವುದು ಮುಖ್ಯವಾಗುತ್ತದೆ.
ಪತ್ರ ಬರೆಯಲಾ, ಇಲ್ಲ ಚಿತ್ರ ಬಿಡಿಸಲಾ, ಹೇಗೆ ಹೇಳಲೀ ನನ್ನ ಮನದ ಗೊಂದಲ…
ಇದು ಕವಿರಾಜ್‌ ಅವರು ಬರೆದಿರುವ ಅರಮನೆ ಚಿತ್ರದ ಹಾಡು. ಕೇಳಲು ಮನದಾನಂದ ನೀಡುತ್ತದೆ ಹೌದು. ಆದರೆ ಇವತ್ತು ಪತ್ರ ಬರೆದೋ, ಚಿತ್ರ ಬಿಡಿಸಿಯೋ ಮನಸಿನ ಮಾತಿಗೆ ರೂಪ  ಕೊಡುವ ಬದಲು, ಫೋನೆತ್ತಿ ನಮ್ಮ ಭಾವನೆಗಳನ್ನು ವಿಡಿಯೋ ಕಾಲ್‌ ಮೂಲಕವೇ ಹೇಳುವುದು ಎಲ್ಲರ ಪರಿಪಾಠ.
ಹಾಗೇ, ಕಾಲಕ್ಕೆ ತಕ್ಕ ಹಾಗೆ, ಟೆಕ್ನಾಲಜಿ ನಮ್ಮ ಮನಸಿನ ಭಾವನವೆಯನ್ನು ಮತ್ತೊಬ್ಬರಿಗೆ ತಿಳಿಸುವಲ್ಲಿ  ಮಹತ್ತರ ಪಾತ್ರವಹಿಸುತ್ತಿದೆ.
ಪುಸ್ತಕದ ಜ್ಞಾನ-ತಂತ್ರದ ಬಗ್ಗೆ ಹೇಳುತ್ತಿದ್ದೆ. ಈಗ ಸಾವಿರಾರು ಪುಸ್ತಕಗಳನ್ನು ತುಂಬಿಕೊಂಡಿರುವ ಗ್ರಂಥಾಲಯಗಳು ಬಿಕೋ ಎನ್ನುತ್ತಿರುವುದು ಯಾಕೆ ಅಂದರೆ, ಒಂದೇ ಕ್ಲಿಕ್‌ನಲ್ಲಿ ಕೋಟ್ಯಂತರ ಪುಟಗಳನ್ನು ಜಾಲಾಡಿ ಅದ್ಯಾವುದೋ ಮೂಲೆಯಲ್ಲಿರುವ ಜ್ಞಾನವನ್ನು ನಮ್ಮೆದುರಿಗೆ ಈ ತಂತ್ರಜ್ಞಾನ ನಮಗೆ ಕೊಡಮಾಡುತ್ತಿದೆ.
ತಂತ್ರಜ್ಞಾನ ನಮ್ಮನ್ನು ಸಾಧ್ಯತೆಗಳ ಸಾಗರದಲ್ಲೇ ಮಿಂದೇಳುವಂತೆ ಮಾಡುತ್ತಿದೆ. ನಮ್ಮನ್ನು enable ಮಾಡುತ್ತಿದೆ. ತಂತ್ರಜ್ಞಾನದ ಹಿಂದಿರುವುದು ನಮ್ಮ ಅಗತ್ಯತೆಗಳು. ಹಳ್ಳಿ ಮೂಲೆಯಲ್ಲಿ ಕುಳಿತ ಹುಡುಗನೊಬ್ಬ ಎಲ್ಲೋ ಇನ್ನೊಂದು ದೇಶದಲ್ಲಿರುವ ವಿಜ್ಞಾನಿಯ ಪಾಠ ಕೇಳಿ ಇಂದಿನ ಬೆಳವಣಿಗೆಯ ಓಘಕ್ಕೆ ತಕ್ಕ ಹಾಗೆ ಬೆಳೆಯುವುದಿದೆಯಲ್ಲ, ಅದು ಟೆಕ್ನಾಲಜಿಯ ಮಹಿಮೆ.
ತಂತ್ರಜ್ಞಾನ ಅಂದ ಕೂಡಲೇ ನಮಗೆ ಯಾವುದೋ ದೊಡ್ಡ ಫಾರ್ಮುಲಾ ಅಥವಾ ಕೋಡಿಂಗ್ ನೆನಪಾಗುತ್ತದೆ. ಆದರೆ ನಿಜವಾದ ತಂತ್ರಜ್ಞಾನ ಎಂದರೆ ನಮ್ಮ ಬದುಕನ್ನು ಸುಲಭ ಮಾಡುವ ದಾರಿ. 
ನೀವೊಬ್ಬ ಕ್ರಿಯೇಟಿವ್‌ ಆಗಿ ಯೋಚಿಸುವವರಾಗಿದ್ದರೆ ನಿಮ್ಮ ಕ್ರಿಯಾಶೀಲತೆಯನ್ನು ಸೂಪರ್‌ಚಾರ್ಜ್‌ಮಾಡಲು ಏಐ ಟೂಲ್‌ಗಳು ನೆರವಾಗಬೇಕು. ಮನಸಿನಲ್ಲಿರುವುದನ್ನು ಅಕ್ಷರ ರೂಪಕ್ಕೋ, ಚಿತ್ರ ರೂಪಕ್ಕೋ, ವಿಡಿಯೋ ರೂಪಕ್ಕೋ ಇಳಿಸುವುದಕ್ಕೆ ಸಹಾಯ ಮಾಡಬೇಕು. ಅದು ಟೆಕ್ನಾಲಜಿಯ ಹಿರಿಮೆ.
ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ವಾಚ್‌ ಕೇವಲ ಸಮಯಪಾಲಕನಾಗದೇ, ನಿಮ್ಮ ಆರೋಗ್ಯದ ದಿಗ್ದರ್ಶಕನಾಗಿ ಕೆಲಸ ಮಾಡುವುದೂ ತಂತ್ರಜ್ಞಾನದ ಸರಳತೆಯ ಕನ್ನಡಿ.
ದೂರದೂರಿನಲ್ಲಿದ್ದುಕೊಂಡೇ ನಿಮ್ಮ ಮನೆಯನ್ನು ಸಿಸಿಟಿವಿ ಮೂಲಕ ಮಾನಿಟರ್‌ ಮಾಡುವುದು ತಂತ್ರಜ್ಞಾನದ ತಾಕತ್ತು. ನಿಮ್ಮ ಮನೆಯ ಕಾಲಿಂಗ್‌ ಬೆಲ್‌ ಒತ್ತಿದ ಕೂಡಲೇ, ನೀವು ಜಗತ್ತಿನ ಎಲ್ಲೇ ಇದ್ದರೂ, ಯಾರು ಬಂದರು ಎಂದು ನೋಡಿ, ಬಾಗಿಲು ತೆರೆಯುವುದಕ್ಕೂ ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಅದರ ಹಿಂದಿನ ಕೋಡಿಂಗ್‌ ಏನು, ಅದರೊಳಗಿರುವ ಚಿಪ್‌ ಹೇಗೆ ಕೆಲಸ ಮಾಡುತ್ತದೆ ಇತ್ಯಾದಿಯನ್ನು ತಿಳಿಯುವ ಹಂಗು ನಿಮ್ಮದಾಗಬೇಕಿಲ್ಲ.
ಟೆಕ್ನಾಲಜಿ ನಮ್ಮನ್ನು ಕೊಂಡೊಯ್ಯುವ ವೇಗ ಹೆಚ್ಚಿಸುತ್ತದೆ. ನಮ್ಮ ಪಯಣದ ವೇಗ ಹೆಚ್ಚಾಗುತ್ತದೆ. ಅದು ನಡೆಯುತ್ತಿದ್ದ ಮನುಜನಿಗೆ ಚಕ್ರ ನೀಡಿದ ವೇಗದಿಂದ ಶುರುವಾಗಿ, ಇಂದು ಏಐ ಎನ್ನುವ, ಮಾನವ ಜನಾಂಗದ ಪ್ರತಿಫಲನದವರೆಗೆ ಬಂದು ನಿಂತಿದೆ.
ಮನಸ್ಸಿನಷ್ಟು ವೇಗವಾಗಿ ಬೆಳಕಿಗೂ ಹೋಗಲು ಸಾಧ್ಯವಿಲ್ಲವಂತೆ. ಆದರೆ ಆ ಮನಸ್ಸಿನ ವೇಗವನ್ನು ಅರಿತು ಕೆಲಸಗಳನ್ನು ಮಾಡಿಕೊಡುವುದು ತಂತ್ರಜ್ಞಾನಕ್ಕೆ ಸಾಧ್ಯವಿದೆ.
ಬನ್ನಿ ಈ ತಂತ್ರ-ಜ್ಞಾನ ಸಾಗರದಲ್ಲಿ ಆಗಾಗ ವಿಹರಿಸಿ ಬರೋಣ. ಈ ಟೆಕ್-ಕಿಲ ಏರಿಸುವ ಕಿಕ್ಕು, ನಿಮ್ಮ ತಂತ್ರಜ್ಞಾನದ ವಿಹಾರದಲ್ಲಿ ಹೇಗೆ ಹೊಸ ಕ್ಲಿಕ್ಕನ್ನು ನೀಡುತ್ತದೆ, ಹೊಸ ಔಟ್‌ಲುಕ್ಕನ್ನು (ದೃಷ್ಟಿಕೋನ) ಕೊಡುತ್ತದೆ, ಎನ್ನುವುದನ್ನು ಮುಂದಕ್ಕೆ ನೋಡುತ್ತಾ ಸಾಗೋಣ.
ಕಳೆದೆರಡು ದಶಕಗಳಿಂದ ಮಾಧ್ಯಮ ಜಗತ್ತಿನಲ್ಲಿ ವಿಹರಿಸುತ್ತಾ ಬಂದಿರುವ ನನಗೆ ಟೆಕ್ನಾಲಜಿ ಮೊದಲಿಗೆ ವಿಸ್ಮಯದ ಆಗರವಾಗಿತ್ತು. ಮುಂದೆ ಸಾಗುತ್ತಾ, ವಿಸ್ಮಯಗಳ ಆಗರವನ್ನು  ಅನ್ವೇಶಿಸಯವ ದಾರಿದೀಪವಾಗಿ ಬದಲಾಗುತ್ತಾ ಹೋಯಿತು. ಈ ದಿನಗಳಲ್ಲಿ ನಾನು ಕಂಡ ಮಾಧ್ಯಮಲೋಕ ಹೇಗೆ ತಂತ್ರಜ್ಞಾನದೊಂದಿಗೆ ಬೆರೆಯುತ್ತಾ ತನ್ನ ಬೇರೆಯದೇ ರೂಪವನ್ನು ಕಂಡುಕೊಳ್ಳುತ್ತಿದೆ ಎನ್ನುವ ವಿಷಯಗಳಿಂದ ತೊಡಗಿ, ಇಂದಿನ ಟೆಕ್‌-ಲೋಕದ ಒಳಿತು ಕೆಡುಕುಗಳ ಅವಲೋಕನವನ್ನೂ ಮಾಡುತ್ತಾ, ಜ್ಞಾನ-ವಿಜ್ಞಾನದ ಜೊತೆ ಸಮಾಜದ ಅನುರಣನ ಹೇಗೆ ಎನ್ನುವುದನ್ನೂ ನೋಡುತ್ತಾ ಮುಂದೆ ಸಾಗೋಣ.
ಬನ್ನಿ, ಈ ತಂತ್ರ-ಜ್ಞಾನ ಸಾಗರದ ಮೂಲಕ ಹೇಗೆ ಜ್ಞಾನ-ತಂತ್ರದ ಬಗೆಗೆ ಭಾಷ್ಯ ಬರೆಯುವುದು ಎನ್ನುವುದನ್ನು ಜೊತೆಯಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

ಟೆಕ್‌-ವಚನ
ಅರಿವು ಬೆರಳ ತುದಿಯಲಿ, ಜಗವು ಕೈಯಲಿ
ನೆರವಹುದು ತಂತ್ರ ಮನುಜನಿಗೆ | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||

❤️ ಈ ಲೇಖನಗಳನ್ನೂ ಓದಿ

❤️ಹಳ್ಳಿಗಳಿಗೆ 150Mbps ವೇಗದ ಇಂಟರ್ನೆಟ್ ನೀಡಲಿದೆಯಾ ಸ್ಟಾರ್ಲಿಂಕ್?

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ

❤️ಡಿಜಿಟಲ್ ಪೇರೆಂಟಿಂಗ್: ವರ್ಚುವಲ್ ಕಳ್ಳರಿಂದ ಪಾರಾಗುವುದು ಹೇಗೆ?

❤️ಜನರೇಟಿವ್ ಎಐ ಅಭಿವೃದ್ಧಿಗೆ ಗುಡ್ ನ್ಯೂಸ್: ಭಾರತದಲ್ಲೇ ಲಭ್ಯ ಹೈ-ಸ್ಪೀಡ್ GPU!

❤️ಲ್ಯಾಪ್‌ಟಾಪ್ ಕೊಳ್ಳುವ ಗೈಡ್: ಅಪ್ಪನ ದುಡ್ಡು ವೇಸ್ಟ್ ಮಾಡ್ಬೇಡಿ!

❤️ಜೇಬಿನಲ್ಲಿರುವ ಕ್ಯಾಸಿನೊ: ಸ್ಲಾಟ್ ಮಷಿನ್ ಆದ ನಿಮ್ಮ ಸ್ಮಾರ್ಟ್‌ಫೋನ್!

ಸಂಬಂಧಿತ ಲೇಖನಗಳು

Related News ತಂತ್ರಜ್ಞಾನ ಮತ್ತು ನಮ್ಮ ನುಡಿ: ಟೆಕ್ನಾಲಜಿಯ ಆಡು-ಭಾಷೆ ಯಾವುದು?
Related News ಆ್ಯಪಲ್‌ನ ಲ್ಯಾಪ್‌ಟಾಪ್‌ನಲ್ಲಿ ಕನ್ನಡ ಬರೆಯಲು ಇಷ್ಟು ಕಷ್ಟವೇ? ಕೀಬೋರ್ಡ್ ಮಾಡೋಕೆ ಆ್ಯಪಲ್‌ಗೆ ಏನು ಸಮಸ್ಯೆ?
Related News ಟೆಕ್‌ವೈದ್ಯ: ಒಂದು ವರ್ಷ. ಸಾವಿರಕ್ಕೂ ಹೆಚ್ಚು ಲೇಖನಗಳು.. ಇನ್ನೂ ಇದೆ ಸಾಗುವ ದಾರಿ!
Related News ಶಾಲೆಗೆ ರಜೆ ಘೋಷಣೆಯಾದ ತಕ್ಷಣ ಮಳೆ ನಿಲ್ಲುವುದೇಕೆ? ಬಯಲಾಯ್ತು ಅಸಲಿ ರಹಸ್ಯ!
Related News 'ಎಐ ಭಗವದ್ಗೀತೆ' ಮತ್ತು 'ಟೆಕ್ ವೈದ್ಯ': ಕಾರ್ಯಕ್ರಮಕ್ಕೆ ಬಂದವರು ಏನಂದ್ರು ಗೊತ್ತಾ?

❤️ಮಹಿಳೆಯರ ಆಫೀಸ್ ಕೆಲಸಕ್ಕೆ ಪರ್ಫೆಕ್ಟ್ ಆಗಿರುವ ಸ್ಮಾರ್ಟ್ ಡಿವೈಸ್ ಗಳು!

❤️ತಾಮ್ರದ ವೈರ್‌ಗಳಿಗೆ ಗುಡ್‌ಬೈ: ಭವಿಷ್ಯದ ಡೇಟಾ ಸೆಂಟರ್ ಆಳಲಿದೆ ಬೆಳಕಿನ ವೇಗ!

❤️ಮಹಿಳೆಯರ ರಕ್ಷಣೆಗೆ ಬೆಸ್ಟ್ ಟಾಪ್ 5 ಸ್ಮಾರ್ಟ್ಫೋನ್ ಆ್ಯಪ್ ಗಳು

🟢 ನಿರಂತರ ಅಪ್ಡೇಟ್‌ ಪಡೆಯಲು ನಮ್ಮ ವಾಟ್ಸಾಪ್‌ ಚಾನೆಲ್‌ ಫಾಲೋ ಮಾಡಿ JOIN ➤

🛒 ಆನ್‌ಲೈನ್‌ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್‌ ಬಳಸಿ

🟠 ಅಮೆಜಾನ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

🔵 ಫ್ಲಿಪ್‌ಕಾರ್ಟ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Nagaraj Vaidya
Nagaraj Vaidya is the Editor-in-Chief of Tech Vaidya Global and a technology analyst with 18 years of journalism experience. He covers AI, Agritech, Cybersecurity, and Digital Trends, helping readers understand the technologies shaping the future. He is the author of AI Bhagavad Gita.
325 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp