ಕಾಗದದ ಗುಡ್ಡೆಯಿಂದ ಕ್ಲೌಡ್‌ವರೆಗೆ: ಸ್ಟಾರ್ಟ್‌ಅಪ್‌ಗಳ ಪಾಲಿನ ಆಪ್ತಮಿತ್ರ ಈ ERPNext ಬಗ್ಗೆ ನಿಮಗೆ ಗೊತ್ತಾ?
| ಹರ್ಷ ಹೆಗಡೆ ಕೊಂಡದಕುಳಿ
ಇವತ್ತು ಜಗತ್ತಿನಲ್ಲಿ ಸ್ಟಾರ್ಟ್‌ಅಪ್‌ಗಳದ್ದೇ ಹವಾ. ಎಲ್ಲರಿಗೂ ತಮ್ಮದೊಂದು ಸ್ವಂತ ಉದ್ದಿಮೆ ಪ್ರಾರಂಭಿಸಬೇಕೆನ್ನುವುದು ಇವತ್ತಿಗೆ ಕೇವಲ ಕನಸಾಗಿ ಉಳಿದಿಲ್ಲ. ಅದೀಗ ಆಲ್ಮೋಸ್ಟ್ ಪಾಸಿಬಲ್. ಹೀಗಾಗಿಯೇ ಒಂದು ವೃತ್ತಿಯಲ್ಲಿರುವಾಗಲೇ ಅದರ ಬೆನ್ನು ಹತ್ತಿ ಹೊರಡುವವರು ಅನೇಕ ಮಂದಿ. ಈಗೆಲ್ಲಾ ರಸ್ತೆಯ ತಿರುವಿನಲ್ಲಿ ಸಿಗುವ ಸಣ್ಣ ಚಹಾ ಅಂಗಡಿಯಿಂದ ಹಿಡಿದು, ಹೈಟೆಕ್ ಸಾಫ್ಟ್‌ವೇರ್ ಕಂಪನಿಗಳವರೆಗೆ ಎಲ್ಲರ ಕಣ್ಣಲ್ಲೂ ಒಂದು ದೊಡ್ಡ ಉದ್ಯಮ ಕಟ್ಟುವ ಹಸಿವಿದೆ. ಆದರೆ, ಹೊಸದೊಂದು ಉದ್ಯಮ ಕಟ್ಟುವಾಗ ಎದುರಾಗುವ ಮೊದಲ ಸವಾಲು ದಾಖಲೆಗಳ ಕ್ರೋಢೀಕರಣ, ವ್ಯವಸ್ಥಿತ ನಿಯಂತ್ರಣ ಮತ್ತು ದಾಖಲಾತಿ. ಸಹಜವಾಗಿ ಹೊಸ ಉದ್ಯಮ ಕಟ್ಟುವವರು ಇನಿಶಿಯಲ್ ಸ್ಟೇಜ್‌ನಲ್ಲಿ ಉಚಿತವಾಗಿ ಸಿಗುವ ಅಥವಾ ಕಡಿಮೆ ಖರ್ಚಿನ ಸಾಫ್ಟ್‌ವೇರ್‌ಗಳತ್ತ ಮುಖ ಮಾಡುವುದು ಅನಿವಾರ್ಯ. ಹೀಗೆ ಹುಡುಕುವಾಗ ಕೆಲವರು ಫ್ರೀ ಎಂದು ಯಾವ್ಯಾವುದೋ ಅಪ್ಪ- ಅಮ್ಮನಿಲ್ಲದ ಸಾಫ್ಟ್ವೆರ್ ಬಳಸಿ ಮಂಗನಂತಾಗುವುದು ಕಾಮನ್. ಆದರೆ ಇದೆಲ್ಲದಕ್ಕೂ ಸಮರ್ಥ ಆಯ್ಕೆಯಾಗಿ ಎದುರಾಗುವುದೇ ERPNext ಎಂಬ ಓಪನ್ ಸೋರ್ಸ್ ERP.
ಆದರೆ ಇಲ್ಲಿ ಒಂದು ಸತ್ಯವನ್ನು ನಾವು ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳಬೇಕು. ಯಾವುದೂ ಕೂಡ ಜಗತ್ತಿನಲ್ಲಿ ಸಂಪೂರ್ಣವಾಗಿ ಉಚಿತವಲ್ಲ. ERPNext ಅನ್ನು ‘ಓಪನ್ ಸೋರ್ಸ್’ ಎಂದು ಕರೆದಾಗ, ಅದರ ಅರ್ಥ ಆ ಸಾಫ್ಟ್‌ವೇರ್ ಎಂಬ ‘ಯಂತ್ರ’ದ ನೀಲನಕ್ಷೆ ನಿಮಗೆ ಉಚಿತವಾಗಿ ಸಿಗುತ್ತದೆ ಎಂದು. ನೀವು ನಿಮ್ಮ ಆಫೀಸ್‌ನ ಒಂದು ಕಂಪ್ಯೂಟರ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿ, ಕೇವಲ ಆಫೀಸ್ ಒಳಗಷ್ಟೇ ಬಳಸುತ್ತೀರಿ ಎಂದರೆ ಒಂದು ರೂಪಾಯಿ ಖರ್ಚಿಲ್ಲದೆ ಇದು ನಿಮ್ಮ ಹಾರ್ಡ್ ಡಿಸ್ಕ್ ಮೇಲೆ ಕುಳಿತು ಕೆಲಸ ಮಾಡುತ್ತದೆ. ಆದರೆ, ನೀವು ಎಲ್ಲೋ ದೂರ ಪ್ರಯಾಣ ಮಾಡುತ್ತಿರುವಾಗ ಮೊಬೈಲ್‌ನಲ್ಲಿ ನಿಮ್ಮ ಉದ್ಯಮದ ಲೆಕ್ಕ ನೋಡಬೇಕು ಎಂದರೆ, ಆ ಸಾಫ್ಟ್‌ವೇರ್ ಅನ್ನು ಇಂಟರ್ನೆಟ್ ಎಂಬ ವಿಶಾಲವಾದ ಆಕಾಶದಲ್ಲಿ ಹಾರಿಸಿಡಬೇಕಾಗುತ್ತದೆ. ಇದಕ್ಕೆ ‘ಹೋಸ್ಟಿಂಗ್’ ಎನ್ನುತ್ತಾರೆ. ಇದಕ್ಕೆ ತಿಂಗಳಿಗೆ ಒಂದು ಸಣ್ಣ ಬಾಡಿಗೆಯನ್ನು ನೀವು ಕೊಡಲೇಬೇಕಾಗುತ್ತದೆ. ಅದು ಸಾಧ್ಯವಿಲ್ಲ ಎಂದರೆ ಕೇವಲ ನಿಮ್ಮ ಕಂಪ್ಯೂಟರ್ ಒಂದರ ಒಳಗೆ ಮಾತ್ರ ಬೇಕಾದಹಾಗೆ ಬಳಸಬಹುದು.
ಹಾಗಿದ್ದರೆ ಉದ್ಯಮಗಳು ಏಕೆ ಇದರ ಬೆನ್ನತ್ತುತ್ತಾರೆ?
ಏಕೆಂದರೆ, ಹೆಸರಾಂತ ಕಂಪನಿಗಳ ಸಾಫ್ಟ್‌ವೇರ್‌ಗಳನ್ನು ಬಳಸಲು ನೀವು ಪ್ರತಿ ತಿಂಗಳು ಪ್ರತಿ ಉದ್ಯೋಗಿಗೆ ಸಾವಿರಾರು ರೂಪಾಯಿ ಎಂದು ‘ಲೈಸೆನ್ಸ್ ಫೀಸ್’ ಕಟ್ಟಬೇಕು. ಇದು ಕೇವಲ ಅವರ ಸಿಸ್ಟಮ್ ಮುಟ್ಟುವ ಸಲುವಾಗಿ ಮಾತ್ರ. ಆದರೆ ERPNext ನಲ್ಲಿ ಆ ಲೈಸೆನ್ಸ್ ಫೀಸ್ ಇಲ್ಲ. ಅಂದರೆ, ನಾವು ಒಂದು ಕಪಾಟಿನ ಖರೀದಿಗೆ ಹಣ ನೀಡಬೇಕಾಗಿಲ್ಲ. ಆದರೆ ಅದನ್ನು ಯಾವುದೋ ಬೇರೆ ಜಾಗದಲ್ಲಿ ಇಡುತ್ತೇವೆ ಎಂದರೆ ಮಾತ್ರ ಆ ಜಾಗದ ಬಾಡಿಗೆ ಕೊಡುತ್ತೇವೆ. ಅಲ್ಲದೇ ಆ ಜಾಗದಲ್ಲಿ ನೀವು ಇರಿಸುವ ಕಪಾಟಿನಲ್ಲಿ ಏನನ್ನು ಸಂಗ್ರಹಿಸುತ್ತೀರಿ ಅದಕ್ಕೆ ಯಾರೂ ಬಾಡಿಗೆಯನ್ನೂ ಕೇಳುವುದಿಲ್ಲ, ಅದ್ರ ನಿರ್ವಹಣಾ ವೆಚ್ಚವನ್ನೂ ಕೇಳುವುದಿಲ್ಲ. ಈ ಆರ್ಥಿಕ ಸ್ವಾತಂತ್ರ್ಯವೇ ಸ್ಟಾರ್ಟ್‌ಅಪ್‌ಗಳಿಗೆ ದೊಡ್ಡ ಬಲ.
ತಾಂತ್ರಿಕವಾಗಿ ಈ ERPNext, Frappe ಎಂಬ ಅತ್ಯಾಧುನಿಕ ಫ್ರೇಮ್‌ವರ್ಕ್‌ನಿಂದ ಸಜ್ಜುಗೊಂಡಿದೆ. ಪೈಥಾನ್ (Python) ಭಾಷೆಯ ಶಕ್ತಿಯ ಮೇಲೆ ನಿಂತಿರುವ ಇದು, ನಮ್ಮ ಉದ್ದಿಮೆಯ ಪ್ರತಿಯೊಂದು ಹಂತವನ್ನೂ ದಾಖಲಿಸಬಲ್ಲದು. ನಮ್ಮ ಇನ್ವೆಂಟರಿ ಮ್ಯಾನೇಜ್‌ಮೆಂಟ್‌ನಿಂದ ಹಿಡಿದು ಜಿಎಸ್‌ಟಿ (GST) ವರದಿಗಳವರೆಗೆ ಎಲ್ಲವನ್ನೂ ಇದು ನಿಭಾಯಿಸುತ್ತದೆ. ನಾವು ಸ್ವಲ್ಪ ಮಟ್ಟಿಗೆ ತಾಂತ್ರಿಕವಾಗಿ ಪರಿಣತರಾಗಿದ್ದರಂತೂ, ಇದರ ಕೋಡ್ ಅನ್ನು ನಮ್ಮ ಇಷ್ಟದಂತೆ ಬದಲಾಯಿಸಿಕೊಳ್ಳುವ ‘ಓಪನ್’ ಹಕ್ಕು ನಿಮಗಿದೆ. ಅಂದರೆ ಈ ಸಾಫ್ಟ್‌ವೇರ್ ಮೇಲೆ ಕಂಪನಿಯ ಹಿಡಿತಕ್ಕಿಂತ ನಿಮ್ಮದೇ ಹಿಡಿತ ಹೆಚ್ಚು. ಜೊತೆಗೆ ಇದು Doctype ಎನ್ನುವ ವಿಶಿಷ್ಟ ಫೀಚರ್ ಬಳಸುವುದರಿಂದ ನಾವು ನಮಗೆ ಬೇಕಾದ ಹಾಗೆ ಕಡತಗಳನ್ನು ಜೋಡಿಸಿಟ್ಟುಕೊಳ್ಳಬಹುದು.
ERPNext ಎನ್ನುವುದು ಕೇವಲ ಮತ್ತೊಂದು ಲೆಕ್ಕದ ಪುಸ್ತಕವಲ್ಲ, ಅದು ಗೊಂದಲದ ನಡುವೆ ಒಂದು ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನ. ಹೌದು, ಇದನ್ನು ಇಂಟರ್ನೆಟ್ ಮೂಲಕ ಮೊಬೈಲ್‌ನಲ್ಲಿ ಆಕ್ಸೆಸ್ ಮಾಡಲು ನೀವು ಸರ್ವರ್ ವೆಚ್ಚ ಭರಿಸಬೇಕು ನಿಜ, ಆದರೆ ಲಕ್ಷಾಂತರ ರೂಪಾಯಿಗಳ ಸಾಫ್ಟ್‌ವೇರ್ ಲೈಸೆನ್ಸ್ ಹೊರೆಗೆ ಹೋಲಿಸಿದರೆ ಈ ವೆಚ್ಚ ಅತ್ಯಲ್ಪ. ದೊಡ್ಡ ದೊಡ್ಡ ಕನಸಿನ ಬೆನ್ನಟ್ಟಿ ಹೊರಡುವ ಸ್ಟಾರ್ಟ್‌ಅಪ್‌ಗಳಿಗೆ ಈ ಸಾಫ್ಟ್‌ವೇರ್ ಒಂದು ವರದಾನವೇ ಸರಿ. ನೀವೂ ಕೂಡ ಇಂಥದ್ದೊಂದು ERP ಯ ಹುಡುಕಾಟದಲ್ಲಿದ್ದರೆ ಗೋ ಫಾರ್ ಇಟ್. ಆಶ್ವಾಸನೆ ನಾ ನೀಡಬಲ್ಲೆ.
❤️ ಈ ಲೇಖನಗಳನ್ನೂ ಓದಿ
❤️ಕ್ಲೌಡ್ ಬೇಡ, ಇಂಟರ್ನೆಟ್ ಬೇಡ: ಆನ್ ಡಿವೈಸ್ ಎಐ ಫೋನ್ ಗಳ ಅದ್ಭುತ ಲೋಕ!
❤️ಟೆಸ್ಲಾ ರೋಬೋಟ್ ಗಳಿಗೆ ಜೀವ ತುಂಬಲಿದ್ದಾರಾ ಈ ಭಾರತೀಯ ಯುವ ವಿಜ್ಞಾನಿ?
❤️ಅಪ್ಪ ಹಾಕಿದ ಆಲದಮರವಲ್ಲ, ಅಪ್ಡೇಟ್ ಆದ ತಂತ್ರಜ್ಞಾನವೇ ಜ್ಞಾನದೀವಿಗೆ!
❤️ಭಾರತೀಯ ಸ್ಟಾರ್ಟಪ್ ಸಾಧನೆ: ಬಾಹ್ಯಾಕಾಶದಲ್ಲಿ ತೇಲಲಿದೆ ಎಐ ಡೇಟಾ ಸೆಂಟರ್!
❤️ಜೇಬಿನಲ್ಲಿರುವ ಕ್ಯಾಸಿನೊ: ಸ್ಲಾಟ್ ಮಷಿನ್ ಆದ ನಿಮ್ಮ ಸ್ಮಾರ್ಟ್‌ಫೋನ್!
❤️ಮಣ್ಣಿನ ಮಕ್ಕಳ ನೆರವಿಗೆ ಕೃತಕ ಬುದ್ಧಿಮತ್ತೆ: ಸ್ಮಾರ್ಟ್ ಫಾರ್ಮಿಂಗ್ ಭವಿಷ್ಯವೇನು?
❤️ಭಾರತದ ಹೊಸ ಡೇಟಾ ಸೆಂಟರ್ ನೀತಿಯಿಂದ ದೇಶಿ ಕ್ಲೌಡ್ ಸ್ಟಾರ್ಟ್ಅಪ್ ಗಳಿಗೆ ಕಾದಿದೆಯಾ ಗಂಡಾಂತರ?
❤️ಕೀಬೋರ್ಡ್ ಶಾರ್ಟ್ ಕಟ್ಸ್: ಮೌಸ್ ಮುಟ್ಟದವನೇ ರಿಯಲ್ ಡಾನ್!
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
🛒 ಆನ್‌ಲೈನ್ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್ ಬಳಸಿ
🟠 ಅಮೆಜಾನ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
🔵 ಫ್ಲಿಪ್‌ಕಾರ್ಟ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
0 ಕಾಮೆಂಟ್‌ಗಳು
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.