ಧೀಮಹಿ ಕನೆಕ್ಟ್: ಯಕ್ಷ ಸಂಸ್ಕೃತಿಗೊಂದು ತಂತ್ರಜ್ಞಾನದ ಸ್ಪರ್ಶ
| ಹರ್ಷ ಹೆಗಡೆ, ಕೊಂಡದಕುಳಿ
ಯಾವ ಸಂಗತಿಯೇ ಆಗಿರಲಿ. ಅದು ಕಾಲಕಾಲಕ್ಕೆ ಅಪಡೇಟ್ ಆಗುತ್ತಿರಬೇಕು. ಇಲ್ಲದಿದ್ದರೆ ಅದು ಅದರ ಅವಶ್ಯಕತೆಯನ್ನು ಕಳೆದುಕೊಳ್ಳುತ್ತದೆ. ಕಾಲದೊಂದಿಗೆ ಹೆಜ್ಜೆ ಹಾಕದ ಯಾವುದೂ ಕೂಡ ದೀರ್ಘ ಸಮಯದವರೆಗೆ ಪ್ರಸ್ತುತತೆಯನ್ನು ಉಳಿಸಿಕೊಳ್ಳಲಾರದು. ಬದಲಾದ ಜಮಾನದಲ್ಲೂ ಹಳೆಯದೇ ರಾಗ ಎಂದಾಗ ಅಪ್ರಸ್ತುತ ಎನಿಸುತ್ತದೆ. ಇವತ್ತಿನ ದಿನಮಾನಕ್ಕಂತೂ ದಿನ ದಿನವೂ ಹೊಸ ಹೊಸ ವರ್ಷನ್ ಗಳಿಗೆ ಅಪಡೇಟ್ ಆಗಬೇಕಾದದ್ದು ಎಲ್ಲಾ ವಿಚಾರಗಳ ಅನಿವಾರ್ಯ. ಬದುಕೂ ಕೂಡ.
ದಿನವೂ ಸಂಕ್ರಮಣ ಎನ್ನುವ ಇಂದಿನ ಕಾಲದಲ್ಲಿ ಸಂಸ್ಕೃತಿ, ಆಚಾರ - ವಿಚಾರಗಳೂ ಕೂಡ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾಗಲೇ ಬೇಕು. ಹಿಂದೆ ವಿಜಯನಗರದ ಆರಂಭದ ದಿನಗಳಲ್ಲಿ ಅನ್ನವನ್ನು ಹಣಕ್ಕೆ ಮಾರಾಟ ಮಾಡುವುದು ಪಾಪದ ಕೆಲಸ ಎಂಬಂತೆ ನೋಡಲಾಗುತ್ತಿತ್ತು. ಆದರೆ ಕಾಲಕ್ರಮೇಣ ಉಪಹಾರ ಗೃಹಗಳು ಹುಟ್ಟಿಕೊಂಡವು. ಅದು ಒಂದು ಉದ್ಯಮವಾಯಿತು. ಹೀಗೆ ಕಾಲದೊಟ್ಟಿಗೆ ಹೊಂದಿಕೊಳ್ಳಬೇಕು. ಇಲ್ಲದಿದ್ದಾಗ ಹಿಂದೆ ಬೀಳುತ್ತೇವೆ. ಅಂತಹದ್ದೇ ಸ್ಥಿತಿ ಕಲೆಗಳಿಗೂ ಇದೆ. ಅದರಲ್ಲೂ ಶಾಸ್ತ್ರೀಯ ಚೌಕಟ್ಟಿನ ಕಲೆಗಳಿಗೆ ಇದು ವರ್ತಮಾನದ ಸವಾಲು. ಮೂಲರೂಪಕ್ಕೆ ಧಕ್ಕೆಯಾಗದಂತೆ ಅದನ್ನು ಹೊಸತಲೆಮಾರಿಗೆ ತಕ್ಕಂತೆ ಬದಲಾವಣೆಗೆ ಒಗ್ಗಿಸುವುದು ಪ್ರಯಾಸವೇ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದರೆ ಅದಕ್ಕೆ ಬರುವ ಸಡ್ಡೆಯ ಮಾತುಗಳು ಬೇರೆ. ಹೀಗಾಗಿ ಅಂತಹ ಸಾಹಸ ಮಾಡಲು ಯಾರೂ ಮನಸ್ಸೂ ಮಾಡುವುದೂ ಇಲ್ಲ.
ಆದರೆ ಕಾಲ ಯಾರಿಗೂ ಕಾಯುವುದಿಲ್ಲ. ಅಂತೆಯೇ ಬದಲಾವಣೆಯನ್ನೂ ಅಳವಡಿಸಿಕೊಳ್ಳಲೇಬೇಕಾಗುತ್ತದೆ. ವಿದ್ಯೆಯ ವಿಷಯದಲ್ಲೂ ಇದು ಸತ್ಯ. ಇವತ್ತು ಕಲಿಕೆಯ ಭಾಷ್ಯವೇ ಬದಲಾಗಿದೆ. ಅದರಲ್ಲೂ ಆಫ್ಟರ್ ಕೋವಿಡ್ ಕಲಿಕೆ ಬಹುತೇಕ ಆನ್ಲೈನ್ ಎಂಬಂತಾಗಿಬಿಟ್ಟಿದೆ. ಅದು ತಪ್ಪಲ್ಲ. “ಯುಗಾನುಸಾರಿಣೀ ವಿದ್ಯಾ” (ವಿದ್ಯೆ ಯುಗಕ್ಕೆ ತಕ್ಕಂತೆ ರೂಪಾಂತರಗೊಳ್ಳಬೇಕು.) ಎನ್ನುವ ಮಾತೇ ಇದೆಯಲ್ಲ.
ಈ ಎಲ್ಲ ಸತ್ಯವನ್ನು ಅರಿತುಕೊಂಡು, ಯಕ್ಷಗಾನಂಥ ಮಹತ್ತರ ಪರಂಪರೆಯನ್ನು ಇಂದಿನ ಕಾಲದ ಭಾಷೆಯಲ್ಲಿ ದಾಟಿಸುವ ಧೈರ್ಯವನ್ನು Dheemahi Yakshagana Kala Kendra ಸಂಸ್ಥೆ ತೋರಿದೆ. ಆನ್‌ಲೈನ್ ಗೇಮ್‌ಗಳು, ರೀಲ್ಸ್‌ಗಳು, ಕ್ಷಣಿಕ ಮನರಂಜನೆಯ ಆಪ್‌ಗಳ ಗದ್ದಲದ ನಡುವೆ ನಮ್ಮನ್ನು ಮತ್ತೆ ಕಲೆ - ಸಂಸ್ಕೃತಿಯತ್ತ ‘connect’ ಮಾಡುವ ಅದರ ಒಂದು ಗಂಭೀರ ಪ್ರಯತ್ನವೇ ‘ಧೀಮಹಿ ಕನೆಕ್ಟ್’. ಕರಾವಳಿ ಭಾಗದ ಆತ್ಮಸ್ಪರ್ಶಿ ಕಲೆ ಯಕ್ಷಗಾನಕ್ಕೆ ತಂತ್ರಜ್ಞಾನದ ಸೇತುವೆ ಕಟ್ಟುವ ಈ ಯತ್ನವನ್ನು Dheemahi Yakshagana Kala Kendra (ಶಿರಸಿ) ಮುಂದಿಟ್ಟಿದೆ. ಇದು ಕೇವಲ ಒಂದು ಆಪ್ ಮಾತ್ರವಲ್ಲ; ಇದು ಪರಂಪರೆ ಮತ್ತು ನಾವೀನ್ಯತೆಯ ಸಂಯೋಗ.
‘ಧೀಮಹಿ ಕನೆಕ್ಟ್’ ಆಪ್‌ನ ಹೃದಯವೇ ‘ಧೀಮಹಿ ಮ್ಯಾಗಝಿನ್’ - ಒಂದು ಡಿಜಿಟಲ್ ಪತ್ರಿಕೆ. ರಾಮಾಯಣ, ಮಹಾಭಾರತ ಸೇರಿದಂತೆ ಪೌರಾಣಿಕ ಕತೆಗಳು, ಯಕ್ಷಗಾನದ ತತ್ತ್ವ-ಸತ್ವ, ಕಲೆಯ ದಾರ್ಶನಿಕ ಆಯಾಮಗಳು, ವಿವಿಧ ಅಂಶಗಳ ಕುರಿತ ಲೇಖನಗಳು ಇಲ್ಲಿ ಪ್ರಕಟವಾಗುತ್ತವೆ. ಕಲೆ, ಸಂಸ್ಕೃತಿ, ಭಕ್ತಿ ಮತ್ತು ಜ್ಞಾನ ಈ ನಾಲ್ಕನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನ ಇದು. ಓದುಗರಿಗೆ ಇದು ಹತ್ತರ ಜೊತೆಗೆ ಹನ್ನೊಂದಾಗುವ ಮಾಹಿತಿ ಅಲ್ಲ; ಅವರ ಚಿಂತನೆಗೆ ಹಚ್ಚುವ ಆಹಾರ.
ಎಐ ಭಗವದ್ಗಿತೆ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಆಪ್‌ನ ಮತ್ತೊಂದು ಮಹತ್ವದ ಅಂಶವೇ ಆನ್‌ಲೈನ್ ಯಕ್ಷಗಾನ ತರಗತಿಗಳು. ದೇಶದಾದ್ಯಂತ ಮತ್ತು ವಿದೇಶಗಳಲ್ಲಿ ಇರುವ ಯಕ್ಷಗಾನಾಸಕ್ತರು, ವಿದ್ಯಾರ್ಥಿಗಳು, ಕಲಾಭಿಮಾನಿಗಳು, ಯಾರೇ ಆಗಿರಲಿ, ತಜ್ಞ ಕಲಾವಿದರು ನೀಡುವ ಪಾಠಗಳ ಮೂಲಕ ಯಕ್ಷಗಾನವನ್ನು ಕ್ರಮಬದ್ಧವಾಗಿ ಕಲಿಯಲು ಇಲ್ಲಿ ಅವಕಾಶವಿದೆ. ಯಕ್ಷಗಾನದ ಕಥಾನಕಗಳು, ಪಾತ್ರಗಳ ಅಭಿನಯಶೈಲಿ, ತಾಳ - ಲಯಗಳ ಸೂಕ್ಷ್ಮ ವಿವರಣೆಗಳು, ವಾಚಿಕ - ನೃತ್ಯ - ಹಿಮ್ಮೇಳಗಳ ಸಂಯೋಜನೆ ಎಲ್ಲವೂ ಒಂದೇ ಸೂರಿನಡಿ ತರುತ್ತಿದೆ. ನೆಲದ ಮಣ್ಣಿನ ವಾಸನೆ ಉಳಿಸಿಕೊಂಡೇ, ಕೈಬೆರಳಿನ ತುದಿಯ ಪರದೆಯ ಬೆಳಕಿನಲ್ಲಿ ಕಲಿಕೆಯ ಹೊಸ ದಾರಿ ತೆರೆದಿದೆ.
ಇದಕ್ಕಿಂತಲೂ ಮಹತ್ವವಾದ ಅಂಶವೆಂದರೆ, ಧೀಮಹಿ ಕೇವಲ ಕಲಿಕೆಯಲ್ಲಿಯೋ, ಮ್ಯಾಗಝಿನ್ ನಲ್ಲಿಯೋ ನಿಲ್ಲುವುದಿಲ್ಲ; ಅದು ಕಲೆಯ ಒಳಾರ್ಥವನ್ನು ಹೇಳುವ ಪ್ರಯತ್ನವನ್ನೂ ಮಾಡುತ್ತದೆ. “ಸಂಸ್ಕಾರ ಸಂವಾದ” ದಂತಹ ಉಪನ್ಯಾಸ ಸರಣಿಗಳ ಮೂಲಕ ಯಕ್ಷಗಾನ, ಪುರಾಣ, ಧರ್ಮ, ಜೀವನದ ಮೌಲ್ಯಗಳ ಕುರಿತು ಆಳವಾದ ಚರ್ಚೆಗಳು ನಡೆಯುತ್ತವೆ. ಕಲೆ ಯಾಕೆ ಬೇಕು? ಅದು ನಮ್ಮ ಬದುಕಿಗೆ ಏನು ಕೊಡುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಕ್ಕಿನಲ್ಲಿ ಗಮನಾರ್ಹ ಬೆಳವಣಿಗೆ ಇದು.
ಇಷ್ಟೇ ಅಲ್ಲ. ‘ಧೀಮಹಿ ಕನೆಕ್ಟ್’ನಲ್ಲಿ ಧೀಮಹಿಯ ಕಾರ್ಯಕ್ರಮಗಳು, ತರಗತಿಗಳು, ಸಾಂಸ್ಕೃತಿಕ ಚಟುವಟಿಕೆಗಳ ಆಮಂತ್ರಣ, ಅಪಡೇಟ್ಗಳು ಸಿಗುತ್ತವೆ. ಕಲಾಭಿಮಾನಿಗಳು ಪರಸ್ಪರ ಸಂಪರ್ಕ ಹೊಂದಲು, ಕಲಿಕೆಯ, ಸಾಂಸ್ಕೃತಿಕ ವಿಚಾರಗಳ ವಿನಿಮಯ ನಡೆಸಲು ಇದು ಒಂದು ಸಾಮುದಾಯಿಕ ವೇದಿಕೆಯಾಗುತ್ತಿದೆ. ವಿಶ್ವದ ಯಾವ ಮೂಲೆಯಲ್ಲಿದ್ದರೂ ವಿದ್ಯಾರ್ಥಿಗಳು ಕಲೆಯನ್ನು ಕಲಿಯಬಹುದು; ನಮ್ಮ ಪರಂಪರೆಯ ಅರಿವು ಪಡೆದುಕೊಳ್ಳಬಹುದು. ಡಿಜಿಟಲ್ ಯುಗದಲ್ಲಿಯೂ ಸಂಸ್ಕೃತಿಯ ಜೀವಂತಿಕೆಯನ್ನು ಉಳಿಸುವ ಧ್ಯೇಯಕ್ಕೆ ಕೈಜೋಡಿಸಬಹುದು.
ಯಕ್ಷಗಾನವನ್ನು ಮುಂದಿನ ತಲೆಮಾರುಗಳು ಮ್ಯೂಸಿಯಂನೊಳಗೆ ಬಂಧಿಸುವಂತೆ ಮಾಡುವುದಲ್ಲ. ಅದು ಅವರ ಬದುಕಿನ ಜೊತೆ ಹೆಜ್ಜೆ ಹಾಕುವಂತೆ ಮಾಡುವುದೇ ಧೀಮಹಿಯ ಆಶಯ. ಕೇವಲ ಕಲಾವಿದನನ್ನು ಮಾತ್ರವಲ್ಲ ಪ್ರಬುದ್ಧ ಪ್ರೇಕ್ಷಕನನ್ನೂ ಬೆಳೆಸುವತ್ತಲೂ ಈ ಎಲ್ಲವೂ ಸಹ ನೀರೆರೆಯುತ್ತದೆ. “Tradition with Innovation, Art with Devotion” ಎಂಬುದು ಈ ಆಪ್ ನ ಟ್ಯಾಗ್‌ಲೈನ್ ಮಾತ್ರವಲ್ಲ ಅದು ಅದರ ಜೀವನಾಡಿ. ‘ಧೀಮಹಿ ಕನೆಕ್ಟ್’ ಇಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ. ಇದು ಯಕ್ಷಗಾನ ಸಂಸ್ಕೃತಿಯ ವಾಹಕಕ್ಕೆ ಡಿಜಿಟಲ್ ಸೇತುವೆ. ಪರಂಪರೆಯ ಘಮಲನ್ನು ಭವಿಷ್ಯದತ್ತ ದಾಟಿಸುವ ದಿಟ್ಟ ಹೆಜ್ಜೆ.
ಈ ಸೇತುವೆ ಮೇಲೆ ನಾವೆಲ್ಲರೂ ನಡೆಯಬೇಕಿದೆ. ನೀವು ಈ ಧೀಮಹೀ ಕನೆಕ್ಟ್ ಆಪ್ ಅನ್ನು ಒಮ್ಮೆ ಡೌನ್‌ಲೋಡ್ ಮಾಡಿ ನೋಡಿ. ನೀವು ಕೇವಲ ಒಂದು ಆಪ್ ಅನ್ನು ಮಾತ್ರ ನೋಡುವುದಿಲ್ಲ. ನಿಮ್ಮದೇ ಪರಂಪರೆಯನ್ನು, ನಿಮ್ಮ ಸಂಸ್ಕೃತಿಯ ಬೇರುಗಳನ್ನು, ನಿಮ್ಮೊಳಗಿನ ಸಂಸ್ಕಾರವನ್ನು ಮತ್ತೆ ಕಂಡುಕೊಳ್ಳುತ್ತೀರಿ. ಅಷ್ಟರ ಮಟ್ಟಿಗೆ ವಿಶ್ವಾಸವಿದೆ. ಶ್ರೀಮಂತ ಕಲೆಯೊಂದನ್ನು ಕಲಿಯುವ ಮನಸ್ಸು ಮಾಡಬೇಕಿದೆ. ಎಲ್ಲೋ ಬಣ್ಣ ಹಚ್ಚಿ ಪ್ರದರ್ಶನಕ್ಕಾಗಿಯಲ್ಲದಿದ್ದರೂ ಕಲೆಯನ್ನು ಕಲೆಯಾಗಿ ಆಸ್ವಾದಿಸುವುದಕ್ಕಾಗಿ.
❤️ ಈ ಲೇಖನಗಳನ್ನೂ ಓದಿ
❤️ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ಎಐ ಲ್ಯಾಪ್‌ಟಾಪ್‌ಗಳ ಅಬ್ಬರ!
❤️ಟೆಕ್ ರೌಂಡಪ್ 04.03.2026: ಎಐ ಕ್ರಾಂತಿ ಮತ್ತು ಜಾಗತಿಕ ಮಾರುಕಟ್ಟೆಯ ಸ್ಥಿತ್ಯಂತರ
❤️ಓಪನ್ ಎಐಗೆ ಸೆಡ್ಡು ಹೊಡೆಯಲು ಆಂಥ್ರೋಪಿಕ್‌ನಿಂದ ಫ್ರೀ ಕೋರ್ಸ್!
❤️ಟೆಕ್ ದಿಗ್ಗಜರ ನಡುವೆ ಹೆಚ್ಚಿದ ಎಐ ಪೈಪೋಟಿ: ಮೆಟಾ ಎಂಜಿನಿಯರಿಂಗ್ ಲೋಕದಲ್ಲಿ ಎಐ ಹವಾ!
❤️ಸ್ಮಾರ್ಟ್‌ಫೋನ್ ನಿಮ್ಮ ಖಾಸಗಿ ಮಾಹಿತಿಗಳನ್ನು ಕಳ್ಳತನ ಮಾಡುತ್ತಿದೆಯೇ? ಈ ಸೆಟ್ಟಿಂಗ್ ಬದಲಾಯಿಸಿ!
❤️ಬದಲಾಗುತ್ತಿರುವ ಇಂಟರ್ನೆಟ್ ಜಗತ್ತು: ಗೂಗಲ್ ಸರ್ಚ್ ಸಾಮ್ರಾಜ್ಯಕ್ಕೆ ಎಐ ಅಲೆಗಳ ಸವಾಲೇನು ಗೊತ್ತಾ?
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
🛒 ಆನ್‌ಲೈನ್ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್ ಬಳಸಿ
0 ಕಾಮೆಂಟ್‌ಗಳು
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.