ಟ್ರೆಂಡಿಂಗ್
ನೀವ್ ಬಳಸೋ APPಗಳು ನಿಮಗೆ ಹೇಳದ ಸತ್ಯಗಳು!
ಟೆಕ್-ಕಿಲ: ಬಡೆಕ್ಕಿಲ ಪ್ರದೀಪ
ಇದು ಒಳ್ಳೇ ವಿಷಯ ಹೌದು, ಕೆಟ್ಟ ವಿಷ್ಯಾನೂ ಹೌದು. ನೀವು ದಿನ ಬೆಳಗಾದರೆ ಶುರು ಮಾಡೋ ಮೊಬೈಲ್ ವ್ಯವಹಾರಗಳು ಈಗ ನಿಮಗೆ ಗೊತ್ತಿಲ್ಲದೇ ಅವೆಷ್ಟೋ ಆಪ್ಲಿಕೇಶನ್ಗಳ ಹೊಟ್ಟೆ ತುಂಬಿಸುತ್ತಿವೆ. ಇವುಗಳ ಬಗ್ಗೆ ಈಗಾಗಲೇ ಅವೆಷ್ಟೋ ಲೇಖನಗಳು, ಚರ್ಚೆಗಳು ಆಗಿದ್ದರೂ, ನೀವು ಯೋಚಿಸಲೇಬೇಕಾದ ಕೆಲವೊಂದು ವಿಷಯಗಳನ್ನ ಈ ಬಾರಿ ನೋಡೋಣ ಬನ್ನಿ.
ಅದು ವಾಟ್ಸಾಪ್ ಆಗಿರ್ಲಿ ಅಥವಾ ನೀವು ಬಳಸೋ ಫೇಸ್ಬುಕ್, ಇನ್ಸ್ಟಾಗ್ರಾಮ್, ಗೂಗಲ್, ಹೀಗೆ ಸಾಲು ಸಾಲು ಆಪ್ಗಳು ನಿಮಗೆ ಹೇಳದ ಸತ್ಯಗಳನ್ನು ನಾವು ಇವತ್ತು ನೋಡಿಬಿಡೋಣ. ಇದರ ಪಟ್ಟಿ ತುಂಬಾ ದೊಡ್ಡದಿರುವುದರಿಂದ ಅಷ್ಟನ್ನೂ ಹೇಳೋದಕ್ಕೆ ಆಗದಿದ್ದರೂ ಕೆಲವು ಮುಖ್ಯ ವಿಚಾರಗಳನ್ನು ಪಟ್ಟಿ ಮಾಡಿಯೇಬಿಡೋಣ.
ಒಂದು: ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಹಿಂಬಾಲಿಸುವ ಆಪ್ಗಳು
ನಿಮ್ಮ ಪ್ರಕಾರ ನೀವು ನಿಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಅಮೆಜಾನ್, ಗೂಗಲ್ನಂತಹ ಆಪ್ಗಳನ್ನ ಕ್ಲೋಸ್ ಮಾಡಿದ್ದರೂ, ಅವು ನಿಮ್ಮನ್ನು ಹಿಂಬಾಲಿಸೋದು ಬಿಡೋದಿಲ್ಲ. ಅವುಗಳು ನೀವು ಬಳಸುವ ಇತರೇ ಆಪ್ಗಳು, ನೀವು ಹೋಗುವ ಯಾವುದೇ ವೆಬ್ಸೈಟ್ಗಳನ್ನು ಹಿಂಬಾಲಿಸೋದಕ್ಕೆ ಪಿಕ್ಸೆಲ್ಗಳನ್ನು ಕಳುಹಿಸಿಕೊಡುತ್ತವೆ. ಅವು ತಣ್ಣಗೆ ಹಿಂದೆಯೇ ಕೂತು ನೀವು ಏನನ್ನು ನೋಡುತ್ತಿದ್ದೀರಿ ಅನ್ನುವುದನ್ನು ಟ್ರ್ಯಾಕ್ ಮಾಡುತ್ತಿರುತ್ತವೆ.
ಎರಡು: ನೀವು ಬರೀ ಫೋಟೋ ಅಪ್ಲೋಡ್ ಮಾಡೋದಿಲ್ಲ
ನೀವು ನಿಮ್ಮ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ಗೆ ಬರೀ ಫೋಟೋವನ್ನು ಅಪ್ಲೋಡ್ ಮಾಡೋದಲ್ಲ, ನಿಮ್ಮ ಜಾತಕವನ್ನೇ ಅಪ್ಲೋಡ್ ಮಾಡುತ್ತೀರಿ ಅಂದರೆ ನಂಬ್ತೀರಾ? ನಿಮ್ಮ ಫೋಟೋದ ಜೊತೆಗೆ EXIF ಡೇಟಾ ಅನ್ನುವುದರ ಮೂಲಕ ನಿಮ್ಮ ಜಿಪಿಎಸ್ ಮಾಹಿತಿ, ಎಲ್ಲಿ, ಯಾವಾಗ, ಯಾವ ಫೋನ್ನಲ್ಲಿ ಹಾಗೂ ಯಾವ ಕ್ಯಾಮರಾ ಸೆಟಿಂಗ್ನಲ್ಲಿ ಫೋಟೋ ತೆಗೆದಿರುತ್ತೀರಿ ಎನ್ನುವ ಕೂಲಂಕುಷ ಮಾಹಿತಿಯನ್ನು ಅಲ್ಲಿ ನೀಡಿರುತ್ತೀರಿ. ನಿಮ್ಮನ್ನು ಈ ಆಪ್ಗಳು ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಟ್ರ್ಯಾಕ್ ಮಾಡುತ್ತಿರುತ್ತವೆ.
ಮೂರು: ನೀವು ಹೇಳದಿರುವ ಮಾಹಿತಿ ಅವುಗಳಿಗಿರುತ್ತವೆ
ನಡತೆಯ ಟ್ರ್ಯಾಕಿಂಗ್ ಅಥವಾ ಬಿಹೇವಿಯರಲ್ ಟ್ರ್ಯಾಕಿಂಗ್ ಮೂಲಕ ಈ ಆಪ್ಗಳು ನಿಮ್ಮ ಡೇಟಾ, ಪ್ಯಾಟರ್ನ್ ಇವುಗಳನ್ನು ಗಮನಿಸುವುದರ ಮೂಲಕ ನೀವು ನೀಡದೇ ಇರುವ ಮಾಹಿತಿಗಳಾದ ನಿಮ್ಮ ಆರೋಗ್ಯದ ವಿವರ, ಹಣಕಾಸು ವಿವರ, ರಾಜಕೀಯ ಯೋಚನೆಗಳು, ಲೈಂಗಿಕತೆ, ಹೀಗೆ ಅವಕ್ಕೆ ಬೇಕಾದುವುಗಳನ್ನು ಅರಿಯುವುದಕ್ಕೆ ವ್ಯವಸ್ಥೆ ಮಾಡಿಕೊಂಡಿರುತ್ತವೆ.
ನಾಲ್ಕು: ನಿಮ್ಮ ಕೋಪವೇ ಅವುಗಳ ಬಂಡವಾಳ
ನಿಮ್ಮನ್ನು ಸಮಾಧಾನ ಮಾಡುವುದಕ್ಕೆ, ಖುಷಿ ಪಡಿಸುವುದಕ್ಕೆ ಈ ಆಪ್ಗಳು ಯೋಚಿಸುವುದಿಲ್ಲ, ಅವುಗಳಿಗೆ ನೀವು ಕೋಪಗೊಳ್ಳಬೇಕು, ಉದ್ರೇಕಿತವಾಗಬೇಕು, ಆಗ ನೀವು ಅವುಗಳನ್ನು ಶೇರ್ ಮಾಡುತ್ತೀರಿ, ಅವುಗಳ ಮೇಲೆ ರಿಯಾಕ್ಟ್ ಮಾಡುತ್ತೀರಿ, ಲೈಕ್ ಮಾಡುತ್ತೀರಿ, ಅದು ಅವುಗಳ ನಿಜವಾದ ಬಂಡವಾಳ. ಅವುಗಳಿಗಾಗಿಯೇ ಈ ಆಪ್ಗಳು ಕಾಯುತ್ತಿರುತ್ತವೆ.
ಐದು: ನೀವು ನೋಡುವ ಪ್ರಪಂಚವೇ ಬೇರೆ
ಆಲ್ಗೊರಿದಂನ ರಿದಮ್ ಬೇರೆಯದೇ. ನಿಮ್ಮ ಸೋಷಿಯಲ್ ಮೀಡಿಯಾ ಫೀಡ್ಗೂ ನಿಮ್ಮ ಮನೆಯ ಇನ್ನೊಬ್ಬ ಸದಸ್ಯರೋ, ಗೆಳೆಯರೋ ನೋಡುವ ಫೀಡ್ಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ನೀವು ಕೃಷಿ ಸಂಬಂಧಿ ಮಾಹಿತಿ ನೋಡುವವರಾದರೆ ನಿಮಗೆ ಅಂಥಾ ಫೀಡ್ ಜಾಸ್ತಿ ಕಾಣಸಿಕ್ಕರೆ, ನಿಮ್ಮ ಗೆಳೆಯರಿಗೆ ಪ್ರೀತಿಗೆ ಸಂಬಂಧಿಸಿದ ಮಾಹಿತಿಯ ಫೀಡ್ ಕಾಣಿಸುತ್ತದೆ. ನಿಮ್ಮ ಪ್ರಕಾರ ಫೇಸ್ಬುಕ್ ಅಂದರೆ, ಇನ್ಸ್ಟಾಗ್ರಾಮ್ ಅಂದರೆ ಅದುವೇ. ಆದರೆ, ಅದು ಸತ್ಯ ಅಲ್ಲ.
ಆರು: ಎಲ್ಲಾ ಡಿಲೀಟ್ ಆಗಲ್ಲ
ನೀವು ಏನೋ ಪೋಸ್ಟ್ ಮಾಡಿರ್ತೀರಿ, ಸ್ಟೇಟಸ್ ಅಥವಾ ಫೋಟೋ, ಅಥವಾ ವಿಡಿಯೋ. ಬೇಡ ಇದು ಅಂತಾನೋ, ಅಥವಾ ಇನ್ನೇನೋ ಕಾರಣಕ್ಕೋ ಡಿಲೀಟ್ ಮಾಡಿರ್ತೀರಾ. ಆದರೆ ಅದು ನಿಜವಾಗ್ಲೂ ಡಿಲೀಟ್ ಆಗಿದ್ಯಾ? ನೀವು ಪೋಸ್ಟ್ ಮಾಡಿದ ಪ್ಲಾಟ್ಫಾರ್ಮ್ ಅದರ ಒಳಗಿನ ಡೇಟಾವನ್ನು ಹಾಗೇ ಕಾಪಿಡುತ್ತದೆ. ನೀವು ನೋಡಿದ ಸಮಯ, ನೀವು ಪೋಸ್ಟ್ ಮಾಡಿದ ಸಮಯ, ಹೀಗೆ ಹಲವಾರು ಮಾಹಿತಿಯನ್ನು ಗಡದ್ದಾಗಿ ಲಾಕ್ ಮಾಡಿಟ್ಟುಕೊಂಡಿರುತ್ತದೆ.
ಏಳು: ನೀವೇ ಏಐ ಟ್ರೇನರ್ಗಳು
ನೀವು ಗೊತ್ತಿಲ್ಲದ ಹಾಗೇ, ಮಾಹಿತಿಯನ್ನು ನೀಡುವ ಮೂಲಕ ಏಐ ಮಾಡೆಲ್ಗಳನ್ನು ಟ್ರೇನ್ ಮಾಡ್ತಿದ್ದೀರಾ. ನಿಮ್ಮ ಮಾಹಿತಿಯನ್ನು ಶೇರ್ ಮಾಡುವ ಮೂಲಕ ರೆಡಿಟ್, ಫೇಸ್ಬುಕ್ನಂತಹ ಸಂಸ್ಥೆಗಳು ಈ ಕೆಲಸ ಮಾಡುತ್ತಿವೆ. ನೀವು ಟರ್ಮ್ಸ್ ಎಂಡ್ ಕಂಡಿಶನ್ಗಳನ್ನು ಹಾಂ ಎನ್ನುವ ಮೂಲಕ ಎಷ್ಟೋ ವಿಷಯಗಳನ್ನು ಓದದೆಯೇ ನಿಮ್ಮೆಲ್ಲಾ ಮಾಹಿತಿಯನ್ನು ಬಿಚ್ಚಿಡುತ್ತಿದ್ದೀರಿ. ಆ ಮಾಹಿತಿಗಳನ್ನು ಆಪೋಶನ ತೆಗೆದುಕೊಳ್ಳುವ ಈ ಕಂಪೆನಿಗಳು, ಏಐ ಡೇಟಾ ಬೆಳೆಸುವ ಮೂಲಕ ತಾವೂ ಬೆಳೆಯುತ್ತಿವೆ, ನಿಮ್ಮ ಹೆಸರಲ್ಲಿ ದುಡ್ಡು ಮಾಡುತ್ತಿವೆ.
ಎಂಟು: ಸರಕಾರ ನಿಮ್ಮ ಮಾಹಿತಿ ಯಾವಾಗ್ ಬೇಕಾದ್ರೂ ತಗೋಬಹುದು
ಸರಕಾರ ಒಂದು ಆದೇಶ ಹೊರಡಿಸಿದರೆ ಸಾಕು, ನಿಮ್ಮ ಮಾಹಿತಿಯನ್ನೆಲ್ಲಾ ಈ ಸಂಸ್ಥೆಗಳು ಅವರಿಗೆ ನೀಡಬೇಕಾಗುತ್ತದೆ. ಕಳೆದ ವರ್ಷದ ಮೊದಲ ಭಾಗದಲ್ಲೇ ಸುಮಾರು ಮೂರು ಲಕ್ಷ ಅಮೆರಿಕನ್ ಅಕೌಂಟ್ಗಳ ಮಾಹಿತಿಯನ್ನು ಅಲ್ಲಿನ ಸರಕಾರ ಪಡೆದುಕೊಂಡಿದೆ. ಇದು ಬರೀ ಅಮೆರಿಕಾದ ಕಥೆ ಮಾತ್ರ ಅಲ್ಲ, ನಮ್ಮ ದೇಶವೂ ಇದಕ್ಕೆ ಹೊರತಾಗಿಲ್ಲ.
ಒಂಭತ್ತು: ಥರ್ಡ್ ಪಾರ್ಟಿ ಆಪ್ಗಳ ಮಾಹಿತಿ ಪಾರ್ಟಿ
ನೀವು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ಕ್ವಿಜ್ ಫೇಸ್ಬುಕ್ನದಲ್ಲ, ಅದನ್ನು ಆಡುವ ಹೆಸರಲ್ಲಿ ನೀವು ಕೊಟ್ಟಿದ್ದ ಪರ್ಮಿಶನ್ ಅನ್ನು ಇಂದಿಗೂ ಬಳಸಿಕೊಂಡು ಈ ಕಂಪೆನಿಗಳು ನಿಮ್ಮನ್ನು ಹಾಗೇ ಟ್ರ್ಯಾಕ್ ಮಾಡುತ್ತಿವೆ ಅನ್ನುವುದು ನಿಮಗೆಲ್ಲಿ ಗೊತ್ತಿದೆ ಹೇಳಿ.
ಹತ್ತು: ಫ್ರೀ ಸಿಕ್ರೆ…
ನಾವೆಲ್ಲಾ ಫ್ರೀ ಇದೆ ಅಂತ ಹಾಗೇ ಬಳಸೋರು. ಇದನ್ನೇ ಅಡ್ವಾಂಟೇಜ್ ಆಗಿ ಬಳಸಿಕೊಳ್ಳೋ ಆಪ್ಗಳು ನಿಮಗೆ ಆಪ್ಗಳನ್ನೇನೋ ಫ್ರೀ ಕೊಡ್ತಾರೆ, ಯಾಕಂದರೆ ಅವುಗಳು ಫ್ರೀಯಾಗಿ ಸಿಗೋದು, ನಿಮ್ಮನ್ನು ವಸ್ತುಗಳನ್ನಾಗಿ ಮಾರೋದಕ್ಕೆ. ಏನ್ ಮಾಡೋದು, ಬೇರೆ ದಾರಿ ಇಲ್ಲ. ಇವುಗಳನ್ನು ಬಳಸದೇ ಇದ್ದರೆ, ಬೇರೆ ಆಯ್ಕೆಗಳೂ ನಮ್ಮ ಮುಂದಿಲ್ಲ. ಇದ್ದರೂ, ಫ್ರೀಯಾಗಿ ಸಿಗೋದನ್ನು ಬಿಟ್ಟು ಬೇರೆ ಬಳಸೋದೂ ಕೂಡ ನಮ್ಮ ಜಾಯಮಾನದಲ್ಲಿಲ್ಲ.
ಹೀಗೇ ಪಟ್ಟಿ ಮಾಡ್ತಾ ಹೋದ್ರೆ ಈ ಆಪ್ಗಳ ಬಗ್ಗೆ ಅವುಗಳು ಹೇಳದೇ ಇರುವುದರ ಬಗ್ಗೆ ಹೇಳ್ತಾನೇ ಹೋಗಬಹುದು. ಆದರೆ, ಇಲ್ಲಿಗೆ ಇಷ್ಟು ಸಾಕು.
ಇನ್ನು ಏಐ ಬಗ್ಗೆ ಹೇಳೋದಕ್ಕೆ, ಅದು ನಿಮ್ಮ ಜೀವನವನ್ನು ಸುಲಲಿತ ಮಾಡುವ ಹೆಸರಿನಲ್ಲಿ ನಿಮ್ಮನ್ನೇ ತನ್ನ ದಾಳವನ್ನಾಗಿ ಮಾಡುವುದರ ಬಗ್ಗೆ ಹೇಳುವುದು ಸಾಕಷ್ಟಿದೆ, ಅದನ್ನು ಮುಂದಿನ ಸಂಚಿಕೆಯಲ್ಲಿ ಮಾತನಾಡೋಣ. ಏನಂತೀರಾ?
ಟೆಕ್ ವಚನ
ಕಿಟಕಿ ತೆರೆದರೆ ಬೆಳಕು ಬರುವುದು, ಕಣ್ಣೂ ಹೋಗುವುದು
ಅಪ್ಲಿಕೇಶನ್ ಬಳಸಿ ಆದರೆ ಎಚ್ಚರದಿ ಇರು | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.