ಈ ಸಲ ವಾಟ್ಸಾಪ್‌ ಪ್ರೀಮಿಯಂ ಭಾಗ್ಯ ಕೊಟ್ಟವರಿಗೆ ಪ್ಯಾಮಿಲಿ ಗ್ರೂಪ್‌ ಅಡ್ಮಿನ್ನುಗಳ ಓಟು! - Tech Vaidya

ಈ ಸಲ ವಾಟ್ಸಾಪ್‌ ಪ್ರೀಮಿಯಂ ಭಾಗ್ಯ ಕೊಟ್ಟವರಿಗೆ ಪ್ಯಾಮಿಲಿ ಗ್ರೂಪ್‌ ಅಡ್ಮಿನ್ನುಗಳ ಓಟು!

| ನಾಗರಾಜ ವೈದ್ಯ

ನಮ್ಮವರಿಗೆ ಪ್ರಳಯ ಹೇಗಿರುತ್ತದೆ ಎಂಬ ಅನುಭವ ಇಲ್ಲದಿರಬಹುದು, ಆದರೆ ಪುಕ್ಕಟೆಯಾಗಿ ಸಿಗುತ್ತಿದ್ದ ಯಾವುದಾದರೂ ಸೇವೆಗೆ ಇನ್ನು ಮುಂದೆ ದುಡ್ಡು ಕೊಡಬೇಕು ಎಂದು ಯಾರಾದರೂ ಹೇಳಿದರೆ ಹೇಗಿರುತ್ತದೆ ಎನ್ನುವುದು ಮಾತ್ರ ಚೆನ್ನಾಗಿ ಗೊತ್ತು. ಅದರಲ್ಲೂ ಇಷ್ಟು ವರ್ಷ ಪುಕ್ಕಟೆ ಉಪಯೋಗಿಸುತ್ತಿದ್ದ ವಾಟ್ಸಾಪ್‌ಗೆ ದುಡ್ಡು ಕೊಡಬೇಕು ಎಂಬ ಸುದ್ದಿ ಕೇಳಿದ ಕ್ಷಣ, ಎದೆಗುಂಡಿಗೆಯಲ್ಲಿ 8 ರಿಕ್ಟರ್ ಸ್ಕೇಲ್‌ನ ಭೂಕಂಪವಾದ ಅನುಭವವಾಗುತ್ತದೆ. ವಾಸ್ತವದಲ್ಲಿ ವಾಟ್ಸಾಪ್ ಯಾರಿಂದಲೂ ಬಲವಂತವಾಗಿ ಹಣ ಪಡೆದು  ಚಾಟ್ ಮಾಡಿಸೋಕೆ ಬಂದಿಲ್ಲ, ಆದರೆ.. ಹೆಚ್ಚಿನವರು ಇದನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ಗೊತ್ತಲ್ಲ..  ವದಂತಿಗಳು ಬೆಳಕಿನ ವೇಗಕ್ಕಿಂತ ಬೇಗ ಓಡುತ್ತವೆ!

ಬೆಳಿಗ್ಗೆ 6 ಗಂಟೆಗೆ "ವಾಟ್ಸಾಪ್ ಪೇಯ್ಡ್ ಆಗುತ್ತಿದೆ" ಎಂಬ ಮೆಸೇಜ್ ಫ್ಯಾಮಿಲಿ ಗ್ರೂಪ್‌ಗೆ ಬಂದರೆ, 8 ಗಂಟೆಗೆ ಅದು ಊರ ಪಂಚಾಯಿತಿಯ ಚರ್ಚೆ ಆಗಿರುತ್ತದೆ. 10 ಗಂಟೆಗೆ ಅದು ಯೂಟ್ಯೂಬ್ ಬ್ರೇಕಿಂಗ್ ನ್ಯೂಸ್ ಆಗಿರುತ್ತದೆ. ಮಧ್ಯಾಹ್ನದ ಹೊತ್ತಿಗೆ "ಇದು ವಿದೇಶಿ ಸಂಚು" ಎಂಬ ವಿಶ್ಲೇಷಣೆಯೂ ಸಿದ್ಧವಾಗಿರುತ್ತದೆ. ಅಮೆರಿಕಾದಲ್ಲಿ ಕೂತಿರುವ ಮಾರ್ಕ್ ಜುಕರ್‌ಬರ್ಗ್‌ಗೆ ಬಹುಶಃ ಗೊತ್ತಿರಲಿಕ್ಕಿಲ್ಲ; ಈ ದೇಶದಲ್ಲಿ ಹಲವರು ಮೊಬೈಲ್ ಡೇಟಾ ಖರೀದಿಸುವುದಕ್ಕಿಂತ ನೆರೆಮನೆಯ ವೈಫೈ ಪಾಸ್‌ವರ್ಡ್ ಪತ್ತೆ ಹಚ್ಚಲು ಹೆಚ್ಚು ಶ್ರಮ ಪಡುತ್ತಾರೆ! ಇಂತಲ್ಲಿ ಬಂದು ವಾಟ್ಸಾಪಿಗೆ ಹಣ ಕೊಡಿ ಅಂತಿದ್ದಾನೆ ಮೂರ್ಖ!

ಆಫೀಸಿನಲ್ಲಿ ಕೆಲಸ ಮಾಡುವುದಕ್ಕಿಂತ ಕ್ಯಾಂಟೀನ್‌ನಿಂದ ಸಿಗ್ನಲ್ ಹಿಡಿಯುವ ಸ್ಥಳ ಹುಡುಕುವ ಜನರೂ ಇದ್ದಾರೆ. ಇಂತಲ್ಲಿ ವಾಟ್ಸಾಪ್‌ಗೆ ಚಂದಾದಾರಿಕೆ ಎಂಬ ಪದವೇ ಒಂದು ದೊಡ್ಡ ಸಾಮಾಜಿಕ ಜೋಕು. ಪರ್ಯಾಯ ಆ್ಯಪ್‌ಗೆ ಹೋಗೋಣ ಎಂದು ಯೋಚಿಸಿದರೆ ಅಲ್ಲಿಯೂ ಪರಿಸ್ಥಿತಿ ಅಷ್ಟೇ ದಯನೀಯವಾಗಿದೆ. ಒಂದಾನೊಂದು ಕಾಲದಲ್ಲಿ ಯುವಕರ ಗುಪ್ತ ರಾಜಧಾನಿಯಾಗಿದ್ದ ಟೆಲಿಗ್ರಾಮ್‌ಗೂ ನಮ್ಮ ದೇಶದಲ್ಲಿ ಈಗ ತಾತ್ಕಾಲಿಕ ಬೀಗ ಬಿದ್ದಿದೆ. 

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ
neatreachable add

ಭಾರತೀಯ ಆ್ಯಪ್ ಎಂದು ಭರ್ಜರಿ ಜಾಹೀರಾತಿನೊಂದಿಗೆ ಬಂದ ಅರಟ್ಟೈ ಒಂದಿಷ್ಟು ದಿನ ಮೆರೆದದ್ದೇನೋ ಹೌದು.  ಈಗ ಪತ್ತೇ ಇಲ್ಲ. ಪ್ರೈವೆಸಿಯ ದೊಡ್ಡ ಧ್ವಜ ಹಿಡಿದು ಬಂದ ಸಿಗ್ನಲ್ ಆ್ಯಪ್‌ನಲ್ಲಿ ಇವತ್ತಿಗೂ ಒಬ್ಬರು ಮೆಸೇಜ್ ಕಳುಹಿಸುತ್ತಾರಾ ಎಂದು ಕಾಯುತ್ತಿರುವ ಜೀವಿಗಳಿದ್ದಾರೆ. ಅವರ ಸ್ಥಿತಿ ಬಸ್‌ಸ್ಟ್ಯಾಂಡ್‌ನಲ್ಲಿ ಕೊನೆಯ ಬಸ್ ಹೋದ ನಂತರವೂ ಟಿಕೆಟ್ ಹಿಡಿದು ನಿಂತಿರುವ ಪ್ರಯಾಣಿಕನಂತಾಗಿದೆ. ಇದೆಲ್ಲವನ್ನು ದೂರದಿಂದಲೇ ಗಮನಿಸುತ್ತಿದ್ದ ಜುಕರ್‌ಬರ್ಗ್, "ಇವರಿಗೆ ಈಗ ಬೇರೆ ದಾರಿ ಇಲ್ಲ" ಎಂದು ಮನಸ್ಸಿನಲ್ಲಿ ಲೆಕ್ಕ ಹಾಕಿರಬೇಕು.

ಹೀಗಾಗಿ ವಾಟ್ಸಾಪ್ ಪ್ಲಸ್ ಎಂಬ ಹೊಸ ಪ್ರಯೋಗವನ್ನು ಮಾರುಕಟ್ಟೆಗೆ ಬಿಟ್ಟಿದ್ದಾನೆ. ಆದರೆ ಅವನಿಗೆ ತಿಳಿದಿಲ್ಲ; ಭಾರತೀಯರು ತಂತ್ರಜ್ಞಾನಕ್ಕಿಂತ ಮೊದಲು ಅದರ ಬಗ್ಗೆ ವದಂತಿಗಳನ್ನು ಬಳಸುತ್ತಾರೆ! ಕರ್ನಾಟಕದಲ್ಲಿ ಈ ವಿಷಯ ರಾಜಕೀಯ ರೂಪ ಪಡೆಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಉಚಿತ ಬಸ್, ಉಚಿತ ಕರೆಂಟು, ಉಚಿತ ಅಕ್ಕಿ, ಉಚಿತ ಗ್ಯಾರಂಟಿಗಳ ನಡುವೆ ಬೆಳೆದ ಜನರಿಗೆ ಈಗ ವಾಟ್ಸಾಪ್ ಕೂಡ ಉಚಿತವಾಗಿಯೇ ಬೇಕು.

ಮುಂದಿನ ಚುನಾವಣೆಯ ಹೊತ್ತಿಗೆ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಫಲಾನುಭವಿಗೆ ತಿಂಗಳಿಗೆ ಒಂದು ವಾಟ್ಸಾಪ್ ಪ್ರೀಮಿಯಂ ರೀಚಾರ್ಜ್!" ಎಂಬ ಘೋಷಣೆ ಖಂಡಿತವಾಗಿಯೂ ಕಾಣಿಸಿಕೊಳ್ಳಬಹುದು. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಇನ್ನಷ್ಟು ಡಿಜಿಟಲ್ ಉಚಿತ ಭರವಸೆಗಳನ್ನು ನೀಡಲು ಮುಂದಾಗಬಹುದು.

ಜುಗಾಡ್ ಜನರ ಜುಕರ್‌ಬರ್ಗ್‌ ಜೊತೆ ರಾಜಕೀಯ ರಂಗುರಂಗು

ಸಂಬಂಧಿತ ಲೇಖನಗಳು

Related News ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಹುಡುಕುವ ಕಣ್ಣಿಗೆ ಬೇಕಾಗಿದೆ ಪೊರೆ ಚಿಕಿತ್ಸೆ!
Related News ಭೇಡ್ತಿ - ಅಘನಾಶಿನಿ — ಅಣೆಕಟ್ಟು ಇಲ್ಲದ ನದಿ ಏನನ್ನು ಉಳಿಸಿಕೊಂಡಿದೆ?
Related News ನದಿ ತಿರುವಿನ ಉಮೇದಿಯಲ್ಲಿದ್ದವರೇ ಹೇಳಿ; ಸಮುದ್ರಕ್ಕೆ ಹೋಗುವ ನೀರು ಯಾರದ್ದು?
Related News ಫ್ರೈಬರ್ಗ್ ಮಿನ್ಸ್ಟರ್: ಕೆಲಸಕ್ಕೆ ಬೆಲೆ ಕೊಡದವರಿಗೆ ಕಲೆಯಲ್ಲೇ ಉತ್ತರ ಕೊಟ್ಟ ಶಿಲ್ಪಿ!
Related News X ಅಲಿಯಾಸ್ ಫಾರ್ಮರ್ ಟ್ವಿಟರ್: ಹೆಸರು ಬದಲಾದರೂ ಟ್ವಿಟರ್ ಯಾಕೆ ಮರೆಯಾಗಿಲ್ಲ?

"ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಫ್ರೀ ಬ್ಲೂ ಟಿಕ್!" ಮತ್ತು "ಗ್ರಾಮೀಣ ಭಾಗದ ಹಿರಿಯ ನಾಗರಿಕರಿಗೆ ಅನಿಯಮಿತ ಗುಡ್ ಮಾರ್ನಿಂಗ್ ಮೆಸೇಜ್ ಕೋಟಾ!" ಎಂಬ ಹೊಸ ಘೋಷಣೆಗಳೂ ಅದರಲ್ಲಿರಬಹುದು. ಇನ್ನೂ ಮುಂದೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವ ಜನರ ಬೇಡಿಕೆಗಳೂ ಬದಲಾಗಬಹುದು. "ನಮಗೆ ವಾಟ್ಸಾಪ್ ಭಾಗ್ಯ ಬೇಕು!", "ವಾಟ್ಸಾಪ್ ರೀಚಾರ್ಜ್ ನಮ್ಮ ಹಕ್ಕು!" ಮತ್ತು "ಬ್ಲೂ ಟಿಕ್ ನಮ್ಮ ಜನ್ಮಸಿದ್ಧ ಹಕ್ಕು!" ಎಂದು ಅವರು ಘೋಷಣೆ ಕೂಗಬಹುದು.

ಅಲ್ಲದೆ, ಗ್ರಾಮ ಪಂಚಾಯಿತಿಗಳಲ್ಲಿ "ಕಳೆದ 6 ತಿಂಗಳಿಂದ ನಿರಂತರವಾಗಿ ಗುಡ್ ಮಾರ್ನಿಂಗ್ ಮೆಸೇಜ್‌ಗಳನ್ನು ಕಳುಹಿಸಿರುವ ಕಾರಣ ಈ ಕುಟುಂಬ ವಾಟ್ಸಾಪ್ ಸಹಾಯಧನಕ್ಕೆ ಅರ್ಹವಾಗಿದೆ" ಎಂಬ ಹೊಸ ಪ್ರಮಾಣ ಪತ್ರವೂ ಬರಬಹುದು. ಈ ವಾಟ್ಸಾಪ್ ಎಂಬುದು ಕೇವಲ ಚಾಟ್ ಆ್ಯಪ್ ಅಲ್ಲ; ಇದು ಕೆಲವು ರಾಜಕೀಯ ಐಟಿ ಸೆಲ್‌ಗಳ ಜೀವನಾಡಿ. ಬೆಳಿಗ್ಗೆಯಿಂದ ರಾತ್ರಿ ತನಕ ಫೇಕ್ ನ್ಯೂಸ್ ತಯಾರಿಸಿ ಸಾವಿರಾರು ಗ್ರೂಪ್‌ಗಳಿಗೆ ಫಾರ್ವರ್ಡ್ ಮಾಡುವ ಡಿಜಿಟಲ್ ಕಾಕ್ರೋಚುಗಳ ಸಂಪೂರ್ಣ ಜೀವನೋಪಾಯವೇ ಇದರ ಮೇಲೆ ನಿಂತಿದೆ.

ಈ ಜನರಿಗೆ ಬೆಳಿಗ್ಗೆ ಎದ್ದು ಹಲ್ಲು ತೊಳೆಯುವ ಮುಂಚೆ ಫಾರ್ವರ್ಡ್ ಮೆಸೇಜ್ ಕಳುಹಿಸುವ ಅಭ್ಯಾಸ ಇದೆ. ಒಂದು ದಿನದಲ್ಲಿ 50 ಗ್ರೂಪ್‌ಗಳಿಗೆ ಮೆಸೇಜ್ ಕಳುಹಿಸದಿದ್ದರೆ ಅವರಿಗೆ ಜ್ವರ ಬರುತ್ತದೆ. ಇವರಲ್ಲಿ ಕೆಲವರು ಈಗಾಗಲೇ ಭಯಗೊಂಡಿದ್ದಾರೆ; "ನಾಳೆಯಿಂದ ಒಂದು ಮೆಸೇಜ್ ಕಳಿಸೋಕೆ ದುಡ್ಡು ಕೊಟ್ಟರೆ ಏನು ಮಾಡೋದು?" ಮತ್ತು "ಫೇಕ್ ನ್ಯೂಸ್ ಬಜೆಟ್‌ಗೆ ಪ್ರತ್ಯೇಕ ಅನುದಾನ ಕೇಳಬೇಕಾ?" ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿವೆ.

"ಬಿರಿಯಾನಿ ಜೊತೆ ವಾಟ್ಸಾಪ್ ರೀಚಾರ್ಜ್ ಕೂಡ ಕೊಡ್ತಾರಾ?" ಎಂದು ಕೆಲವರು ಗಾಬರಿಯಿಂದ ಕೇಳುತ್ತಿದ್ದಾರೆ. ಇನ್ನು ಮುಂದೆ ರಾಜಕೀಯ ನಾಯಕರು ಕಾರ್ಯಕರ್ತರಿಗೆ ಬಿರಿಯಾನಿ, ಟೀ ಶರ್ಟ್ ಮತ್ತು ಕ್ಯಾಪ್ ಜೊತೆಗೆ ವಾಟ್ಸಾಪ್ ಪ್ರೀಮಿಯಂ ಕೂಪನ್ ಹಂಚುವ ದಿನಗಳು ಬಂದರೂ ಆಶ್ಚರ್ಯವಿಲ್ಲ. ವಾಟ್ಸಾಪ್ ಚಂದಾದಾರಿಕೆ ಎಂಬ ಮಾತು ಕೇಳಿದ ಕ್ಷಣ ಅತಿ ಹೆಚ್ಚು ಹೆದರಿರುವವರು ಫ್ಯಾಮಿಲಿ ಗ್ರೂಪ್ ಅಡ್ಮಿನ್‌ಗಳು.

ಇಷ್ಟು ವರ್ಷ ಉಚಿತವಾಗಿ 500 ಜನರನ್ನು ಸೇರಿಸಿಕೊಂಡು ಆಡಳಿತ ನಡೆಸುತ್ತಿದ್ದವರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು. ಪ್ರತಿ ತಿಂಗಳು ಅಡ್ಮಿನ್‌ಗಳು ಮನೆ ಮನೆಗೆ ಹೋಗಿ, "ಮಾವ, ಈ ತಿಂಗಳ ವಾಟ್ಸಾಪ್ ಮೆಂಟೆನನ್ಸ್ ಫೀ ಕೊಡಿ" ಮತ್ತು "ಅಳಿಯ, ಕಳೆದ ತಿಂಗಳ ಬಾಕಿ ಇನ್ನೂ ಉಳಿದಿದೆ" ಎಂದು ಚಂದಾ ವಸೂಲಿ ಮಾಡಬಹುದು. "ಸೊಸೆ, ಗುಡ್ ಮಾರ್ನಿಂಗ್ ಫೋಟೋ ಕಳಿಸಬೇಕಾದರೆ ಮೊದಲು ರಿನ್ಯೂವಲ್ ಮಾಡಿಸಿ" ಎಂಬ ನಿಯಮವೂ ಜಾರಿಗೆ ಬರಬಹುದು.

ಚಂದಾ ಕೊಡದ ಸದಸ್ಯರನ್ನು ಕುಟುಂಬದಿಂದ ಅಲ್ಲ, ಗ್ರೂಪ್‌ನಿಂದ ಹೊರಹಾಕಲಾಗುವುದು ಎಂಬ ಕಟ್ಟುನಿಟ್ಟಿನ ನಿಯಮಗಳೂ ಬರಬಹುದು. ಇನ್ನು ಪ್ರೇಮಿಗಳ ಹೊಸ ಸಂಕಷ್ಟವಂತೂ ಹೇಳತೀರದು; ಇದುವರೆಗೂ ಪ್ರೀತಿಯ ಪರೀಕ್ಷೆ ಎಂದರೆ ಸಿನಿಮಾ, ಶಾಪಿಂಗ್, ಐಸ್‌ಕ್ರೀಮ್ ಅಥವಾ ಉಡುಗೊರೆಗಳಾಗಿದ್ದವು. ಇನ್ನು ಮುಂದೆ ಪ್ರೀತಿಯ ನಿಜವಾದ ಪರೀಕ್ಷೆ ಒಂದೇ; "ನನಗೆ ವಾಟ್ಸಾಪ್ ಪ್ರೀಮಿಯಂ ಮಾಡಿಸಿಕೊಡ್ತೀಯಾ?". ಗರ್ಲ್‌ಫ್ರೆಂಡ್ ಕೇಳಿದ ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಯುವಕರು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬೇಕಾಗುತ್ತದೆ.

ಬ್ಲೂ ಟಿಕ್ ಪ್ರೇಮ, ಗಾಸಿಪ್ ಆಂಟಿಯರ ಆಕ್ರಂದನ

"ನಿಜವಾಗಿಯೂ ಪ್ರೀತಿಸುತ್ತಿದ್ದರೆ ನನಗೆ ಬ್ಲೂ ಟಿಕ್ ತಗೋ" ಮತ್ತು "ಪ್ರೀತಿ ಇದ್ದರೆ ಫ್ಯಾಮಿಲಿ ಪ್ಲ್ಯಾನ್ ತೆಗೆದುಕೊಡು" ಎಂಬ ಪ್ರಶ್ನೆಗಳು ಪ್ರೇಮಲೋಕವನ್ನು ಕಾಡಲಿವೆ. "ನನಗಿಂತ ನಿನಗೆ ವಾಟ್ಸಾಪ್ ಮುಖ್ಯವಾ?" ಎಂಬ ಪ್ರಶ್ನೆಗೆ ಉತ್ತರಿಸಲು ಯಾರಿಗೂ ಸಾಧ್ಯವಾಗದು. ಕೆಲವರು ಸಾಲ ಮಾಡಿ ಪ್ರೀಮಿಯಂ ಮಾಡಿಸಿಕೊಟ್ಟು, ಅದೇ ವಾಟ್ಸಾಪ್‌ನಲ್ಲಿ ತಮ್ಮ ಪ್ರಿಯತಮೆ ಇನ್ನೊಬ್ಬನ ಜೊತೆ ವಿಡಿಯೋ ಕಾಲ್ ಮಾಡುತ್ತಿರುವುದನ್ನು ನೋಡಿ ದೇವದಾಸ್ ಆಗುವ ಸಾಧ್ಯತೆಯೂ ಇದೆ.

ಈ ದೇಶದಲ್ಲಿ ಅತ್ಯಂತ ದೊಡ್ಡ ಹೊಡೆತ ಬಿದ್ದಿರುವುದು ಗಾಸಿಪ್ ಆಂಟಿಯರಿಗೆ; ಪಕ್ಕದ ಮನೆಯ ಸೊಸೆಯ ಸ್ಟೇಟಸ್‌ನಿಂದ ಹಿಡಿದು ದೂರದ ಸಂಬಂಧಿಯ ಡಿಪಿವರೆಗೆ ಎಲ್ಲವನ್ನೂ ಸಂಗ್ರಹಿಸಿ ಓಣಿಯ ತುಂಬ ಹಂಚುವ ಮಹಾನ್ ಸಮಾಜಸೇವಕರು ಇವರೇ. ಅವರಿಗಾಗಿ "ಕರ್ನಾಟಕ ಸ್ಕ್ರೀನ್‌ಶಾಟ್ ಪೀಡಿತರ ಸಂಘ" ಸ್ಥಾಪನೆಯಾದರೂ ಆಶ್ಚರ್ಯವಿಲ್ಲ. ಮುಂದಿನ ದಿನಗಳಲ್ಲಿ ಅವರ ಪ್ರತಿಭಟನೆಗಳು "ಸ್ಕ್ರೀನ್‌ಶಾಟ್ ನಮ್ಮ ಹಕ್ಕು!", "ಫಾರ್ವರ್ಡ್ ಸ್ವಾತಂತ್ರ್ಯ ಉಳಿಸಿ!" ಮತ್ತು "ಗಾಸಿಪ್ ಉಳಿಸಿ, ಸಮಾಜ ಉಳಿಸಿ!" ಎಂದು ಇರಲಿವೆ.

ಆದರೆ ಜುಕರ್‌ಬರ್ಗ್ ಎಷ್ಟೇ ಬುದ್ಧಿವಂತನಾಗಿದ್ದರೂ ಭಾರತೀಯರ ಜುಗಾಡ್ ಬುದ್ಧಿಯನ್ನು ಅಂದಾಜಿಸಲು ಸಾಧ್ಯವಿಲ್ಲ. ಹೊಸ ಸಬ್‌ಸ್ಕ್ರಿಪ್ಷನ್ ಬಂದ ಮರುದಿನವೇ ಯೂಟ್ಯೂಬ್‌ನಲ್ಲಿ "ವಾಟ್ಸಾಪ್ ಪ್ರೀಮಿಯಂ ಫ್ರೀಗೆ ಪಡೆಯುವ 420 ವಿಧಾನಗಳು!", "7ನೇ ಟ್ರಿಕ್ ನೋಡಿ ಜುಕರ್‌ಬರ್ಗ್ ಶಾಕ್!" ಮತ್ತು "ಅಮೆರಿಕಾದಲ್ಲಿ ಬ್ಯಾನ್ ಆದ ಸೀಕ್ರೆಟ್ ಮೆಥಡ್!" ಎಂಬ ಶೀರ್ಷಿಕೆಗಳೊಂದಿಗೆ ವಿಡಿಯೋಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಲಕ್ಷಾಂತರ ವೀಕ್ಷಣೆಗಳು ಬರುತ್ತವೆ ಮತ್ತು ಪ್ರತಿಯೊಬ್ಬರೂ ತಮ್ಮ ಫ್ಯಾಮಿಲಿ ಗ್ರೂಪ್‌ನಲ್ಲಿ ಆ ವಿಡಿಯೋಗಳನ್ನು ಫಾರ್ವರ್ಡ್ ಮಾಡಲು ಪ್ರಾರಂಭಿಸುತ್ತಾರೆ.

ಒಟ್ಟಿನಲ್ಲಿ, ವಾಟ್ಸಾಪ್ ಪ್ಲಸ್ ಎನ್ನುವುದು ತಾಂತ್ರಿಕ ಬದಲಾವಣೆಯಲ್ಲ; ಇದು ಭಾರತೀಯರ ಸಾಮಾಜಿಕ ಮನಸ್ಥಿತಿಯನ್ನು ಪರೀಕ್ಷಿಸುವ ಒಂದು ರಾಷ್ಟ್ರೀಯ ಪ್ರಯೋಗ. ಮುಂದಿನ ದಿನಗಳಲ್ಲಿ ಯಾರಾದರೂ ನಿಮಗೆ ವಾಟ್ಸಾಪ್‌ನಲ್ಲಿ "ಗುಡ್ ಮಾರ್ನಿಂಗ್" ಎಂದು ಮೆಸೇಜ್ ಕಳುಹಿಸಿದರೆ ಅದನ್ನು ಸಾಮಾನ್ಯ ಶುಭಾಶಯ ಎಂದು ಭಾವಿಸಬೇಡಿ; ಅದು ಅವರ ಮಾಸಿಕ ಬಜೆಟ್‌ನಿಂದ ಖರ್ಚಾದ ಅಮೂಲ್ಯ ಹೂಡಿಕೆ ಆಗಿರಬಹುದು. ಪ್ರೀತಿಗಿಂತಲೂ ದುಬಾರಿಯಾಗುವುದು ವಾಟ್ಸಾಪ್ ಮೆಸೇಜ್ ಆಗುವ ದಿನಗಳು ದೂರವಿಲ್ಲ.

ಆದರೆ ಒಂದು ವಿಷಯ ಮಾತ್ರ ಖಚಿತ; ಕರ್ನಾಟಕದಲ್ಲಿ ಯಾವ ಪಕ್ಷ "ವಾಟ್ಸಾಪ್ ಭಾಗ್ಯ" ಘೋಷಿಸುತ್ತದೆಯೋ, ಅದೇ ಪಕ್ಷಕ್ಕೆ ಫ್ಯಾಮಿಲಿ ಗ್ರೂಪ್ ಅಡ್ಮಿನ್‌ಗಳ ಸಂಪೂರ್ಣ ಬೆಂಬಲ ಸಿಗಲಿದೆ! ಇನ್ನು ಗಾಸಿಪ್ ಆಂಟಿಯರ ಜೊತೆಗೆ ಹೊಸ ಜಾತಿ ಜನ್ಮ ತಳೆದಿರುವ ಡಿಜಿಟಲ್ ಕಾಕ್ರೋಚುಗಳು, ಪಾಕೆಟ್ ಖಾಲಿ ಮಾಡಿಸುವ ಫೇಕ್ ನ್ಯೂಸ್ ಸಿಂಡಿಕೇಟ್ ಕೂಡ ಸಿದ್ಧವಾಗಿವೆ. ಮೊಬೈಲ್ ರೀಚಾರ್ಜ್ ಹೆಸರಲ್ಲಿ ಮನೆ ಮನೆಗೆ ಕಾಣಿಕೆ ಕೇಳಲು ಸಿದ್ಧವಿರುವ ಗ್ರೂಪ್ ಅಡ್ಮಿನ್‌ಗಳ ಸೇನೆಯೂ ಈಗಾಗಲೇ ತಯಾರಾಗಿದೆ.

ಇವೆಲ್ಲವೂ ಒಂದುಗೂಡಿ ಕನ್ನಡ ನಾಡಿನಲ್ಲಿ ಹೊಸ ಆರ್ಥಿಕ ಕ್ರಾಂತಿಗೆ ಸಿದ್ಧವಾಗಿವೆ; ಬೇಕಿದ್ದರೆ ಈಗಿನಿಂದಲೇ "ವಾಟ್ಸಾಪ್ ಸ್ನೇಹಿತರ ಸಂಘ" ಸ್ಥಾಪಿಸಿ. ಉಚಿತ ಫಾರ್ವರ್ಡ್ ಹಕ್ಕಿಗಾಗಿ ಸಾಮೂಹಿಕ ಮೊಕದ್ದಮೆ ಹೂಡಲು ಪ್ರಾರಂಭಿಸಿ; ಏನೋ, ಈ ಪುಕ್ಕಟೆ ಹಕ್ಕುಗಳ ರಾಜ್ಯದಲ್ಲಿ, ಡೇಟಾ ಖರ್ಚು ಮಾಡುವುದಕ್ಕಿಂತ ಹಕ್ಕು ಪಡೆಯುವುದೇ ದೊಡ್ಡ ಸಂಸ್ಕೃತಿ ಅಲ್ಲವೇ? ವಾಟ್ಸಾಪ್ ಪ್ರೀಮಿಯಂ ಬಂದರೆ, ಕನ್ನಡಿಗರು ತಮ್ಮ ಜಾಣ್ಮೆಯಿಂದ ಅದನ್ನು ಪುಕ್ಕಟೆಯಾಗಿ ಪಡೆಯುವ 100001 ಮಾರ್ಗಗಳನ್ನು ಕಂಡುಹಿಡಿಯುತ್ತಾರೆ.

ಆದರೆ ಅಷ್ಟರಲ್ಲೇ ಜುಕರ್‌ಬರ್ಗ್ ತನ್ನ ಎಲ್ಲಾ ಶೇರ್ಗಳನ್ನು ಮಾರಿ, ಭಾರತದ ಏದುರ್ಮಂಗಲಕ್ಕೆ ಓಡಿ ಹೋಗಬಹುದು! ಇದೆಲ್ಲವೂ ತಮಾಷೆಯಾಗಿ ತೋರಬಹುದು, ಆದರೆ ವಾಸ್ತವದಲ್ಲಿ ವಾಟ್ಸಾಪ್ ಚಂದಾದಾರಿಕೆ ಎಂಬ ಕೇವಲ ಒಂದು ಗಾಳಿ ಸುದ್ದಿಯೇ ಇಷ್ಟು ದೊಡ್ಡ ಕೋಲಾಹಲಕ್ಕೆ ಕಾರಣವಾಗುತ್ತದೆ. ಇಂಥ ಸಂದರ್ಭದಲ್ಲಿ ನಿಜವಾದ ದುರಂತ ಎಂದರೆ, ಜನರು ಮೆಸೇಜ್ ಮಾಡೋದನ್ನು ನಿಲ್ಲಿಸಿ, ನೇರವಾಗಿ ಮನೆ ಮನೆಗೆ ಹೋಗಿ ಮಾತನಾಡಲು ಪ್ರಾರಂಭಿಸಬಹುದು; ಆಗ ಸಮಾಜದಲ್ಲಿ ಬಾಂಧವ್ಯ ಹೆಚ್ಚಾಗಿ, ಫೋನ್ ಕಂಪನಿಗಳು ದಿವಾಳಿ ತೆಗೆಯಬಹುದು!

ಎಲ್ಲಕ್ಕಿಂತ ಮುಖ್ಯವಾಗಿ, ಫೇಕ್ ನ್ಯೂಸ್ ಫ್ಯಾಕ್ಟರಿಗಳು ಮುಚ್ಚಿಹೋಗಿ, ಜನರು ನಿಜವಾದ ಸುದ್ದಿ ಓದಲು ಪ್ರಾರಂಭಿಸಿದರೆ, ಪತ್ರಿಕಾ ಅಕಾಡೆಮಿಯವರಿಗೆ ಕೆಲಸ ಹೆಚ್ಚಾಗಿ, ಅವರು ಒಂದು ರೀತಿಯ ಸಂತೋಷದ ಆತಂಕಕ್ಕೆ ಒಳಗಾಗಬಹುದು. ವಾಟ್ಸಾಪ್ ಪೇಯ್ಡ್ ಆದರೂ ಏನು, ಉಚಿತವಾಗಿದ್ದರೂ ಏನು – ಕನ್ನಡಿಗರ ನಗುವಿಗೆ, ಅವರ ಜೀವನಶೈಲಿಗೆ, ಅವರ ಗಾಸಿಪ್ ಸಂಸ್ಕೃತಿಗೆ ಯಾವುದೇ ಬೆಲೆ ಟ್ಯಾಗ್ ಅಂಟಿಸಲು ಸಾಧ್ಯವೇ ಇಲ್ಲ. ಜುಕರ್‌ಬರ್ಗ್ ಇದನ್ನು ಅರ್ಥಮಾಡಿಕೊಳ್ಳದಿದ್ದರೆ, ಅವನು ಯಾವಾಗಲೂ ನಮ್ಮ ಫಾರ್ವರ್ಡ್ ಮೆಸೇಜ್‌ಗಳ ವೇಗಕ್ಕೆ ಆಶ್ಚರ್ಯಪಡುತ್ತಲೇ ಇರುತ್ತಾನೆ!
ಅದೆಲ್ಲ ಅತ್ಲಾಗಿರಲಿ.. ಮೊದ್ಲು ನಮ್ಮ ವಾಟ್ಸಾಪ್ ಚಾನೆಲ್ ಸೇರಿ.. ಪುಕ್ಕಟೆಯಾಗಿ!

Nagaraj Vaidya
Nagaraj Vaidya is the Editor-in-Chief of Tech Vaidya Global and a technology analyst with 18 years of journalism experience. He covers AI, Agritech, Cybersecurity, and Digital Trends, helping readers understand the technologies shaping the future. He is the author of AI Bhagavad Gita.
664 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp