ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಹಳಿಯಾಳದ ಕೆಎಲ್ಎಸ್ ವಿಶ್ವನಾಥರಾವ್ ದೇಶಪಾಂಡೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (VDIT) ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಜಾಗತಿಕ ಮೋಟಾರ್ ಬೈಕ್ ಮಾರುಕಟ್ಟೆಯ ದಿಗ್ಗಜ ಸಂಸ್ಥೆಯಾದ ರಾಯಲ್ ಎನ್ಫೀಲ್ಡ್, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯಾಸಂಸ್ಥೆಯೊಂದರಲ್ಲಿ ತನ್ನ ಅಧಿಕೃತ ತರಬೇತಿ ಕೇಂದ್ರವನ್ನು ಆರಂಭಿಸಿದ್ದು, ಅದು ವಿಡಿಐಟಿಯಲ್ಲಿ ಎಂಬುದು ವಿಶೇಷ. ಜನವರಿ 19 ರಂದು ಈ ಹೈಟೆಕ್ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿತು.
ಈ ತರಬೇತಿ ಕೇಂದ್ರವು ಕೇವಲ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಉತ್ತರ ಕರ್ನಾಟಕ ಮತ್ತು ಗೋವಾ ಭಾಗದ ರಾಯಲ್ ಎನ್ಫೀಲ್ಡ್ ಸಿಬ್ಬಂದಿಗೂ ತರಬೇತಿ ನೀಡುವ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸಲಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಆಗುತ್ತಿರುವ ತ್ವರಿತ ಬದಲಾವಣೆಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಳಿಯಾಳ ಮತ್ತು ದಾಂಡೇಲಿ ಕ್ಷೇತ್ರದ ಶಾಸಕರು ಹಾಗೂ ಹಿರಿಯ ಮುಖಂಡರಾದ ಆರ್. ವಿ. ದೇಶಪಾಂಡೆ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿಗಳಿದ್ದರೆ ಸಾಲದು, ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯವೂ ಬೇಕು ಎಂದು ಪ್ರತಿಪಾದಿಸಿದರು. ಬದಲಾಗುತ್ತಿರುವ ತಂತ್ರಜ್ಞಾನದ ಅರಿವು ಬೆಳೆಸಿಕೊಂಡು, ಕೈಗಾರಿಕಾ ಕ್ಷೇತ್ರದ ಸವಾಲುಗಳಿಗೆ ಪರಿಹಾರ ಒದಗಿಸುವಂತಹ ಆವಿಷ್ಕಾರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕಳೆದ ಎರಡು ದಶಕಗಳಿಂದ ವಿಡಿಐಟಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವುದನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಯಲ್ ಎನ್ಫೀಲ್ಡ್ ಸಂಸ್ಥೆಯ ದಕ್ಷಿಣ ಭಾರತ ವಿಭಾಗದ ಸೇವಾ ಮುಖ್ಯಸ್ಥ ಅನೂಪ್ ಜಿ.ಪಿ. ಅವರು ಮಾತನಾಡಿ, ಶೈಕ್ಷಣಿಕ ಸಂಸ್ಥೆಯೊಂದಿಗೆ ಕೈಜೋಡಿಸಿ ತರಬೇತಿ ಕೇಂದ್ರ ಸ್ಥಾಪಿಸುತ್ತಿರುವುದು ಉದ್ಯಮ ಮತ್ತು ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು. ವಿಡಿಐಟಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಈ ಕೇಂದ್ರ ಆರಂಭವಾಗುತ್ತಿರುವುದು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಹೊಸ ವೇದಿಕೆ ಕಲ್ಪಿಸಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕೆಎಲ್ಎಸ್ ಆಡಳಿತ ಮಂಡಳಿಯ ಚೇರ್ಮನ್ ಎ.ಕೆ. ತಗಾರೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತಿಕ ಮಟ್ಟದ ಕಂಪನಿಯೊಂದು ನಮ್ಮ ಕಾಲೇಜಿನೊಂದಿಗೆ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದರು. ಆಡಳಿತ ಮಂಡಳಿ ಸದಸ್ಯ ಆರ್.ಎಸ್. ಮುತಾಲಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಆರ್ಕಿಟ್ರನ್ ಪ್ರೈವೇಟ್ ಲಿಮಿಟೆಡ್ ನ ಹೆಚ್. ಎಸ್. ಹಳ್ಳಿಕೇರಿ ಮತ್ತು ಪ್ರಾಕ್ಸಿನ್ ಪ್ರೈವೇಟ್ ಲಿಮಿಟೆಡ್ ನ ನಾರಾಯಣ ತೋಸುರ್ ಅವರನ್ನು ಸನ್ಮಾನಿಸಲಾಯಿತು. ಇವರು ಹಳಿಯಾಳ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೇದಿಕೆಯಲ್ಲಿ ಸಂಡೂರಿನ ಬಿ ಕೆ ಜಿ ಗ್ರೂಪ್ ಮುಖ್ಯಸ್ಥ ಪ್ರಮೋದ್ ಹಾಗೂ ರಾಯಲ್ ಎನ್ಫೀಲ್ಡ್ ನ ಪ್ರಮುಖ ಪದಾಧಿಕಾರಿಗಳಾದ ಕೆ. ರಂಗಸ್ವಾಮಿ, ಬಿನೋಯ್ ಎಂ, ಅಶೋಕ್ ಎಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಡಿಐಟಿ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಸ್ವಾಗತಿಸಿದರೆ, ಕೆಎಲ್ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಪ್ರಭು ವಂದಿಸಿದರು. ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರಾಧ್ಯಾಪಕರನ್ನು ಇದೇ ವೇಳೆ ಗೌರವಿಸಲಾಯಿತು. ಈ ಕೇಂದ್ರದ ಸ್ಥಾಪನೆಯಿಂದಾಗಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೇರವಾಗಿ ರಾಯಲ್ ಎನ್ಫೀಲ್ಡ್ ನ ಆಧುನಿಕ ಬೈಕ್ ಎಂಜಿನ್ ಗಳು ಮತ್ತು ತಂತ್ರಜ್ಞಾನದ ಮೇಲೆ ಪ್ರಾಯೋಗಿಕ ಜ್ಞಾನ ಪಡೆಯಲು ಸಾಧ್ಯವಾಗಲಿದೆ.
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.