ಟ್ರೆಂಡಿಂಗ್

ಬೆರ್ಚಪ್ಪನಿಂದ ಬ್ಲೂಟೂತ್‌ವರೆಗೆ: ಕೃಷಿ ರಕ್ಷಣೆಗೆ ಹೈಟೆಕ್ ಸ್ಪರ್ಶ

ಬೆರ್ಚಪ್ಪನಿಂದ ಬ್ಲೂಟೂತ್‌ವರೆಗೆ: ಕೃಷಿ ರಕ್ಷಣೆಗೆ ಹೈಟೆಕ್ ಸ್ಪರ್ಶ

ಬೆರ್ಚಪ್ಪನಿಗೆ ನಿವೃತ್ತಿ: ಹೊಲಗದ್ದೆಗಿಳಿಯಲಿದೆಯೇ ಎಐ ರೋಬೋಟ್‌ಗಳು?

| ಹೊಸ್ಮನೆ ಮುತ್ತು

ಈಗ ಎಲ್ಲೆಡೆ ಪೈರುಗಳು ಚಿಗುರೊಡೆಯುತ್ತಿರುವ ಸಮಯ. ರೈತನ ಶ್ರಮಕ್ಕೆ ಪ್ರತಿಫಲ ಸಿಗುವ ಈ ಹೊತ್ತಿನಲ್ಲೇ ಕಾಡುಪ್ರಾಣಿ ಮತ್ತು ಪಕ್ಷಿಗಳ ಉಪಟಳವೂ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ಅನ್ನದಾತರು ಅನಾದಿ ಕಾಲದಿಂದಲೂ ಹಲವಾರು ಸಾಂಪ್ರದಾಯಿಕ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದುದು ಹೊಲ, ಗದ್ದೆಗಳಲ್ಲಿ ‘ಬೆರ್ಚಪ್ಪ’ನನ್ನು ನಿಲ್ಲಿಸುವುದು. ಸವೆದ ಒಂಟಿ ಚಪ್ಪಲಿಯನ್ನು ತೂಗುಹಾಕುವುದು, ಮಡಕೆಗಳಿಗೆ ಸುಣ್ಣ ಬಳಿದು ರಾಕ್ಷಸನ ಮುಖ ಬರೆಯುವುದು ಅಥವಾ ಕೆಲವು ಕಡೆ ಪೊರಕೆಯನ್ನು ಕಟ್ಟುವುದು ಇತ್ಯಾದಿ ರೂಢಿಯಲ್ಲಿದೆ. ಬೆರ್ಚಪ್ಪನೂ ಒಂದು ಬಗೆಯ ಸಾವಯವ ಕೃಷಿಯ ಅಂಗವಿದ್ದಂತೆ. ಯಾವುದೇ ರಾಸಾಯನಿಕವಿಲ್ಲದೆ ಬೆಳೆ ರಕ್ಷಣೆ ಮತ್ತು ಪಕ್ಷಿ ನಿರೋಧಕವಾಗಿ ಇದು ಕೆಲಸ ಮಾಡುತ್ತದೆ.
ಆದರೆ, ಪ್ರಾಣಿ ಮತ್ತು ಪಕ್ಷಿಗಳು ಪರಿಸರದಲ್ಲಿನ ಬದಲಾವಣೆಗಳನ್ನು ಬಹು ಬೇಗ ಗ್ರಹಿಸುವ ಬುದ್ಧಿವಂತಿಕೆಯನ್ನು ಹೊಂದಿವೆ. ಅವು ತಮ್ಮ ಮೊದಲ ನೋಟದಿಂದಲೇ ಜಾಗರೂಕವಾಗುತ್ತವೆ. ಮೊದಮೊದಲು ಬೆರ್ಚಪ್ಪನೆಂಬ ಗುಮ್ಮನಿಗೆ ಹೆದರಿದರೂ, ಸ್ವಲ್ಪ ಸಮಯದ ನಂತರ ಆ ಜಾಗಕ್ಕೆ ಹೊಂದಿಕೊಳ್ಳುತ್ತವೆ ಹಾಗೂ ಆ ಬಣ್ಣದ ಗುಮ್ಮ ತಮಗೆ ಒಡ್ಡುವ ನಿಜವಾದ ಬೆದರಿಕೆಯಲ್ಲ ಎಂದು ಅವು ಅರ್ಥಮಾಡಿಕೊಳ್ಳುತ್ತವೆ. ನಂತರ ನಿರ್ಭೀತವಾಗಿ ಬೆಳೆಯ ಮಧ್ಯೆ ಓಡಾಡುತ್ತವೆ. ಕೃಷಿ ರಂಗಕ್ಕೆ ಯಂತ್ರಗಳು ದಾಪುಗಾಲಿಡುತ್ತಿದ್ದಂತೆ, ಉತ್ತು-ಬಿತ್ತುವುದರಿಂದ ಹಿಡಿದು ಬೆಳೆ ಕಟಾವಿನವರೆಗೂ ಎಲ್ಲಾ ಕೆಲಸಗಳನ್ನು ಯಂತ್ರಗಳೇ ಮಾಡುತ್ತಿವೆ. ದಿನದಿಂದ ದಿನಕ್ಕೆ ಏರುತ್ತಿರುವ ಜನಸಂಖ್ಯೆಗೆ ಉಣಬಡಿಸುವ ದೊಡ್ಡ ಜವಾಬ್ಧಾರಿ ರೈತರ ಹೆಗಲೇರಿದೆ. ಹೀಗಾಗಿ ಕೃಷಿಯಲ್ಲಿ ಹೊಸ ಹೊಸ ಸವಾಲುಗಳನ್ನು ರೈತ ಎದುರಿಸಬೇಕಾಗುತ್ತದೆ.
ವಿಶ್ವ ಮಾರುಕಟ್ಟೆಯಲ್ಲಿನ ಸ್ಪರ್ಧೆ ಮತ್ತು ಸವಾಲುಗಳನ್ನು ಹಿಮ್ಮೆಟ್ಟಿಸಲು ರೈತರಿಗೆ ಇರುವ ಏಕೈಕ ದಾರಿಯೆಂದರೆ ಹೆಚ್ಚೆಚ್ಚು ಆಧುನೀಕರಣಗೊಳ್ಳುವುದು. ಕೃಷಿ ಆಧುನೀಕರಣಗೊಂಡಂತೆ ಸಾಂಪ್ರದಾಯಿಕ ವಸ್ತು ಮತ್ತು ವಿಚಾರಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತವೆ. ಉತ್ತಮ ಇಳುವರಿ ಪಡೆಯಲು ರೈತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಕೀಟಗಳು, ಕಳೆಗಳು, ರೋಗಗಳು ಮತ್ತು ಪ್ರತಿಕೂಲ ಹವಾಮಾನದಂತಹ ಸಮಸ್ಯೆಗಳು ಬೆಳೆಗಳನ್ನು ಹಾಳುಮಾಡಬಹುದು. ಈ ಸವಾಲುಗಳನ್ನು ಎದುರಿಸಲು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ನವೀನ ವಿದ್ಯುನ್ಮಾನ ತಂತ್ರಜ್ಞಾನಗಳು ಬಳಕೆಗೆ ಬಂದಿವೆ. ಈ ವಿದ್ಯುನ್ಮಾನ ವ್ಯವಸ್ಥೆಗಳ ಬಳಕೆ ಕೃಷಿ ಕ್ಷೇತ್ರದ ವಾತಾವರಣದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದಿದೆ.
ನವೀನ ತಂತ್ರಜ್ಞಾನವನ್ನು ಬಳಸುವ ಮೂಲಕ, ರೈತರು ಈಗ ತಮ್ಮ ಕೃಷಿ ಅಭ್ಯಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನವೀನ ತಂತ್ರಜ್ಞಾನ ಕೃಷಿಯು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಕೃಷಿಯಲ್ಲಿ ಹೊಸ ಆವಿಷ್ಕಾರಗಳ ಬಳಕೆಯ ಬಗ್ಗೆ ಇಂದಿನ ರೈತರು ಚೆನ್ನಾಗಿ ತಿಳಿದಿದ್ದಾರೆ ಮತ್ತು ಮಾಹಿತಿಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ಮಾರ್ಟ್ ಕೃಷಿ ವ್ಯವಸ್ಥೆ ಅಥವಾ ಸ್ಮಾರ್ಟ್ ಅಗ್ರಿಕಲ್ಚರ್ ಸಿಸ್ಟಮ್ ಎಂಬುದು ಕೃಷಿ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಒಂದು ಸಮಗ್ರ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ (AI) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ.
ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಚಲನ-ಸಂವೇದಿ ಎಚ್ಚರಿಕೆ ವ್ಯವಸ್ಥೆಗಳು ಈಗ ಪ್ರಚಲಿತದಲ್ಲಿವೆ. ಇವು ಚಲನ ಸಂವೇದಕಗಳನ್ನು ಬಳಸಿಕೊಂಡು ಪ್ರಾಣಿಗಳು ಹೊಲದ ಸಮೀಪ ಬಂದಾಗ ಜೋರಾದ ಶಬ್ದ, ಬೆಳಕು ಅಥವಾ ಅಲ್ಟ್ರಾಸಾನಿಕ್ ತರಂಗಗಳನ್ನು ಹೊರಸೂಸುತ್ತವೆ. ಈ ಎಚ್ಚರಿಕೆಗಳು ಪ್ರಾಣಿಗಳನ್ನು ಹೆದರಿಸಿ ದೂರ ಓಡಿಸುತ್ತವೆ. ಧ್ವನಿ ಆಧಾರಿತ ವ್ಯವಸ್ಥೆಗಳು ಪಕ್ಷಿಗಳಿಗೆ ಇಷ್ಟವಾಗದ ಶಬ್ದಗಳನ್ನು ಅಥವಾ ಪಕ್ಷಿಗಳ ಬೇಟೆಗಾರರ ಅಂದರೆ ಹದ್ದು ಅಥವಾ ಗಿಡುಗಗಳ ಧ್ವನಿಗಳನ್ನು ಸೃಷ್ಟಿಸುತ್ತವೆ. ಈ ವ್ಯವಸ್ಥೆಗಳು ಒಂದು ನಿರ್ದಿಷ್ಟ ಅವಧಿಗೆ ಒಮ್ಮೆ ಧ್ವನಿಯನ್ನು ಹೊರಸೂಸುವ ಮೂಲಕ ಪಕ್ಷಿಗಳನ್ನು ಬೆದರಿಸುತ್ತವೆ. ಕೆಲವು ಸಾಧನಗಳು ಮೋಷನ್ ಸೆನ್ಸರ್ಗಳನ್ನು ಹೊಂದಿದ್ದು, ಪ್ರಾಣಿ-ಪಕ್ಷಿಗಳು ಹತ್ತಿರ ಬಂದಾಗ ಮಾತ್ರ ಕಾರ್ಯನಿರ್ವಹಿಸುತ್ತವೆ.
ಇನ್ನೂ ಮುಂದುವರಿದು, ಕೆಲವು ಆಧುನಿಕ ಸ್ವಯಂಚಾಲಿತ ಪ್ರಾಣಿ ನಿವಾರಕ ವ್ಯವಸ್ಥೆಗಳು ಪ್ರಾಣಿಗಳ ಬಗೆಗಿನ ದತ್ತಾಂಶವನ್ನು ಸಂಗ್ರಹಿಸಿ, ಅವುಗಳ ಚಲನವಲನಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತವೆ. ಇವು ಪ್ರಾಣಿಗಳ ನಿರ್ದಿಷ್ಟ ವರ್ತನೆಯನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಲೇಸರ್ ಆಧಾರಿತ ವ್ಯವಸ್ಥೆಗಳೂ ಕೂಡ ಪರಿಣಾಮಕಾರಿಯಾಗಿವೆ. ಈ ತಂತ್ರಜ್ಞಾನದಲ್ಲಿ ಹಸಿರು ಲೇಸರ್ ಕಿರಣಗಳನ್ನು ಬೆಳೆಗಳ ಮೇಲೆ ಹರಿಸಲಾಗುತ್ತದೆ. ಈ ಕಿರಣಗಳು ಪಕ್ಷಿಗಳಿಗೆ ಕಿರಿಕಿರಿಯುಂಟು ಮಾಡಿ ಅವುಗಳನ್ನು ದೂರ ಓಡಿಸುತ್ತವೆ. ಈ ವ್ಯವಸ್ಥೆಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಬಲ್ಲವು ಮತ್ತು ದೊಡ್ಡ ಪ್ರದೇಶಗಳನ್ನು ಸಹ ರಕ್ಷಿಸಬಲ್ಲವು. ರಿಫ್ಲೆಕ್ಟರ್‌ಗಳ ಬಳಕೆಯಿಂದಾಗಿ ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಬಹುದೆಂಬ ಪ್ರಯೋಗ ಹೆಚ್ಚೆಚ್ಚು ಯಶಸ್ವಿಯಾಗುತ್ತಿದೆ. ರಾತ್ರಿಯ ಸಮಯದಲ್ಲಿ ಬೆಳಕು ಬಿದ್ದಾಗ ಹೊಳೆಯುವ ರಿಫ್ಲೆಕ್ಟರ್ ಕಾಡು ಪ್ರಾಣಿಗಳಲ್ಲಿ ಭಯಹುಟ್ಟಿಸುತ್ತವೆ.
ಸೌರ ಬೇಲಿ ವ್ಯವಸ್ಥೆಗಳು ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಸೌರ ಶಕ್ತಿಯಿಂದ ಕಾರ್ಯನಿರ್ವಹಿಸುವ ಈ ಬೇಲಿಗಳು ಪ್ರಾಣಿಗಳಿಗೆ ಸಣ್ಣ ಪ್ರಮಾಣದ ವಿದ್ಯುತ್ ಆಘಾತ ನೀಡುತ್ತವೆ. ಇದು ಪ್ರಾಣಿಗಳಿಗೆ ಯಾವುದೇ ಗಂಭೀರ ಹಾನಿ ಮಾಡುವುದಿಲ್ಲ, ಆದರೆ ಅವುಗಳಿಗೆ ಆಘಾತದ ಅನುಭವ ನೀಡಿ ಬೇಲಿಯಿಂದ ದೂರ ಇರಲು ಕಲಿಸುತ್ತದೆ. ಈ ವ್ಯವಸ್ಥೆಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣಾ ವೆಚ್ಚವೂ ಕಡಿಮೆ. ಈ ಬೇಲಿಗಳು ಕಾಡು ಪ್ರಾಣಿಗಳು ಹೊಲಗಳಿಗೆ ಪ್ರವೇಶಿಸದಂತೆ ತಡೆಯುವುದಲ್ಲದೆ, ಮಾನವನ ಹಸ್ತಕ್ಷೇಪವಿಲ್ಲದೆ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ವಿಧಾನಗಳು ಕೇವಲ ಬೆಳೆ ರಕ್ಷಣೆಗಷ್ಟೇ ಸೀಮಿತವಾಗಿದ್ದರೆ, ಇಳುವರಿ ಹೆಚ್ಚಿಸಲು ಬೇರೆಯದೇ ಸ್ಮಾರ್ಟ್ ತಂತ್ರಜ್ಞಾನಗಳಿವೆ.
ಕೃಷಿಯ ಆಂತರಿಕ ನಿರ್ವಹಣೆಯಲ್ಲಿ ಸೆನ್ಸರ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಣ್ಣಿನ ತೇವಾಂಶ, ತಾಪಮಾನ, ಪಿಎಚ್ ಮಟ್ಟ ಮತ್ತು ಪೋಷಕಾಂಶಗಳ ಲಭ್ಯತೆಯನ್ನು ಅಳೆಯಲು ಮಣ್ಣಿನಲ್ಲಿ ಸೆನ್ಸರ್ಗಳನ್ನು ಅಳವಡಿಸಲಾಗುತ್ತದೆ. ಈ ಮಾಹಿತಿಯು ರೈತರಿಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನೀರು ಹಾಕುವ ನಿಖರ ಸಮಯ ಮತ್ತು ಗೊಬ್ಬರ ಬಳಸುವ ಪ್ರಮಾಣದ ಬಗ್ಗೆ ಇದು ಮಾಹಿತಿ ನೀಡುತ್ತದೆ. ಇದರ ಜೊತೆಗೆ ಸೌರಶಕ್ತಿ ಚಾಲಿತ ಪಂಪ್ ಸೆಟ್ಗಳು ಮತ್ತು ನೀರಾವರಿ ವ್ಯವಸ್ಥೆಗಳು ವಿದ್ಯುತ್ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ವರದಾನವಾಗಿವೆ.
ಇತ್ತೀಚೆಗೆ ಕೃಷಿಯಲ್ಲಿ ಡ್ರೋನ್ ಬಳಕೆಗೆ ಕೂಡಾ ಹೆಚ್ಚೆಚ್ಚು ಒತ್ತು ಸಿಗುತ್ತಿದೆ. ಕೃಷಿಯಲ್ಲಿ ಇವುಗಳ ಬಳಕೆಯು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಡ್ರೋನ್ಗಳನ್ನು ಬಳಸಿ ಕೀಟನಾಶಕಗಳನ್ನು ಸಿಂಪಡಿಸಬಹುದು, ಬೆಳೆಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ರೋಗಪೀಡಿತ ಪ್ರದೇಶಗಳನ್ನು ಸುಲಭವಾಗಿ ಗುರುತಿಸಬಹುದು. ಇದರಿಂದ ಅತಿಯಾದ ರಾಸಾಯನಿಕಗಳ ಬಳಕೆ ಕಡಿಮೆಯಾಗಿ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಬಹುದು. ಕೇವಲ ಕಣ್ಣಳತೆಯ ಅಂದಾಜಿನ ಮೇಲೆ ಔಷಧ ಸಿಂಪಡಿಸುವ ಬದಲು, ನಿಖರವಾಗಿ ಅಗತ್ಯವಿರುವ ಜಾಗಕ್ಕೆ ಮಾತ್ರ ಔಷಧ ತಲುಪಿಸಲು ಡ್ರೋನ್ ಸಹಕಾರಿ.
ಅರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮೆಷೀನ್ ಲರ್ನಿಂಗ್ (ML) ತಂತ್ರಜ್ಞಾನಗಳು ಬೆಳೆಗಳನ್ನು ರಕ್ಷಿಸುವಲ್ಲಿ ಈಗ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ತಂತ್ರಜ್ಞಾನಗಳು ರೈತರಿಗೆ ಕೀಟಗಳು ಮತ್ತು ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಸಸ್ಯಗಳ ಎಲೆಗಳನ್ನು ಸ್ಕ್ಯಾನ್ ಮಾಡಿ ಅಥವಾ ಫೋಟೋ ತೆಗೆದು ಅಪ್ಲೋಡ್ ಮಾಡಿದರೆ, ಎಐ ತಂತ್ರಜ್ಞಾನವು ಅದರಲ್ಲಿರುವ ರೋಗದ ಪ್ರಕಾರವನ್ನು ಮತ್ತು ಅದರ ತೀವ್ರತೆಯನ್ನು ನಿಖರವಾಗಿ ತಿಳಿಸುತ್ತದೆ. ಇದು ರೈತರಿಗೆ ತಕ್ಷಣದ ಪರಿಹಾರೋಪಾಯಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಕಳೆಗಳನ್ನು ಗುರುತಿಸಲು ರೋಬೋಟ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತದೆ. ಇವುಗಳು ಕೇವಲ ಕಳೆಗಳನ್ನು ಮಾತ್ರ ನಾಶಪಡಿಸಿ, ಮುಖ್ಯ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತವೆ.
ಹವಾಮಾನ ಮುನ್ಸೂಚನೆಯಲ್ಲೂ ತಂತ್ರಜ್ಞಾನದ ಪಾತ್ರ ಹಿರಿದು. ಕೃಷಿ ಸಂಸ್ಥೆಗಳು ಎಐ ಆಧಾರಿತ ತಂತ್ರಜ್ಞಾನಗಳನ್ನು ಬಳಸಿ ಹವಾಮಾನದ ಬಗ್ಗೆ ನಿಖರ ಮಾಹಿತಿ ನೀಡುತ್ತವೆ. ಇದರಿಂದ ರೈತರು ಮಳೆ, ಗಾಳಿ, ಮತ್ತು ಬರಗಾಲದಂತಹ ಸನ್ನಿವೇಶಗಳಿಗೆ ಸಿದ್ಧರಾಗಲು ಸಹಾಯವಾಗುತ್ತದೆ. ಈ ವ್ಯವಸ್ಥೆಯ ಹೊರತಾಗಿಯೂ, ಬೆಳೆಗಳಲ್ಲಿ ಕೀಟನಾಶಕಗಳ ಹಾವಳಿ ತಡೆಗಟ್ಟಲು ಅನೇಕ ತರಹದ ಬಲೆಗಳು ಮತ್ತು ಉಪಕರಣಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಬೆಳಕಿನ ಬಲೆಗಳು, ಅಂಟಿಕೊಳ್ಳುವ ಪಟ್ಟಿಗಳು, ಹಾರುವ ಕೀಟ ಬಲೆಗಳು, ಭೂಮಿಯ ಆರ್ತ್ರೋಪಾಡ್ ಬಲೆಗಳು, ಜಲವಾಸಿ ಆರ್ತ್ರೋಪಾಡ್ ಬಲೆಗಳು ಮುಂತಾದವು ರೈತನಿಗೆ ಮಿತ್ರರಾಗಿ ಒದಗಿಬಂದಿವೆ.
ತಂತ್ರಜ್ಞಾನ ಆಧಾರಿತ ಕೃಷಿಯಿಂದ ರೈತನಿಗೆ ಆಗುವ ಲಾಭಗಳು ಹಲವು. ಮೊದಲನೆಯದಾಗಿ ಕಡಿಮೆ ವೆಚ್ಚ; ರಾಸಾಯನಿಕ ಕೀಟನಾಶಕಗಳ ಬಳಕೆ ಕಡಿಮೆಯಾಗುವುದರಿಂದ ಅನಗತ್ಯ ಖರ್ಚು ಉಳಿತಾಯವಾಗುತ್ತದೆ. ಎರಡನೆಯದಾಗಿ ಅಧಿಕ ಇಳುವರಿ; ಬೆಳೆಗಳಿಗೆ ಹಾನಿಯಾಗದಿರುವ ಕಾರಣ ಮತ್ತು ಸಮರ್ಪಕ ನೀರಾವರಿ ಹಾಗೂ ರೋಗ ನಿರ್ವಹಣೆಯಿಂದ ಉತ್ತಮ ಇಳುವರಿ ಸಾಧ್ಯವಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇದು ಪರಿಸರ ಸ್ನೇಹಿ. ಈ ವ್ಯವಸ್ಥೆಗಳು ವಿಷಕಾರಿ ರಾಸಾಯನಿಕಗಳನ್ನು ಬಳಸುವುದಿಲ್ಲ. ರಾಸಾಯನಿಕಗಳ ಕಡಿಮೆ ಬಳಕೆಯು ಮಣ್ಣು ಮತ್ತು ನೀರಿನ ಮಾಲಿನ್ಯವನ್ನು ತಡೆಯುತ್ತದೆ.
ಸ್ವಯಂಚಾಲಿತ ವಿದ್ಯುನ್ಮಾನ ವ್ಯವಸ್ಥೆಗಳು ಹೆಚ್ಚು ವಿಶ್ವಾಸಾರ್ಹ ಮತ್ತು ನಿರ್ಣಾಯಕ ಸಾಮರ್ಥ್ಯ ಹೊಂದಿದ್ದು, ಇವುಗಳ ಬಳಕೆಯು ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತಂದಿದೆ. ನಿರಂತರವಾಗಿ ಕಾವಲು ಕಾಯುವ ಅಗತ್ಯ ಇರುವುದಿಲ್ಲವಾದ್ದರಿಂದ ಮಾನವ ಶ್ರಮ ಕಡಿಮೆಯಾಗುತ್ತದೆ. ಆದಾಗ್ಯೂ, ಭಾರತದಂತಹ ದೇಶದಲ್ಲಿ ಕೃಷಿಯಲ್ಲಿ ವಿದ್ಯುನ್ಮಾನ ವ್ಯವಸ್ಥೆಗಳ ಬಳಕೆಯು ಇನ್ನೂ ಆರಂಭಿಕ ಹಂತದಲ್ಲಿದೆ. ರೈತರಿಗೆ ಈ ತಂತ್ರಜ್ಞಾನಗಳ ಬಗ್ಗೆ ಶಿಕ್ಷಣ ನೀಡುವುದು, ಅವುಗಳ ಬಳಕೆಯನ್ನು ಸುಲಭಗೊಳಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಲಭ್ಯವಾಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದ ಕೃಷಿ ವಲಯವು ಇನ್ನಷ್ಟು ಆಧುನಿಕವಾಗಿ ಮತ್ತು ಲಾಭದಾಯಕವಾಗಿ ಬದಲಾಗಬಹುದು.

Nagaraj Vaidya
Nagaraj Vaidya
Editor | Tech Vaidya
137

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.