ವಿಡಂಬನೆ: ನಾಗರಾಜ ವೈದ್ಯ
ಜಗತ್ತು ಎಲೆಕ್ಟ್ರಿಕ್ ವಾಹನ, ಹೈಡ್ರೋಜನ್ ಇಂಧನ ಮತ್ತು ಹಾರುವ ಕಾರುಗಳ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮ ರಾಜ್ಯದ ಸಾರಿಗೆ ಇಲಾಖೆ ಇಲೋನ್ ಮಸ್ಕ್ ಕೂಡ ಬೆರಗಾಗುವಂತಹ ತಂತ್ರಜ್ಞಾನವನ್ನು ಯಲ್ಲಾಪುರದ ಕಳಚೆ ಘಾಟಿಯಲ್ಲಿ ಪರಿಚಯಿಸಿದೆ. ಅದೇ ಟ್ರಾಕ್ಟರ್ ಪ್ರೊಪಲ್ಷನ್ ಸಿಸ್ಟಮ್ ಅಂದರೆ ಬಸ್ಸಿಗೊಂದು ಟ್ರಾಕ್ಟರ್ ಭಾಗ್ಯ. ಇದೊಂದು ಕ್ರಾಂತಿಕಾರಿ ನಡೆ. ಬಸ್ಸು ಕೆಟ್ಟು ನಿಂತಿದೆ ಎಂದು ಅಜ್ಞಾನಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಇದು ನಿಗಮದ ಜೇಬಲ್ಲಿ ಕಾಸಿಲ್ಲದಿದ್ದಾಗ ಸಂಶೋಧಿಸಿದ ಅತ್ಯಾಧುನಿಕ ಹೈಬ್ರಿಡ್ ತಂತ್ರಜ್ಞಾನವಾಗಿದೆ. ಇಂಜಿನ್ ಸದ್ದು ಮಾಡದಿದ್ದರೆ ಏನಂತೆ? ರೈತನ ಮಿತ್ರ ಟ್ರಾಕ್ಟರ್ ಇದೆಯಲ್ಲ!

ಈ ಹೊಸ ಯೋಜನೆಯ ಪ್ರಕಾರ, ಇನ್ಮುಂದೆ ಪ್ರತಿ ಕೆಂಪು ಬಸ್ಸಿನ ಮುಂದೆಯೂ ಒಂದು ಟ್ರಾಕ್ಟರ್ ಸದಾ ಸನ್ನದ್ಧವಾಗಿರಲಿದೆಯೇ ಎಂಬ ಪ್ರಶ್ನೆ ಹುಟ್ಟಿದೆ. ಇದಕ್ಕೆ ಕಾರಣವೂ ಇದೆ. ಫ್ರೀ ಟಿಕೆಟ್ ಯೋಜನೆಯಿಂದಾಗಿ ಬಸ್ಸಿನ ಟಯರ್ ಸವೆದರೂ, ಇಂಜಿನ್ ಕೆಮ್ಮಿದರೂ ನೋಡುವವರಿಲ್ಲದಂತಾಗಿದೆ. ಹಾಗಾಗಿ ಬಸ್ಸುಗಳಿಗೆ ಸ್ವಂತ ಶಕ್ತಿ ಇಲ್ಲದಿದ್ದಾಗ ಎರವಲು ಶಕ್ತಿ ತುಂಬಲು ಟ್ರಾಕ್ಟರ್ ಅನಿವಾರ್ಯವಾಗಿದೆ. ಇದು ಡಬಲ್ ಇಂಜಿನ್ ಸರ್ಕಾರ ಎಂಬ ಪರಿಕಲ್ಪನೆಗೆ ಹೊಸ ಅರ್ಥ ನೀಡಿದೆ. ಒಂದು ಬಸ್ಸಿನ ಕೆಟ್ಟ ಇಂಜಿನ್, ಮತ್ತೊಂದು ಎಳೆಯುವ ಟ್ರಾಕ್ಟರ್ ಇಂಜಿನ್. ಎಂತಹ ಅದ್ಭುತ ಸಂಯೋಜನೆ!
ಯಲ್ಲಾಪುರದ ಕಳಚೆ ರಸ್ತೆಯಲ್ಲಿ ಪ್ರಯಾಣಿಕರು ಸೀಟಿನಲ್ಲಿ ಕುಳಿತು, ಮುಂದುಗಡೆ ಟ್ರಾಕ್ಟರ್ ಡ್ರೈವರ್ ಗೇರ್ ಬದಲಾಯಿಸುವುದನ್ನು ನೋಡುತ್ತಾ ಹೋಗುವ ಭಾಗ್ಯ ಪಡೆದಿದ್ದಾರೆ. ಇದು ಕೇವಲ ಪ್ರಯಾಣವಲ್ಲ, ಇದೊಂದು ರೋಮಾಂಚಕ ಸಾಹಸಯಾತ್ರೆ. ಬಸ್ಸು ಗುಜರಿ ಸೇರುವ ಸ್ಥಿತಿಯಲ್ಲಿದೆ ಎಂದು ಜನ ಆಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಗುಜರಿ ಸೇರಿದ ಮೇಲೂ ಅದನ್ನು ಟ್ರಾಕ್ಟರ್ ಮೂಲಕ ಎಳೆಸಿ ಓಡಿಸಬಲ್ಲ ಛಾತಿ ನಮ್ಮ ಆಡಳಿತ ವ್ಯವಸ್ಥೆಗೆ ಇದೆ. ದುರಸ್ತಿಗೆ ಹಣವಿಲ್ಲದಿದ್ದರೆ ಏನಾಯಿತು? ದೇಸಿ ಜುಗಾಡ್ ತಂತ್ರಜ್ಞಾನ ಇರುವಾಗ ಚಿಂತೆಯೇಕೆ?
ದಿವಾಳಿ ಅಂಚಿನಲ್ಲಿದೆ ಎಂಬ ಆರೋಪಗಳಿಗೆ ಇದಕ್ಕಿಂತ ಸಮರ್ಥ ಉತ್ತರ ಬೇಕೆ? ನಾವು ಬಸ್ಸುಗಳಿಗೆ ಡೀಸೆಲ್ ಹಾಕಿಸುವುದಿಲ್ಲ, ಬದಲಿಗೆ ಟ್ರಾಕ್ಟರ್ ಬಾಡಿಗೆಗೆ ಪಡೆಯುತ್ತೇವೆ ಎಂಬುದು ಹೊಸ ಆರ್ಥಿಕ ನೀತಿಯಂತಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗಿದೆ, ಆದರೆ ಬಸ್ಸು ಗಮ್ಯ ತಲುಪುತ್ತದೆ ಎಂಬ ಗ್ಯಾರಂಟಿ ಕಾರ್ಡ್ ಅನ್ನು ಯಾರೂ ನೀಡಿಲ್ಲ. ಅದು ಟ್ರಾಕ್ಟರ್ ಮೂಲಕವಾದರೂ ಸರಿ, ಎತ್ತಿನ ಗಾಡಿ ಕಟ್ಟಿಯಾದರೂ ಸರಿ, ತಲುಪಿಸುವುದು ಮುಖ್ಯ.
ಮುಂದಿನ ದಿನಗಳಲ್ಲಿ ಈ ಟೆಕ್ನಾಲಜಿ ಇನ್ನಷ್ಟು ಅಭಿವೃದ್ಧಿಯಾಗಿ, ಸಿಟಿ ಬಸ್ಸುಗಳನ್ನು ಜೆಸಿಬಿಗಳು ಎಳೆಯುವ ದೃಶ್ಯ ಕಂಡರೂ ಅಚ್ಚರಿಯಿಲ್ಲ. ಬಸ್ಸುಗಳ ನಿರ್ವಹಣೆ ಎಂಬ ಪದವೇ ನಮ್ಮ ನಿಘಂಟಿನಿಂದ ಮಾಯವಾಗಿ, ಎಳೆದುಕೊಂಡು ಹೋಗುವ ಯೋಜನೆ ಜಾರಿಗೆ ಬಂದಂತಿದೆ. ಒಟ್ಟಿನಲ್ಲಿ ಕಳಚೆಯ ಘಾಟಿಯಲ್ಲಿ ಕಂಡ ದೃಶ್ಯ, ರಾಜ್ಯದ ಸಾರಿಗೆ ವ್ಯವಸ್ಥೆಯು ಅಭಿವೃದ್ಧಿಯ ಹಾದಿಯಲ್ಲಿ ರಿವರ್ಸ್ ಗೇರ್ ಹಾಕಿ ಟ್ರಾಕ್ಟರ್ ಗೆ ಕಟ್ಟಿ ಎಳೆದಷ್ಟು ವೇಗವಾಗಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಎಐ ಭಗವದ್ಗೀತೆ ಪುಸ್ತಕವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.