ಟ್ರೆಂಡಿಂಗ್

ಮೊಬೈಲ್ ರಿಪೇರಿ ದಂಧೆ ಬಯಲು: ಹುಷಾರ್! 200 ರೂಪಾಯಿ 'ಲೂಸ್ ಕನೆಕ್ಷನ್'ಗೆ 8000 ಬಿಲ್!

ಮೊಬೈಲ್ ರಿಪೇರಿ ದಂಧೆ ಬಯಲು: ಹುಷಾರ್! 200 ರೂಪಾಯಿ 'ಲೂಸ್ ಕನೆಕ್ಷನ್'ಗೆ 8000 ಬಿಲ್!

ವೈದ್ಯಕೀಯ ಕ್ಷೇತ್ರ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರ - ಇವೆರಡರಲ್ಲೂ ಗ್ರಾಹಕರು ಅಸಹಾಯಕರು. ಡಾಕ್ಟರ್ ಅಥವಾ ಟೆಕ್ನಿಷಿಯನ್ ಹೇಳಿದ್ದೇ ವೇದವಾಕ್ಯ. ಇದನ್ನೇ 'ಟೆಕ್ ಮಾಫಿಯಾ' ಬಳಸಿಕೊಳ್ಳುತ್ತಿದೆ. ಒಂದು ಸ್ಮಾರ್ಟ್‌ಫೋನ್ ಒಳಗೆ ಏನಿದೆ ಎಂಬುದು ಶೇ. 99 ರಷ್ಟು ಜನರಿಗೆ ಗೊತ್ತಿಲ್ಲ. ರೂ. 200ರ ಕೆಲಸಕ್ಕೆ ರೂ. 8,000 ಬಿಲ್ ಪೀಕುವ ದಂಧೆಯ ಕರಾಳ ಮುಖದ ಬಗ್ಗೆ ನಿಮಗೆ ಗೊತ್ತಾ? ನೀವು ಹೇಗೆಲ್ಲ ಯಾಮಾರ್‍ತೀರಿ ಅನ್ನೋದನ್ನು ನಾವು ಹೇಳ್ತೀವಿ ಓದಿ!

| ನಾಗರಾಜ ವೈದ್ಯ, ಸಂಪಾದಕ, ಟೆಕ್ ವೈದ್ಯ

 ನಿಮ್ಮ ಕೈಯಲ್ಲೊಂದು 30-40 ಸಾವಿರ ರೂಪಾಯಿ ಬೆಲೆಬಾಳುವ ಫೋನ್ ಇರುತ್ತದೆ. ಅಪ್ಪಿತಪ್ಪಿ ಕೈಜಾರಿ ಕೆಳಗೆ ಬೀಳುತ್ತದೆ. ಎತ್ತಿ ನೋಡಿದರೆ ಡಿಸ್‌ಪ್ಲೇ ಕಪ್ಪಾಗಿರುತ್ತದೆ (Black Screen). ಬಟನ್ ಒತ್ತಿದರೆ ವೈಬ್ರೇಟ್ ಆಗುತ್ತಿಲ್ಲ. ಎದೆ ಝಲ್ ಎನ್ನುತ್ತದೆ. ಅದರಲ್ಲಿರುವ ಫೋಟೋಗಳು, ಕಾಂಟ್ಯಾಕ್ಟ್ಸ್, ಬ್ಯಾಂಕ್ ಆಪ್‌ಗಳು ಕಣ್ಣಮುಂದೆ ಬರುತ್ತವೆ. ಆತಂಕದಲ್ಲಿ ನೇರವಾಗಿ ಹತ್ತಿರದ ಸರ್ವಿಸ್ ಸೆಂಟರ್‌ಗೆ (ಅದು ಅಧಿಕೃತವಿರಲಿ ಅಥವಾ ಖಾಸಗಿಯಿರಲಿ) ಓಡುತ್ತೀರಿ.

ಅಲ್ಲಿರುವ 'ತಜ್ಞ'ರು ಫೋನ್ ಅನ್ನು ಒಳಗೆ ಕರೆದೊಯ್ದು, ಮೈಕ್ರೋಸ್ಕೋಪ್ ಕೆಳಗೆ ಇಟ್ಟು, ಹತ್ತು ನಿಮಿಷ ಬಿಟ್ಟು ಗಂಭೀರವಾಗಿ ಬಂದು ಹೇಳುತ್ತಾರೆ - "ಸರ್, ಬಿದ್ದ ರಭಸಕ್ಕೆ ಮದರ್‌ಬೋರ್ಡ್ ಶಾರ್ಟ್ ಆಗಿದೆ. ಪವರ್ ಐಸಿ (Power IC) ಸುಟ್ಟು ಹೋಗಿದೆ. ಸರಿ ಮಾಡೋಕೆ 8,500 ರೂಪಾಯಿ ಆಗುತ್ತೆ. ಗ್ಯಾರಂಟಿ ಇಲ್ಲ, ಆದ್ರೆ ಟ್ರೈ ಮಾಡ್ತೀನಿ."

ನಿಮಗೆ ಬೇರೆ ದಾರಿ ಕಾಣುವುದಿಲ್ಲ. "ಹೋಗಲಿ ಬಿಡಿ ಸರ್, ಮಾಡಿಕೊಡಿ" ಎಂದು ಒಪ್ಪುತ್ತೀರಿ. ಆದರೆ, ಇಲ್ಲೇ ನೀವು ಯಾಮಾರಿದ್ದೀರಿ! ನಿಜವೇನೆಂದರೆ, ನಿಮ್ಮ ಫೋನ್‌ನ ಮದರ್‌ಬೋರ್ಡ್ ಹಾಳಾಗಿಲ್ಲ, ಐಸಿ ಸುಟ್ಟಿಲ್ಲ. ಕೇವಲ ಬ್ಯಾಟರಿಯ 'ರಿಬ್ಬನ್ ಕೇಬಲ್' (Ribbon Cable) ಲೂಸ್ ಆಗಿತ್ತಷ್ಟೇ! ಅದನ್ನು ಬೆರಳಲ್ಲಿ ಒತ್ತಿದರೆ ಫೋನ್ ಆನ್ ಆಗುತ್ತಿತ್ತು. ಆದರೆ ನಿಮ್ಮ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡ ಆತ, ಐದು ನಿಮಿಷದ ಕೆಲಸಕ್ಕೆ 8,000 ರೂಪಾಯಿ ಜೇಬಿಗಿಳಿಸಿದ್ದಾನೆ!

ಇದು ಕಟ್ಟುಕಥೆಯಲ್ಲ. ರಾಜ್ಯದಾದ್ಯಂತ ಪ್ರತಿದಿನ ಸಾವಿರಾರು ಅಮಾಯಕ ಗ್ರಾಹಕರಿಗೆ ಆಗುತ್ತಿರುವ ಹಗಲು ದರೋಡೆ! ಸರಿಯಾದ ಮಾಹಿತಿ ಇಲ್ಲದರಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ. ನಮ್ಮತಂತ್ರಜ್ಞಾನದ ಭಾಷೆಯಲ್ಲಿ ಇದನ್ನು Information Asymmetry ಅನ್ನುತ್ತೇವೆ. 

ಏನಿದು 'ಮಾಹಿತಿ ಕತ್ತಲೆ' (Information Asymmetry)?

ವೈದ್ಯಕೀಯ ಕ್ಷೇತ್ರ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರ - ಇವೆರಡರಲ್ಲೂ ಗ್ರಾಹಕರು ಅಸಹಾಯಕರು. ಡಾಕ್ಟರ್ ಅಥವಾ ಟೆಕ್ನಿಷಿಯನ್ ಹೇಳಿದ್ದೇ ವೇದವಾಕ್ಯ. ಇದನ್ನೇ 'ಟೆಕ್ ಮಾಫಿಯಾ' ಬಳಸಿಕೊಳ್ಳುತ್ತಿದೆ. ಒಂದು ಸ್ಮಾರ್ಟ್‌ಫೋನ್ ಒಳಗೆ ಏನಿದೆ ಎಂಬುದು ಶೇ. 99 ರಷ್ಟು ಜನರಿಗೆ ಗೊತ್ತಿಲ್ಲ.

ಫೋನ್ ಆನ್ ಆಗುತ್ತಿಲ್ಲ ಎಂದರೆ "ಡೆಡ್" ಎನ್ನುತ್ತಾರೆ.

ಚಾರ್ಜ್ ಆಗುತ್ತಿಲ್ಲ ಎಂದರೆ "ಪೋರ್ಟ್ ಹೋಯ್ತು" ಎನ್ನುತ್ತಾರೆ.

ಸ್ಕ್ರೀನ್ ಮಬ್ಬಾಗಿದೆ ಎಂದರೆ "ಡಿಸ್‌ಪ್ಲೇ ಹೋಯ್ತು" ಎನ್ನುತ್ತಾರೆ.

ಆದರೆ ವಾಸ್ತವದಲ್ಲಿ ಶೇ. 40 ರಷ್ಟು ಸಮಸ್ಯೆಗಳು ಕೇವಲ 'ಲೂಸ್ ಕನೆಕ್ಷನ್' ಅಥವಾ 'ಧೂಳು' (Dust) ತುಂಬಿರುವುದರಿಂದ ಆಗಿರುತ್ತವೆ. ಇದು ಗೊತ್ತಿಲ್ಲದೇ ಸಾವಿರಾರು ರೂಪಾಯಿ ದಂಡ ತೆತ್ತು ಬರುತ್ತೇವೆ ನಾವು! ಒಂದಿಷ್ಟು ಕೇಸ್‌ ಸ್ಟಡಿಗಳ ಮೂಲಕ ನಾವಿದನ್ನು ಇನ್ನಷ್ಟು ಅರ್ಥ ಮಾಡ್ಕೊಳೋ ಪ್ರಯತ್ನ ಮಾಡೋಣ. 

ಡೆಡ್ ಫೋನ್ ನಾಟಕ

ಇದು ಅತ್ಯಂತ ಸಾಮಾನ್ಯವಾದ ವಂಚನೆ. ನೂರರಲ್ಲಿ 60 ಜನಕ್ಕೆ ಆಗುವಂತದ್ದಿದು. ಫೋನ್ ಬಿದ್ದಾಗ ಅಥವಾ ಜೋರಾಗಿ ಕುಲುಕಿದಾಗ, ಒಳಗಿರುವ ಬ್ಯಾಟರಿ ಕನೆಕ್ಟರ್ (Battery Connector Strip) ಸಾಕೆಟ್‌ನಿಂದ ಕಳಚಿಕೊಳ್ಳುತ್ತದೆ. ಆಗ ಫೋನ್‌ಗೆ ಪವರ್ ಹೋಗುವುದಿಲ್ಲ. ಕೋಮಾಕ್ಕೆ ಹೋಗಿರುತ್ತದೆ. 

ನಿಮ್ಮ ಗ್ರಾಚಾರ ಚೆನ್ನಾಗಿದ್ದು, ಒಬ್ಬ ಪ್ರಾಮಾಣಿಕ ಟೆಕ್ನಿಷಿಯನ್ ನಿಮಗೆ ಸಿಕ್ಕರೆ, ಫೋನ್ ಓಪನ್ ಮಾಡಿ, ಸ್ಟ್ರಿಪ್ ಪ್ರೆಸ್ ಮಾಡಿ, "ಸರ್ ವೈರ್ ಲೂಸ್ ಆಗಿತ್ತು, ಸರಿ ಮಾಡಿದ್ದೀನಿ" ಎಂದು ಹೇಳಿ 200-300 ರೂ. ಪಡೆಯುತ್ತಾನೆ.

ಅದೇ ವಂಚಕ ಟೆಕ್ನಿಷಿಯನ್ ಸಿಕ್ಕಿಬಿಟ್ಟ ಅಂದ್ಕೊಳಿ, ಫೋನ್ ಒಳಗೆ ಇಟ್ಟುಕೊಂಡು, ಎರಡು ದಿನ ಸತಾಯಿಸಿ, "ಸರ್ ಐಸಿ (IC) ವರ್ಕ್ ಆಗ್ತಿಲ್ಲ, ಸಾಫ್ಟ್‌ವೇರ್ ಹಾರೋಗಿದೆ" ಎಂದು ಹೇಳಿ ಸಾವಿರಾರು ರೂಪಾಯಿ ಬಿಲ್ ಮಾಡುತ್ತಾನೆ. ಫೋನ್‌ನಲ್ಲಿ ಯಾವ ಪಾರ್ಟ್ಸ್ ಕೂಡ ಬದಲಿಸಿರುವುದಿಲ್ಲ, ಕೇವಲ ಕನೆಕ್ಟರ್ ಪ್ರೆಸ್ ಮಾಡಿರುತ್ತಾರೆ ಅಷ್ಟೇ! 

ಚಾರ್ಜಿಂಗ್ ಪೋರ್ಟ್ ದಂಧೆ

ನಾವು ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲಿ ಹಾಕಿಕೊಂಡಾಗ, ಬಟ್ಟೆಯ ನೂಲು (Lint) ಮತ್ತು ಧೂಳು ಚಾರ್ಜಿಂಗ್ ಪೋರ್ಟ್ ಒಳಗೆ ಹೋಗಿ ಜಮೆಯಾಗುತ್ತದೆ. ಕೆಲದಿನಗಳ ನಂತರ ಚಾರ್ಜರ್ ಪಿನ್ ಸರಿಯಾಗಿ ಒಳಗೆ ಕೂರುವುದಿಲ್ಲ. ಚಾರ್ಜ್ ಆಗುವುದಿಲ್ಲ. ನಾನು ಬಳಸುತ್ತಿದ್ದ ಹಾನರ್ ವ್ಯೂ 20ಗೆ ಕೂಡ ಹೀಗೇ ಆಗಿತ್ತು. ಆರ್‍‌ ಆರ್ ನಗರದ ಒಂದು ಸರ್‍ವಿಸ್‌ ಸೆಂಟರ್‍‌ಗೆ ಹೋದರೆ, ಚಾರ್ಜಿಂಗ್ ಪೋರ್ಟ್ ಹೋಗಿದೆ. 2000 - 3000 ರೂ ಆಗಬಹುದಿ.. ಪಾರ್ಟ್ಸ್‌ ಸಿಗಲ್ಲ ಅಂತೆಲ್ಲ ಕಥೆ ಹೇಳಿದ್ದ. ಈ ಬಗ್ಗೆ ಒಂದಿಷ್ಟು ಗೊತ್ತಿದ್ದಿದ್ದಕ್ಕೆ ನಾನು ಸೆಕೆಂಡ್‌ ಒಪಿನಿಯನ್ ತಗೊಳೋಕೆ ಗಾಂಧಿ ಬಜಾರಿನ ಸರ್ವಿಸ್‌ ಸೆಂಟರ್‌ ಒಂದಕ್ಕೆ ಹೋದೆ, ಒಂದು ಸಣ್ಣ ಸೂಜಿಯಂತದ್ದರಲ್ಲಿ  ಪೋರ್ಟ್‌ನಲ್ಲಿದ್ದ ಕಸ ತೆಗೆದು, ಸರಿ ಅಯ್ತು ನೋಡಿ ಸಾರ್ ಅಂದಿದ್ದ. ಕಾಸೆಷ್ಟು ಕೇಳಿದರೆ, ನಾನೇನೂ ಮಾಡೇ ಇಲ್ಲವಲ್ಲ ಸಾರ್ ಅಂದಿದ್ದ. ಇವತ್ತಿಗೂ ಆ ಫೋನ್ಅನ್ನು ನಾನು ಬಳಸುತ್ತಿದ್ದೇನೆ.

ವಂಚನೆ ಹೇಗೆ?: ನೆನಪಿಡಿ, ನೀವು ಅಂಗಡಿಗೆ ಹೋದಾಗ, ಅವರು ಟ್ವೀಜರ್ (Tweezer) ಬಳಸಿ ಆ ಧೂಳನ್ನು ತೆಗೆದರೆ ಸಾಕು, ಚಾರ್ಜ್ ಆಗುತ್ತದೆ. ಆದರೆ ಅವರು ಹೇಳುವುದು - "ಸರ್, ಚಾರ್ಜಿಂಗ್ ಜಾಕ್ (Charging Jack) ಮುರಿದುಹೋಗಿದೆ, ಪೂರ್ತಿ ಬೋರ್ಡ್ ಬದಲಾಯಿಸಬೇಕು, 1,200 ರೂ. ಆಗುತ್ತೆ." ಅವರು ನಿಮ್ಮ ಕಣ್ಣೆದುರೇ ಹಳೆಯ ಬೋರ್ಡ್ ತೆಗೆದು ಹೊಸದು ಹಾಕಿದಂತೆ ನಾಟಕ ಆಡುತ್ತಾರೆ, ಅಥವಾ ಸುಮ್ಮನೆ ಕ್ಲೀನ್ ಮಾಡಿ ಹೊಸದರ ದುಡ್ಡು ಪಡೆಯುತ್ತಾರೆ.

ಪಾರ್ಟ್ಸ್ ಕಳ್ಳತನ 

ಇದು ಅತ್ಯಂತ ಅಪಾಯಕಾರಿ. ನೀವು ಒರಿಜಿನಲ್ ಡಿಸ್‌ಪ್ಲೇ ಅಥವಾ ಬ್ಯಾಟರಿ ಇರುವ ಫೋನ್ ಅನ್ನು ಸಣ್ಣ ರಿಪೇರಿಗೆ ಕೊಡುತ್ತೀರಿ. ಅವರು ಒಳಗೆ ನಿಮ್ಮ ಒರಿಜಿನಲ್ ಒರಿಜಿನಲ್ ಡಿಸ್‌ಪ್ಲೇ ತೆಗೆದು, ಚೀನಾ ಮಾರುಕಟ್ಟೆಯ 'ಫಸ್ಟ್ ಕಾಪಿ' (First Copy) ಡಿಸ್‌ಪ್ಲೇ ಹಾಕಿ ಕೊಡುತ್ತಾರೆ. ನಿಮ್ಮ ಒರಿಜಿನಲ್ ಪಾರ್ಟ್ಸ್ ಅನ್ನು ಅವರು ಬೇರೆ ಗ್ರಾಹಕರಿಗೆ "ಜೆನ್ಯೂನ್ ಪಾರ್ಟ್ಸ್" ಎಂದು ದುಬಾರಿ ಬೆಲೆಗೆ ಮಾರುತ್ತಾರೆ. ನೀವು ರಿಪೇರಿಯಾದ ಫೋನ್ ಮನೆಗೆ ತರುತ್ತೀರಿ, ಆದರೆ ಡಿಸ್‌ಪ್ಲೇ ಕ್ವಾಲಿಟಿ ಮೊದಲಿನಂತೆ ಇರುವುದಿಲ್ಲ, ಬ್ಯಾಟರಿ ಬೇಗ ಇಳಿಯುತ್ತದೆ. ಯಾಕೆಂದರೆ ನಿಮ್ಮ ಫೋನ್‌ನ 'ಕಿಡ್ನಿ' ಕಳುವಾಗಿರುತ್ತದೆ!

ಒಂದಿಷ್ಟು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕು.  ಯಾಕೆ ನಾವು ಇಷ್ಟು ದಿನ ಸುಮ್ಮನಿದ್ದೇವೆ? ಒಂದು ಕೆಜಿ ತರಕಾರಿ ತೆಗೆದುಕೊಳ್ಳುವಾಗ ಹತ್ತು ಬಾರಿ ಚೌಕಾಶಿ ಮಾಡುವ ನಾವು, ಟೆಕ್ನಿಷಿಯನ್ ಹೇಳಿದ 5000 ರೂಪಾಯಿಯನ್ನು ಪ್ರಶ್ನೆ ಮಾಡದೇ ಏಕೆ ಕೊಡುತ್ತೇವೆ? ಕಾರಣ ಇಷ್ಟೇ - ಭಯ. "ಎಲ್ಲಿ ಪ್ರಶ್ನೆ ಮಾಡಿದರೆ ಫೋನ್ ಅನ್ನು ಪೂರ್ತಿ ಹಾಳು ಮಾಡಿಬಿಡುತ್ತಾರೋ" ಎಂಬ ಭಯ. ಆದರೆ ನೆನಪಿಡಿ, ಗ್ರಾಹಕ ಹಕ್ಕುಗಳ ಕಾಯ್ದೆ ಪ್ರಕಾರ, ಪ್ರತಿ ರೂಪಾಯಿಗೂ ಲೆಕ್ಕ ಕೇಳುವ ಹಕ್ಕು ನಿಮಗಿದೆ.

ನೀವು ಬಚಾವಾಗುವುದು ಹೇಗೆ? 

ಜವಾಬ್ದಾರಿಯುತ ಮಾಧ್ಯಮವಾಗಿರುವ ಟೆಕ್ ವೈದ್ಯ ಕೇವಲ ಸಮಸ್ಯೆ ಹೇಳಿ ನಿಮ್ಮನ್ನು ಹೆದರಿಸುವುದಿಲ್ಲ.  ಇಂತವುಗಳಿಂದ ಬಚಾವಾಗುವ ಒಂದಿಷ್ಟು ಸರಳ ಪರಿಹಾರವನ್ನೂ ಹೇಳ್ತೇವೆ  ಓದಿ. 

ಎರಡನೇ ಅಭಿಪ್ರಾಯ: ಡಾಕ್ಟರ್ ಬಳಿ ಹೋದಂತೆ, ಒಂದು ಅಂಗಡಿಯಲ್ಲಿ "ಮದರ್‌ಬೋರ್ಡ್ ಹೋಗಿದೆ" ಎಂದ ತಕ್ಷಣ ನಂಬಬೇಡಿ. "ಸರಿ ನಾನು ಯೋಚನೆ ಮಾಡಿ ಹೇಳ್ತೀನಿ" ಎಂದು ಫೋನ್ ವಾಪಸ್ ಪಡೆಯಿರಿ. ಇನ್ನೊಂದು ಅಂಗಡಿಗೆ ಹೋಗಿ ತೋರಿಸಿ. ಅಲ್ಲಿಯೂ ಅದೇ ಸಮಸ್ಯೆ ಹೇಳಿದರೆ ಮಾತ್ರ ನಂಬಿ.

ಮಾರ್ಕ್ ಮಾಡಿ: ಫೋನ್ ಕೊಡುವ ಮುನ್ನ, ಸಿಮ್ ಟ್ರೇ ತೆಗೆದು ಅಥವಾ ಸ್ಕ್ರೂ ಮೇಲ್ಭಾಗದಲ್ಲಿ ಒಂದು ಸಣ್ಣ ಮಾರ್ಕರ್ ಗುರುತು ಹಾಕಿ. ಅಥವಾ ಒಳಗೆ ನಿಮ್ಮ ಬ್ಯಾಟರಿ ಸೀರಿಯಲ್ ನಂಬರ್ ಫೋಟೋ ತೆಗೆದಿಟ್ಟುಕೊಳ್ಳಿ (ಸಾಧ್ಯವಾದರೆ). "ಪಾರ್ಟ್ಸ್ ಬದಲಾಯಿಸಿದ್ದೇನೆ" ಎಂದು ಅವರು ಹೇಳಿದಾಗ, ಹಳೆಯ ಪಾರ್ಟ್ಸ್ ವಾಪಸ್ ಕೇಳಿ. ಅದು ನಿಮ್ಮದೇ ಎಂದು ಖಾತ್ರಿ ಮಾಡಿಕೊಳ್ಳಿ.

ಲೈವ್ ರಿಪೇರಿ: ಇದು ಬೆಸ್ಟ್ ಆಪ್ಷನ್. "ಸರ್, ಅರ್ಜೆಂಟ್ ಇದೆ, ನಾನು ಇಲ್ಲೇ ಕೂರ್ತೀನಿ, ನನ್ನ ಕಣ್ಣ ಮುಂದೆಯೇ ರಿಪೇರಿ ಮಾಡಿಕೊಡಿ" ಎಂದು ಹಠ ಹಿಡಿಯಿರಿ. ಕಳ್ಳಾಟ ಆಡುವವರು ಇದಕ್ಕೆ ಒಪ್ಪುವುದಿಲ್ಲ. ಪ್ರಾಮಾಣಿಕರು ಸಂತೋಷದಿಂದ ಒಪ್ಪುತ್ತಾರೆ.

ಪ್ರಾಥಮಿಕ ಚಿಕಿತ್ಸೆ: ಫೋನ್ ಆನ್ ಆಗುತ್ತಿಲ್ಲವೇ? ಗಾಬರಿಯಾಗಬೇಡಿ. Volume Up + Power Button ಅನ್ನು 20 ಸೆಕೆಂಡ್ ಒಟ್ಟಿಗೆ ಒತ್ತಿ ಹಿಡಿಯಿರಿ (Force Restart). ಶೇ. 50 ರಷ್ಟು ಬಾರಿ ಫೋನ್ ತಾನಾಗಿಯೇ ಆನ್ ಆಗುತ್ತದೆ. ಇದಕ್ಕೆ ಅಂಗಡಿಗೆ ಹೋಗುವ ಅವಶ್ಯಕತೆಯೇ ಇಲ್ಲ!

ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಅಪರಾಧವಲ್ಲ. ಆದರೆ ಆ ಅಜ್ಞಾನವನ್ನು ಬಳಸಿಕೊಂಡು ನಮ್ಮ ಜೇಬಿಗೆ ಕತ್ತರಿ ಹಾಕುವ ಈ ದಂಧೆಯನ್ನು ಸಹಿಸುವುದು ಮೂರ್ಖತನ. ಭರವಸೆ ಇಡಿ ಟೆಕ್ ವೈದ್ಯ ನಿಮ್ಮೊಂದಿಗಿದೆ. ಇನ್ನು ಮುಂದೆ ಯಾವುದೇ ಸರ್ವಿಸ್ ಸೆಂಟರ್‌ಗೆ ಹೋದರೂ, ಪ್ರಶ್ನೆ ಮಾಡಿ. ಬಿಲ್ ಕೇಳಿ. ಹಳೆಯ ಪಾರ್ಟ್ಸ್ ವಾಪಸ್ ಕೇಳಿ. ಜಾಗೃತರಾಗಿರಿ. ನಿಮ್ಮ ಫೋನ್ ಮಾತ್ರವಲ್ಲ, ನಿಮ್ಮ ಹಣವೂ ಸ್ಮಾರ್ಟ್ ಆಗಿರಲಿ!

Nagaraj Vaidya
Nagaraj Vaidya
Editor | Tech Vaidya
453

6 ಕಾಮೆಂಟ್‌ಗಳು

Rohidas

ಉತ್ತಮ ಲೇಖನ

Rohidas

ಉತ್ತಮ ಲೇಖನ

ಮಂಜುನಾಥ್ ಭಟ್

ದಯವಿಟ್ಟು ಗಾಂಧೀಬಝಾರಿನ ಆ ಸರ್ವೀಸ್ ಸೆಂಟರ್ ಹೆಸರು ಹೇಳಿ! ನಮ್ಮಂಥವರಿಗೆ ಮುಂದೊಂದು ದಿನ ಅನುಕೂಲವಾದೀತು!

ತುಂಬಾ ಒಳ್ಳೆಯ ಮಾಹಿತಿ.

MKGOLIKOPPA@

Jampanna Ashihal

ನನ್ನ ಮೊಬೈಲ್ ಚಾರ್ಜ್ ಆಗ್ತಾ ಇರ್ಲಿಲ್ಲ. ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋದೆ. ಸ್ವಾಗತಕಾರರು ಚಾರ್ಜಿಂಗ್ ಮಾಡುವ ಜಾಗದಲ್ಲಿ ಒಮ್ಮೆ ಕಣ್ಣಾಡಿಸಿ ನೋಡಿದರು, ತಮ್ಮ ಬಳಿ ಇರುವ ಸಣ್ಣ ಚಿಮುಟದಿಂದ ಅಲ್ಲಿ ಸಿಕ್ಕಿರುವ ಮರಳು ಕಣವನ್ನು ಈಚೆ ತೆಗೆದರು. ಫೋನ್ ಸರಿಯಾಗಿತ್ತು. ಒಳಗೆ ಸರ್ವಿಸ್ ಗೆ ಕೊಟ್ಟಿದ್ದರೆ ಎಷ್ಟು ಕಿತ್ತುತ್ತಿದ್ದರೋ! ಆಕೆಗೆ ಚೆನ್ನಾಗಿ ಹೊಗಳಿ ಬಂದಿದ್ದೆ ನಾ ಕೊಟ್ಟ ಫೀಸು. ಅದೇ ಫೋನನ್ನು ಸ್ವಿಚ್ ಆಫ್ ಆಗಿದ್ದಕ್ಕೆ ಬೇರೆ ಕಡೆ ಎಲ್ಲೋ ರಿಪೇರಿ ಕೊಟ್ಟಿದ್ದೆ ಅವರು ಮತ್ತೆಂದೂ ರಿಪೇರಿ ಮಾಡದಂತೆ ಹಾಳು ಮಾಡಿ ಕೊಟ್ಟರು. ಅಲ್ಲಿಗೆ ಕಥೆ ಮುಗಿಯಿತು

subramanya

ಒಳ್ಳೆಯ ಮಾಹಿತಿ

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.