ಆತ್ಮೀಯ ಓದುಗ ಮಿತ್ರರೇ,
ನಮಸ್ಕಾರ.
ಇಂದು, ಅಂದರೆ ಫೆಬ್ರವರಿ 1, 2026, ನನ್ನ ಪಾಲಿಗೆ ಕೇವಲ ಒಂದು ದಿನಾಂಕವಲ್ಲ. ಇದು ಒಂದು ದೀರ್ಘಕಾಲದ ಕನಸು ನನಸಾದ ಕ್ಷಣ. ಇವತ್ತು 'ಟೆಕ್ ವೈದ್ಯ' ವೆಬ್ ಪೋರ್ಟಲ್‌ನ ಹೊಸ ಆವೃತ್ತಿ ಮತ್ತು ನನ್ನ ಕನಸಿನ ಕೂಸು 'ಎಐ ಭಗವದ್ಗೀತೆ' ಪುಸ್ತಕವನ್ನು ನಿಮ್ಮ ಮಡಿಲಿಗೆ ಹಾಕುತ್ತಿರುವಾಗ ಉಂಟಾಗುತ್ತಿರುವ ಸಂತೋಷ ಮತ್ತು ಜವಾಬ್ದಾರಿ ಎರಡೂ ಅಷ್ಟೇ ದೊಡ್ಡದಾಗಿದೆ.
ನನ್ನ ಹಿನ್ನೆಲೆಯನ್ನು ಬಲ್ಲವರಿಗೆ ತಿಳಿದಿದೆ, ನಾನು ಉತ್ತರ ಕನ್ನಡದ ಪ್ರಸಿದ್ಧ ನಾಟಿ ವೈದ್ಯರಾಗಿದ್ದ ದಿ. ವೆಂಕಟ್ರಮಣ ನರಸಿಂಹ ವೈದ್ಯ (ಗಾದೆ ಯೆಂಕಣ್ಣ) ಅವರ ಮಗ. ನಮ್ಮ ಕುಟುಂಬ ತಲೆಮಾರುಗಳಿಂದ ಜನರ ದೈಹಿಕ ಕಾಯಿಲೆಗಳಿಗೆ ಮದ್ದು ನೀಡುತ್ತಾ ಬಂದಿದೆ. ಆದರೆ, ಕಾಲ ಬದಲಾದಂತೆ ಮನುಷ್ಯನ ಸಮಸ್ಯೆಗಳ ಸ್ವರೂಪವೂ ಬದಲಾಯಿತು. ಇಂದು ಮನುಷ್ಯನನ್ನು ದೈಹಿಕ ಕಾಯಿಲೆಗಳಿಗಿಂತ ಹೆಚ್ಚಾಗಿ 'ಡಿಜಿಟಲ್ ಗೊಂದಲಗಳು' ಕಾಡುತ್ತಿವೆ. ಅಂದು ನಮ್ಮ ಹಿರಿಯರು ದೈಹಿಕ ಆರೋಗ್ಯಕ್ಕೆ ಸಂಜೀವಿನಿ ನೀಡುತ್ತಿದ್ದರೆ, ಇಂದು ನಾನು ಈ ಡಿಜಿಟಲ್ ಯುಗದ ಸಂಕೀರ್ಣತೆಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಜನರಿಗೆ ತಂತ್ರಜ್ಞಾನದ ಅರಿವು ಎಂಬ ಮದ್ದು ನೀಡಲು ಬಯಸಿದೆ. ಅದರ ಪರಿಣಾಮವೇ ಈ ಟೆಕ್‌ವೈದ್ಯ.
ಇಂದು ನಾವು ಬದುಕುತ್ತಿರುವುದು ಎಂತಹ ವಿಚಿತ್ರ ಸನ್ನಿವೇಶದಲ್ಲಿ ಎಂದರೆ, ನಾವು ನಮ್ಮ ಮನೆಯ ಬಾಗಿಲಿಗೆ ಹಾಕುವ ಬೀಗದ ಬಗ್ಗೆ ನೂರು ಬಾರಿ ಯೋಚಿಸುತ್ತೇವೆ, ಆದರೆ ನಮ್ಮ ಇಡೀ ಬದುಕಿನ ಗಳಿಕೆ ಮತ್ತು ಗೌಪ್ಯತೆಯನ್ನು ಅಡಗಿಸಿಟ್ಟಿರುವ ಮೊಬೈಲ್ ಫೋನ್ ಎಂಬ ಮನೆಯ ಬಾಗಿಲನ್ನು ತೆರೆದಿಟ್ಟಿರುತ್ತೇವೆ. 2026ರ ಈ ಕಾಲಘಟ್ಟದಲ್ಲಿ ಕಳ್ಳತನಗಳು ಬೀದಿಯಲ್ಲಿ ನಡೆಯುತ್ತಿಲ್ಲ, ಅವು ಸರ್ವರ್‌ಗಳಲ್ಲಿ ನಡೆಯುತ್ತಿವೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಇಂದು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ನಿಮ್ಮ ಪ್ರೀತಿಪಾತ್ರರ ಧ್ವನಿ ಮತ್ತು ವಿಡಿಯೋವನ್ನು ನಕಲು ಮಾಡಿ (Deepfake) ವಂಚಿಸುವ ಜಾಲಗಳು ಸೃಷ್ಟಿಯಾಗಿವೆ. ಇಂತಹ ಸಮಯದಲ್ಲಿ 'ನನಗೆ ತಂತ್ರಜ್ಞಾನ ಗೊತ್ತಿಲ್ಲ' ಎಂದು ಹೇಳುವುದು ಮುಗ್ಧತೆಯಲ್ಲ, ಅದು ಅಪಾಯವನ್ನು ಆಹ್ವಾನಿಸಿದಂತೆ.
ಇದೇ ಕಾರಣಕ್ಕಾಗಿಯೇ ನಾನು 'ಎಐ ಭಗವದ್ಗೀತೆ' ಪುಸ್ತಕವನ್ನು ಬರೆದದ್ದು. ಮಹಾಭಾರತದ ಯುದ್ಧದಲ್ಲಿ ಅರ್ಜುನನಿಗೆ ಉಂಟಾದ ವಿಷಾದ ಮತ್ತು ಗೊಂದಲದಂತೆಯೇ, ಇಂದು ನಮ್ಮ ಯುವಜನತೆ ಮತ್ತು ಸಾಮಾನ್ಯರು ಈ ತಂತ್ರಜ್ಞಾನದ ಪ್ರವಾಹದ ಮುಂದೆ ನಿಂತು ದಿಗ್ಭ್ರಮೆಗೊಂಡಿದ್ದಾರೆ. "ಎಐ ನಮ್ಮ ಕೆಲಸ ಕಸಿದುಕೊಳ್ಳುತ್ತದೆಯೇ? ಇದು ಮನುಕುಲಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ?" ಎಂಬ ಆತಂಕ ಎಲ್ಲರಲ್ಲೂ ಇದೆ.
ಈ ಹೊತ್ತಿನಲ್ಲಿ ಸಮಾಜಕ್ಕೆ ಬೇಕಿರುವುದು ಭಯವಲ್ಲ, ಬದಲಾಗಿ ಸ್ಪಷ್ಟತೆ ಮತ್ತು ಮಾರ್ಗದರ್ಶನ. 'ಎಐ ಭಗವದ್ಗೀತೆ' ಕೇವಲ ತಂತ್ರಜ್ಞಾನದ ಪುಸ್ತಕವಲ್ಲ, ಇದೊಂದು ಡಿಜಿಟಲ್ ಯುಗದ ಜೀವನ ದರ್ಶನ. ಈ ಪುಸ್ತಕವು ತಂತ್ರಜ್ಞಾನದ ಈ ಬೃಹತ್ ಶಕ್ತಿಯ ವಿಶ್ವರೂಪವನ್ನು ನಿಮಗೆ ತೋರಿಸುತ್ತಲೇ, ಅದಕ್ಕೆ ಬೆದರದೇ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವನ್ನೂ ಮೂಡಿಸುತ್ತದೆ.
ಭವಿಷ್ಯದ ಈ 'ಡಿಜಿಟಲ್ ಕುರುಕ್ಷೇತ್ರ'ದಲ್ಲಿ ನಾವು ಗೆಲ್ಲಬೇಕಾದರೆ, ನಮ್ಮ ಕೈಯಲ್ಲಿರುವ ತಂತ್ರಜ್ಞಾನ ಎಂಬ ಅಸ್ತ್ರದ ಬಗ್ಗೆ ನಮಗೆ ಸಂಪೂರ್ಣ ಹಿಡಿತವಿರಬೇಕು. ಯಂತ್ರಗಳು ಎಷ್ಟೇ ಬುದ್ಧಿವಂತವಾದರೂ, ವಿವೇಚನೆ ಮನುಷ್ಯನ ಬಳಿಯೇ ಇರಬೇಕು. ತಂತ್ರಜ್ಞಾನವನ್ನು ನಾವು ಆಳಬೇಕೇ ಹೊರತು, ತಂತ್ರಜ್ಞಾನ ನಮ್ಮನ್ನು ಆಳಬಾರದು. ಆ ಪ್ರಜ್ಞೆಯನ್ನು ಮತ್ತು ಆತ್ಮವಿಶ್ವಾಸವನ್ನು ಸಮಾಜದಲ್ಲಿ ಮೂಡಿಸುವುದೇ ಈ ಪುಸ್ತಕದ ಮಹತ್ವ ಮತ್ತು ಉದ್ದೇಶ.
ಇವತ್ತು ನಮ್ಮ ಕಣ್ಣಮುಂದೆ ಕಾಣುತ್ತಿರುವ ವಾಸ್ತವವನ್ನೊಮ್ಮೆ ಗಮನಿಸಿ. ತಂತ್ರಜ್ಞಾನ ಎಂಬುದು ಈಗ ಕೇವಲ ಪಟ್ಟಣಗಳಿಗೆ ಸೀಮಿತವಾಗಿಲ್ಲ. ನಮ್ಮ ಹಳ್ಳಿಗಳ ಕಟ್ಟೆಯ ಮೇಲಿರುವ ಹಿರಿಯರಿಂದ ಹಿಡಿದು, ಶಾಲಾ ಮೆಟ್ಟಿಲು ಹತ್ತುತ್ತಿರುವ ಮಗುವಿನವರೆಗೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ನೆಟ್ವರ್ಕ್ ಇಂದು ಪ್ರತಿಯೊಂದು ಕುಗ್ರಾಮವನ್ನೂ ತಲುಪಿದೆ. ಇಂಟರ್ನೆಟ್ ಇಲ್ಲದ ಜಾಗವೇ ಇಲ್ಲ ಎನ್ನುವಂತಾಗಿದೆ. ಇದು ಸಂತೋಷದ ವಿಷಯವೇ ಹೌದು.
ಆದರೆ, ನಾವು ಬಳಸುತ್ತಿರುವ ಈ ಅಂಗೈ ಅಗಲದ ಮೊಬೈಲ್ ಎಂಬ ಮಾಯಾವಿಯ ಬಗ್ಗೆ ನಮಗೆ ನಿಜವಾಗಿಯೂ ಎಷ್ಟು ಜ್ಞಾನವಿದೆ? ದುರದೃಷ್ಟವಶಾತ್, ಬಹುತೇಕರಿಗೆ ಇದರ ಲಾಭ-ನಷ್ಟದ ಬಗ್ಗೆ ಆಳವಾದ ಅರಿವಿಲ್ಲ. ನಮ್ಮ ಕೈಯಲ್ಲಿರುವ ಸಾಧನವು ಜಗತ್ತಿನ ಎಷ್ಟೆಲ್ಲಾ ಒಳ್ಳೆಯ ವಿಷಯಗಳನ್ನು ನಮ್ಮತ್ತ ತರಬಲ್ಲದೋ, ಅಷ್ಟೇ ವೇಗವಾಗಿ ಅಪಾಯವನ್ನೂ ತಂದೊಡ್ಡಬಲ್ಲದು ಎಂಬ ಸತ್ಯ ನಮಗೆ ತಿಳಿದಿಲ್ಲ.
ತಂತ್ರಜ್ಞಾನದಿಂದ ನಮಗೆ ಲಾಭವಾದಾಗ, ಕೆಲಸ ಸುಲಭವಾದಾಗ ನಾವು ಅದನ್ನು ಸಹಜವೆಂದು ಭಾವಿಸುತ್ತೇವೆ, ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. "ಓಹ್, ಎಷ್ಟೊಂದು ಅನುಕೂಲವಾಯ್ತಲ್ಲ" ಎಂದುಕೊಂಡು ಸುಮ್ಮನಾಗುತ್ತೇವೆ. ಆದರೆ, ಅದೇ ತಂತ್ರಜ್ಞಾನದಿಂದ ಒಂದೇ ಒಂದು ಉಪದ್ರವವಾದರೆ? ಒಂದು ಸಣ್ಣ ಎಡವಟ್ಟಾದರೆ? ಅದು ನಮ್ಮ ಜೀವನದಲ್ಲಿ ಭರಿಸಲಾಗದ, ಸಹಿಸಲಾರದ ನಷ್ಟವನ್ನು ಉಂಟುಮಾಡುತ್ತದೆ. ಆಗ ಅತ್ತರೂ ಪ್ರಯೋಜನವಿಲ್ಲ.
ಒಂದು ತಪ್ಪು ಕ್ಲಿಕ್ ನಿಂದ ಬ್ಯಾಂಕ್ ಖಾತೆ ಖಾಲಿಯಾದಾಗ, ಒಂದು ಅಜಾಗರೂಕತೆಯಿಂದ ನಮ್ಮ ಖಾಸಗಿ ಫೋಟೋಗಳು ಜಗಜ್ಜಾಹೀರಾತಾದಾಗ ಅಥವಾ ನಮ್ಮ ಮಕ್ಕಳು ಆನ್ಲೈನ್ ಗೇಮ್ ಗಳ ದಾಸರಾದಾಗ ಆಗುವ ಆಘಾತವಿದೆಯಲ್ಲ, ಅದು ಇಡೀ ಕುಟುಂಬವನ್ನೇ ಬೀದಿಗೆ ತರುತ್ತದೆ. "ಉಪಯೋಗವಾದಾಗ ಸುಮ್ಮನಿರುವ ನಾವು, ಉಪದ್ರವವಾದಾಗ ಮಾತ್ರ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತೇವೆ." ಹೀಗಾಗಬಾರದು. ಈ ಉಪದ್ರವಗಳು ಬರದಂತೆ ತಡೆಯುವುದು, ಜನರಲ್ಲಿ ಆ ಬಗ್ಗೆ ಎಚ್ಚರ ಮೂಡಿಸುವುದೇ 'ಟೆಕ್ ವೈದ್ಯ'ನ ಮೂಲ ಉದ್ದೇಶ.
ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಇನ್ನೊಂದು ಕಹಿಸತ್ಯವನ್ನು ಹಂಚಿಕೊಳ್ಳಲೇಬೇಕಿದೆ. ಇವತ್ತು ನಮ್ಮ ಸುತ್ತಮುತ್ತಲಿರುವ ಟೆಕ್ ಮಾಧ್ಯಮಗಳ ಕಡೆ ಒಮ್ಮೆ ಕಣ್ಣಾಡಿಸಿ ನೋಡಿ. ಅಲ್ಲಿ ನಿಮಗೆ ಏನು ಕಾಣುತ್ತದೆ? ಬಹುತೇಕ ಕಡೆ ಕೇವಲ ಕಂಪನಿಗಳ ಗುಣಗಾನ, ಹೊಸ ಪ್ರಾಡಕ್ಟ್ ಗಳ ಅಬ್ಬರದ ಪ್ರಚಾರ ಬಿಟ್ಟರೆ ಬೇರೇನಿದೆ? ವಿಷಾದದ ಸಂಗತಿ ಎಂದರೆ, ಇಂದು ಪ್ರಸಾರದಲ್ಲಿರುವ ಬಹುತೇಕ ಟೆಕ್ ಮಾಧ್ಯಮಗಳು ಕೇವಲ ಪಿಆರ್ (Public Relations) ಏಜೆನ್ಸಿಗಳಂತೆ ಕೆಲಸ ಮಾಡುತ್ತಿವೆ.
ಒಂದು ಮೊಬೈಲ್ ಕಂಪನಿಯೋ ಅಥವಾ ಗ್ಯಾಜೆಟ್ ತಯಾರಕರೋ ಕೊಡುವ ಪತ್ರಿಕಾ ಪ್ರಕಟಣೆಗಳನ್ನು (Press Release) ಯಥಾವತ್ತಾಗಿ ಅನುವಾದ ಮಾಡಿ ಹಾಕುವುದನ್ನೇ 'ಟೆಕ್ ಪತ್ರಿಕೋದ್ಯಮ' ಎಂದು ಬಿಂಬಿಸಲಾಗುತ್ತಿದೆ. ಕಂಪನಿಗಳು ತಮ್ಮ ಉತ್ಪನ್ನದ ಬಗ್ಗೆ ಹೇಳುವ ಆಕರ್ಷಕ ಸುಳ್ಳುಗಳನ್ನು ಅಥವಾ ಅರ್ಧಸತ್ಯಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಕಂಪನಿಗಳು ತಾವೇ ಮುದ್ರಿಸಿದ 'ಬ್ರೋಷರ್' (Brochure) ಗಳಿಗೂ ಮತ್ತು ಇಂದಿನ ಕೆಲವು ಟೆಕ್ ಸುದ್ದಿಗಳಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಎಲ್ಲವೂ ಹೀಗೆ ಅಂತ ಹೇಳ್ತಿಲ್ಲ. ಆದರೆ ಹೆಚ್ಚಿನ ಪಾಲು ಅಂತವೇ ಆವರಿಸಿಕೊಂಡಿದೆ ಎಂಬುದು ನಿಮ್ಮೆಲ್ಲರ ಗಮನಕ್ಕೂ ಬಂದಿರಲಿಕ್ಕೆ ಸಾಕು.
ಆದರೆ 'ಟೆಕ್ ವೈದ್ಯ' ಈ ಹಾದಿಯನ್ನು ತುಳಿಯಲು ಸಿದ್ಧವಿಲ್ಲ. ನಾವು ಕಂಪನಿಗಳ ಬ್ರೋಷರ್ ಆಗಲು ಇಲ್ಲಿ ಬಂದಿಲ್ಲ. ನಾವು ಬಂದಿರುವುದು ಓದುಗರ ಧ್ವನಿಯಾಗಲು. ಒಂದು ಫೋನ್ ಅಥವಾ ಗ್ಯಾಜೆಟ್ ಮಾರುಕಟ್ಟೆಗೆ ಬಂದರೆ, ಅದರ ಬಣ್ಣ ಮತ್ತು ವಿನ್ಯಾಸವನ್ನು ಹೊಗಳುವುದಕ್ಕಿಂತ ಹೆಚ್ಚಾಗಿ, ಅದು ನಮ್ಮ ರೈತನಿಗೆ, ನಮ್ಮ ವಿದ್ಯಾರ್ಥಿಗೆ, ನಮ್ಮ ಗೃಹಿಣಿಗೆ ನಿಜವಾಗಿಯೂ ಉಪಯೋಗಕ್ಕೆ ಬರುತ್ತದೆಯೇ ಎಂದು ವಿಶ್ಲೇಷಿಸುವ ಹಠ ನಮಗಿದೆ. ಕಂಪನಿಗಳು ಮುಚ್ಚಿಡುವ ನ್ಯೂನತೆಗಳನ್ನು, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬಿಚ್ಚಿಡುವ ಜವಾಬ್ದಾರಿ ನಮ್ಮದಾಗಬೇಕಿದೆ.
ನಿಜ ಹೇಳಬೇಕೆಂದರೆ, 'ಟೆಕ್ ವೈದ್ಯ' ಅಂತದ್ದೊಂದು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದೆ. ಇಂದಿನ ಮಾರುಕಟ್ಟೆಯಲ್ಲಿ ಸತ್ಯ ಹೇಳುವುದು ಸುಲಭವಲ್ಲ. ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಜಾಹೀರಾತುಗಳು ಕೈತಪ್ಪಬಹುದು, ಅಥವಾ ರಿವ್ಯೂ ಯುನಿಟ್ ಗಳು ಸಿಗದೇ ಹೋಗಬಹುದು. ಆದರೆ, ನಾವು 'ವೈದ್ಯ' ಎಂಬ ಹೆಸರಿಟ್ಟುಕೊಂಡ ಮೇಲೆ, ರೋಗವನ್ನು ಮುಚ್ಚಿಟ್ಟು ರೋಗಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ರೋಗ ಎಷ್ಟೇ ಕಠಿಣವಾಗಿದ್ದರೂ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ನಮ್ಮ ಧರ್ಮ. ಹಾಗೆಯೇ, ತಂತ್ರಜ್ಞಾನದ ಸಾಧಕ-ಬಾಧಕಗಳೆರಡನ್ನೂ ನೇರವಾಗಿ ನಿಮ್ಮ ಮುಂದಿಡುವುದು ನಮ್ಮ ಕರ್ತವ್ಯ.
ನಾನು ನಿಮ್ಮ ಮುಂದೆ ಇನ್ನೊಂದು ಮಾತನ್ನೂ ಪ್ರಾಮಾಣಿಕವಾಗಿ ಹೇಳಲು ಇಷ್ಟಪಡುತ್ತೇನೆ. ಈ ಸಾಹಸಕ್ಕೆ ಕೈಹಾಕುವಾಗ, "ನಾಳೆಯೇ ಕೋಟಿ ಎಣಿಸುವ ಕನಸು ನನಗಿಲ್ಲ." ನಾನು ವಾಸ್ತವವನ್ನು ಬಲ್ಲವನು. ಗುಣಮಟ್ಟದ ಪತ್ರಿಕೋದ್ಯಮ ರಾತ್ರೋರಾತ್ರಿ ಶ್ರೀಮಂತಿಕೆ ತಂದುಕೊಡುವುದಿಲ್ಲ. ಆದರೆ, ಅದೇ ಸಮಯದಲ್ಲಿ "ನಾನು ಉಪವಾಸ ಬೀಳುವುದಕ್ಕೂ ಸಿದ್ಧನಾಗಿಲ್ಲ!"
ಯಾಕೆಂದರೆ, ಒಂದು ಸ್ವತಂತ್ರ ಮತ್ತು ನಿರ್ಭೀತ ಮಾಧ್ಯಮ ಉಳಿಯಬೇಕಾದರೆ ಅದಕ್ಕೆ ಆರ್ಥಿಕ ಶಕ್ತಿಯ ಅಗತ್ಯವಿದೆ. ನನ್ನ ತಂಡ, ನಮ್ಮ ಸರ್ವರ್ ಗಳು, ನಮ್ಮ ಸಂಶೋಧನೆ - ಇವೆಲ್ಲಕ್ಕೂ ಇಂಧನ ಬೇಕು. ಉಪವಾಸ ಬಿದ್ದು ಯಾರೂ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ನಾವು ಗಟ್ಟಿಯಾಗಿ ನಿಂತರೆ ಮಾತ್ರ, ನಿಮಗಾಗಿ ಗಟ್ಟಿಯಾದ ಧ್ವನಿಯಾಗಲು ಸಾಧ್ಯ.
ಹಾಗಾಗಿಯೇ ಸ್ನೇಹಿತರೇ, ಯಾವುದೇ ಒಂದು ಸತ್ಕಾರ್ಯವು ದೀರ್ಘಕಾಲ ಉಳಿಯಬೇಕಾದರೆ ಅದಕ್ಕೆ ಸಮಾಜದ ಬೆಂಬಲ ಎಂಬ ಇಂಧನ ಬೇಕೇ ಬೇಕು. ಅರಿವಿನ ದೀಪವೊಂದು ಆರದೆ ಉರಿಯಲು ಸ್ನೇಹದ ಎಣ್ಣೆ ಅತ್ಯಗತ್ಯ. ಈ ನಿಟ್ಟಿನಲ್ಲಿ, ಉದ್ಯಮ ವಲಯ ಮತ್ತು ಜಾಹೀರಾತುದಾರರು ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾನು ಆಶಿಸುತ್ತೇನೆ.
ನಮ್ಮ ಈ ವೇದಿಕೆಯು ಕೇವಲ ಒಂದು ಪ್ರಚಾರದ ಮಾಧ್ಯಮವಲ್ಲ, ಬದಲಾಗಿ ಇದೊಂದು ವಿಶ್ವಾಸಾರ್ಹತೆಯ ಸೇತುವೆ. ನಮ್ಮೊಂದಿಗೆ ಜೊತೆಯಾಗುವ ಮೂಲಕ ನೀವು ಕೇವಲ ನಿಮ್ಮ ಬ್ರ್ಯಾಂಡ್ ಗಳನ್ನು ಬೆಳೆಸಿಕೊಳ್ಳುವುದಿಲ್ಲ, ಬದಲಾಗಿ ಒಂದು ಸುಶಿಕ್ಷಿತ ಮತ್ತು ಸುರಕ್ಷಿತ ಡಿಜಿಟಲ್ ಸಮಾಜದ ನಿರ್ಮಾಣಕ್ಕೆ ನೀರೆರೆಯುತ್ತೀರಿ. ನಿಮ್ಮ ಸಹಭಾಗಿತ್ವವು ನಮ್ಮ ಕನ್ನಡದ ಜನರಿಗೆ ಗುಣಮಟ್ಟದ ತಂತ್ರಜ್ಞಾನ ಜ್ಞಾನವನ್ನು ತಲುಪಿಸಲು ನಮಗೆ ಹೊಸ ಶಕ್ತಿ ನೀಡುತ್ತದೆ. ಇದೊಂದು ಕೊಡು-ಕೊಳ್ಳುವಿಕೆಗಿಂತ ಮಿಗಿಲಾದ, ಪರಸ್ಪರ ಬೆಳವಣಿಗೆಯ ಮತ್ತು ಸಾಮಾಜಿಕ ಕಳಕಳಿಯ ಬಾಂಧವ್ಯವಾಗಲಿ ಎಂಬುದು ನನ್ನ ಆಶಯ.
'ನೀಟ್ ರೀಚಬಲ್ ಕ್ರಿಯೇಟಿವ್ ಸೊಲ್ಯೂಶನ್ಸ್' (Neat Reachable Creative Solutions) ಮೂಲಕ ನಾನು ಮತ್ತು ನನ್ನ ತಂಡ ಮಾಡುತ್ತಿರುವ ಈ ಪ್ರಯತ್ನದ ಹಿಂದೆ ಒಂದೇ ಸಂಕಲ್ಪವಿದೆ: "ಕಣಕಣವೂ ತಂತ್ರಜ್ಞಾನ". ನಾವು ನೀಡುವ ಮಾಹಿತಿ ಕೇವಲ ಸುದ್ದಿಯಲ್ಲ, ಅದು ನಿಮ್ಮ ಡಿಜಿಟಲ್ ಬದುಕಿನ ರಕ್ಷಾ ಕವಚ.
ಈ ಪಯಣದಲ್ಲಿ ನೀವೆಲ್ಲರೂ ನನ್ನೊಂದಿಗೆ ಇರುತ್ತೀರಿ, ನಮ್ಮನ್ನು ಬೆಳೆಸುತ್ತೀರಿ ಎಂಬ ನಂಬಿಕೆ ನನಗಿದೆ. ಬನ್ನಿ, ಈ ಡಿಜಿಟಲ್ ಯುಗವನ್ನು ಭಯವಿಲ್ಲದೆ, ಅರಿವಿನೊಂದಿಗೆ ಎದುರಿಸೋಣ.

ಪ್ರೀತಿಯಿಂದ,
ನಿಮ್ಮ
ನಾಗರಾಜ ವೈದ್ಯ | ಸಂಪಾದಕರು, ಟೆಕ್ ವೈದ್ಯ
ಶುಭಾಶಯ.
Shubhashayagalu.
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.